Monday, December 10, 2012

ಸರಣಿ ಸಣ್ಣ ಕತೆಗಳು (ಭಾಗ-1)


ಕಳುವು 
ಅದಾಗ ತಾನೇ ಕತ್ತಲು ಕವಿಯಲಾರಂಭಿಸಿತ್ತು. 'ಕಳ್ಳ' ತನ್ನ ಎಂದಿನ ಕೆಲಸಕ್ಕೆ ಹೊರಟು ನಿಂತ. ಆತ ಹೊರಟು 3-4 ಗಂಟೆಗಳೇ ಕಳೆದಿತ್ತು. ಎಂದಿನಂತೆ ಮಧ್ಯ ರಾತ್ರಿ ಸಮೀಪಿಸುವ ಹೊತ್ತಿಗೆ ಒಂದು ಮನೆಯನ್ನು ಆಯ್ದುಕೊಂಡು ಕಳ್ಳಹಾದಿಯಿಂದ ಒಳಗಡಿಯಿಟ್ಟ. ತಿಜೋರಿ ಹುಡುಕುತ್ತ ಆ ಮನೆಯ ಮಲಗುವ ಕೋಣೆಗೆ ಬಂದ ಅವನಿಗೆ ಅಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದ್ದು ಕಂಡುಬಂತು. ಅವರನ್ನು ಪ್ರಜ್ಞೆ ತಪ್ಪಿಸಲು ತಾನು ತಂದಿದ್ದ ಕ್ಲೋರೋಫಾರ್ಮ್ ಅನ್ನು ಕರವಸ್ತ್ರಕ್ಕೆ ಸಿಂಪಡಿಸಿ ಮೆಲ್ಲನೆ ಮಂಚದ ಬಳಿಗೆ ಬಂದ.
ಅಷ್ಟೆ...! ಕಿಟಕಿಯಿಂದ ಒಳ ಬರುತ್ತಿದ್ದ ಚಂದ್ರನ ಮಂದ ಬೆಳಕಿನಲ್ಲಿ ಗಂಡಸನ್ನು ತಬ್ಬಿ ಮಲಗಿದ್ದ ಆ ಹೆಂಗಸಿನ ಮುಖ ನೋಡಿದವನೆ ಅದುರಿ ಹೋದ.
ಆಕೆ ಕಳ್ಳನ ಹೆಂಡತಿಯಾಗಿದ್ದಳು.
.ವಿಪರ್ಯಾಸ..
ಒಂದು ದೊಡ್ಡ ಕಂಪನಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆತ ನಿನ್ನೆ ತಾನೇ ವ್ಯವಹಾರದಲ್ಲಿ ಗೋಲ್ ಮಾಲ್ ಮಾಡಿ 25 ಲಕ್ಷ ಹಣ ಹೊಡೆದುಕೊಂಡಿದ್ದ. ಅದು ಕೂಡ ಯಾರಿಗೂ ಸುಳಿವು ಸಿಗದಂತೆ.. ಆದರೂ ಇಂದು ಸಹಜವಾಗಿಯೇ ಒಂಥರಾ ಭಯ-ದುಗುಡದಲ್ಲೇ ಆಫೀಸಿಗೆ ಹೊರಟು ನಿಂತಿದ್ದ ಆತ. ಯಾರಿಗಾದರೂ ಅನುಮಾನ ಬರಬಹುದೇನೋ ಎಂಬ ಆತಂಕದಲ್ಲಿ ಆಫೀಸಿಗೆ ಬಂದವನಿಗೆ ಆಶ್ಚರ್ಯ ಕಾದಿತ್ತು. ಎಲ್ಲರೂ ಇವನನ್ನು ಮುತ್ತಿಕೊಂಡು 'ಕಂಗ್ರಾಟ್ಸ್ ಕಂಗ್ರಾಟ್ಸ್..' ಎಂದು ಶುಭಾಶಯಗಳನ್ನು ತಿಳಿಸಲಾರಂಭಿಸಿದರು. ಇವನಿಗೆ ಗೊಂದಲದ ಜತೆಗೆ ಭಯ ಕೂಡ ದುಪ್ಪಟ್ಟಾಯಿತು. ತಾನು ಮಾಡಿದ 'ಮಹಾ ಕಾರ್ಯ'ಕ್ಕೆ ಅಭಿನಂದನೆ ಯಾಕೆ ಹೇಳುತ್ತಿದ್ದಾರೆ ಅಂತ ಅನ್ನಿಸದಿರಲಿಲ್ಲ ಆತನಿಗೆ.
ಅನುಮಾನದಿಂದಲೇ ನೋಟೀಸ್ ಬೋರ್ಡ್ ನಲ್ಲಿ ಅದಾಗ ತಾನೇ ಬಿತ್ತರಗೊಂಡಿದ್ದ ಹಾಳೆಯತ್ತ ಕಣ್ಣು ಹಾಯಿಸಿದ. 
ಅಲ್ಲಿ ಆತನ ಹೆಸರಿನ ಜೊತೆಗೆ ಹೀಗೆ ಬರೆದಿತ್ತು, 
"... ಈ ವರ್ಷದ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ಪಡೆದ ನಿಮಗೆ ಹಾರ್ದಿಕ ಅಭಿನಂದನೆಗಳು..."

