Tuesday, August 20, 2013

ಎದೆಯ ಕಿಟಕಿಯಲ್ಲೀ...


ಎದೆಯ ಕಿಟಕಿಯಲ್ಲೀ
ಮೆಲ್ಲಗೆ ಇಣುಕಿ ನೋಡಿದಂತೇ...
ಮನದ ಕೋಣೆಯಲ್ಲೀ 
ಸಣ್ಣಗೆ ಶಿಳ್ಳೆ ಹಾಕಿದಂತೇ...  
ಹೃದಯ ಹಾಳಾಗಿದೇ...ಮನಸ್ಸು ಕಳೆದೋಗಿದೇ... 
ನಾನಿಂದು ನಾನಲ್ಲ.... ನೀ ಹೇಳೆಯಾ.... 

ನನ್ನೇ ನೋಡುತ್ತಿರು ನೀನು 
ನಾ ತಿರುಗಿ ನೋಡುತ್ತಿರಲು...  
ಕಣ್ಣ ಭಾಷೆಯಲ್ಲೇ 
ಮನಸ್ಸು ಮಾತಾಡುತ್ತಿರಲು...  
ಒಲವ ಜನನ, ಹೃದಯ ಹರಣ
ನೀನೇ ತಾನೇ ಕಾರಣ... 

ಹೃದಯ ಬದಲು, ಮಾತು ತೊದಲು 
ಆಹಾ ಹಿತವಾದ ಯಾತನೇ...  
ನೀನು ಬರಲು ಬಾಳೇ ಹಗಲು 
ಮಿಡಿದಿದೆ ಹೃದಯ ಸುಮ್ಮನೇ... 
ನನ್ನುಸಿರ ಉಡುಗೆ.. ನಿನಗೆ ತೊಡಿಸಿ.. 
ಕೊಡಲೇ ಒಲವ ಬಾಡಿಗೇ... 

ನೋಡು ಗೆಳತಿ ಒಂದು ಸರತಿ 
ನನ್ನ ಎದೆಯ ಭಾವನೇ...  
ಕಂಡ ಕನಸು ಎಂಥ ಸೊಗಸು 
ಪ್ರೀತಿ ಸುರಿಸು ಮೆಲ್ಲನೇ...  
ನಾನೇ ಇರಲು ಯಾಕೆ ದಿಗಿಲು 
ಈ ಪ್ರೀತಿ ಒಡಲು ನಿನ್ನದೇ... 

Sunday, August 18, 2013

ನನ್ನುಸಿರೇ....

ಗುಂಗುರು ಕೂದಲು ಅವಳದಲ್ಲ
ಬಳುಕೋ ದೇಹವು ಅವಳಿಗಿಲ್ಲ
ನೀಲಿ ಕಣ್ಗಳ ಚೆಲುವೆಯಲ್ಲ
ನೀಳ ನಾಸಿಕದ ಒಡತಿಯಲ್ಲ 
ಆದರೂ ಅವಳು ನನಗಿಷ್ಟ
ಆವಳು ನನ್ನುಸಿರು ನನ್ನ ಪ್ರಾಣ

ಮೈ ಬಣ್ಣ ಹಾಲಿನದಲ್ಲ
ಮಾತಲಿ ಮುತ್ತು ಉದುರುವುದಿಲ್ಲ
ನಗುವಲಿ ಹುಣ್ಣಿಮೆ ಅರಳುವುದಿಲ್ಲ
ಸ್ವರದಲಿ ಸರಿಗಮ ಕೇಳುವುದಿಲ್ಲ
ಆದರೂ ಅವಳು ನನಗಿಷ್ಟ
ಅವಳು ನನ್ನುಸಿರು ನನ್ನ ಪ್ರಾಣ

Friday, August 9, 2013

ಈ ಬಂಧನ...


ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮ ಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ 

ನಾ ನೆಲವು ನೀನೆ ತಾರೆ 
ಎಂದೂ ಎಟುಕದ ಬಂಧವೂ  
ನೀ ಹುಣ್ಣಿಮೆ ನಾ ಕತ್ತಲು 
ಬೆರೆವುದೆಂತಿದು ತ್ರಾಸವೂ 

ಕಂಡ ಕನಸುಗಳು ಬಾಲಿಶ 
ಕರಗಿ ಹೋಗಿವೆ ಭಾಗಶಃ 
ಹಣತೆ ಸಾಲು ಮರಣಿಸಿ 
ಶ್ರಾದ್ಧವಾಗಿದೆ ನಗುವಿಗೆ 

ನೀರ ಹನಿಗಳು ಇಂಗಿ ಹೋಗಿವೆ 
ಬರಡು ಭೂಮಿಯು ಈ ಮನ 
ನೀನೆ ಬರದೆ ದೀಪವೆಲ್ಲಿದೆ 
ಬಾಳು ಬರಿಯ ಕಾನನ 

ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ... ಹೇಗೆ ನಾನು ಬರಲಿ... 

Thursday, August 8, 2013

ಕರ್ನಾಟಕ ಉಪಚುನಾವಣೆ: ಬಿಜೆಪಿ ಅಸಹಾಯಕತೆಯೂ, ಜೆಡಿಎಸ್ ಅನಿವಾರ್ಯತೆಯೂ...ಅಷ್ಟೇನೂ ಮಹತ್ವದಲ್ಲ ಎಂದೇ ಪರಿಗಣಿತವಾಗಿದ್ದ ಕರ್ನಾಟಕದಲ್ಲಿನ ಎರಡು ಲೋಕಸಭಾ ಉಪಚುನಾವಣ ಕಣ ಇಂದು ಇಡೀ ರಾಜ್ಯದ ಗಮನ ಸೆಳೆದಿದೆ. 

ಕಾರಣ ಕುಟುಂಬ ರಾಜಕಾರಣ ಮತ್ತು ಸ್ವ ಪ್ರತಿಷ್ಠೆ..
ಲೋಕಸಭೆಯ ಅವಧಿ ಇನ್ನೇನು ಮುಗಿಯುವುದರಲ್ಲಿದೆ. ಈ ವರ್ಷದ ಕೊನೆ ಅಥವಾ 2014 ರ ಆರಂಭದಲ್ಲಿ ಲೋಕಸಭೆ ಮಹಾ ಸಮರ ನಡೆಯುವುದು ಖಚಿತ. ಹಾಗಿದ್ದರೂ ಇಂದು ಈ ಎರಡು ಚುನಾವಣ ಕಣಗಳು ಪಡೆದುಕೊಳ್ಳುತ್ತಿರುವ ಕಾವು ಮಾತ್ರ ಕಡಿಮೆಯಾಗಿಲ್ಲ. 
 
