Friday, November 15, 2013

ಚಾಚಾ… Oh My God… !!!


ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ 'ಚಾಚಾ...' ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.

ಆದರೆ...

ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.. ಮತ್ತೆ 'ಚಾಚಾ...' ಎಂದು ಕೂಗಲು ಮನಸ್ಸೇ ಬರುತ್ತಿಲ್ಲ... ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ... ! ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.. ಖಂಡಿತಾ ನಾನು ಬದಲಾಗಿಲ್ಲ.. ನಾನು ಈಗಲೂ ಅದೇ ದೇಶ ಪ್ರೇಮಿ... ಆದರೆ ನನ್ನ ಜ್ಞಾನ ಬದಲಾಯಿತು. ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು. ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ, ನಾಚಿಕೆಗೇಡಿನ, ಅಸಹ್ಯಕರ, ಹೇಡಿ ಹಾಗು  ಮೂರ್ಖತನದ ಪರಮಾವಧಿ... !

ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೊತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು. ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು. 

ನಮ್ಮ ದೇಶದ ದುರವಸ್ಥೆಗೆ ಮೊದಲು ಕೆಸರು ಕಲ್ಲು ಬಿದ್ದಿದ್ದು ಅಲ್ಲೇ...


ಆ ಕಾಲಕ್ಕೆ ಘಟಾನುಘಟಿ ನಾಯಕರ ಶ್ರಮದಿಂದ ದೇಶವ್ಯಾಪಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದ ಕಾಂಗ್ರೆಸ್ಸ್ ಪಕ್ಷವನ್ನು ಮುನ್ನಡೆಸಲು ಎಳ್ಳಷ್ಟೂ ಅನುಭವ ಇಲ್ಲದ ಎಳಸು ನೆಹರೂ ಬಂದರೆ ಹೇಗಾಗಬೇಡ.. ಕೆಲ ಸಮಯದಲ್ಲೇ ನೆಹರೂ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ಸ್ ನಲ್ಲೇ ಅಸಮಾಧಾನದ ಹೊಗೆಯಾಡಲಾರಂಭಿಸಿತು. ಆದರೆ ಗಾಂಧೀಜಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನೆಹರೂರವರನ್ನು ತನ್ನ ಮಾನಸ ಪುತ್ರರನ್ನಾಗಿಸುವತ್ತ ಮುನ್ನಡೆದರು. ಪಟೇಲರಿಗೆ ಹೆಚ್ಚಿನ ಕಾಂಗ್ರೆಸ್ಸಿಗರ ಒಲವು ಇದ್ದಾಗಲೂ ಕೂಡ ಗಾಂಧೀ ನೆಹರೂರವರಿಗಾಗಿ ಪಟೇಲರನ್ನು ಸುಮ್ಮನಾಗಿಸಿದರು. ಅದು ಕೊನೆಗೆ ಪ್ರಧಾನಿ ಆಯ್ಕೆಯವರೆಗೂ ಮುಂದುವರೆಯಿತು. ಅಲ್ಲಿಗೆ ಭಾರತಕ್ಕೆ ಶನಿ ಅಧಿಕೃತವಾಗಿ ವಕ್ಕರಿಸಿಕೊಂಡಿತ್ತು. . . 


ಮುಂದೆ ಒಬ್ಬ ಪರಮಸ್ವಾರ್ಥಿ, ಸಮಯಸಾಧಕ, ಪ್ರಚಾರಪ್ರಿಯ ಅಧಿಕಾರ ವಹಿಸಿಕೊಂಡರೆ ಏನಾಗುತ್ತದೆ ಅದೇ ಆಯಿತು.. ದಿನಗಳು ಕಳೆಯುತ್ತಾ ಹೋದಂತೆ ದೇಶದ ಸ್ಥಿತಿ ಬ್ರಿಟೀಷರು ಭಾರತ ಬಿಟ್ಟು ಹೋದಾಗ ಇದ್ದದಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ಅಷ್ಟಕ್ಕೂ ಕೆಲ ಕ್ಷೇತ್ರಗಳಲ್ಲಿ ಏನಾದರೂ ಸಾಧಿಸಿದ್ದರೆ ಅದು ಪಟೇಲರ ಕಾರ್ಯವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾತ್ರ.

ತಮ್ಮ ಸ್ವಾರ್ಥಕ್ಕೆ ಮಾತ್ರ ಗಾಂಧಿಯನ್ನು ಬಳಸಿಕೊಂಡು ಗಾಂಧಿಯ ಮಾನಸ ಪುತ್ರನಂತಿದ್ದ ನೆಹರೂ ಗಾಂಧೀ ತತ್ವಗಳ ಬಗ್ಗೆ ಅಪಸ್ವರ ಹೊಂದಿದ್ದರು ಎಂದರೆ ಆಶ್ಚರ್ಯವಾಗಬಹುದು. ಗಾಂಧೀಜಿಯ ಗ್ರಾಮ ಸ್ವರಾಜ್ಯ, ಸ್ವದೇಶೀ ಚಿಂತನೆಗಳ ಬಗ್ಗೆ ನೆಹರೂ ತೀವ್ರ ವಿರೋಧ ಹೊಂದಿದ್ದರು. ಗಾಂಧೀ ಮರಣಾನಂತರ ಇದನ್ನು ಬಹಿರಂಗವಾಗಿ ಹೇಳಿದ್ದರು ಕೂಡ... ಹಳ್ಳಿಗಳ ಅಭಿವೃದ್ದಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಗಾಂಧೀ ಚಿಂತನೆಗಳನ್ನು ನೆಹರು ಅಳವಡಿಸುವುದಿರಲಿ ಒಪ್ಪಿಕೊಳ್ಳಲೂ ತಯಾರಿರಲಿಲ್ಲ. ಅಮೇರಿಕದಂತಹ ರಾಷ್ಟ್ರಗಳೇ ಮೆಚ್ಚಿ ತನ್ನ ದೇಶದಲ್ಲಿ ಜಾರಿಗೆ ತಂದಿದ್ದ ಗಾಂಧೀಜಿಯ ಗ್ರಾಮ ರಾಜ್ಯದ ಕಲ್ಪನೆ ನೆಹರೂಗೆ ಮಾತ್ರ ಅಪಥ್ಯವಾಯಿತು. ನೆಹರೂರವರ ಅಭಿವೃದ್ದಿಯ ಪರಿಕಲ್ಪನೆ ಬೇರೆಯದೇ ಇತ್ತು. ಅದನ್ನು ಬಾಲಿಶವೆನ್ನುವುದೋ, ಮೂರ್ಖತನವೆನ್ನುವುದೋ ತಿಳಿಯದು. ಯಾಕೆಂದರೆ ಅದು ಮಾಡಿದ ಪರಿಣಾಮ ಮಾತ್ರ ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ದೊಡ್ಡ ದೊಡ್ಡ ಯಂತ್ರಗಳು, ಕಾರ್ಖಾನೆಗಳಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೇಲಿಂದ ಮೇಲೆ ಸಾಲ ಮಾಡಿ ವಿದೇಶಗಳಿಂದ ಯಂತ್ರಗಳನ್ನು ತಂದರು.  ನೋಡ ನೋಡುತ್ತಾ ಸಾಲದ ಮೊತ್ತ ಬೆಳೆಯುತ್ತಾ ಹೋಯಿತೇ ವಿನಃ ಯಶಸ್ಸು ಮಾತ್ರ ದಕ್ಕಲಿಲ್ಲ. ಸ್ವಾತಂತ್ರ ಸಿಗುವಾಗ ಸಾಲ ರಹಿತವಾಗಿದ್ದ ದೇಶ ಮುಂದೆ ತನ್ನ ಪ್ರತಿಯೊಬ್ಬ ಪ್ರಜೆಯ ಮೇಲೆ ಸಾಲದ ಹೊರೆ ಹಾಕುವಷ್ಟರ ಮಟ್ಟಿಗೆ ಅಭಿವೃದ್ದಿ ಹೊಂದಿತ್ತು. !! ಇಂದಿಗೂ ನಮ್ಮ ತಲೆಯ ಮೇಲೆ ಸಾಲದ ಕತ್ತಿ ಇದೆ. ಮಾನ್ಯ ನೆಹರೂರವರೇ ಇದರ ಕರ್ತ... 



ವಿಜ್ಞಾನ ಕ್ಷೇತ್ರ ಪ್ರಗತಿಯಾಗಬೇಕೆಂದು ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದ ನೆಹರೂರವರ ಯೋಜನೆಗಳು ಕಾರ್ಯರೂಪಕ್ಕೆ ಬರುವಾಗ ಹಾಸ್ಯಾಸ್ಪದವೆನಿಸಿತು. ವಿಜ್ಞಾನದ ಪ್ರಗತಿಗೆಂದು ಹೇಳುತ್ತಾ ನೆಹರೂ ಕೋಟಿಗಟ್ಟಲೆ ಹಣ ವ್ಯಯಿಸಿದರೇ ವಿನಃ ಯಾವುದೇ ನಿರ್ದಿಷ್ಟ ಯೋಜನೆ ಪರಿಕಲ್ಪನೆಗಳಿರಲಿಲ್ಲ. ಎಲ್ಲದಕ್ಕೂ ವಿದೇಶವನ್ನು ನೆಚ್ಚಿಕೊಳ್ಳುತ್ತಿದ್ದ ನೆಹರೂ ಇಲ್ಲೂ ಅದನ್ನೇ ಮಾಡಿದರು. ಯಂತ್ರೋಪಕರಣಗಳು, ಯುದ್ಧ ಸಾಮಾಗ್ರಿಗಳನ್ನೆಲ್ಲ ವಿದೇಶದಿಂದ ಸಾಲ ಮಾಡಿ ತಂದು ಭಾರತವನ್ನು ಪರಾವಲಂಬಿಯನ್ನಾಗಿಸಿದರು. ಅದೇ ಯಂತ್ರೋಪಕರಣಗಳನ್ನು ಇಲ್ಲೇ ಅಭಿವೃದ್ದಿಪಡಿಸಿ ದೇಶೀಯ ವಿಜ್ಞಾನ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದರೆ ಇಂದು ನಮ್ಮ ಬಹುಪಾಲು ವಿದ್ಯಾವಂತ ಭಾರತೀಯರು ಪರದೇಶಗಳಲ್ಲಿ ತಮ್ಮ ಜ್ಞಾನವನ್ನು ವಿನಿಯೋಗಿಸುವ ಅಗತ್ಯ ಇರಲಿಲ್ಲ. ದೇಶದ ಆರ್ಥಿಕ ದರಿದ್ರತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ...

ನೆಹರೂರವರ ಕನಸು ಬೆಳೆಯುತ್ತಿತ್ತು.. ಆದರೆ ಭಾರತವಲ್ಲ... !!!

ಭಾರತದ ನಂತರ ಸ್ವಾತಂತ್ರ ಪಡೆದ ರಾಷ್ಟ್ರಗಳೆಲ್ಲ ವೇಗವಾಗಿ ಅಭಿವೃದ್ದಿ ಹೊಂದಿದವು... ಭಾರತ ಮಾತ್ರ ನೆಹರೂರವರ ಹಗಲುಗನಸುಗಳಲ್ಲೇ ದಿನದೂಡುತ್ತಿತ್ತು.

ದೇಶೀಯ ಮಟ್ಟದಲ್ಲಿ ಜನಪ್ರಿಯತೆ ಸಾಧಿಸಿದ್ದು ಆಯಿತು ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು ಅನ್ನುವುದಷ್ಟೇ ನೆಹರೂ ಗುರಿಯಾಗಿದ್ದಂತೆ ಕಾಣುತಿತ್ತು. ಆದರೆ ಅವರ ಆ ಪ್ರಯತ್ನಗಳೆಲ್ಲ ಮುಂದೆ ನಗೆಪಾಟಲಿಗೆ ಈಡಾಯಿತು. ಅಂತೆಯೇ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿತ್ತು. ಅವರ ವಿದೇಶಾಂಗ ನೀತಿಯಂತೂ ಅಪ್ಪಟ ಎಳಸು. ಪ್ರಪಂಚದ ಎರಡು ದೊಡ್ಡ ಶಕ್ತಿಗಳಾಗಿದ್ದ ಅಮೇರಿಕ ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾಲ. ಪ್ರಪಂಚ ಎರಡು ಬಣಗಳಾಗಿ ವಿಭಜನೆ ಹೊಂದಿತ್ತು. ಭಾರತವೂ ತನ್ನ ಭವಿಷ್ಯದ ದೃಷ್ಟಿಯಿಂದ ಒಂದು ಬಣಕ್ಕೆ ಸೇರಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ನಮ್ಮದು 'ಅಲಿಪ್ತ ನೀತಿ' ನಾವು ಅಮೆರಿಕದೊಂದಿಗೆ ಸ್ನೇಹ ಹೊಂದಿದ್ದೇವೆ ಹಾಗು ರಷ್ಯಾದೊಂದಿಗೆ ಸಂಪೂರ್ಣ ಸ್ನೇಹ ಹೊಂದಿದ್ದೇವೆ ಎಂದು ದ್ವಂದ್ವ ಪ್ರದರ್ಶಿಸಿ ಅತ್ತ ಅವರಿಗೂ ಇತ್ತ ಇವರಿಗೂ ಬೇಡವಾದರು. ಇದರ ಸಂಪೂರ್ಣ ಲಾಭವನ್ನು ಪಾಕಿಸ್ತಾನ ಪಡೆದುಕೊಂಡಿತು. ಭಾರತವನ್ನು ಅನುಮಾನದ ದೃಷ್ಟಿಯಿಂದ ನೋಡಿದ ಅಮೇರಿಕ- ರಷ್ಯಾಗಳೆರಡೂ ಪ್ರತ್ಯೇಕವಾಗಿ ಪಾಕಿಸ್ತಾನವನ್ನು ಪೋಷಿಸಿದವು.

ಇನ್ನು ವಿದೇಶಗಳಲ್ಲಿ ಭಾರತದ ರಾಯಭಾರಿಗಳಾಗಿದ್ದವರೆಲ್ಲ ನೆಹರೂ ಕುಟುಂಬಿಕರು, ಗೆಳೆಯರು, ಬಾಲ ಬುಡುಕರುಗಳೇ... ಅವರು ವ್ಯರ್ಥ ಸಮಯ ಕಳೆಯುತ್ತಿದ್ದರೇ ಹೊರತು ಕಾರ್ಯ ಮಾತ್ರ್ತ ಶೂನ್ಯವಾಗಿತ್ತು. ಅದರ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗುವವರೆಗೆ ಯಾವ ವಿದೇಶಗಳೂ ಭಾರತದ ಹತ್ತಿರ ಬರುತ್ತಿರಲಿಲ್ಲ. ವಾಜಪೇಯೀ ಅವರ ವಿದೇಶಾಂಗ ನೀತಿಗಳ ಕಾರಣದಿಂದಲೇ ಇಂದು ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಬಂಧಗಳನ್ನು ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು. 