.
Sunday, September 30, 2012

ಜಾತ್ಯಾತೀತ 'ಜಿನ್ನಾ' ಖಳ ನಾಯಕನಾದರೆ 'ಗಾಂಧೀ' ಯಾರು?..


ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನ ದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು 'ಜಿನ್ನಾ ಒಬ್ಬ ಜಾತ್ಯಾತೀತ ನಾಯಕ' ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು. 

ಆದರೆ ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ - ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ  ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. 'ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ' ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರನೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.

ಮಹಮ್ಮದ್ ಆಲಿ ಜಿನ್ನಾ... ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ... ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ... 
ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ... ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ...?

"ನನ್ನ ಪ್ರಕಾರ ದೇಶ ವಿಭಜನೆಯನ್ನು ಬಿಟ್ಟು ಬೇರಾವುದೇ ಪರಿಹಾರವಿರಲಿಲ್ಲ ಹಾಗೂ ಮುಂದೊಂದು ದಿನ ಇತಿಹಾಸ ಅದನ್ನು ಒಪ್ಪಿಕೊಳ್ಳುತ್ತದೆ... ಪಾಕಿಸ್ತಾನವನ್ನು ಸಮೃದ್ಧ ಉಲ್ಲಾಸಭರಿತ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಸಕಲರ ಶ್ರೇಯೋಭಿವೃದ್ಧಿಗಾಗಿ ಏಕ ದೃಷ್ಟಿಯಿಂದ ನಾವು ಪ್ರಯತ್ನಿಸಬೇಕು. 
ಆತ ಯಾವುದೇ ಸಮುದಾಯಕ್ಕೆ ಸೇರಿರಲಿ, ಆತನ ಜತೆ ನೀವು ಈ ಹಿಂದೆ ಎಂಥದೇ ಸಂಬಂಧ ಹೊಂದಿರಲಿ, ಆತನ ಚರ್ಮದ ಬಣ್ಣ, ಧರ್ಮ ಮತ ಯಾವುದೇ ಆಗಿರಲಿ ಎಲ್ಲರೂ ಸಮಾನರು. ಪಾಕಿಸ್ತಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ.... ದೇವಸ್ತಾನ, ಮಸೀದಿ ಅಥವಾ ಯಾವುದೇ ಪೂಜಾ ಸ್ಥಳಗಳಿಗೆ  ಹೋಗುವ ಸ್ವಾತಂತ್ರ್ಯ ನೂತನ ರಾಷ್ಟ್ರ ಪಾಕಿಸ್ತಾನದಲ್ಲಿದೆ. ನೀವು ಯಾವುದೇ ಧರ್ಮ, ಮತ ಜಾತಿಗೆ ಸೇರಿರಬಹುದು. ಅದಕ್ಕೂ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ.... ಕಾಲಾಂತರದಲ್ಲಿ ಹಿಂದೂಗಳು ಹಿಂದೂಗಳಾಗಿ ಮುಸ್ಲಿಮರು ಮುಸ್ಲಿಮರಾಗಿ ಉಳಿದು ಬಿಡುತ್ತಾರೆ. ಆದರೆ ಧಾರ್ಮಿಕ ಪ್ರಜ್ನೆಯಿಂದಲ್ಲ, ವೈಯಕ್ತಿಕ ನಂಬಿಕೆಯಿಂದ. ರಾಜಕೀಯ ದೃಷ್ಟಿಯಲ್ಲಿ ಅವರೆಲ್ಲರೂ ಪಾಕಿಸ್ತಾನದ ನಾಗರೀಕರು..."

