Tuesday, April 26, 2011

ಬತ್ತಿ ಹೋದ ಖಾಲಿ ಕೊಳದಲಿ 'ರಮ್ಯ' ಸ್ನಾನ..

ರಾಜ್ಯ ಕಾಂಗ್ರೆಸ್ ನಲ್ಲಿ 'ರಮ್ಯಾಯಣ' ಆರಂಭ !! ಕನ್ನಡದ ಬಹುಬೇಡಿಕೆಯ ನಟಿಯಾಗಿರುವ ಜಗಳಗಂಟಿ 'ರಮ್ಯ' ಕಳೆದ ವಾರ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ನಲ್ಲಿ ಜಗಳವಾಡಲು ಅಣಿಯಾಗಿದ್ದಾರೆ. ಅದಾಗಲೇ ಸತ್ತು ಮಲಗಿರುವ ರಾಜ್ಯ ಕಾಂಗ್ರೆಸ್ ರಮ್ಯ ಸೇರ್ಪಡೆಯಿಂದ ಒಂದು ಕ್ಷಣ ಜೀವ ಪಡೆದು ಮಗ್ಗುಲು ಬದಲಾಯಿಸಿ ಮತ್ತೆ ಸತ್ತು ಮಲಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಕ್ಷರಶಃ ನಾಮಾವಶೇಷದ ಸ್ಥಿತಿಯಲ್ಲಿದೆ. ಅಧ್ಯಕ್ಷರ ಬದಲಾವಣೆ, KPCC ಪುನಾರಚನೆ ಇದ್ಯಾವುದೂ ಕಾಂಗ್ರೆಸ್ ಪುನಶ್ಚೇತನಕ್ಕೆ ನೆರವಾಗಲಿಲ್ಲ. ನಾಯಕರುಗಳು ತಮ್ಮ ತಮ್ಮ ಸ್ವಂತಿಕೆ ಹಾಗು ತಮ್ಮ ಛಾಪನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದರೇ ವಿನಃ ಪಕ್ಷದ ಸಂಘಟನೆ ಬಗ್ಗೆ ಒಬ್ಬರೂ ಚಿಂತಿಸುತ್ತಿಲ್ಲ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿದ್ದರೂ ಒಂದರ ನಂತರ ಒಂದು ಎಂಬಂತೆ ಹೊರಬರುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಯಡಿಯೂರಪ್ಪನವರ ಕುಟುಂಬ ರಾಜಕೀಯ, ಶೂನ್ಯದತ್ತ ಸಾಗುತ್ತಿರುವ ಅಭಿವೃದ್ದಿ, ಜನರಿಗೆ ಸರ್ಕಾರದ ಮೇಲಾಗಿರುವ ಭ್ರಮನಿರಸನ ಇದೆಲ್ಲವನ್ನು ಇಟ್ಟುಕೊಂಡು ಹೋರಾಟ ರೂಪಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಡೇ ಪಕ್ಷ ಆ ಪ್ರಯತ್ನಗಳೂ ಕೂಡ ನಡೆಯುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ದಕ್ಷ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ವತಃ ಬಿಜೆಪಿಯವರೇ..! ಯಡಿಯೂರಪ್ಪನವರ ಆಡಳಿತದ ವಿರುಧ್ದದ ಇತ್ತೀಚೆಗಿನ ಬಂಡಾಯವೇ ಇದಕ್ಕೆ ಸಾಕ್ಷಿ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆ ಪ್ರಚಾರ ಗಿಟ್ಟಿಸಿತೆ ವಿನಃ ಅದರ ಬೆನ್ನಲ್ಲೇ ನಡೆದ ಉಪಚುನಾವಣೆಗಳಲ್ಲಿ ಅದರ ಪಲಿತಾಂಶ ಕಂಡು ಬರಲಿಲ್ಲ. ಬಳ್ಳಾರಿ ಪಾದಯಾತ್ರೆಯಲ್ಲಿ 'ಹೀರೋ' ಆಗಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ. ಅಷ್ಟರಮಟ್ಟಿಗೆ ಅವರು ಮೂಲೆಗುಂಪಾಗಿ ಹೋಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಹೌದೋ ಅಲ್ಲವೋ ಎಂದು ಸ್ವತಃ ಕಾಂಗ್ರೆಸ್ ನವರೇ ಅನುಮಾನ ಪಡುವಂತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದು ಬಿಟ್ಟರೆ ಮತ್ತೆಲ್ಲೂ ಅವರು ಸುದ್ದಿಯಾಗಲಿಲ್ಲ. ವೀರಪ್ಪ ಮೊಯ್ಲಿ ಸೋನಿಯಾ ಮನೆ ಕಾದರೇ ವಿನಃ ರಾಜ್ಯ ಕಾಂಗ್ರೆಸ್ ಕಾಯೋ ಕೆಲಸ ಮಾಡಲಿಲ್ಲ. ಪ್ರಾರಭದಲ್ಲಿ ತುಸು ಉತ್ಸಾಹಿಯಾಗಿದ್ದ ಡಿ.ಕೆ. ಶಿವಕುಮಾರ್ ಈಗ ಸ್ವಜನ ರಾಜಕೀಯ ಮಾಡುತ್ತಿದ್ದಾರೆ. KPCC  ಅಧ್ಯಕ್ಷ ಪರಮೇಶ್ವರ್ ಏನು ಮಾಡಿದರೂ ನಡೆಯದ ಸ್ಥಿತಿಯಿದೆ. ಉಳಿದಂತೆ ಬಾಕಿ ನಾಯಕರುಗಳು ಪರಸ್ಪರರ ಮೇಲಿನ ಅಸೂಯೆಯಿಂದ ಪಕ್ಷ ಕಟ್ಟುವ ಕೆಲಸದಿಂದ ದೂರವೇ ಉಳಿದಿದ್ದಾರೆ. ಇನ್ನು ಅವರು ಮುಖ ತೋರಿಸುವುದು ಮುಂದಿನ ಚುನಾವಣೆಗೇನೆ...