ಇಂದಿನ 'ಸೆಕ್ಯುಲರಿಸಂ' (ಭಾರತೀಯ ಅರ್ಥ : ಮುಸ್ಲಿಂ ತುಷ್ಟೀಕರಣ, ಹಿಂದೂಗಳ ಕಡೆಗಣನೆ) ಅನ್ನುವ ರಾಜಕೀಯ ಚಾಳಿಯ ಪಿತಾಮಹ ಇದೆ ಪಂಡಿತ್ ಜೀ.. ಅತ್ತ ಪಾಕಿಸ್ಥಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತ ಹಿಂದೂಗಳ ಮಾರಣ ಹೋಮ ನಡೆಸುತ್ತಿದ್ದರೆ ಇತ್ತ ನೆಹರೂ ತನ್ನ ಆಡಳಿತಾತ್ಮಕ ಯೋಜನೆಗಳ ಮೂಲಕ ಬಹುಸಂಖ್ಯಾತ ಹಿಂದೂಗಳ ಮಾನಸಿಕ ಮಾರಣ ಹೋಮ ನಡೆಸುತ್ತಿದ್ದರು. ಮುಸ್ಲಿಮರು ಒಪ್ಪುವುದಿಲ್ಲ ಎಂದು ವಂದೇ ಮಾತರಂ ರಾಷ್ಟ್ರಗೀತೆಯಾಗುವುದನ್ನು ತಡೆದಿದ್ದು, ಗಲಭೆಗಳ ಸಂದರ್ಭ ಮುಸ್ಲಿಂ ಮತಾಂಧರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಿದ್ದು, ಸರಕಾರದ ಹೆಚ್ಚಿನ ಸವಲತ್ತುಗಳು ಮುಸ್ಲಿಮರಿಗೆ ಹೋಗುವಂತೆ ಆಡಳಿತಾತ್ಮಕ ಮಾರ್ಪಾಡುಗಳನ್ನು ತಂದಿದ್ದು, ಗಾಂಧೀ ಹತ್ಯೆಯ ನೆಪದಲ್ಲಿ ಆರ್.ಎಸ್.ಎಸ್ ಅನ್ನು ನಿಷೇಧಿಸಿದ್ದು, ಹಿಂದೂ ಧರ್ಮದ ವಿವಿಧ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿ ಹಿಂದೂಗಳನ್ನು ಒಡೆದದ್ದು, ಅಸ್ಸಾಂ ಅನ್ನು 7 ರಾಜ್ಯಗಳಾಗಿ ವಿಭಜಿಸಿ ಅಲ್ಲಿ ಕ್ರಿಶ್ಚಿಯನ್ ಮಿಶನರಿಗಳಿಗೆ ಮುಕ್ತ ಅವಕಾಶ ಕಲ್ಪಿಸಿ ನಾಗಾಲ್ಯಾಂಡ್ ನಂತಹ ಪೂರ್ಣ ಹಿಂದೂ ರಾಜ್ಯಗಳನ್ನು ಕ್ರಿಶ್ಚಿಯನೀಕರಿಸಲು ಒತ್ತಾಸೆಯಾಗಿದ್ದು, ಕ್ರಿಶ್ಚಿಯನ್ ಸಂಸ್ಥೆಗಳಿಗೆ ನೀಡಿದ್ದ ಸರ್ವಾಧಿಕಾರವನ್ನು ಕೇರಳದಲ್ಲಿ ಆಗ ತಾನೇ ಬಂದಿದ್ದ ಕಮ್ಯುನಿಷ್ಟ್ ಸರಕಾರ ಹಿಂಪಡೆದದ್ದಕ್ಕೆ ಮುಂದೆ ಕೇರಳ ಸರಕಾರವನ್ನೇ ವಜಾಗೊಳಿಸಿದ್ದು ಎಲ್ಲವೂ ನೆಹರೂ ಹಿಂದೂ ವಿರೋಧಿ ರಾಜಕಾರಣದ ಫಲವೇ...

ಇಂದು ನಮ್ಮ ರಾಷ್ಟ್ರದ ಭ್ರಷ್ಟಾಚಾರವನ್ನು ನೋಡಿದಾಗ ನಮಗೇ ದಿಗ್ಭ್ರಮೆಯಾಗುತ್ತದೆ. ಆದರೆ ಇದರ ಮೂಲವನ್ನು ಹುಡುಕುತ್ತಾ ಹೋದಾಗ ಕೊನೆಗೆ ಬರುವುದು ನೆಹರೂ ಕಡೆಗೇನೆ. ಅಂತಹ ದೊಡ್ಡ ಭ್ರಷ್ಟಾಚಾರದ ಮೂಟೆಯಾಗಿತ್ತು ನೆಹರೂ ಸರಕಾರ. ದೇಶಕ್ಕಾಗಿ ಕೆಲಸ ಮಾಡುವಾಗ ದೇಶದಿಂದ ಸ್ವಲ್ಪ ಪಡೆದುಕೊಂಡರೆ ತಪ್ಪೇನು ಎನ್ನುತ್ತಿದ್ದರು ನೆಹರೂ... ಎಲ್ಲಿಯ ಗಾಂಧೀ, ಎಲ್ಲಿಯ ನೆಹರೂ... !! ತನ್ನ ಸರಕಾರದ ಭ್ರಷ್ಟಾಚಾರದ ಬಗ್ಗೆ ಯಾರಾದರೂ ಕೇಳಿದರೆ ನೆಹರೂ ಉರಿದು ಬೀಳುತ್ತಿದರು. ಜನಪ್ರತಿನಿಧಿಗಳಾಗಿ ರಾಷ್ಟ್ರದ ಸಂಪತ್ತು ನಮಗೆ ಸೇರಿದ್ದು ಎಂಬತ್ತಿತ್ತು ಅವರ ಕಾರ್ಯದ ವೈಖರಿ...
ನೆಹರೂ ಕಾಲದ ಭ್ರಷ್ಟಾಚಾರಗಳ ಕೆಲ ಸ್ಯಾಂಪಲ್ ಈ ರೀತಿ ಇದೆ.

1) 2000 ಯುದ್ಧ ಜೀಪುಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗಿತ್ತು. ಆದರೆ ಬಂದಿದ್ದು 155 ಜೀಪು ಮಾತ್ರ. ಅದೂ ಕೂಡ ಅಯೋಗ್ಯವೆಂದು ಸೇನೆ ತಿರಸ್ಕರಿಸಿತು. 80 ಲಕ್ಷ ರೂಪಾಯಿ ಗುಳುಂ ಆಗಿತ್ತು.
2) 48 ಕೋಟಿ  ರೂ. ಗಳ ಸೆಣಬು ಹಗರಣ. 
3) ದಾಮೋದರ  ಕಣಿವೆ ಯೋಜನೆಯಲ್ಲಿ ಎರಡು ವರ್ಷಗಳ ಕಾಲ ಒಬ್ಬನೇ ಒಬ್ಬ ಇಂಜಿನಿಯರ್ ಇಲ್ಲದೆಯೂ 739 ಲಕ್ಷ ಖರ್ಚಾಗಿತ್ತು.
4) ಸಿಂದ್ರಿ  ರಾಸಾಯನಿಕ ಗೊಬ್ಬರ ಕಾರ್ಖಾನೆ ನಿರ್ಮಾಣದಲ್ಲಿ 10 ಕೋಟಿ ರೂಪಾಯಿ ಹಗರಣ. 
5) 17 ಕೋಟಿ ರೂ. ಗಳ ಆಮದು ರಸಗೊಬ್ಬರ ಹಗರಣ.
6) 22 ಕೋಟಿ ರೂ. ಗಳ ಟ್ರಾಕ್ಟರ್ ಹಗರಣ. 
7) ಬ್ರಿಟೀಷರು ಭಾರತ ಬಿಟ್ಟಾಗ ನಮ್ಮ ರೈಲ್ವೇ ಇಲಾಖೆ 42 ಲಕ್ಷಕ್ಕೂ ಅಧಿಕ ಲಾಭದಲ್ಲಿತ್ತು. ಸ್ವಾತಂತ್ರಾ ನಂತರದ 2 ವರ್ಷದಲ್ಲಿ ರೈಲ್ವೆ ಇಲಾಖೆ 83 ಲಕ್ಷ ನಷ್ಟ ಮಾಡಿಕೊಂಡಿತ್ತು. ಇಂದು ಅದು ಕೋಟಿಗಳನ್ನೂ ಮೀರಿದೆ. 
8) ಮಧ್ಯ ನಿಷೇಧಕ್ಕೆ 140 ಕೋಟಿ ಬಳಸಲಾಯ್ತು. ಮಧ್ಯ ಅಂತೂ ನಿಷೇಧವಾಗಲಿಲ್ಲ. ಬದಲಾಗಿ ಕಳ್ಳಭಟ್ಟಿ ಧಂಧೆ ದುಪ್ಪಟ್ಟಾಯಿತು.
9) 14 ಕೋಟಿ ರೂ ಗಳ ಬೋಕೊರೋ ಉಷ್ಣ ವಿದ್ಯುತ್ ಸ್ಥಾವರ ಹಗರಣ.

ಅಂದಿನ ಒಂದು ಕೋಟಿ ಅಂದರೆ ಇಂದಿನ ನೂರು ಕೋಟಿಗೆ ಸಮ. ಆ ದೃಷ್ಟಿಯಲ್ಲಿ  ನೋಡಿದಾಗ ಅಂದಿನ ಹಗರಣಗಳ ತೀವ್ರತೆ ಅರಿವಾಗುತ್ತದೆ. ಆದರೆ ಅದ್ಯಾವುದೂ ಸುದ್ದಿಯಾಗದಂತೆ ನೋಡಿಕೊಂಡರು ನೆಹರೂ. ಅದೇ ನೆಹರೂ ಹಾಕಿದ ಭ್ರಷ್ಟಾಚಾರದ ಮರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಇಷ್ಟೊಂದು ಭ್ರಷ್ಟಾಚಾರ ಇರುವಾಗ ನೆಹರೂರವರ ಯೋಜನೆಗಳೆಲ್ಲ ಯಶಸ್ವಿಯಾಗುವುದು ಹೇಗೆ ಸಾಧ್ಯ... ಅವರ ಸರ್ಕಾರದ ಪಂಚ ವಾರ್ಷಿಕ ಯೋಜನೆಗಳ ವೈಫಲ್ಯವೇ  ಇದಕ್ಕೆ ಸಾಕ್ಷಿ... ನಾಗಪುರ ವಿವಿಯ ಡಾ. ಬಿ.ಎನ್. ವೈದ್ಯ ಅವರ ದಾಖಲೆಗಳ ಪ್ರಕಾರ ನೆಹರೂ ಅವಧಿಯಲ್ಲಿ ಕೈಗೆತ್ತಿಕೊಂಡ ಪ್ರತಿ ಪಂಚ ವಾರ್ಷಿಕ ಯೋಜನೆಯು ಬಡತನ  ರೇಖೆಯ ಕೆಳಗಿರುವ ಜನರ ಪ್ರಮಾಣವನ್ನು ಏರಿಸುತ್ತಲೇ ಬಂದಿದೆ. 1951 ರಲ್ಲಿ ಮೊದಲ ಪಂಚ ವಾರ್ಷಿಕ ಯೋಜನೆ ಜಾರಿಗೆ ಬರುವಾಗ ಹಳ್ಳಿಗಳಲ್ಲಿ ಶೇಕಡಾ 47.37 , ಪಟ್ಟಣಗಳಲ್ಲಿ ಶೇಕಡಾ 35.46 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದರು. ಆದರೆ ಯೋಜನೆ ಮುಗಿಯುವ ವೇಳೆಗೆ ಆ ಸಂಖ್ಯೆ ಹಳ್ಳಿಗಳಲ್ಲಿ ಶೇಕಡಾ 64.24, ಪಟ್ಟಣಗಳಲ್ಲಿ 46.19 ಮುಟ್ಟಿತ್ತು. ಎರಡನೆಯ ಪಂಚವಾರ್ಷಿಕ ಯೋಜನೆಯ ಕೊನೆಗೆ ಹಳ್ಳಿಗಳಲ್ಲಿ 62.11 ಶೇಕಡಾ , ಪಟ್ಟಣಗಳಲ್ಲಿ 48.88 ಶೇಕಡಾ ಬಡತನ ರೇಖೆಗಿಂತ ಕೆಳಗಿದ್ದರು. ... !!!
ವಿಜ್ಞಾನದ ಹರಿಕಾರ, ಅಭಿವೃದ್ದಿಯ ಸೂತ್ರಧಾರ ಎಂದೆಲ್ಲ ತನ್ನ ಹೊಗಳುಭಟರಿಂದ ಕರೆಸಿಕೊಳ್ಳುತ್ತಿದ್ದ ನೆಹರೂ ಯೋಜನೆಗಳ ಯಶಸ್ಸು ಇದೇ... !

ಕಾಶ್ಮೀರವನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋದ ನೆಹರೂ...

ಸಣ್ಣ ಸಣ್ಣ ಸಂಸ್ಥಾನಗಳಾಗಿ ತುಂಡಾಗಿದ್ದ ಭಾರತವನ್ನು ಜೋಡಿಸುವ ಕಾರ್ಯ ಪಟೇಲರದಾಗಿತ್ತು. ಅವೆಲ್ಲವನ್ನೂ ಅಲ್ಪ ಸಮಯದಲ್ಲೇ ಅಚ್ಚು ಕಟ್ಟಾಗಿ ಮಾಡಿ ಮುಗಿಸಿದ್ದರು ಪಟೇಲರು. ಆದರೆ ಕಾಶ್ಮೀರವನ್ನು ಮಾತ್ರ ನಾನೇ ಬಗೆಹರಿಸಿಕೊಳ್ಳುತ್ತೇನೆ ಎಂದ ನೆಹರೂ  ಇಂದಿಗೂ ಅದನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋಗಿದ್ದಾರೆ. ಕಾಶ್ಮೀರದ ಹಿಂದೂ ರಾಜನಿಗೆ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಮಹಾದಾಸೆ ಇದ್ದರೂ ನೆಹರೂರವರು ತಮ್ಮೊಂದಿಗೆ ತೋರಿಸುತ್ತಿದ್ದ ದರ್ಪಕ್ಕೆ ಅಸಮಧಾನಗೊಂಡು ಪಾಕಿಸ್ತಾನದೊಂದಿಗೆ ಹೋಗುವ ದ್ವಂದ್ವದಲ್ಲಿದ್ದರು. ಕಡೆಗೆ ಪಟೇಲರು ಮಧ್ಯ ಪ್ರವೇಶಿಸದಿದ್ದರೆ ಕಾಶ್ಮೀರ ಪಾಕಿಸ್ತಾನದ ಮಡಿಲಿಗೆ ಸೇರುತ್ತಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಾರತದ ಮೇಲೆ ಧಾಳಿಯಿಟ್ಟಿತು. ಕಾಶ್ಮೀರದಾದ್ಯಂತ ಪಾಕ್ ಸೈನಿಕರು ಹಿಂದೂ ಮುಸಲ್ಮಾನ ಭೇಧವೆನಿಸದೆ ಮಾತಾ ಭಗಿನಿಯರ ಮಾನ ಸೂರೆಗೈದರು, ಕೊಲೆ ಲೂಟಿಗಳಾದವು. ಆತಂಕಗೊಂಡ ನೆಹರೂ ಆಕಾಶವಾಣಿಯ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಆಡಿದ ಮಾತುಗಳು ಒಂದು ರೋದನದಂತಿತ್ತು. ಆದರೆ ಪಟೇಲರು ಸುಮ್ಮನೆ ಕುಳಿತಿರಲಿಲ್ಲ.!