ಮಹಮ್ಮದ್ ಆಲಿ ಜಿನ್ನಾ 1947, ಆಗಷ್ಟ್ 11 ರಂದು ಮಾಡಿದ ಭಾಷಣದ ತುಣುಕುಗಳಿವು. ಜಿನ್ನಾ  ಒಬ್ಬ ಧರ್ಮಾಂಧ ಕಟ್ಟಾ ಮುಸ್ಲಿಮನಾಗಿದ್ದರೆ ಪ್ರಜಾತಂತ್ರ, ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಿದ್ದರೇ? ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದ ನಂತರವೂ ಸಾಮರಸ್ಯ, ಸಮಾನತೆ, ಏಕತೆಯ ಬಗ್ಗೆ ಮಾತನಾಡುವ ಅಗತ್ಯವೇನಿತ್ತು...? ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ 'ಖಳ' ನಾಯಕರಾಗಿ ಕಂಡು ಬರುವ ಜಿನ್ನಾ ವಿಭಜನೆಯ ನಂತರ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಘೋಸಿಸಬಹುದಿತ್ತು. ಅಲ್ಲಿ ಇಸ್ಲಾಂ ನ ಕಾನೂನುಗಳನ್ನು ಹೇರಬಹುದಾಗಿತ್ತು. ಆದರೆ ಜಿನ್ನಾ ಹಾಗೆ ಮಾಡಲಿಲ್ಲ. ಕಾರಣ ಜಿನ್ನಾ ಮೂಲತಃ ರಾಷ್ಟ್ರೀಯವಾದಿ ಹಾಗೂ ಜಾತ್ಯಾತೀತ ವ್ಯಕ್ತಿತ್ವದವರಾಗಿದ್ದರು. ಅಂತಹ ವ್ಯಕ್ತಿ ರಾಷ್ಟ್ರದ ವಿಭಜನೆಗೆ ಪಟ್ಟು ಹಿಡಿಯಲು ಕಾರಣ ಇರಲೇಬೇಕಲ್ಲವೇ...?

ಜಿನ್ನಾ ಹುಟ್ಟಿದ್ದು ಒಂದು ಶ್ರೀಮಂತ ವ್ಯಾಪಾರಸ್ಥ ಕುಟುಂಬದಲ್ಲಿ. ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಗೆ ಹೋದ ಜಿನ್ನಾ ತಮ್ಮ 18 ನೇ ವಯಸ್ಸಿಗೇ ವಕೀಲಿ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಾಸಾದರು. ಬಂದವರೇ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು. ಕೆಲಸದ ವಿಷಯದಲ್ಲಿ ಜಿನ್ನಾ ತುಂಬಾ ಕಟ್ಟು ನಿಟ್ಟು ಹಾಗು ಶಿಸ್ತಿನ ಮನುಷ್ಯ. ಜಿನ್ನಾರ ಈ ವೃತ್ತಿಪರತೆ ಹಲವರನ್ನು ಆಕರ್ಷಿಸಿತು. ಅದರಲ್ಲೂ ಅವರ ಬಲಿಷ್ಠ ರಾಷ್ಟ್ರೀಯತೆ ಹಾಗೂ ದೇಶಭಕ್ತಿ. ಒಬ್ಬ ರಾಷ್ಟ್ರವಾದಿ ನಾಯಕರಾಗಲು ಎಲ್ಲಾ ಅರ್ಹತೆಗಳಿದ್ದ ಜಿನ್ನಾ 1896 ರಲ್ಲಿ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜಿನ್ನಾರ ವ್ಯಕ್ತಿತ್ವದ ಬಗ್ಗೆ ತಿಳಿದಿದ್ದ ಆಗಿನ ಮೇರು ನ್ನಾಯಕ ಬಾಲ ಗಂಗಾಧರ ತಿಲಕರು ರಾಜದ್ರೋಹದ ಪ್ರಕರಣಕ್ಕೆ ಸಂಬಂದಿಸಿ ಜಿನ್ನಾರನ್ನು ತಮ್ಮ ವಕೀಲರಾಗಿ ನೇಮಕ ಮಾಡಿಕೊಂಡರು. ಹೀಗೆ ಜಿನ್ನಾಗೆ ತಿಲಕ್, ಫಿರೋಜ್ ಶಾಃ, ಸುರೆಂದ್ರನಾಥ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ದಿಗ್ಗಜರ ಸಂಪರ್ಕ ದೊರೆಯಿತು. ಅವರುಗಳ ಪ್ರಭಾವ ಜಿನ್ನಾರ ಮೇಲೆ ಭಾರೀ ಮಟ್ಟದಲ್ಲಾಯಿತು.1906 ರಲ್ಲಿ ಆಗಾ ಖಾನ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾದಾಗ 'ನಾನು ಮೊದಲು ಭಾರತೀಯ, ನಂತರ ಮುಸ್ಲಿಂ' ಎಂದು ಅದರ ಸದಸ್ಯರಾಗಲು ಬಂದ ಮನವಿಯನ್ನು ತಿರಸ್ಕರಿಸಿದರು. ಹೀಗೆ ತಿಲಕರ ಕಾಲದಲ್ಲಿ ಜಿನ್ನಾ ಒಬ್ಬ ರಾಷ್ಟ್ರವಾದಿ ಯುವ ನಾಯಕನಾಗಿ ಬೆಳೆಯುತ್ತಾ ಸಾಗಿದರು.