ಇಷ್ಟೆಲ್ಲಾ ಪರಿಸ್ಥಿತಿಗಳ ನಡುವೆಯೂ ಭಾರಿ ನಿರೀಕ್ಷೆ ಮೂಡಿಸಿದ್ದ ಇತ್ತೇಚೆಗಿನ ರಾಹುಲ್ ಗಾಂಧಿ ರಾಜ್ಯ ಭೇಟಿಯೂ ಸಪ್ಪೆಯಾಗಿಯೇ ಮುಗಿಯಿತು. ರಾಜ್ಯ ಕಾಂಗ್ರೆಸ್ ನ ಪ್ರಸಕ್ತ ಪರಿಸ್ಥಿತಿ ಬಗ್ಗೆ ರಾಹುಲ್ ಗೆ ಅರಿವಿದ್ದರೂ ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸುವ ಗೋಜಿಗೆ ಹೋಗಲಿಲ್ಲ. KPCC  ಪುನಾರಚನೆ ಗೊಂದಲ ಹಾಗು ನಾಯಕರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನೂ ಮಾಡದೆ ಒಂದಷ್ಟು ಹೊತ್ತು ಸಂವಾದ ಮಾಡಿ ವಾಪಾಸಾದರು. ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಹುಲ್ ಗಾಂಧಿಯ ಕಾರ್ಯವೈಖರಿ ಇದು.! ಕಾಂಗ್ರೆಸ್ಸಿಗರೇ ಜವಾಬ್ದಾರಿಗೆ ಹೆದರಿ ಓಡಿ ಹೋಗುವ ಇಂತಹ ನಾಯಕ ನಿಮಗೆ ಇದ್ದರೆಷ್ಟು ಬಿಟ್ಟರೆಷ್ಟು..

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾನ್ಯ ಪ್ರಜೆಗಳಿಗೆ ಜೆಡಿಎಸ್ ಪರ್ಯಾಯವಾಗಿ ಕಾಣಿಸುವುದರಲ್ಲಿ ತಪ್ಪಿಲ್ಲ. ಇತ್ತೀಚೆಗಿನ ಉಪಚುನಾವಣೆಗಳಲ್ಲಿ ಅದು ಗಳಿಸಿದ ಮತಗಳ ಶೇಕಡವಾರು ಪ್ರಮಾಣದಲ್ಲಿನ ಹೆಚ್ಚಳವೇ ಇದಕ್ಕೆ ಸಾಕ್ಷಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು ಆಶ್ಚರ್ಯವಿಲ್ಲ. ಯಡಿಯೂರಪ್ಪನವರು ಆಗಾಗ್ಗೆ ಹೇಳುತ್ತಿರುತ್ತಾರೆ, ರಾಜ್ಯದಲ್ಲಿ ಬರೀ ಎರಡೇ ಪಕ್ಷಗಳಿರಬೇಕು ಎಂದು. ಬಹುಶಃ ಅದು ಇಷ್ಟು ಬೇಗ ನಿಜವಾಗುವತ್ತ ಸಾಗುತ್ತದೆ ಎಂದು ಯಾರೂ ಊಹಿಸಿರಲಾರರು..!

No comments:

Post a Comment