ಯುದ್ಧ ಕಾರ್ಯಕ್ಕಿಳಿದರು.. ಇತ್ತ ಪಟೇಲರು ಧಾಳಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿತು. ನಮ್ಮ ಭಾರತೀಯ ಸೈನಿಕರು ವಿಜಯದ ಪತಾಕೆ ಹಾರಿಸುತ್ತ ಮುನ್ನಡೆಯುತ್ತಿದ್ದರು... ಆಗಲೇ ನೆಹರೂ ಮಹಾ ಮೂರ್ಖತನದ ಕೆಲಸ ಮಾಡಿದ್ದು. ನಮ್ಮ ಸೈನಿಕರು ಪೂರ್ಣ ವಿಜಯದ ಬಾಗಿಲಲ್ಲಿ ಇರುವಾಗ ವಿಶ್ವ ಸಂಸ್ಥೆಯ ಬಾಗಿಲು ಬಡಿದ ನೆಹರೂ ಮಧ್ಯಸ್ಥಿಕೆಗೆ ಕೋರಿದರು.  ಪಟೇಲರಿಗೆ ಈ ವಿಷಯ ಗೊತ್ತೇ ಇರಲಿಲ್ಲ.. ಅದರ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಸ್ವಲ್ಪ ಭೂಮಿ ಪಾಕ್ ವಶದಲ್ಲೇ ಉಳಿಯಿತು.


ನೆಹರೂ ಸತ್ತಿರಬಹುದು. ಆದರೆ ದಿನಾ ಸಾಯುವ ಕಾಶ್ಮೀರಿಗಳ ಪಾಡು ಕೇಳಲು ಯಾರು ಇಲ್ಲ. ದಿನಾ ನಮ್ಮ ಹೃದಯ ಚುಚ್ಚುವ ಕಾಶ್ಮೀರ ಸಮಸ್ಯೆಗೆ ಪರಿಹಾರ ಒದಗಿಸುವವರಿಲ್ಲ. ಅಂದಿನ ನೆಹರೂ ಮೂರ್ಖತನ ನಮ್ಮನ್ನು ಪ್ರತಿ ಕ್ಷಣ ಸಾಯಿಸುತ್ತಿದೆ. ಹೃದಯದ ಬೇಗುದಿ ಉರಿಯುತ್ತಲೇ ಇದೆ... 

ಮುಂದೆ ಚೀನಾ ಯುದ್ಧದಲ್ಲೂ ನೆಹರೂ ವೈಫಲ್ಯದಿಂದಾಗಿ ನಮ್ಮ ಭಾರತೀಯ ಸೈನಿಕರು ಬೆಂಕಿಗೆ ಬೀಳುವ ಕೀಟಗಳಂತೆ ನೆಲಕ್ಕುರುಳಿದರು. ನೆಹರೂರವರ ಅಲಿಪ್ತ ನೀತಿ ಸೈನ್ಯವನ್ನು ನಿಷ್ಕ್ರಿಯಗೊಳಿಸಿತ್ತು. ಒಂದು ಬೂಟು, ಕೈಗವಚ, ಮುಖದ ಮಾಸ್ಕ್ ಇದ್ಯಾವುದೂ ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಸೈನಿಕ ಹಳೆಯ ಕಾಲದ ಬಂದೂಕು ಹಿಡಿದುಕೊಂಡು ಚೀನಾದೊಂದಿಗೆ ಕಾದಾಡುತ್ತಿದ್ದ... !! ವಿಶ್ವದ ಮುಂದೆ ಭಾರತದ ಸೈನ್ಯ ಶಕ್ತಿಯ ಪ್ರದರ್ಶನವಾಗಿ ಹೋಗಿತ್ತು. ಕೊನೆಯ ಕ್ಷಣದಲ್ಲಿ ಅಮೇರಿಕ ನಮ್ಮ ಸಹಾಯಕ್ಕೆ ಧಾವಿಸದಿದ್ದರೆ ಭಾರತ ಚೀನೀಯರ ವಶವಾಗುತಿತ್ತು.  ಅಂದಿನ ಆ ಮಹಾ ಅವಮಾನಕ್ಕೆ ನೆಹರೂ ಮತ್ತು ಅವರ ಬಾಲಬುಡುಕರೇ ನೇರ ಹೊಣೆ. ಅಂದಿನ ಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಗೇಡಿಯರ್ ಜಾನ್. ಪಿ. ದಳವಿ ಬರೆದ ಹಿಮಾಲಯನ್ ಬ್ಲಂಡರ್ ಭಾರತ ಚೀನಾ ಯುದ್ಧದ, ನಂತರದ ಪರಿಸ್ಥಿತಿಯ, ಇಂತಹ ಹೀನಾಯ ಸ್ಥಿತಿಗೆ ಕಾರಣವಾದ ನೆಹರೂ ಮತ್ತವರ ಬಾಲ ಬುಡುಕರು ನಡೆದುಕೊಂಡ ರೀತಿಯ ಪ್ರತಿ ಎಳೆ ಎಳೆಯನ್ನು ಬಿಚ್ಚಿಡುತ್ತದೆ. ಆ ಪುಸ್ತಕ ಓದಿ ಮುಗಿಸಿದ ಮೇಲೆ ನಿಮ್ಮ ಕಣ್ಣುಗಳಲ್ಲಿ ಒಂದು ಹನಿ ಕಣ್ಣೀರು ಬರದಿದ್ದರೆ ಹೇಳಿ.

ಆದರೆ ಇದ್ಯಾವುದನ್ನೂ ನಾನು ಶಾಲಾ ಪಾಠ ಪುಸ್ತಕದಲ್ಲಿ ಓದಿಲ್ಲ. ಯಾವ ಟೀಚರ್ ಕೂಡ ಈ ಬಗ್ಗೆ ಹೇಳಿರಲಿಲ್ಲ. ನೆಹರೂ ವಂಶಸ್ಥರ ಗುಣಗಾನ ಮಾಡುವ ಶಿಕ್ಷಣವನ್ನೇ ನಾವು ಪಡೆಯುತ್ತಿರುವಾಗ ಈ ತೆರೆಯ ಹಿಂದಿನ ಸತ್ಯಗಳು ಹೇಗೆ ತಾನೇ ಬೆಳಕು ಕಾಣಲು ಸಾಧ್ಯ. !! ? ಅಂದು ನಾನೇ ಶಾಲೆಯಲ್ಲಿ ಭಾಷಣ ಮಾಡುವಾಗ ನೆಹರೂರವರನ್ನು 'ಚಾಚಾ..' ಎನ್ನುತ್ತಿದ್ದೆ.. ಆದರೆ ಈಗಂತೂ ಸಾಧ್ಯವಿಲ್ಲ. ನನ್ನ ದೇಶವನ್ನು , ನನ್ನ ಜನರನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿ ಸಮಸ್ಯೆಗಳ ಆಗರ ಸೃಷ್ಟಿಸಿ ನಮ್ಮನ್ನೆಲ್ಲ ಪ್ರತಿದಿನ ಸಾಯಿಸುತ್ತಿರುವ ಆ ನೆಹರೂ ಹೇಗೆ ತಾನೇ 'ಚಾಚಾ'ನಾಗುತ್ತಾರೆ...
ಮನಸ್ಸು "ಛೀ ಛೀ ..." ಅನ್ನುತ್ತಿದೆ ... ಕಣ್ಣಂಚಲ್ಲಿ ಒಂದು ಹನಿ ಬೀಳಲೋ ಬೇಡವೋ ಎನ್ನುವಷ್ಟರ ಮಟ್ಟಿಗೆ ಕಣ್ಣು ಭಾರವಾಗಿದೆ.. 




Friday, November 8, 2013

ಮೊದಮೊದಲು...


ಮೊಗ್ಗು ಹೂವಾದಾಗ
ಮಗುವು ಅಂಬೆಗಾಲಿಡುವಾಗ
ಕಾಯಿ ಹಣ್ಣಾಗೋ ಆ ಸುಂದರ ಯಾತನೇ
ಮೊದಲ ಸ್ಪರ್ಶದ ಮನದ ಹರ್ಷದ... 
ಆಹಾ ಏನಿದು ಭಾವನೇ
ಕಾರಣ ನೀನೇನೆ...

ಹಸುವು ಹಾಲುಣಿಸೋವಾಗ
ಹಕ್ಕಿ ರೆಕ್ಕೆ ಬಡಿದಾಗ
ವರುಣ ಭುವಿಯ ಸೋಕಿದಾಗ
ಆಹಾ ವರ್ಣಿಸಲಾಗದೇ
ಮಾತು ಕಟ್ಟಿ...ಮೌನ ಬೆಳೆದು
ಹೃದಯ ತೇಲಾಡಿದೇ...

ಅಯೋಮಯವು ಈ ಮನ
ಕಣ್ತುಂಬ ನಿನ್ನದೇ ಸರೀಗಮ
ಕಣ್ಣಾ ಮುಚ್ಚಾಲೆ ಆಡಿದೆ ಹೃದಯ
ನಿನ್ನ ಮೊದಲ ನೋಟಕೆ ಹೆದರಿ.. 
ಈ ಮೊದಲ ತೊದಲ ಪ್ರೀತಿಗೆ
ಕೊಡುವೆಯಾ ಹೃದಯದ ಕಾಣಿಕೆ








Sunday, October 20, 2013

ಅವಳು ಅವಳಲ್ಲ...


ಮನದ ಪುಟದಿ ನಿನದೇ ಹಾಡು
ಜಾಡು ಹಿಡಿದು ಬರಲೇ ನಾನು
ಮಿಟುಕೋ ನಯನ ಅದುರೋ ಅಧರ
ಚೆಲುವು ಮೀರಿದೆ ಅಂಬರ

ಕೊಂಚ ಹೆದರಿಕೆ ಕಣ್ಣ ಬೆದರಿಕೆ
ತುಂಟ ಮೊಗದ ನೆಂಟಳು
ಹಾಲ ನಗುವಿಗೆ ಬಳುಕೋ ನಡುವಿಗೆ
ಸೋತು ಹೋಗಿವೆ ಕಂಗಳು

ಹೆಜ್ಜೆ ಹೆಜ್ಜೆಗೆ ಗೆಜ್ಜೆ ಸರಿಗಮ
ನಿನ್ನ ಲಜ್ಜೆಗೆ ಹೃದಯ ಸಂಭ್ರಮ
ನಿನ್ನ ನಡೆಗೆ ನಿನ್ನ ನುಡಿಗೆ
ಹಚ್ಚಲೇ ದೃಷ್ಟಿ ಕಾಡಿಗೆ

Tuesday, September 24, 2013

ಮಸಣ...

ಹಾರೋ ಹಕ್ಕಿಯು ಹಾರಲಾಗದೆ 
ರೆಕ್ಕೆ ಪಟಪಟ ಬಡಿದಿದೇ...
ಪ್ರೇಮ ಜೀವವು ವಿರಹ ತಾಳದೆ 
ವಿಲವಿಲನೆ ನಲುಗಿದೇ... 

ಮೊದಲ ಹೆಜ್ಜೆಗೂ ಕೊನೆಯ ಹೆಜ್ಜೆಗೂ 
ಇಲ್ಲ ಹೆಚ್ಚಿನ ಅಂತರ...
ಪ್ರಾಣ ಹರಣದ ವೇದನೆಯಲಿ 
ಮನದಿ ಮರಣದ ಕಾತರ... 

ಮನದ ಭಾವಕೆ ಯಾರು ಹೊಣೆಯು 
ವಿರಹದಾಟಕೆ ಎಲ್ಲಿ ಎಣೆಯು...
ಹಣೆಬರಹವ ಗೀಚಿದಾತ 
ತಾನು ನಗುತ ಕೂತಿಹ... 

ಬರದ ಛಾಯೆಯು ಮನದಲಿಹುದು 
ನಗುವ ಛಾಯೆಯು ಮೊಗದಲಿಹುದು...
ಕಂಡ ಕನಸಲಿ ನೀನೇ ಇಲ್ಲ 
ಒಂಟಿ ಪಯಣವು ಬಾಳಲೆಲ್ಲ...

ಹಾರೋ ಹಕ್ಕಿಯು ಹಾರಲಾಗದೆ 
ರೆಕ್ಕೆ ಪಟಪಟ ಬಡಿದಿದೇ...
ಪ್ರೇಮ ಜೀವವು ವಿರಹ ತಾಳದೆ 
ವಿಲವಿಲನೆ ನಲುಗಿದೇ...


Tuesday, August 20, 2013

ಎದೆಯ ಕಿಟಕಿಯಲ್ಲೀ...


ಎದೆಯ ಕಿಟಕಿಯಲ್ಲೀ
ಮೆಲ್ಲಗೆ ಇಣುಕಿ ನೋಡಿದಂತೇ...
ಮನದ ಕೋಣೆಯಲ್ಲೀ 
ಸಣ್ಣಗೆ ಶಿಳ್ಳೆ ಹಾಕಿದಂತೇ...  
ಹೃದಯ ಹಾಳಾಗಿದೇ...ಮನಸ್ಸು ಕಳೆದೋಗಿದೇ... 
ನಾನಿಂದು ನಾನಲ್ಲ.... ನೀ ಹೇಳೆಯಾ.... 

ನನ್ನೇ ನೋಡುತ್ತಿರು ನೀನು 
ನಾ ತಿರುಗಿ ನೋಡುತ್ತಿರಲು...  
ಕಣ್ಣ ಭಾಷೆಯಲ್ಲೇ 
ಮನಸ್ಸು ಮಾತಾಡುತ್ತಿರಲು...  
ಒಲವ ಜನನ, ಹೃದಯ ಹರಣ
ನೀನೇ ತಾನೇ ಕಾರಣ... 

ಹೃದಯ ಬದಲು, ಮಾತು ತೊದಲು 
ಆಹಾ ಹಿತವಾದ ಯಾತನೇ...  
ನೀನು ಬರಲು ಬಾಳೇ ಹಗಲು 
ಮಿಡಿದಿದೆ ಹೃದಯ ಸುಮ್ಮನೇ... 
ನನ್ನುಸಿರ ಉಡುಗೆ.. ನಿನಗೆ ತೊಡಿಸಿ.. 
ಕೊಡಲೇ ಒಲವ ಬಾಡಿಗೇ... 

ನೋಡು ಗೆಳತಿ ಒಂದು ಸರತಿ 
ನನ್ನ ಎದೆಯ ಭಾವನೇ...  
ಕಂಡ ಕನಸು ಎಂಥ ಸೊಗಸು 
ಪ್ರೀತಿ ಸುರಿಸು ಮೆಲ್ಲನೇ...  
ನಾನೇ ಇರಲು ಯಾಕೆ ದಿಗಿಲು 
ಈ ಪ್ರೀತಿ ಒಡಲು ನಿನ್ನದೇ... 





Sunday, August 18, 2013

ನನ್ನುಸಿರೇ....