ತಿಲಕರ ಹಠಾತ್ ಸಾವಿನ ನಂತರ ಕಾಂಗ್ರೆಸ್ ನಲ್ಲಿ ಗಾಂಧೀ ಯುಗ ಆರಂಭವಾಯಿತು. ಗಾಂಧಿಯುಗದಲ್ಲಿ ಹೋರಾಟದ ಕಿಚ್ಚಿಗಿಂತ ಅಧಿಕಾರದ ಮಹದಾಸೆ ಹೆಚ್ಚಿನವರಲ್ಲಿತ್ತು. ಗಾಂಧೀ, ನೆಹರೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀ ಆಗಿನ ಯುವ ನಾಯಕ ಅಪ್ರತಿಮ ದೇಶಭಕ್ತ ಸುಭಾಶ್ ಚಂದ್ರ ಬೋಸ್ ರನ್ನು ಕಾಂಗ್ರೆಸ್ಸ್ ತೊರೆಯುವಂತೆ ಮಾಡಿದ್ದೇ ಈ ಕಾರಣಕ್ಕಾಗಿ. ಎಲ್ಲರೂ ತನ್ನ ಅಡಿಯಾಳಾಗಿರಬೇಕೆಂಬುದು ಗಾಂಧೀ ಬಯಕೆಯಾಗಿತ್ತು. ಇದೇ ಮುಂದೆ ತಿಲಕರ ಒಡನಾಡಿ ಕಟ್ಟಾ ರಾಷ್ಟ್ರೀಯವಾದಿ ಜಿನ್ನಾರು ಹೊಸದಿಕ್ಕಿನೆಡೆಗೆ ಹೋಗಲು ನಾಂದಿಯಾಯಿತು.ಮುಂದೆ ಕೆಲ ಧರ್ಮಾಂಧ ಮುಸ್ಲಿಮರು ತಮ್ಮ ಹಿತಾಸಕ್ತಿಗಳಿಗಾಗಿ ನಡೆಸಿದ 'ಖಿಲಾಫತ್ ಚಳುವಳಿಗೆ' ಗಾಂಧೀಜಿ ಬೆಂಬಲ ನೀಡಿದ್ದು ದೊಡ್ಡ ದುರಂತಕ್ಕೆ ಕಾರಣವಾಯಿತು. ಖಿಲಾಫತ್ ಚಳುವಳಿಯ ಸಮಯದಲ್ಲಿ ಅಲ್ಲಲ್ಲಿ ಹಿಂದೂಗಳ ಕೊಲೆ, ಲೂಟಿ, ಭೀಕರ ಹಲ್ಲೆಗಳು ನಡೆದವು. ಇದ್ಯಾವುದಕ್ಕೂ ಅಹಿಂಸಾವಾದಿ ಗಾಂಧೀ ತಲೆಕೆಡಿಸಿಕೊಳ್ಳಲೇ ಇಲ್ಲ.! ಅಂದು ಮಹಮ್ಮದ್ ಆಲಿ ಜಿನ್ನಾ, ಗಾಂಧಿಯ ಒಟ್ಟಾರೆ ನಡೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಜಿನ್ನಾ ಮುಸ್ಲಿಂ ಧರ್ಮಾಂಧನಾಗಿದ್ದರೆ ಗಾಂಧೀಜಿಯ ನಡೆಯನ್ನು ಟೀಕಿಸುತ್ತಿದ್ದರೇನು? 