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಳೆದ ಒಂದು ದಶಕದಿಂದ ಕುಟುಂಬ ದ್ವೇಷ ರಾಜಕಾರಣದ ಅಖಾಡವಾಗಿ ಬೆಳೆದು ಬಂದಿದೆ. ಒಂದೆಡೆ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ ದೇವೇಗೌಡ ಕುಟುಂಬ. ಇಲ್ಲಿ ಅಭ್ಯರ್ಥಿಗಳು ಯಾರೇ ಆಗಿದ್ದರೂ ನಿಜವಾದ ಸ್ಪರ್ಧೆ ಇರುವುದು ಮಾತ್ರ ದೇವೇಗೌಡ ಡಿಕೆಶಿ ಮಧ್ಯೆ. ಪ್ರತಿ ಚುನಾವಣೆಯನ್ನೂ ತನ್ನ ಕುಟುಂಬದ ಸ್ವಪ್ರತಿಷ್ಠೆಯಾಗಿ ಪರಿಗಣಿಸಿರುವ ಎರಡೂ ಬಣಗಳು ಮತ್ತೆ ಕಾಳಗಕ್ಕೆ ಅಣಿಯಾಗಿವೆ. ಬಿಜೆಪಿಯದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಾತ್ರ. ಅದೇ ಕಾರಣಕ್ಕೆ ಬಿಜೆಪಿ ಮೈತ್ರಿಯ ನೆಪದಲ್ಲಿ ಶಸ್ತ್ರ ಸನ್ಯಾಸ ಮಾಡಿದೆ. ಬೆಂಗಳೂರು ಗ್ರಾಮಾಂತರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್, ಮೂರು ಜೆ.ಡಿ.ಎಸ್ ಶಾಸಕರನ್ನು ಹೊಂದಿ ಸಮಬಲ ಸಾಧಿಸಿದ್ದರೂ ಬಿಜೆಪಿ ಹಾಗು ಎಸ್ಪಿ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನವನ್ನು ಪಡೆದಿದ್ದನ್ನು ಗಮನಿಸಿದರೆ ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕಂಡುಬರುತ್ತದೆ. ಆದರೆ ಎದುರಾಳಿ ಡಿಕೆಶಿ ಕುಟುಂಬ ಈ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿದ್ದು ಜೆಡಿಎಸ್ ಅನ್ನು ಭಯಗೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. 
 
 
ಗ್ಲಾಮರ್ ಪ್ರವೇಶದಿಂದ ಸುದ್ದಿಯಲ್ಲಿರುವ ಮತ್ತೊಂದು ಕ್ಷೇತ್ರ ಮಂಡ್ಯ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ದ್ವೇಷ ರಾಜಕಾರಣದಿಂದ ಹೊರತಾಗಿದ್ದರೂ ಮೋಹಕ ತಾರೆ ರಮ್ಯ ತನ್ನ ಜನಪ್ರಿಯತೆಯಿಂದ ಚುನಾವಣೆಯ ಕಾವು ಉಳಿಸಿಕೊಂಡಿದ್ದಾರೆ. ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ ೫ ಜೆಡಿಎಸ್, ಎರಡು ಕಾಂಗ್ರೆಸ್ಸ್, ಒಂದು ಪಕ್ಷೇತರ ಶಾಸಕರಿದ್ದಾರೆ. ಕಳೆದ ಬಾರಿ ಜೆಡಿಎಸ್ ನ ಚೆಲುವರಾಯಸ್ವಾಮಿ ಪ್ರತಿನಿಧಿಸಿದ ಕ್ಷೇತ್ರವಿದು. ಜೆಡಿಎಸ್ ನ ಪ್ರಭಾವ ಸ್ಪಷ್ಟವಾಗಿದ್ದರೂ ಸಚಿವ ಅಂಬರೀಶರ ವಿಶಿಷ್ಟ (ವಿಚಿತ್ರ) ಮ್ಯಾನರಿಸಂ ಮತ್ತು ನಟಿ ರಮ್ಯಾ ಜನಪ್ರಿಯತೆ ಕಾಂಗ್ರೆಸ್ಸ್ ಗೆ ಆಶಾವಾದ ಮೂಡಿಸಿದೆ ಎನ್ನಬಹುದು. ಜತೆಗೆ ರಮ್ಯಾ ಸಾಕು ತಂದೆಯವರ ಸಾವು ತುಸು ಅನುಕಂಪದ ಮತ ಗಳಿಕೆಗೆ ಕಾರಣವಾಗಬಹುದು. ಆದರೆ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದಕ್ಕೆ ಫಲಿತಾಂಶವೆ ಉತ್ತರ ನೀಡಬೇಕು. ಕಾಂಗ್ರೆಸ್ಸ್ ಜೆಡಿಎಸ್ ನೇರ ಹಣಾಹಣಿಗೆ ಹೆಸರಾಗಿರುವ ಮಂಡ್ಯದಲ್ಲಿ ಬಿಜೆಪಿ ಇನ್ನೂ ಅಂಬೆಗಾಲಿಡುತ್ತಿರುವ ಶಿಶು. ಬಿಜೆಪಿ ಇಲ್ಲಿ ಮೈತ್ರಿಗೆ ಮುಂದಾಗದೆ ಸ್ಪರ್ಧಿಸಿದ್ದರೂ ಬಹುಶಃ ಹಿಡಗಂಟು ಕಳೆದುಕೊಳ್ಳುತ್ತಿತ್ತೇನೋ. 
 