ಗುಂಗುರು ಕೂದಲು ಅವಳದಲ್ಲ
ಬಳುಕೋ ದೇಹವು ಅವಳಿಗಿಲ್ಲ
ನೀಲಿ ಕಣ್ಗಳ ಚೆಲುವೆಯಲ್ಲ
ನೀಳ ನಾಸಿಕದ ಒಡತಿಯಲ್ಲ 
ಆದರೂ ಅವಳು ನನಗಿಷ್ಟ
ಆವಳು ನನ್ನುಸಿರು ನನ್ನ ಪ್ರಾಣ

ಮೈ ಬಣ್ಣ ಹಾಲಿನದಲ್ಲ
ಮಾತಲಿ ಮುತ್ತು ಉದುರುವುದಿಲ್ಲ
ನಗುವಲಿ ಹುಣ್ಣಿಮೆ ಅರಳುವುದಿಲ್ಲ
ಸ್ವರದಲಿ ಸರಿಗಮ ಕೇಳುವುದಿಲ್ಲ
ಆದರೂ ಅವಳು ನನಗಿಷ್ಟ
ಅವಳು ನನ್ನುಸಿರು ನನ್ನ ಪ್ರಾಣ





Friday, August 9, 2013

ಈ ಬಂಧನ...


ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮ ಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ 

ನಾ ನೆಲವು ನೀನೆ ತಾರೆ 
ಎಂದೂ ಎಟುಕದ ಬಂಧವೂ  
ನೀ ಹುಣ್ಣಿಮೆ ನಾ ಕತ್ತಲು 
ಬೆರೆವುದೆಂತಿದು ತ್ರಾಸವೂ 

ಕಂಡ ಕನಸುಗಳು ಬಾಲಿಶ 
ಕರಗಿ ಹೋಗಿವೆ ಭಾಗಶಃ 
ಹಣತೆ ಸಾಲು ಮರಣಿಸಿ 
ಶ್ರಾದ್ಧವಾಗಿದೆ ನಗುವಿಗೆ 

ನೀರ ಹನಿಗಳು ಇಂಗಿ ಹೋಗಿವೆ 
ಬರಡು ಭೂಮಿಯು ಈ ಮನ 
ನೀನೆ ಬರದೆ ದೀಪವೆಲ್ಲಿದೆ 
ಬಾಳು ಬರಿಯ ಕಾನನ 

ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ... ಹೇಗೆ ನಾನು ಬರಲಿ... 





Thursday, August 8, 2013

ಕರ್ನಾಟಕ ಉಪಚುನಾವಣೆ: ಬಿಜೆಪಿ ಅಸಹಾಯಕತೆಯೂ, ಜೆಡಿಎಸ್ ಅನಿವಾರ್ಯತೆಯೂ...



ಅಷ್ಟೇನೂ ಮಹತ್ವದಲ್ಲ ಎಂದೇ ಪರಿಗಣಿತವಾಗಿದ್ದ ಕರ್ನಾಟಕದಲ್ಲಿನ ಎರಡು ಲೋಕಸಭಾ ಉಪಚುನಾವಣ ಕಣ ಇಂದು ಇಡೀ ರಾಜ್ಯದ ಗಮನ ಸೆಳೆದಿದೆ. 

ಕಾರಣ ಕುಟುಂಬ ರಾಜಕಾರಣ ಮತ್ತು ಸ್ವ ಪ್ರತಿಷ್ಠೆ..
ಲೋಕಸಭೆಯ ಅವಧಿ ಇನ್ನೇನು ಮುಗಿಯುವುದರಲ್ಲಿದೆ. ಈ ವರ್ಷದ ಕೊನೆ ಅಥವಾ 2014 ರ ಆರಂಭದಲ್ಲಿ ಲೋಕಸಭೆ ಮಹಾ ಸಮರ ನಡೆಯುವುದು ಖಚಿತ. ಹಾಗಿದ್ದರೂ ಇಂದು ಈ ಎರಡು ಚುನಾವಣ ಕಣಗಳು ಪಡೆದುಕೊಳ್ಳುತ್ತಿರುವ ಕಾವು ಮಾತ್ರ ಕಡಿಮೆಯಾಗಿಲ್ಲ. 
 
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಳೆದ ಒಂದು ದಶಕದಿಂದ ಕುಟುಂಬ ದ್ವೇಷ ರಾಜಕಾರಣದ ಅಖಾಡವಾಗಿ ಬೆಳೆದು ಬಂದಿದೆ. ಒಂದೆಡೆ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ ದೇವೇಗೌಡ ಕುಟುಂಬ. ಇಲ್ಲಿ ಅಭ್ಯರ್ಥಿಗಳು ಯಾರೇ ಆಗಿದ್ದರೂ ನಿಜವಾದ ಸ್ಪರ್ಧೆ ಇರುವುದು ಮಾತ್ರ ದೇವೇಗೌಡ ಡಿಕೆಶಿ ಮಧ್ಯೆ. ಪ್ರತಿ ಚುನಾವಣೆಯನ್ನೂ ತನ್ನ ಕುಟುಂಬದ ಸ್ವಪ್ರತಿಷ್ಠೆಯಾಗಿ ಪರಿಗಣಿಸಿರುವ ಎರಡೂ ಬಣಗಳು ಮತ್ತೆ ಕಾಳಗಕ್ಕೆ ಅಣಿಯಾಗಿವೆ. ಬಿಜೆಪಿಯದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಾತ್ರ. ಅದೇ ಕಾರಣಕ್ಕೆ ಬಿಜೆಪಿ ಮೈತ್ರಿಯ ನೆಪದಲ್ಲಿ ಶಸ್ತ್ರ ಸನ್ಯಾಸ ಮಾಡಿದೆ. ಬೆಂಗಳೂರು ಗ್ರಾಮಾಂತರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್, ಮೂರು ಜೆ.ಡಿ.ಎಸ್ ಶಾಸಕರನ್ನು ಹೊಂದಿ ಸಮಬಲ ಸಾಧಿಸಿದ್ದರೂ ಬಿಜೆಪಿ ಹಾಗು ಎಸ್ಪಿ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನವನ್ನು ಪಡೆದಿದ್ದನ್ನು ಗಮನಿಸಿದರೆ ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕಂಡುಬರುತ್ತದೆ. ಆದರೆ ಎದುರಾಳಿ ಡಿಕೆಶಿ ಕುಟುಂಬ ಈ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿದ್ದು ಜೆಡಿಎಸ್ ಅನ್ನು ಭಯಗೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. 
 
 
ಗ್ಲಾಮರ್ ಪ್ರವೇಶದಿಂದ ಸುದ್ದಿಯಲ್ಲಿರುವ ಮತ್ತೊಂದು ಕ್ಷೇತ್ರ ಮಂಡ್ಯ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ದ್ವೇಷ ರಾಜಕಾರಣದಿಂದ ಹೊರತಾಗಿದ್ದರೂ ಮೋಹಕ ತಾರೆ ರಮ್ಯ ತನ್ನ ಜನಪ್ರಿಯತೆಯಿಂದ ಚುನಾವಣೆಯ ಕಾವು ಉಳಿಸಿಕೊಂಡಿದ್ದಾರೆ. ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ ೫ ಜೆಡಿಎಸ್, ಎರಡು ಕಾಂಗ್ರೆಸ್ಸ್, ಒಂದು ಪಕ್ಷೇತರ ಶಾಸಕರಿದ್ದಾರೆ. ಕಳೆದ ಬಾರಿ ಜೆಡಿಎಸ್ ನ ಚೆಲುವರಾಯಸ್ವಾಮಿ ಪ್ರತಿನಿಧಿಸಿದ ಕ್ಷೇತ್ರವಿದು. ಜೆಡಿಎಸ್ ನ ಪ್ರಭಾವ ಸ್ಪಷ್ಟವಾಗಿದ್ದರೂ ಸಚಿವ ಅಂಬರೀಶರ ವಿಶಿಷ್ಟ (ವಿಚಿತ್ರ) ಮ್ಯಾನರಿಸಂ ಮತ್ತು ನಟಿ ರಮ್ಯಾ ಜನಪ್ರಿಯತೆ ಕಾಂಗ್ರೆಸ್ಸ್ ಗೆ ಆಶಾವಾದ ಮೂಡಿಸಿದೆ ಎನ್ನಬಹುದು. ಜತೆಗೆ ರಮ್ಯಾ ಸಾಕು ತಂದೆಯವರ ಸಾವು ತುಸು ಅನುಕಂಪದ ಮತ ಗಳಿಕೆಗೆ ಕಾರಣವಾಗಬಹುದು. ಆದರೆ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದಕ್ಕೆ ಫಲಿತಾಂಶವೆ ಉತ್ತರ ನೀಡಬೇಕು. ಕಾಂಗ್ರೆಸ್ಸ್ ಜೆಡಿಎಸ್ ನೇರ ಹಣಾಹಣಿಗೆ ಹೆಸರಾಗಿರುವ ಮಂಡ್ಯದಲ್ಲಿ ಬಿಜೆಪಿ ಇನ್ನೂ ಅಂಬೆಗಾಲಿಡುತ್ತಿರುವ ಶಿಶು. ಬಿಜೆಪಿ ಇಲ್ಲಿ ಮೈತ್ರಿಗೆ ಮುಂದಾಗದೆ ಸ್ಪರ್ಧಿಸಿದ್ದರೂ ಬಹುಶಃ ಹಿಡಗಂಟು ಕಳೆದುಕೊಳ್ಳುತ್ತಿತ್ತೇನೋ. 
 
 
ಎರಡೂ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದ ಕ್ಷೇತ್ರಗಳು. ಹಾಗಾಗಿ ಇಲ್ಲಿ ಜೆಡಿಎಸ್ ಗೆ ಗೆಲುವು ಅನಿವಾರ್ಯ. ಕಾಂಗ್ರೆಸ್ಸ್ ಗೆ ಇಲ್ಲಿ ಕಳೆದುಕೊಳ್ಳುವುದೇನಿಲ್ಲದಿದ್ದರೂ ರಾಜ್ಯದಲ್ಲಿ ಅವರದೇ ಪಕ್ಷದ ಸರಕಾರವಿರುವ ಕಾರಣ ಗೆಲ್ಲಲೇಬೇಕಾದ ಒತ್ತಡವಿದೆ. ಅದೇ ಕಾರಣಕ್ಕೆ ಸರ್ಕಾರಕ್ಕೆ ಸರ್ಕಾರವೇ ಚುನಾವಣಾ ಪ್ರಚಾರಕ್ಕೆ ಧುಮುಕಿದೆ. ಈ ತೀವ್ರ ಪೈಪೋಟಿಯಿಂದ ತುಸು ವಿಚಲಿತವಾಗಿರುವ ಜೆಡಿಎಸ್ ಗೆ ಬಿಜೆಪಿಯ ಮೈತ್ರಿ ಹಸ್ತ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನಬಹುದು. ಇನ್ನು ರಾಷ್ಟ್ರೀಯ ಪಕ್ಷ ಬಿಜೆಪಿಯದ್ದು ಇಲ್ಲಿ ಅಸಹಾಯಕ ಪರಿಸ್ಥಿತಿ. ಸ್ಪರ್ಧಿಸಿ ಮಾನ ಕಳೆದುಕೊಳ್ಳುವುದಕ್ಕಿಂತ ಸ್ಪರ್ಧಿಸದೆ ಇರುವುದು ಲೇಸೆಂದು ನಿರ್ಧರಿಸಿದಂತಿದೆ ರಾಜ್ಯ ಬಿಜೆಪಿ ಹೈಕಮಾಂಡ್. ವಿಧಾನಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಬಿಜೆಪಿ ಮೈತ್ರಿಗೆ ಮುಂದಾಗುವ ಮೂಲಕ ಮತ್ತೊಂದು ಅವಮಾನವನ್ನು ತಪ್ಪಿಸುವ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಮಂತ್ರದೊಂದಿಗೆ ಅಖಾಡಕ್ಕಿಳಿಯುವ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಸೋಲುವುದು ಖಂಡಿತ ಬೇಕಿಲ್ಲ. ಅಂತೂ ಇಂತೂ ಮೈತ್ರಿಯಾಗಿದೆ. ಒಬ್ಬರಿಗಿದು ಅನಿವಾರ್ಯವಾದರೆ, ಮತ್ತೊಬ್ಬರದು ಅಸಹಾಯಕ ಸ್ಥಿತಿ.
 
ಇನ್ನಂತೂ ಕಾಯುವ ಸಮಯ. ಜೆಡಿಎಸ್ ನ ಭದ್ರಕೋಟೆಗಳಿಗೆ ಕಾಂಗ್ರೆಸ್ಸ್ ಲಗ್ಗೆ ಹಾಕುವುದೋ ಇಲ್ಲವೋ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕು. ಕಾದು ನೋಡೋಣ.



 

Wednesday, June 26, 2013

ಹಿತವಚನ...(!)


ಮರ ಸುತ್ತುವುದಕ್ಕಿಂತ
ಮರ ಹತ್ತುವುದೇ ಲೇಸು
ಹಣ್ಣೆ ಲೇಸಯ್ಯ ಹೆಣ್ಣಿಗಿಂತ

ಕಾಯೋ ಕೆಲಸವು ಕಷ್ಟ
ಕೇಳದ ಹೃದಯವಿದು ದುಷ್ಟ
ಕಾಲವಿದು ಶ್ರೇಷ್ಠ ವ್ಯರ್ಥ ಪ್ರೀತಿಗಿಂತ

ಸೇವೆ ಮಾಡುವುದು ವ್ಯರ್ಥ
ಕೊನೆಗೆಲ್ಲಿದೆ  ಅರ್ಥ
ದುಡಿಮೆಯೇ ಬೇಕಯ್ಯ ಕಡಿಮೆ ಪ್ಯಾರ್ ಗಿಂತ

ಮರ ಸುತ್ತುವುದಕ್ಕಿಂತ
ಮರ ಹತ್ತುವುದೇ ಲೇಸು
ಹಣ್ಣೆ ಲೇಸಯ್ಯ ಹೆಣ್ಣಿಗಿಂತ 


Monday, June 17, 2013

ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ (ಎನ್.ಡಿ.ಎ ಬಿರುಕಿನ ಅವಲೋಕನ)


ಅತ್ತ ನರೇಂದ್ರ ಮೋದಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಘೋಷಣೆ ಯಾಗುತ್ತಿದ್ದಂತೆ NDA ಯಲ್ಲಿ ಮೊದಲ ಹಾಗು ನಿರೀಕ್ಷಿತ ಬಿರುಕು ಕಾಣಿಸಿಕೊಂಡಿದೆ. NDA ಪಾಳಯದ ಎರಡನೇ ಅತೀ ದೊಡ್ಡ ಪಕ್ಷವಾಗಿದ್ದ JDU ಎನ್ ಡಿ ಎ ಜತೆಗಿನ ತನ್ನ 17 ವರ್ಷಗಳ ಸಂಬಂಧ ಕಳಚಿ ಈಗ ಮೂರನೇ ರಂಗದತ್ತ ಚಿತ್ತ ನೆಟ್ಟಿದೆ. ಇದೊಂಥರಾ ಒಂದನೇ ಕ್ಲಾಸಿನ ಹುಡುಗ SSLC ಬರೆಯುವ ಕನಸು ಕಂಡಂತೆ...