ಹೀಗೆ ಹಲವು ವಿಷಯಗಳಲ್ಲಿ ಗಾಂಧೀ-ನೆಹರೂ ಮತ್ತು ಜಿನ್ನಾರ ನಡುವೆ ಅಭಿಪ್ರಾಯ ಬೇಧಗಳು ಬೆಳೆಯತೊಡಗಿದವು. ಗಾಂಧೀಜಿಯ ಏಕಪಾರುಪತ್ಯವನ್ನು ಜಿನ್ನಾ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಹಾಗೆಯೇ ಗಾಂಧೀ ಮತ್ತು ನೆಹರೂರವರು ಜಿನ್ನಾರನ್ನು ತಮ್ಮ ವೈರಿಯಂತೆ ನಡೆಸಿಕೊಂಡರು. ಇಬ್ಬರಿಗೂ ಜಿನ್ನಾ ಬಗ್ಗೆ ತಿರಸ್ಕಾರದ ಭಾವನೆಯಿತ್ತು. ತಿಲಕರ ಗರಡಿಯಲ್ಲಿ ಪಳಗಿದ ಜಿನ್ನಾಗೆ ಗಾಂಧಿಯುಗದಲ್ಲಿ ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸಲಾಯಿತು. ತಿಲಕರ ಮರಣಾ ನಂತರ ದಾರಿ ತಪ್ಪಿದ ಕಾಂಗ್ರೆಸ್ ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಗಾಂಧೀಜಿ ಧೋರಣೆ ಬಗ್ಗೆ ಬೇಸತ್ತ ಜಿನ್ನಾ ಕಡೆಗೆ ಕಾಂಗ್ರೆಸ್ ನಿಂದಲೇ ಹೊರಬರಬೇಕಾಯಿತು.

ಕಾಂಗ್ರೆಸ್ಸ್ ನಿಂದ ಹೊರಬಂದ ಜಿನ್ನಾ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವದವರಾಗಿರಲಿಲ್ಲ. ಭಾರತೀಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಒಂದು ಸಮಯದಲ್ಲಿ ತಾನು ತಿರಸ್ಕರಿಸಿದ್ದ ಮುಸ್ಲಿಂ ಲೀಗನ್ನು ಸೇರಿದರು. 1916 ರಲ್ಲಿ ಮುಸ್ಲಿಂ ಲೀಗ್ ನ ಅಧ್ಯಕ್ಷರೂ ಆದರು. ಆದರೆ ಪ್ರತ್ಯೇಕತೆಯನ್ನು ಪ್ರತಿಪಾದಿಸಲಿಲ್ಲ. ಸ್ವಾತಂತ್ರ್ಯ ಗಳಿಕೆಯೆಂಬ ದೀರ್ಘಕಾಲೀನ ಗುರಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗು ಮುಸ್ಲಿಂ ಲೀಗನ್ನು ಒಟ್ಟಿಗೆ ತರಲು ಮುಂದಾದರು.