 
ಎರಡೂ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದ ಕ್ಷೇತ್ರಗಳು. ಹಾಗಾಗಿ ಇಲ್ಲಿ ಜೆಡಿಎಸ್ ಗೆ ಗೆಲುವು ಅನಿವಾರ್ಯ. ಕಾಂಗ್ರೆಸ್ಸ್ ಗೆ ಇಲ್ಲಿ ಕಳೆದುಕೊಳ್ಳುವುದೇನಿಲ್ಲದಿದ್ದರೂ ರಾಜ್ಯದಲ್ಲಿ ಅವರದೇ ಪಕ್ಷದ ಸರಕಾರವಿರುವ ಕಾರಣ ಗೆಲ್ಲಲೇಬೇಕಾದ ಒತ್ತಡವಿದೆ. ಅದೇ ಕಾರಣಕ್ಕೆ ಸರ್ಕಾರಕ್ಕೆ ಸರ್ಕಾರವೇ ಚುನಾವಣಾ ಪ್ರಚಾರಕ್ಕೆ ಧುಮುಕಿದೆ. ಈ ತೀವ್ರ ಪೈಪೋಟಿಯಿಂದ ತುಸು ವಿಚಲಿತವಾಗಿರುವ ಜೆಡಿಎಸ್ ಗೆ ಬಿಜೆಪಿಯ ಮೈತ್ರಿ ಹಸ್ತ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನಬಹುದು. ಇನ್ನು ರಾಷ್ಟ್ರೀಯ ಪಕ್ಷ ಬಿಜೆಪಿಯದ್ದು ಇಲ್ಲಿ ಅಸಹಾಯಕ ಪರಿಸ್ಥಿತಿ. ಸ್ಪರ್ಧಿಸಿ ಮಾನ ಕಳೆದುಕೊಳ್ಳುವುದಕ್ಕಿಂತ ಸ್ಪರ್ಧಿಸದೆ ಇರುವುದು ಲೇಸೆಂದು ನಿರ್ಧರಿಸಿದಂತಿದೆ ರಾಜ್ಯ ಬಿಜೆಪಿ ಹೈಕಮಾಂಡ್. ವಿಧಾನಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಬಿಜೆಪಿ ಮೈತ್ರಿಗೆ ಮುಂದಾಗುವ ಮೂಲಕ ಮತ್ತೊಂದು ಅವಮಾನವನ್ನು ತಪ್ಪಿಸುವ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಮಂತ್ರದೊಂದಿಗೆ ಅಖಾಡಕ್ಕಿಳಿಯುವ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಸೋಲುವುದು ಖಂಡಿತ ಬೇಕಿಲ್ಲ. ಅಂತೂ ಇಂತೂ ಮೈತ್ರಿಯಾಗಿದೆ. ಒಬ್ಬರಿಗಿದು ಅನಿವಾರ್ಯವಾದರೆ, ಮತ್ತೊಬ್ಬರದು ಅಸಹಾಯಕ ಸ್ಥಿತಿ.
 
ಇನ್ನಂತೂ ಕಾಯುವ ಸಮಯ. ಜೆಡಿಎಸ್ ನ ಭದ್ರಕೋಟೆಗಳಿಗೆ ಕಾಂಗ್ರೆಸ್ಸ್ ಲಗ್ಗೆ ಹಾಕುವುದೋ ಇಲ್ಲವೋ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕು. ಕಾದು ನೋಡೋಣ.