ಇದೊಂದು ನಿರೀಕ್ಷಿತ ಬೆಳವಣಿಗೆ...
ಅದೇ ಕಾರಣಕ್ಕಾಗಿ JDU BJP ವಿಚ್ಚೇದನದ ಬಗ್ಗೆ ಯಾವುದೇ ರೀತಿಯ ಆಶ್ಚರ್ಯವಾಗುವುದಿಲ್ಲ. ಯುಪಿಎ ಭ್ರಷ್ಟಾಚಾರದ ಬಗೆಗಿನ ಜೆಡಿಯು ಮೌನ ಹಾಗು ಇದೇ ವರ್ಷದ ಎಪ್ರಿಲ್ ನಲ್ಲಿ ಕೇಂದ್ರದ UPA ಸರಕಾರ ಬಿಹಾರಕ್ಕಾಗಿ 12,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿದಾಗಲೇ ಇದರ ವಾಸನೆ ಬಡಿದಿತ್ತು. ಇಲ್ಲಿ JDU ನ ಈ ನಡೆಯ ಹಿಂದೆ ಮೂರು  ಪ್ರಮುಖ ತೆರೆ ಮರೆ ಕಾರಣಗಳಿವೆ
೧) ಕೇಂದ್ರದಿಂದ ಇನ್ನಷ್ಟು ಅನುದಾನ ಗಿಟ್ಟಿಸಿಕೊಳ್ಳುವುದು.
೨) ಬಿಹಾರದಲ್ಲಿನ 16.5 % ಮುಸ್ಲಿಂ ವೋಟು ಬ್ಯಾಂಕ್ ಓಲೈಕೆ.
೩) ಮೂರನೇ ರಂಗದ ನಾಯಕತ್ವ ವಹಿಸಿ ಮುಂದಿನ ಸರಕಾರದಲ್ಲಿ ಪ್ರಧಾನ ಪಾತ್ರ ವಹಿಸುವುದು.
ಇವೆಲ್ಲ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನುವುದಕ್ಕೆ ಮಾತ್ರ ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶದವರೆಗೆ ಕಾಯಬೇಕು. ಪ್ರಸುತ ನೋಡಿದಾಗ ಇವೆಲ್ಲ ತಲೆಕೆಳಕಾಗೋ ಸಾಧ್ಯತೆಗಳೇ ಹೆಚ್ಚು...

ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಜತೆಗಿದ್ದು ಬಿಜೆಪಿ ಪ್ರಭಾವವನ್ನು ಬಳಸಿಕೊಂಡ ಜೆಡಿಯು ಈಗ ನಡೆಸುತ್ತಿರುವುದು ಪಕ್ಕಾ ಸ್ವಾರ್ಥ ರಾಜಕಾರಣ. ಇಲ್ಲಿ ಜೆಡಿಯುನ ಇತರ ನಾಯಕರಿಗಿಂತಲೂ ನಿತೀಶ್ ಕುಮಾರ್ ಅವರ ವಯಕ್ತಿಕ ಸ್ವಾರ್ಥ ಮತ್ತು   ಅಹಂ ಎದ್ದು ಕಾಣುತ್ತದೆ. ಬಿಹಾರದಾದ್ಯಂತ ಮೋದಿ ಬ್ಯಾನರ್ ಕಂಡು ಬಿಜೆಪಿ ಕಾರ್ಯಕಾರಿಣಿ ಮಂಡಳಿಗೆ ಏರ್ಪಡಿಸಿದ್ದ ಔತಣಕೂಟವನ್ನು ರದ್ದುಪಡಿಸಿದ  ಹಾಗು ಗುಜರಾತ್ ನಲ್ಲಿ 2008 ರಲ್ಲಿ ಉಂಟಾದ ಕೋಸಿ ಪ್ರವಾಹ ಪೀಡಿತರ ಪರಿಹಾರ ಕಾರ್ಯಕ್ಕಾಗಿ 5 ಕೋಟಿ ನೀಡಿ ನಂತರ ವಾಪಾಸ್ಸು ಪಡೆದ ವ್ಯಕ್ತಿಯಿಂದ ಇನ್ನು ಏನು ತಾನೇ ನಿರೀಕ್ಷಿಸಬಹುದು ?!

ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 116 ಸೀಟು ಹೊಂದಿದೆ. ಜೆಡಿಯು 20... ಬಿಹಾರದ ಜನತೆ ಎನ್ ಡಿ ಎ ಗೆ ನೀಡಿದ ಜನಾದೇಶವನ್ನು ತಿರಸ್ಕರಿಸಿರುವ ನಿತೀಶ್ ನೇತೃತ್ವದ ಜೆಡಿಯು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ 10-15 ಸ್ಥಾನ ಪಡೆದರೆ ಅದೇ ಹೆಚ್ಚು.. ಜೆಡಿಯು ನ ಈ ನಡೆಯಿಂದ ಲಾಭವಾಗುವುದು ಬಿಜೆಪಿ ಹಾಗು RJD ಗೆ... ಬಹುಶಃ RJD ಅಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿಕೊಂಡರೂ ಆಶ್ಚರ್ಯವಿಲ್ಲ. ಆದರೆ ಇದು RJD ಕಾಂಗ್ರೆಸ್ಸ್ ಹಾಗು ಪಾಸ್ವಾನ್ ಅವರ ಮೈತ್ರಿಯ ಮೇಲೆ ನಿರ್ಧಾರವಾಗುತ್ತದೆ. ಇನ್ನೊಂದು ಕೋನದ ಪ್ರಕಾರ ಮುಸ್ಲಿಂ ವೋಟು ಬ್ಯಾಂಕ್ ಅನ್ನೇ ಈ ಬಾರಿ  ಹೆಚ್ಚಾಗಿ ನಂಬಿಕೊಂಡಿರುವ ಜೆಡಿಯುನಿಂದಾಗಿ ಮುಸ್ಲಿಂ ವೋಟು ಬ್ಯಾಂಕ್ ವಿಭಜನೆಯಾಗಿ ಬಿಜೆಪಿ ಗೆ ಲಾಭವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು . ಜತೆಗೆ ಬಿಹಾರದ ಪ್ರಧಾನ ಪ್ರತಿ ಪಕ್ಷ ಸ್ಥಾನ ಬಿಜೆಪಿ ಗೆ ಸಿಗುತ್ತಿರುವುದು ಇದಕ್ಕೊಂದು ಪ್ಲಸ್ ಪಾಯಿಂಟ್. ಈ ಒಟ್ಟಾರೆ ಬೆಳವಣಿಗೆ ಬಿಜೆಪಿ ಗೆ ಲಾಭದಾಯಕವೇ ವಿನಃ ಯಾವುದೇ ರೀತಿಯಲ್ಲಿ ಮಾರಕವಾಗುವುದಿಲ್ಲ.

ಇನ್ನು ಮೂರನೇ ರಂಗ... ಇದನ್ನು ಎಷ್ಟೋ ವರ್ಷಗಳಿಂದ ಕೇಳ್ತಾ ಇದೀವಿ. ಇದರಲ್ಲಿ ಇದ್ದ ಪಕ್ಷ ಮಾರನೇ ದಿನ ಅದೇ ರಂಗದಲ್ಲಿ ಇರುತ್ತದೆ ಅನ್ನುವ ನಂಬಿಕೆಯಂತೂ ಇಲ್ಲ. ಇದೊಂದು ಜಿಗಿತದ ರಂಗ ಇದ್ದ ಹಾಗೆ.. ಈ ಮೊದಲು ಕಾಂಗ್ರೆಸ್ಸ್ ಗೆ ಪರ್ಯಾಯ ಶಕ್ತಿಯನ್ನು ರೂಪಿಸಬೇಕೆಂದು NDA ಕಟ್ಟಲಾಯಿತು. ಇದರಲ್ಲಿ NDA ಯಶಸ್ವಿಯೂ ಆಯ್ತು. ಆದರೆ NDA ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಗೆ ಪರ್ಯಾಯ ಶಕ್ತಿ ಬೆಳೆಸುವ ಬಗ್ಗೆ ಚಿಂತನೆಗಳು ಆರಂಭವಾದವು. ಆದರೆ ಇಂದಿನವರೆಗೂ ಆ ಪ್ರಯತ್ನ ಮಾತ್ರ ಯಶಸ್ವಿಯಾಗಿಲ್ಲ. ತೃತೀಯ ರಂಗದ ಸತತ ವಿಫಲತೆಗೆ ಪ್ರಮುಖ ಕಾರಣ ಸ್ಥಿರ ನಾಯಕತ್ವದ ಕೊರತೆ. ಯುಪಿಎ ಗೆ ಸೋನಿಯಾ, NDA ಗೆ ಹಿಂದೆ ಅಟಲ್ ಈಗ ಆಡ್ವಾಣಿ ಹೀಗೆ ಒಂದು ಸ್ಥಿರ ನಾಯಕತ್ವವಿದೆ. ಆದರೆ ಮೂರನೇ ರಂಗಕ್ಕೇ ??! ಇವತ್ತು ಒಂದು ಹೆಸರು ಹೇಳಿದರೆ ನಾಳೆ ಅದೇ ಹೆಸರು ಉಳಿದಿರುತ್ತದೆ ಅನ್ನುವ ನಂಬಿಕೆಯಿಲ್ಲದ ಕಾರಣ ನಾನು ಆ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾವುದೇ ಒಂದು ಪ್ರಬಲ ರಾಷ್ಟ್ರೀಯ ಪಕ್ಷದ ಬೆಂಬಲ ಇಲ್ಲದೆ ರಾಜಕೀಯ ರಂಗವನ್ನು ಬೆಳೆಸುವುದು ಖಂಡಿತ ಅಸಾಧ್ಯ. ಹಾಗಾಗಿ ಬರೀ ಪ್ರಾದೇಶಿಕ ಮಟ್ಟದ ಪಕ್ಷಗಳಿಂದ ಕೂಡಿದ ಮೂರನೇ ರಂಗ ಯಶಸ್ವಿಯಾಗುವುದಂತೂ ದೂರದ ಮಾತು.. !! ಮೊನ್ನೆ ಮೊನ್ನೆ ಮೂರನೇ ರಂಗದ ಮಾತುಕತೆ ನಡೆದು ಕೆಲ ದಿನಗಳಾಗುವಷ್ಟರಲ್ಲಿ ಮೂರನೇ ರಂಗದ ಸಂಭಾವ್ಯ ಪಕ್ಷವೆಂದು ಗುರ್ತಿಸಲ್ಪಟ್ಟಿರುವ ತೃಣಮೂಲ ಕಾಂಗ್ರೆಸ್ಸ್ ಮುನಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಇನ್ನು ಮುಂದಿನ ದಿನಗಳಲ್ಲಿ ಹೇಗೆ ಅನ್ನುವ ಬಗ್ಗೆ ಇದೇ ಸುಳಿವು ನೀಡುತ್ತದೆ.

ಇಷ್ಟರವರೆಗೆ ಮೋದಿ NDA ಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಇದ್ದ ಅಡ್ಡಿಯಂತೂ ಈಗ ನಿವಾರಣೆಯಾಗಿದೆ. ಮುಂಬರುವ ದಿನಗಳಲ್ಲಿ ನಮೋ ಮಿತ್ರರು NDA ಸೇರಿಕೊಳ್ಳುವ ಅವಕಾಶಗಳೂ ದಟ್ಟವಾಗಿದೆ. ತಮಿಳುನಾಡಿನ ಜಯಲಲಿತಾ   ಇದರಲ್ಲಿ ಪ್ರಮುಖರು. ಹಾಗೆಯೇ ಮೋದಿ ನಾಯಕತ್ವದಿಂದ ಕರ್ನಾಟಕದಲ್ಲಿ ಯಡಿಯೂರಪ್ಪರ ಬಿಜೆಪಿ ಮರು ಸೇರ್ಪಡೆಗೆ ದಾರಿ ಸುಗಮವಾದಂತಾಗಿದೆ. ಒಟ್ಟಾರೆ ಬೆಳವಣಿಗೆಗಳ ಅವಲೋಕನದಿಂದ ಒಂದಂತೂ ದೃಢವಾಗುತ್ತದೆ. ಅದೇನೆಂದರೆ, ಬಿಜೆಪಿ ಇದರಿಂದ ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚಿದೆ...

ಕೊನೇ ಮಾತು : ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ ನಿತೀಶ್ ಏನು, ಯಾರಿಂದಲೂ ಗುಣಪಡಿಸಲಾಗದು...!





Friday, May 31, 2013

ಮನದ ಮುಂಗಾರು...


ಅಂತರಾತ್ಮವು ಗುನುಗುತ್ತಿದೆ ನಿನ್ನ ಹೆಸರಿನಲ್ಲೇ ಕವಿತೆ
ಅಂತರಾಳವು ಕೂಗುತ್ತಿದೆ ನೀನೆ ನನ್ನ ಹಣತೆ
ನೀನೊಂದು ಬರೀ ಹುಡುಗಿ ಈ ಜಗಕೆ
ನೀನೇ ಜಗವು ಎನ್ನ ಮನಕೆ...

ನಿನ್ನ ಮುಂಗುರುಳ ಆ ಸಾಲು
ಕಣ್ತುಂಬಿ, ಮನದಲಿ ಮುಂಗಾರು
ನಿನ್ನ ಮೋಹಕ ನಗುವಿನ ಸರಿಗಮಕೆ
ನನ್ನ ಹೃದಯದಿ ಖುಷಿಯ ಮೆರವಣಿಗೆ...

ನಡೆಯಲು ನಿನ್ನ ವೈಯಾರ
ನೋಡುತ ಮನ ಬಂಗಾರ
ನಿನ್ನ ಮುತ್ತುಗಳುದುರುವ ಮಾತಿಗೆ
ಕೊಡುವೇ ಪ್ರೀತಿಯ ವಂತಿಗೆ...

ಕಾಲಿನ ಗೆಜ್ಜೆಯ ಸವಿಶ್ರುತಿಗೆ
ನನ್ನೆದೆ ಮಿಡಿತದ ವಂದನೆ
ನಿನ್ನೆಜ್ಜೆ ಗುರುತಲಿ ಐಕ್ಯನಾಗಲೇ
ಸಖ್ಯವ ಬಯಸಿ ನಿನ್ನಲೇ...




Thursday, May 16, 2013

'ವಂದೇ ಮಾತರಂ' ದೇವರ ಭಜನೆಯಲ್ಲ...... ನೂರು ಕೋಟಿ ಭಾರತೀಯರ ನಾಡಿ ಮಿಡಿತ......!!





ವಂದೇ ಮಾತರಂ.... 
ಎದೆಯುಬ್ಬಿಸಿ ಗರ್ವದಿಂದ ಗರ್ಜಿಸಿದಿವೆಂದರೆ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ 'ವಂದೇ ಮಾತರಂ' ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರ , ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿಗೀತೆ, ಪ್ರತಿಯೊಬ್ಬ  ಭಾರತೀಯನ ನಾಡಿ ಮಿಡಿತ...  ವಂದೇ ಮಾತರಂ ಅನ್ನು ವಿಶ್ಲೇಶಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆ ಯಾದೀತು...!!!!

ಆದರೆ... ವಂದೇ ಮಾತರಂ ಅನ್ನು ಗೌರವಿಸುವ ವೀರ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..


ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ  ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.