ಆದರೆ ಬೆಳೆಯುತ್ತ ಬೆಳೆಯುತ್ತ ಕಾಂಗ್ರೆಸ್ ಜಿನ್ನಾರ ಮುಸ್ಲಿಂ ಲೀಗ್ ಗೆ ಕಿಮ್ಮತ್ತೇ ಕೊಡಲಿಲ್ಲ. ಬ್ರಿಟೀಷರೊಂದಿಗಿನ ಹಲವು ಒಪ್ಪಂದಗಳಲ್ಲೂ ಜಿನ್ನಾರನ್ನು ಹೊರಗಿರಿಸಲಾಯಿತು. ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನಡುವೆ ಸಹಮತ ತರಲು ಮಾಡಿದ ಜಿನ್ನಾ ಪ್ರಯತ್ನಗಳು ನೀರ ಮೇಲಿನ ಹೋಮದಂತಾಯಿತು. ಹೀಗೆ ಸೋಲುಗಳ ಮೇಲೆ ಸೋಲುಗಳನ್ನು ಕಂಡ ಜಿನ್ನಾ ರಾಜಕೀಯದಿಂದ ಬೇಸತ್ತು 1931 ರಲ್ಲಿ ಲಂಡನ್ ಗೆ ಹೋಗಿ ನೆಲೆಸಿದರು.ಈ ಹಂತದಲ್ಲೇ ದೇಶ ವಿಭಜನೆಯ ವಿಷ ಬೀಜ ಹುಟ್ಟಿಕೊಂಡಿದ್ದು. ಆದರೆ ಅದು ಜಿನ್ನಾ ಮನಸಿನಲ್ಲಿ ಅಲ್ಲ. ಬದಲಾಗಿ 'ಸಾರೆ ಜಹಾಂಸೇ ಅಚ್ಚಾ...' ಎಂಬ ದೇಶ ಭಕ್ತಿ ಗೀತೆ ಬರೆದ ಸರ್ ಮೊಹಮ್ಮದ್ ಇಕ್ಬಾಲ್ ಮನದಲ್ಲಿ. ಭಾರತದ ವಿಭಜನೆಗೆ ಜಿನ್ನಾ, ಗಾಂಧೀ, ನೆಹರೂ ಎಷ್ಟು ಕಾರಣರೋ ಅಷ್ಟೇ ಈ ಇಕ್ಬಾಲ್ ಕೂಡ ಕಾರಣ. ಇದೇ ವಿಷಯಕ್ಕೆ ಸಂಬಂಧಿಸಿ ಇಕ್ಬಾಲ್ ಜಿನ್ನಾರಿಗೆ ಹಲವು ಪತ್ರಗಳನ್ನು ಬರೆದ. ಆದರೆ ಅದ್ಯಾವುದಕ್ಕೂ ಜಿನ್ನಾ ಒಪ್ಪಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.

ಇಲ್ಲಿನ ಮುಸ್ಲಿಂ ಲೀಗ್ ನ ನಾಯಕರುಗಳು ಮತ್ತೆ ಜಿನ್ನಾರ ನಾಯಕತ್ವದ ಅಗತ್ಯತೆಯನ್ನು ಮನಗಂಡು ಲಂಡನ್ ನಲ್ಲಿ ನೆಲೆಸಿದ್ದ ಜಿನ್ನಾರನ್ನು ಒತ್ತಾಯಪೂರ್ವಕವಾಗಿ ಭಾರತಕ್ಕೆ ಕರೆಸಿಕೊಂಡರು. ಮತ್ತೆ ಮುಸ್ಲಿಂ ಲೀಗ್ ನಲ್ಲಿ ಸಕ್ರಿಯರಾದರು ಜಿನ್ನಾ. ಇಕ್ಬಾಲ್ ಮುಂದಿಟ್ಟಿದ್ದ ದೇಶ ವಿಭಜನೆಯ ಪ್ರಸ್ತಾಪವನ್ನು ಜಿನ್ನಾ ಮೊದಲಿಗೆ ಒಪ್ಪಲಿಲ್ಲವಾದರೂ ಮುಂದೆ ಕಾಂಗ್ರೆಸ್ ಹಾಗು ಗಾಂಧೀ ಪರಿವಾರ ಜಿನ್ನಾರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನ ಎದುರುಸಿದ ಜಿನ್ನಾ ವಿಭಜನೆಯ ನಿಲುವಿಗೆ ಅಂಟಿಕೊಳ್ಳಲೇಬೇಕಾಯಿತು. ಅಂದು ಹಿಡಿದ ಪಟ್ಟನ್ನು ಮತ್ತೆಂದೂ ಸಡಿಲಿಸಲಿಲ್ಲ. ಒಂದು ಕಾಲದಲ್ಲಿ ಜಿನಾರನ್ನು ತಿರಸ್ಕರಿಸಿದ್ದ ಗಾಂಧೀ, ನೆಹರೂ ಹಾಗು ಕಾಂಗ್ರೆಸ್ ಜಿನ್ನಾರ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಕಾಲ ಮಿಂಚಿ ಹೋಗಿತ್ತು. ಕ್ರಮೇಣ ಜಿನ್ನಾ ಒಬ್ಬ ಹಠಮಾರಿಯಾಗಿ ಬದಲಾದರು. ಎಲ್ಲಿಯವರೆಗೆ ಎಂದರೆ 1947ರ ಆಗಸ್ಟ್ ನಲ್ಲಿ ದೇಶ ವಿಭಜನೆಯಾಗುವವರೆಗೆ..