ಆ ಘಟನೆ ಹೀಗಿದೆ,

1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂ ನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಆವರ ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ,  ಮಸೀದಿಯೂ ಅಲ್ಲ..  ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂ ಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂ ಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.
ಮುಂದೆ ಇದೇ ಆಲಿ ಸಹೋದರರು ಜಿನ್ನಾ ಜತೆಗೂಡಿ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ರಚನೆಗೆ ಕಾರಣರಾಗಿ ಅಲ್ಲಿಗೇ ವಲಸೆ ಹೋದರು. ಆದರೆ ಅವರಂತಹ  ವಿಷ ಮನಸ್ಸುಗಳು ಕೆಲವು ಇಲ್ಲೇ ಉಳಿದುಬಿಟ್ಟವು.  ಇಂದು ಅಂತಹ ಹಲವು ವಿಷ ಮನಸ್ಸುಗಳು ಕಾಣಸಿಗುತ್ತವೆ. . ಬಿಎಸ್ಪಿ ಸಂಸದ ಶಫಿಕುಲ್ ರೆಹಮಾನ್ ಹಾಗು ಆ ಘಟನೆ ನಂತರ ಆತನನ್ನು ಬೆಂಬಲಿಸಿ ವಾದಕ್ಕಿಳಿದ ಆತನ ಕೆಲ ಧರ್ಮೀಯರೂ ಕೂಡ ಈ ಪಟ್ಟಿಗೆ ಬರುತ್ತಾರೆ.

ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಏನಿದೆ??


ಬಂಕಿಮ ಚಂದ್ರರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೊರಗಿನ ಸುಂದರ ಪರಿಸರವನ್ನು ನೋಡಿ ಪುಳಕಿತರಾಗಿ ಬರೆದ ಗೀತೆಯಿದು. ಇಲ್ಲಿ ಇರುವುದು ನಮ್ಮ ದೇಶದ ಭೂಮಿಯ, ಪ್ರಕೃತಿಯ, ಮರಗಿಡಗಳಿಂದ ಕೂಡಿದ ಹಚ್ಚ ಹಸುರಿನ ವರ್ಣನೆ ಬಣ್ಣನೆ ಹಾಗು ದೇಶ ಪ್ರೇಮವನ್ನು ಬಡಿದೆಬ್ಬಿಸಿ ನಾವು ಇಂತಹ ಅಮೋಘ  ಮಣ್ಣಿಗೆ ತಲೆ ಬಾಗಬೇಕು ಅನ್ನುವ ಸಂದೇಶ.. ಆದರೆ ಇದೇ ಭೂಮಿಯಲ್ಲಿ ಜೀವಿಸಿ ಆ ಭೂಮಿಗೆ ತಲೆಬಾಗುವುದಿಲ್ಲ ಅದು ನಮ್ಮ ಧರ್ಮಕ್ಕೆ ವಿರುಧ್ಧ ಎಂದರೆ ಎಂತಹ ಉದ್ಧಟತನವದು. ??! ನಾವು ಅಲ್ಲಾಹ್ ನನ್ನು ಬಿಟ್ಟು ಬೇರೆ ಯಾರಿಗೂ ತಲೆ ಬಾಗುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ನಿಮ್ಮ ತಾಯಿ ?? ಅವಳಿಗೆ ತಲೆ ಬಾಗುವುದಿಲ್ಲವೇ ??  ನಿಮ್ಮ ಜೀವನ ಶೈಲಿ ಕುರಾನ್ ನಲ್ಲಿ ಹೇಳಿದಂತೆ ಇದೆಯೇ? ಒಮ್ಮೆ ನಿಮ್ಮ ಜೀವನ ಹಾಗು ನಿಮ್ಮ ಕುರಾನ್ ನಲ್ಲಿ ಹೇಳಿದ ಕೆಲ ನಿರ್ಭಂಧಗಳನ್ನು ಒಮ್ಮೆ ನೆನಪಿಸಿ ಅವಲೋಕಿಸಿ.  ನಿಮಗೆ ಬೇಕಾದಲ್ಲಿ ಕುರಾನ್ ಅನ್ನು ಮರೆತು ಜೀವನ ನಡೆಸುವ ನೀವು ದೇಶದ ಶಾಂತಿ ಕದಡಲು ಮಾತ್ರ ನಿಮ್ಮ ಕುರಾನ್ ಅನ್ನು ಅಡ್ಡ ತರುತ್ತೀರೆನು ??



ವಂದೇ ಮಾತರಂ ಕೇವಲ ಭರತ ಭೂಮಿಯನ್ನು ಹೊಗಳುವ ಸ್ತುತಿ ಗೀತೆಯಾಗಿ ಉಳಿದಿಲ್ಲ .. ಇದೊಂದು ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸುವ ವೀರ ಗೀತೆ... ಅಂದಿನ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೆಜಿಸಿದ್ದು ಇದೇ ವಂದೇ ಮಾತರಂ.. ೧೯೦೫ ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗ ಭಂಗ ಚಳುವಳಿ ಗೆ ಇದೇ  ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ ೧೯೪೭ ರ ಸ್ವಾತಂತ್ರ ಸಿಗುವವರೆಗೆ ನಮ್ಮ ಸ್ವಾತಂತ್ರ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಬಗ್ಗೆ ಚಕಾರವೆತ್ತದ ಮುಸ್ಲಿಮರು ಈಗ ಧರ್ಮದ ಲೇಪ ಹಚ್ಚುತ್ತಿರುವುದು ಅವರ ಉದ್ದಟತನ ಹಾಗು ಸ್ವಾರ್ಥತೆಯನ್ನು ಬಿಂಬಿಸುತ್ತದೆ. ಹಾಗೆಯೇ ಅವರ ದೇಶ ವಿರೋಧಿ ಮನೋಭಾವವನ್ನೂ. ಸ್ವಾತಂತ್ರ ಬೇಕಾದಾಗ ಇವರಿಗೆಲ್ಲ ವಂದೇ ಮಾತರಂ ಬೇಕಿತ್ತು. ಜತೆಗೆ ಹಿಂದೂಗಳೂ ಬೇಕಿದ್ದರು. ಹಿಂದೂ ಮುಸ್ಲಿಮರು ಜತೆಯಾಗಿ ವಂದೇ ಮಾತರಂ ಹಾಡುತ್ತಿದ್ದರು. ಆದರೆ ಯಾವಾಗ ಭಾರತಕ್ಕೆ ಸ್ವಾತಂತ್ರ ಸಿಗುವ ಮುನ್ಸೂಚನೆ ದೊರಕಿತೋ ಆ ಕ್ಷಣದಿಂದ ಈ ಮುಸ್ಲಿಂ ಮತಾಂಧತೆ ಸೃಷ್ಟಿಯಾಯಿತು ಎನ್ನಬಹುದು. ೧೯೨೦ ರ ನಂತರ ನಡೆದದ್ದೆಲ್ಲ ಈ ಮುಸ್ಲಿಂ ಮತಾಂಧತೆಯ ರಾಜಕಾರಣವೇ.... ಪರಿಣಾಮ ದೇಶ ವಿಭಜನೆ.. !!


ದೇಶ ವಿಭಜನೆಯ ನಂತರ ಮತಾಂಧ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋದ ಮೇಲಾದರೂ ನೆಮ್ಮದಿಯ ಸೌಹಾರ್ದದಿಂದ ಬಾಳಬಹುದೆಂದುಕೊಂಡಿದ್ದ ಭಾರತೀಯರ ಕನಸು ಮಾತ್ರ  ನನಸಾಗಲೇ ಇಲ್ಲ. ದೇಶದ ಬಗೆಯೇ ಗೌರವ ಇಲ್ಲದವರು ನಮ್ಮ ನಡುವೆ ಇರುವಾಗ ಎಲ್ಲಿಯ ನೆಮ್ಮದಿ, ಎಲ್ಲಿಯ ಸೌಹಾರ್ದ. ನಮಗೆ ದೇಶಕ್ಕಿಂತ ಧರ್ಮವೇ ಮೇಲು ಎನ್ನುವವರು ೧೯೪೭ ರಲ್ಲೇ ತೊಲಗಬಹುದಿತ್ತಲ್ಲ... ಅಂದು ಹಿಂದೂ ರಾಷ್ಟ್ರ ಮುಸ್ಲಿಂ ರಾಷ್ಟ್ರವೆಂದು ವಿಭಜನೆಯಾದ ಮೇಲೂ ಹಿಂದೂ ರಾಷ್ಟ್ರದಲ್ಲೇ ಉಳಿಯುತ್ತೇವೆ ಎಂದು ಯಾವ ಪುರುಷಾರ್ಥಕ್ಕಾಗಿ ಉಳಿದಿರಿ?!


ಒಂದು ರಾಷ್ಟ್ರ ಬೇರೆ , ಧರ್ಮ ಬೇರೆ. ಅವೆರಡನ್ನು ಬೆರೆಸಿ ವಾದಿಸುವ ಹುಂಬತನ ಬೇಡ. ಒಬ್ಬ ಭಾರತೀಯನಾಗಿ ಹುಟ್ಟಿದ ಮೇಲೆ ಆತ ಆ ದೇಶ, ಆ ದೇಶದ ಸಂಸ್ಕೃತಿ, ಸಂಪ್ರದಾಯ, ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ   ಧ್ವಜ, ಲಾಂಛನ ಹಾಗು ದೇಶ ಪ್ರೇಮದ ಕುರಿತಾದ ಯಾವುದಕ್ಕಾದರೂ ಗೌರವ ಕೊಡಲೇಬೇಕು. ನಾನು ಮುಸ್ಲಿಂ ಅದೆಲ್ಲ ಸಾಧ್ಯವಿಲ್ಲವೆಂದಾದರೆ ೧೯೪೭ ರಲ್ಲೇ ನಿಮಗಾಗಿ ಭಾರತದ ಒಂದು ತುಂಡನ್ನು ಕಿತ್ತುಕೊಂಡು ಹೋದರಲ್ಲ. ದಯವಿಟ್ಟು ಅಲ್ಲಿಗೇ ಹೊರಡಬಹುದು. ಈಗಲೂ ಕಾಲ ಮಿಂಚಿಲ್ಲ .


ವಂದೇ ಮಾತರಂ...



Friday, May 3, 2013

ಜಾಜಿ ಮಲ್ಲಿಗೆ


ನಿನ್ನ ಸನಿಹವ ಬಯಸಿ ಬಂದೆನು 

ದೂರವೇತಕೆ ಓಡಿದೆ... 
ಎದೆಯ ತುಂಬಾ ಒಲವು ತುಂಬಿದ 
ನಿನ್ನ ನೆನೆಪೇ ಕಾಡಿದೇ... 
ನಿನ್ನ ಮೋಡಿಗೆ ನನ್ನ ನಾಡಿಯೇ ಮಿಡಿವುದಾ ಮರೆತೋಗಿದೆ... 

ನನ್ನ ಪ್ರೀತಿಯು ಜಾಜಿಮಲ್ಲಿಗೆ 
ಕಾಡಮಲ್ಲಿಗೆ ನಿನಗೇತಕೆ... 

ಒಲವಂಚಿತ ಬಾಳು ಸವೆಸಲು
ನಿನಗೇತಕೆ ಆಸೆಯೇ...

ಮುಳ್ಳು ಬೇಲಿಯ ಸಂಗವೇತಕೆ
ನವಿರು ಬಟ್ಟೆಯು ಹರಿಯದೇ...
ನಲುಗದ ಮಲ್ಲಿಗೆ ನೀನು
ನಲುಗುವಾಸೆಯು ಸಹ್ಯವೇ...

ದೇಹದಲ್ಲಿ ವಿವಿಧ ಜನಪದ
ಉಸಿರಿನಲ್ಲಿ ಏನೋ ಕಲರವ
ಮನಸ್ಸಿನಲ್ಲಿ ಧೀರ ಮೌನ
ನಿನ್ನ ಮೌನದ ಛಾಯೆಗೆ...

ದಿಗಿಲಾಗಿದೆ ಮನ ಬಾಳ ಕರಿಮುಗಿಲಿನಲಿ
ಚುಕ್ಕಿಯೊಂದು ಬಾನ ಜಾರಿದಂತೆ...
ಕೈ ಹಿಡಿಯಲು ನೀನಿಲ್ಲ
ಕತ್ತಲೆಯ ಬದುಕಿನಲ್ಲಿ, ಎಲ್ಲವೂ ಕರಾಳ...

ಕನಸ ಗೋಪುರ ಅಲುಗಿದೆ
ಮನವು ತೊದಲಿ ನಲುಗಿದೆ...
ಬಾಳ ಮೆರವಣಿಗೆ ಖಾಲಿ ಖಾಲಿ
ನಾನಿಲ್ಲಿ, ನೀನೆಲ್ಲಿ ?...

ಸಂಜೆ ಪಯಣವು ಬೇಸರಿಸಿದೆ
ನಿನ್ನ ಇರವು ಕಾಣದೆ...
ಅಂಬೆಗಾಲಿಡುತ ಬಂದಿದೆ ಹೃದಯ
ಕಾಣದಾದೆಯಾ ನನ್ನೊಲವೇ... 


Tuesday, April 9, 2013

ನಿನ್ನದೇ ಖುಷಿಯಲಿ..


ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...

ನಿನ್ನ ಕಣ್ಣಾಗಿ, ಕಣ್ಣೀರ ಮರೆಮಾಚಿ
ನಿನ್ನ ಹೆಜ್ಜೆ ಗುರುತಲ್ಲಿ ನನ್ನದರವ ಸೋಕಿ
ಏಳು ಜನ್ಮದ ಖುಷಿಯ ನಿನ್ನ ಮುಂದಿಡುವೆ
ನಿನ್ನ ಮೊಗದಿ ನಗುವ ಸಹಿ ಮಾಡುತ....

ನೀ ಪೀಡಿಸು ಸತಾಯಿಸು
ಮುದ್ದಾಗಿ ಒಮ್ಮೆ ಕೋಪಿಸು
ನೀ ನನ್ನ ಕಂದ, ಆನಂದಿಸುವೆ ನಾ
ನಿನ್ನ ಪ್ರತಿ ತುಂಟ ಚೇಷ್ಟೆಗಳಾ...

ಸಿಹಿಗನಸ ಆಯ್ದು ಕಳಿಸುವೆ ನಾ
ನಿನ್ನ ಕನಸಿನ ಲೋಕಕೆ
ಬೆಚ್ಚಿ ಬೀಳದಿರು ನನ್ನ ಒಲವೇ
ಬೆಚ್ಚಗಿಡುವೆ ಅನವರತ ನಿನ್ನೇ ಪ್ರೀತಿಸುತ...

ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...



ಒಲವೆಂದು ಗೀಚಿಡಲೇ...


ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...
ವಿಳಾಸವರಿಯದ ಅಲೆಮಾರಿ ನಿನ್ನ ಹೃದಯಕೆ ಬಂದಿರುವೆ
ಬಚ್ಚಿಡು ನನ್ನ ಅಲ್ಲೇ ಬೆಚ್ಚನೆ ಕೂತಿರುವೆ...

ಎದೆಯ ತುಂಬಾ ನಿನ್ನ ಚಿತ್ತಾರವ ಬಿಡಿಸಿ
ಎದೆಯ ಗೂಡ ಒಳಗೆ ಪ್ರೇಮದ ಕಣಜ ಕಟ್ಟಿರುವೆ...
ಈ ಸಂಭಾಷಣೆ ಆಲಾಪನೆ ಎಲ್ಲಾ ನಿನ್ನದೇನೆ
ಮನದಲ್ಲಿಯೂ ಕನಸಲ್ಲಿಯೂ ಎಲ್ಲಾ ನೀನೇನೆ...

ನೀನು ಬಂದ ಘಳಿಗೆ ಅದೇನೋ ವಿಸ್ಮಯ
ನಿನ್ನ ಸನಿಹದಲ್ಲಿ ನಾನೂ ತನ್ಮಯ...
ನೀ ನನ್ನ ಬೆಳಕು, ನಿನಗಾಗಿ ಈ ಬದುಕು
ಕಾರಣವ ಕೇಳದಿರು ಒಲವೇ ನಾ ನಿನ್ನೇ ಪ್ರೀತಿಸಿರುವೆ ನಿಜವೆ...

ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...







Monday, April 8, 2013

ಅದೇ ಕಣ್ಣು..



ಮಾನಸ ಕೊಳದಲಿರೋ ಹಂಸವೇ..


ಮಿಟುಕುವ ಚಂಚಲ ರೆಪ್ಪೆಯ ಸೊಬಗೇ..

ಶ್ವೇತ ಸರೋವರದಿ ಕಪ್ಪು ಚಂದಿರನು

ಹೊಳೆವ ಮಾಟಕೆ ಸೋತುಹೋಗಿಹೆನು

ಸೂಜಿ ನೋಟದ ಹರಿತ ತಾಳೆನು ಒಮ್ಮೆ ಚುಚ್ಚಿ ಬಿಡೇ...

ಸುಳ್ಳೇ ಆದರೂ ನನ್ನೇ ಕಾಣುವೆ ನಿನ್ನ ಕಣ್ಣೊಳಗೆ...



Thursday, February 14, 2013

ನಿನ್ನ ಪಾದದಡಿ...



ಮುದ್ದಾದ ನಿನ್ನ ಚರಣಕೆ ಮುತ್ತಿಕ್ಕುವ ಹಂಬಲ

ನವಿರಾದ ನಿನ್ನ ಕಾಲ ನೇವರಿಸುತ..
ಹೂವ ರಾಶಿಯ ಮೇಲೆ ನೀ ಹೆಜ್ಜೆಯಿಟ್ಟಾಗ 
ಬರುವ ಘಮವನ್ನು ಆನಂದಿಸುತ.


ದೀಪದ ಬೆಳಕಿನಲಿ ಚಿನ್ನದ ನಿನ್ನ ಚರಣಕೆ 
ಬೆಳ್ಳಿಯ ಕಾಲ್ಗೆಜ್ಜೆಯ ನಾ ತೊಡಿಸುವೆ..
ದಟ್ಟ ಅಂಧಕಾರದಲೂ ನಿನ್ನ ಬಿಗಿದಪ್ಪುವೆನು
ಕಾಲ್ಗೆಜ್ಜೆಯ ಸಂಗೀತವ ಅನುಸರಿಸುತ.


ನಿನ್ನ ಚರಣದ ಪೂಜಾರಿ ನಾ
ನಲುಗದಿರು ನನ್ನೊರಟು ಸ್ಪರ್ಶಕೆ..
ನಿನ್ನ ಪಾದದ ಮೇಲಾಣೆ ಒಲವೇ
ಪ್ರೀತಿಸುವೆ ನಿನ್ನ ಅನವರತ.


 
 
 

Friday, January 18, 2013

'ಟಿಪ್ಪು' ಹೆಸರಿನಲ್ಲಿ 'ಕೈ' ರಾಜಕೀಯ..?

ಬಹುಶಃ ಭಾರತದಲ್ಲಿ ಹಿಂದೂ ಧರ್ಮ ಬಿಟ್ಟು ಇತರ ಧರ್ಮೀಯರಿಗೆ ಕೊಡುವ ಸವಲತ್ತುಗಳು, ಸೌಕರ್ಯಗಳು ಇತರ ಯಾವ ದೇಶದಲ್ಲೂ ಇರಲಿಕ್ಕಿಲ್ಲ.. ನಮ್ಮ ರಾಜಕೀಯ ವ್ಯವಸ್ಥೆಯೇ ಅಂತಹುದು. ನಮ್ಮ ರಾಷ್ಟ್ರ ಪಿತರು ಬುನಾದಿ ಹಾಕಿದ ಈ ಸಂಸ್ಕೃತಿ ಇಂದಿನವರೆಗೂ ನಿಂತಿಲ್ಲ.. ಈಗ ಇಂತಹದೇ ಒಂದು ಕಾರಣಕ್ಕಾಗಿ ಸುದ್ದಿ ಮಾಡುತ್ತಿರುವುದು ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ.

ಭಾರತದಲ್ಲಿ ಈಗಾಗಲೇ ಇರುವ  ಪ್ರತ್ಯೇಕ ಮುಸ್ಲಿಂ ವಿದ್ಯಾಲಯ ಅಲಿಘಡ ವಿವಿ. ಈಗ ಕೇಂದ್ರ ಸರ್ಕಾರ ಇನ್ನೊಂದು ಪ್ರತ್ಯೇಕ ಮುಸ್ಲಿಂ ವಿವಿ ಯನ್ನು ಕರ್ನಾಟಕದ ಶ್ರೀರಂಗಪಟ್ಟಣ ದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಈಗಾಗಲೇ ಎರಡು ಪ್ರತ್ಯೇಕ ವಿವಿ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ವಿವಿ ಯಾಕೆ? ಅದರಲ್ಲೂ ಧರ್ಮದ ಆಧಾರದ ಮೇಲೆ ವಿವಿ ವಿಂಗಡಣೆ ಸರಿಯೇ? ವಿಶ್ವವಿದ್ಯಾಲಯಗಳಿಗೆ ಧರ್ಮದ ಲೇಪ ಯಾಕೆ ಬೇಕು? ಭಾರತದಲ್ಲಿರುವ ಅಷ್ಟೂ ವಿವಿಗಳಲ್ಲಿ ಮುಸ್ಲಿಮರು ಓದಲಾರರೇ? ವಿವಿಗಳಲ್ಲಿ ಮುಸ್ಲಿಮರಿಗೆ ಅಂತಹ ತೊಂದರೆಗಳಿವೆಯೇ? ಹಾಗೆ ಹೀಗೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮಗೆ ಸಿಗುವ ಉತ್ತರ "ಹಾಗೇನೂ ಇಲ್ಲ, ಎಲ್ಲವೂ ಸರಿಯಾಗಿದೆ.." ಹಾಗಿದ್ದಲ್ಲಿ ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪನೆಯ ಉದ್ಧೇಶ ರಾಜಕೀಯ ತಂತ್ರ ಅನ್ನುವುದು ಸ್ಪಷ್ಟವಾಗುತ್ತದೆ.

ಇನ್ನು ಮುಸ್ಲಿಮರಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಕೊಟ್ಟರೆ ಏನಾಗುತ್ತದೆ ಅನ್ನುವುದು ಅಲಿಘಡ ವಿವಿಯಲ್ಲೇ ಗೊತ್ತಾಗಿದೆ. ಅಲ್ಲಿ ಹುಟ್ಟಿಕೊಂಡ 'ಸಿಮಿ' ಸಂಘಟನೆ ದೇಶವ್ಯಾಪಿ ಬೆಳೆದು ದೇಶ ವಿರೋಧಿ ಭಯೋತ್ಪಾದನಾ ಸಂಘಟನೆಯಾಗಿ ಮಾರ್ಪಟ್ಟು ದೇಶದಾದ್ಯಂತ ವಿದ್ವಂಸಕ ಹಾಗು ದೇಶ ದ್ರೋಹಿ ಕೃತ್ಯಗಳನ್ನು ನಡೆಸಿ ಇಂದು ಆ ಸಂಘಟನೆಯನ್ನು ನಿಷೇಧಿಸಿದ್ದಾರೆ ಅಂದರೆ ಅದರ ಭಯಂಕರತೆಯನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆದರೆ ಕೇಂದ್ರ ಸರಕಾರ ಇದರ ಬಗ್ಗೆ ಜಾಣ ಕುರುಡು ಪ್ರದರ್ಶಿಸಿ ಮತ್ತೊಂದು ವಿವಿಗೆ ಕೈ ಹಾಕಿರುವುದು ನಮ್ಮ ದೇಶದ ದುರದೃಷ್ಟವೆನ್ನಬೇಕು.


ಈ ವಿವಾದ ಇನ್ನೂ ಬಗೆಹರಿಯದೆ ಹೊಗೆಯಾಡುತ್ತಿರುವಾಗಲೇ ಯೋಜಿತ ವಿವಿಗೆ ಇಡುವ ಹೆಸರಿನ ಬಗ್ಗೆ ಮತ್ತೊಂದು ವಿವಾದ ಎದ್ದಿದೆ. ಆ ಪ್ರಸ್ತಾಪಿತ ಹೆಸರು ಹಿಂದೂ ವಿರೋಧಿ, ಮುಸ್ಲಿಂ ಮತಾಂಧ, ಹತ್ಯಾಕಾಂಡಗಳ ರೂವಾರಿ ಟಿಪ್ಪು ಸುಲ್ತಾನ್ ನದ್ದು.!!! ಟಿಪ್ಪು ಹೆಸರಿಗೆ ಬೆಂಬಲ ಸೂಚಿಸಿ ಅದೇ ಹೆಸರನ್ನು ಇಡುವಂತೆ ಕೆಲ ಬುದ್ಧಿ ಜೀವಿಗಳ ಪಡೆ ಬೇರೆ ಎದ್ದು ನಿಂತಿದೆ. ಬಹುಶಃ ಅವರಿಗೆಲ್ಲ ಟಿಪ್ಪುವಿನ ನಿಜ ಸ್ವರೂಪ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಹೆಚ್ಚಿನವರು ಟಿಪ್ಪು ಒಬ್ಬ ಸರ್ವ ಧರ್ಮ ಸಹಿಷ್ಣು, ರಾಷ್ಟ್ರ ಪ್ರೇಮಿ, ಕನ್ನಡ ಭಾಷಾ ಪ್ರೇಮಿ ಎಂದೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಅವೆಲ್ಲ ಅಪ್ಪಟ ಸುಳ್ಳುಗಳು..!! ಟಿಪ್ಪುವಿನ ನಿಜ ಬಣ್ಣ ತಿಳಿಯಬೇಕಾದರೆ ನಾವು ಮತ್ತೊಮ್ಮೆ ಇತಿಹಾಸವನ್ನು ಕೆದಕಬೇಕು. ಕೆದಕುತ್ತಾ ಹೋದಂತೆಲ್ಲ ಸಾಕ್ಷ್ಯಗಳು ನಮ್ಮ ಕಾಲನ್ನು ಎಡತಾಕುತ್ತವೆ. ಟಿಪ್ಪುವಿನ ನಿಜವಾದ ಮುಖದ ಅನಾವರಣವಾಗುತ್ತದೆ. ಅವುಗಳಲ್ಲಿ ಕೆಲವನ್ನು ನೋಡೋಣ...

1) ಟಿಪ್ಪು ತನ್ನ ಶ್ರೀರಂಗಪಟ್ಟಣ ಕೋಟೆಯ ಪ್ರವೇಶದ್ವಾರದ ಆಂಜನೇಯ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯ ಶಾಸನ ಹಾಗು ಶ್ರೀರಂಗಪಟ್ಟಣದ ಹಲವು ಪರ್ಷಿಯನ್ ಶಾಸನಗಳಲ್ಲಿ ಹಲವೆಡೆ "ಮುಸ್ಲಿಮೇತರರನ್ನು (ಕಾಫಿರ್) ಕೊಲ್ಲಬೇಕು" ಎಂಬರ್ಥದ ಬರಹಗಳಿವೆ. ಅಂತಹ ಬರಹಗಳಲ್ಲಿ ಒಂದು ಬರಹ ಹೀಗಿದೆ  "ಪ್ರವಾದಿಗಳು ಹೇಗೆ ಯುದ್ಧವನ್ನು ಮಾಡಿ ಕಾಫಿರರನ್ನು ಕೊಂದರೋ ಹಾಗೆಯೇ ನೀವುಗಳು ಕೂಡ ಕಾಫಿರರನ್ನು ಕೊಲ್ಲಲು ಯುದ್ಧ ಸಲಕರಣೆಗಳನ್ನು ಹೊಂದಿರಿ."
ಅವನು ಕಿತ್ತುಹಾಕಿಸಿದ ಆಂಜನೇಯನ ವಿಗ್ರಹವನ್ನು ಊರ ಒಳಗೆ ಹೊಸ ದೇವಾಲಯ ಕಟ್ಟಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.  ಟಿಪ್ಪು ಕಟ್ಟಿಸಿದ ಮಸೀದಿಯ ಕೆಳಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಕುರುಹುಗಳು ಸ್ಪಷ್ಟವಾಗಿವೆ.

2) ಇತ್ತೀಚೆಗೆ ವಿಜಯ್ ಮಲ್ಯ ಭಾರತಕ್ಕೆ ವಾಪಾಸು ತಂದ ಟಿಪ್ಪುವಿನ ಖಡ್ಗದ ಮೇಲಿನ ಪರ್ಷಿಯನ್ ಭಾಷೆಯ ಶಾಸನವು ಈ ರೀತಿ ಇದೆ, "ನನ್ನ ವಿಜಯ ಖಡ್ಗ ಎಲ್ಲಾ ಕಾಫಿರರನ್ನು ಕೊಂದು ಪ್ರಕಾಶಿಸುತ್ತದೆ."

3) 14.12.1788 ರಂದು ಟಿಪ್ಪು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಪತ್ರ,
"ನೀನು ನೀರ್ ಹುಸೇನ್ ಆಲಿ ಜತೆಗೂಡಿ ಅಲ್ಲಾಹುವಿನಲ್ಲಿ ನಂಬಿಕೆ ಇಲ್ಲದ ಎಲ್ಲ ಕಾಫಿರರನ್ನು ಕೊಲ್ಲಬೇಕು."

4) ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ,
" ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇನೆ."

5) 22.3.1789 ರಲ್ಲಿ ಕೊಡೆoಗೇರಿ ಅಬ್ದುಲ್ ಖಾದಿಗೆ ಬರೆದ ಪತ್ರದ ಒಕ್ಕಣೆ,
" ನಾನು 1200 ಕಾಫಿರರನ್ನು ಮತಾಂತರಿಸಿದ್ದೇನೆ. ನೀನು ಎಲ್ಲಾ ನಂಬೂದಿರಿ (ಕೇರಳದ ಬ್ರಾಹ್ಮಣರು) ಮತ್ತು ಇತರರನ್ನು ಮತಾಂತರಿಸು."

6) ಪ್ರಾರಂಭದಲ್ಲಿ ಟಿಪ್ಪು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದರೂ ನಂತರದಲ್ಲಿ ಪರ್ಷಿಯನ್ ಭಾಷೆಯನ್ನೂ ಆಡಳಿತ ಭಾಷೆಯನ್ನಾಗಿ ತರಲು ಭಾರೀ ಶ್ರಮ ಪಟ್ಟಿದ್ದ. ಆದರೆ ಅದು ಯಶಸ್ವಿಯಾಗದೆ ಹೋದದ್ದು ಕನ್ನಡಿಗರ ಅದೃಷ್ಟ. ಅಂತೆಯೇ ಟಿಪ್ಪುವಿನ ಎಲ್ಲಾ ಶಾಸನಗಳು ಪರ್ಷಿಯನ್ ಭಾಷೆಯಲ್ಲಿಯೇ ಇವೆ. ಟಿಪ್ಪು ಪರ್ಷಿಯನ್ ಪಾಷೆಯನ್ನು ಆಡಳಿತ ಭಾಷೆಯಾಗಿ ತಂದು ಯಶಸ್ವಿಯಾಗಿದ್ದರೆ ಇವತ್ತಿಗೆ  ಮೈಸೂರು ನಜರಾಬಾದ್ ಆಗಿರುತಿತ್ತು.

7) ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿಯನ್ನು ಚಿಕ್ಕ ಮನೆಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೆ ಸೆರೆಯಿರಿಸಿದ್ದನ್ನು  ಶ್ರೀನಿವಾಸ್ ಆಚಾರ್, ನಾರಾಯಣ ಅಯ್ಯಂಗಾರ್ ಅವರುಗಳು ತಮ್ಮ  'ಮೈಸೂರು ಪ್ರಧಾನ' ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಣಿಯು ತನ್ನ ಮದ್ರಾಸಿನ ಪ್ರತಿನಿಧಿ ತಿರುಮಲರಾವ್ ಗೆ ಬರೆದ ಟಿಪ್ಪಣಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ. ಆ ಟಿಪ್ಪಣಿ ಹೀಗಿದೆ  "... ಟಿಪ್ಪು ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನು ಕೊಲ್ಲಬಹುದು, ಈಗಾಗಲೇ ಶ್ರೀರಂಗಪಟ್ಟಣದ 700 ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಿದ್ದಾನೆ..."

ಟಿಪ್ಪು ನಡೆಸಿದ ಮತಾಂತರ, ಹತ್ಯಾಕಾಂಡಗಳು, ದೇಗುಲಗಳ ಧ್ವಂಸ ಶ್ರೀರಂಗಪಟ್ಟಣ, ಮೈಸೂರು ಪ್ರದೇಶಕ್ಕಿಂತ ಕೊಡಗು, ಮಲಬಾರ್ ನಲ್ಲೇ ಹೆಚ್ಚು. ಮೆನನ್ ಎಂಬ ಲೇಖಕರು ಬರೆದ ಕೇರಳದ ಚರಿತ್ರೆ ಪ್ರಕಾರ ಟಿಪ್ಪು ಪ್ರಜೆಗಳ ಮುಂದೆ ಇದ್ದ ಆಯ್ಕೆ ಎರಡು- ಕುರಾನ್ ಮತ್ತು ಖಡ್ಗ.!!! ಮತಾಂಧನಾಗಿದ್ದ  ಟಿಪ್ಪು ನಾಶ ಮಾಡಿದ ದೇಗುಲಗಳಿಗೆ ಲೆಕ್ಕವಿಲ್ಲ. ಹಾಗೆಯೇ ಆತ  ಮಾಡಿದ ನರಮೆಧಗಳಿಗೂ! ಈ ಬಗ್ಗೆ ವಿಸ್ಕ್ರುತ ವಿವರಗಳು ಹಾಗು ಸಾಕ್ಷ್ಯಗಳ ಬಗೆಗೆ ಎಚ್.ಡಿ.ಶರ್ಮ ಅವರು ಬರೆದ 'ದ ರಿಯಲ್ ಟಿಪ್ಪು' ಕೃತಿಯಲ್ಲಿ ಓದಬಹುದು.

ಟಿಪ್ಪು ಪರ-ವಿರೋಧವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಟಿಪ್ಪು ಒಬ್ಬ ಕಟುಕ, ಕೊಲೆಗಾರ, ಮುಸ್ಲಿಂ ಮತಾಂಧ, ಹಿಂದೂ ಕ್ರಿಶ್ಚಿಯನ್ ವಿರೋಧಿ, ಕನ್ನಡ ಭಾಷಾ ವಿರೋಧಿ ಎಂಬುದು ಸಾಬೀತಾಗುತ್ತದೆ. ಅವನ ಉದ್ಧೇಶ ತನ್ನ ಆಳ್ವಿಕೆಯ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುವುದಾಗಿತ್ತು. ಕೆಲವು ಸಾಹಿತಿಗಳು, ಬುದ್ಧಿ ಜೀವಿಗಳು ನಿಜವಾದ ಇತಿಹಾಸ ಅರಿಯದೆ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ, ಸರ್ವಧರ್ಮ ಸಹಿಷ್ಣು ಎಂದು ವರ್ಣಿಸುತ್ತಾರೆ. ಅದಕ್ಕೆ ಅವರುಗಳು ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ಮಠ ದೇಗುಲಗಳಿಗೆ ದತ್ತಿ ನೀಡಿದ್ದನ್ನು ಉದಾಹರಣೆಯಾಗಿ ಕೊಡುತ್ತಾರೆ. ಆದರೆ ಇಲ್ಲಿ ಸತ್ಯ ಬೇರೆಯದೇ ಇದೆ. ಸ್ವತಃ ಟಿಪ್ಪುವಿನ ಮಗ ಹೇಳುವಂತೆ ಜಾತಕದಲ್ಲಿ ನಂಬಿಕೆಯಿದ್ದ ಟಿಪ್ಪು ತಾನು ಮಾಡಿದ ನರಮೇಧ, ಬಲವಂತದ ಮತಾಂತರ, ದೇಗುಲ ದ್ವಂಸ ಗಳಂತಹ ಪಾಪಗಳ ಕಂಟಕ ನಿವಾರಣೆಗಾಗಿ ಹಣ, ದತ್ತಿ ನೀಡಿ ಬ್ರಾಹ್ಮಣರಿಂದ ಯಜ್ಞ ಯಾಗ ಮಾಡಿಸುತ್ತಿದ್ದ. ಇಂತಹ ಸ್ವಾರ್ಥ ಉದ್ಧೇಶಕ್ಕೆ ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ದೇಗುಲಗಳಿಗೆ ನೀಡಿದ ದತ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅನ್ಯ ಧರ್ಮದ ದೇಗುಲಗಳಿಗೆ ದತ್ತಿ ನೀಡಿ ಇನ್ನೊಂದು ಕಡೆ ಅದೇ ಧರ್ಮದ ದೇಗುಲಗಳನ್ನು ಕೆಡಹುವುದು ಸಹಿಷ್ಣುತೆಯೇ?

ಇಂತಹ ಒಬ್ಬ ಮತಾಂಧನ ಹೆಸರಿನ ವಿವಿಯನ್ನು ನಾವು ಬೆಂಬಲಿಸಬೇಕೆ? ಆತನ ಪಾಪಗಳ ಬಗ್ಗೆ ಅರಿವಿದ್ದವರು ಹಾಗು ಅದಕ್ಕೆ ಬಲಿಯಾದವರು ನಿಜಕ್ಕೂ ಇದನ್ನು ಕ್ಷಮಿಸಲಾರರು. ಒಂದು ವೇಳೆ  ಮತ್ತೊಂದು ಪ್ರತ್ಯೆಕ ಮುಸ್ಲಿಂ ವಿವಿ ಅಸ್ತಿತ್ವಕ್ಕೆ ಬಂದು ಅದಕ್ಕೆ ಟಿಪ್ಪುವಿನ ಹೆಸರು ಇಡುವುದೇ ಆದರೆ ಅದು ಭಾರತದ ೮೫ ಶೇಕಾದ ಹಿಂದೂ ಕ್ರಿಶ್ಚಿಯನ್ನರಿಗೆ ಹಾಗು ಪ್ರಜ್ಞಾವಂತ ಮುಸ್ಲಿಮರಿಗೆ ಮಾಡುವ ಘೋರ ಅವಮಾನವಾಗುತ್ತದೆ. ಅಷ್ಟಕ್ಕೂ ವಿವಿಗೆ ಟಿಪ್ಪುವಿನ ಹೆಸರೇ ಯಾಕೆ ಬೇಕು? ಸಂತ ಶಿಶುನಾಳ ಶರೀಫ, ಅಬ್ದುಲ್ ಕಲಾಮ್ ಅವರಂತಹ ಮಹಾನ್ ಗಳಿದ್ದಾರೆ. ಅದರಲ್ಲೂ ಸಂತ ಶಿಶುನಾಳ ಶರೀಫರ ಹೆಸರು ಹೆಚ್ಚು ಸೂಕ್ತವಾಗುತ್ತದೆ. ಈ ಬಗ್ಗೆ ಚಿಂತಿಸಿದರೆ ಅದೊಂದು ಉತ್ತಮ ಬೆಳವಣಿಗೆಯಾದೀತು.

ಆದರೆ ಇಲ್ಲಿ ಮತ್ತೊಮ್ಮೆ ನಾವು ಧರ್ಮಾಧಾರಿತ ಪ್ರತ್ಯೇಕ  ಮುಸ್ಲಿಂ ವಿವಿಯ ಅಗತ್ಯತೆಯ ಬಗ್ಗೆ ಪ್ರಶ್ನಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಟ್ಟರೆ ಮುಂದೊಂದು ದಿನ ಒಂದೊಂದು ಧರ್ಮಕ್ಕೆ ಪ್ರತ್ಯೇಕ ವಿವಿಗಳು ಬೇಕು ಅನ್ನುವ ಕೂಗು ಖಂಡಿತ ಕೇಳಿ ಬರಬಹುದು. ಆಗ ಸಾಮಾಜಿಕ ಸಾಮರಸ್ಯ ಮತ್ತಷ್ಟು ವಿಷಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.!!






Wednesday, January 16, 2013

ಮನದನ್ನೆ...



ತುಸು ನೋಡೋ ಆಸೆ ನಿನ್ನ , ನಾ ಅಸು ನೀಗುವಾ ಮುನ್ನ
ಬಾ ಬಾರೆ ಗೆಳತಿಯೇ ಅನುಗ್ರಹಿಸು ಎನ್ನ.......................

ಬೆಳದಿಂಗಳ ತೋಟದಲಿ ಕಾಯುತ್ತ ಕೂರುವೆನು
ನೀ ನನ್ನ ನೋಡ ಬರುವೆ ಎಂದು
ನಿನ್ನ ಬರುವು ಕಾಣದಿರೆ ಅಸ್ತಮಿಸುವುದು
ಈ ಬಡಪಾಯಿ ಜೀವ ಇಂದು...

ಬೆಳದಿಂಗಳ ಬೆಳಕಾಗಿ ನಿನ್ನ ಬಾಳ ಬೆಳಗುವೆ
ಎವೆಯಿಕ್ಕದ ಕಣ್ಣಿಂದ ನಿನ್ನ ಕಾಯುತಲಿರುವೆ
ಇದು ಹುಚ್ಚು ಮನಸಲ್ಲ, ಬೆಪ್ಪು ಕನಸಲ್ಲ
ನಿನ್ನಾಣೆ ಗೆಳತಿ ನಾ ನಿನ್ನ ಇನಿಯ
ಬಂದು ಸೇರಿಬಿಡು ನೀ ನನ್ನ ಸನಿಹ...

ನೀ ನನ್ನ ಮನದನ್ನೆ, ನೀನಿರದೆ ನಾ ಸೊನ್ನೆ
ಎದೆಗೂಡ ಒಳಗೆ ಬಚ್ಚಿಡುವೆ ನಿನ್ನ 
ಓ ನನ್ನ ನಲ್ಲೆ ಯಾಕಿಷ್ಟು ದೂರ
ಈ ಜೀವ ನಿನದೇ ಸೇರಿಕೋ ಎನ್ನ...







Tuesday, January 1, 2013

ಸರಣಿ ಸಣ್ಣ ಕತೆಗಳು (ಭಾಗ-2)



ಮದುವೆ

ಆಕೆ ಮತ್ತು ಆತ
 ಅಲಂಕೃತರಾಗಿ ಮದುವೆ ಮಂಟಪದಲ್ಲಿ ಕೂತಿದ್ದಾರೆ. ಅದು ಉತ್ತರ ಭಾರತದ ಯಾವುದೋ ಒಂದು ಹಳ್ಳಿಯಲ್ಲಿನ  ಮದುವೆ ..ಅಲ್ಲಿನ ಸಂಸ್ಕೃತಿಯ ಪ್ರಕಾರ ಮದುವೆಯ ಮೊದಲು ಗಂಡು ಹೆಣ್ಣು ಪರಸ್ಪರ ಮುಖ ನೋಡುವ ಹಾಗಿಲ್ಲ. ಮದುವೆ ಕಾರ್ಯದಲ್ಲಿ ಅವರವರ ಮನೆಹಿರಿಯರ ತೀರ್ಮಾನವೇ ಅಂತಿಮ... ಅದರಂತೆ ಅವರಿಬ್ಬರ ಮುಖವನ್ನು ಪರದೆಯಿಂದ ಮುಚ್ಚಲಾಗಿತ್ತು.

ಅರ್ಚಕರು ಶಾಸ್ತ್ರಗಳನ್ನು ನೆರೆವೇರಿಸುತ್ತಿದ್ದರು. ಎಲ್ಲೆಡೆ ಸoಭ್ರಮ-ಸಡಗರ.. ಆದರೆ ಮದುಮಗನ ಮನಸ್ಸು ಮಾತ್ರ ವಿಲ ವಿಲನೆ ಒದ್ದಾಡುತ್ತಿತ್ತು. ಆತನಿಗೆ ಆ ಮದುವೆ ಇಷ್ಟ ಇಲ್ಲ ಎಂಬುದಕ್ಕೆ ಅವನ ಮನಸ್ಸಿನ ತಳಮಳವೇ ಸಾಕ್ಷಿ. ಅಂತೂ ಇಂತೂ ಮದುವೆ ಮುಗಿಯಿತು.. 
ಶೋಭನದ ರಾತ್ರಿ...  ಮನಸಿಲ್ಲದ ಮನಸ್ಸಿನೊಡನೆ ಆತ ತನ್ನ ರೂಮಿನಲ್ಲಿ ಕುಳಿತ್ತಿದ್ದಾನೆ... ಬಾಗಿಲು ಬಡಿದ ಶಬ್ದ.. ಎದ್ದು ಹೋಗಿ ಬಾಗಿಲು ತೆರೆದು ನೋಡುತ್ತಾನೆ ಆತನ ಹಳೆಯ ಪ್ರೇಯಸಿ ನಿಂತಿದ್ದಾಳೆ. ಇವನಿಗೋ ಗಾಬರಿ.....
ನೀನ್ಯಾಕೆ ಇಲ್ಲಿಗೆ ಬರಹೋದೆ, ಮೊದಲು ಇಲ್ಲಿಂದ ಹೋಗು ಎಂದ ಆತ ಗದ್ಗದಿತನಾಗಿ.. ಅವಳೋ ಬೆನ್ನ ಹಿಂದೆ ಹಿಡಿದುಕೊಂಡಿದ್ದ ಹಾಲಿನ ಲೋಟವನ್ನು ಅವನತ್ತ ಚಾಚಿ ಮೋಹಕ ನಗುವಿನೊಡನೆ ಒಳಗಡಿಯಿಟ್ಟಳು.
 ಆತನ ಮನಸ್ಸಿನ ತಳಮಳ ನಿಂತು ಹೋಗಿತ್ತು..!