ದೇಶ ವಿಭಜನೆಯ ವಿಷಯ ಬಂದಾಗಲೆಲ್ಲ ಮಹಮ್ಮದ್ ಆಲಿ ಜಿನ್ನಾ ಒಬ್ಬ 'ಖಳ' ನಾಯಕರಾಗಿ ಕಂಡುಬರುತ್ತಾರೆ. ನಿಜ ಅವರು ಮಾಡಿದ್ದು ತಪ್ಪು ಕೂಡ... ಆದರೆ ಅವರನ್ನು ಅಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿ ಭಾರತದ ವಿಭಜನೆಗೆ ಪರೋಕ್ಷವಾಗಿ ಕಾರಣಕರ್ತರಾದವರನ್ನು ನಾವು ಮರೆತ್ತಿದ್ದೇವೆ..? ಯಾಕೆ ನಾವು ಗಾಂಧೀ ನೆಹರೂಗಳಂತ ನಾಯಕರನ್ನು ದೂರುತ್ತಿಲ್ಲ.

1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ 1947 ರ ವರೆಗೆ ನಡೆದ ಚಳುವಳಿಗಳೆಲ್ಲ ಅಧಿಕಾರ, ನಾಯಕತ್ವ ಹಾಗು ಸ್ವಾತಂತ್ರ್ಯ ಗಳಿಕೆಯ 'ಕ್ರೆಡಿಟ್' ಗಾಗಿ ನಡೆದವುಗಳೆಂಬುದು ಕಟು ಸತ್ಯ. ಸುಭಾಶ್ ಚಂದ್ರ ಬೋಸರು ಕಾಂಗ್ರೆಸ್ ನಿಂದ ಹೊರ ಹೋಗಿ INA ಕಟ್ಟಿದ ನಂತರ ಗಾಂಧೀ-ನೆಹರೂ-ಜಿನ್ನಾ ನಡುವಿನ ಮೇಲಾಟ ದೇಶವನ್ನು ಎರಡು ಭಾಗ ಮಾಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿತು. 

ದೇಶ ವಿಭಜನೆಯ ಬಗ್ಗೆ ಗಾಂಧೀಜಿಯವರ ನಿಲುವುಗಳು ಕೂಡ ಅನುಮಾನವನ್ನು ಸೃಷ್ಟಿಸುತ್ತವೆ. 'ನನ್ನ ದೇಹವನ್ನು ಬೇಕಾದರೆ ತುಂಡು ಮಾಡಿ ಹಂಚಿಕೊಳ್ಳಿ, ಆದರೆ ದೇಶ ವಿಭಜನೆಯನ್ನು ಒಪ್ಪುವುದಿಲ್ಲ' ಎಂದಿದ್ದ ಗಾಂಧೀ ಕೊನೆಗೆ ಸುಮ್ಮನಾಗಿದ್ದೇಕೆ??  ವಿಭಜನೆಗೆ ಒಪ್ಪಿಗೆ ಸೂಚಿಸಿದ್ದೇಕೆ? ಮಾತು ಮಾತಿಗೂ ಸತ್ಯಾಗ್ರಹ ಉಪವಾಸ ಎನ್ನುತ್ತಿದ್ದ ಗಾಂಧೀ ವಿಭಜನೆ ವಿರುದ್ಧ ಯಾಕೆ Atleast ಒಂದು ದಿನದ ಉಪವಾಸ ಕೂರಲಿಲ್ಲ...? ಸತ್ಯಾಗ್ರಹ ಮಾಡಲಿಲ್ಲ?... ಚಾಚಾ ಎಂದು ಕರೆಸಿಕೊಳ್ಳುವ ನೆಹರೂ ಯಾಕೆ ತಡೆಯಲಿಲ್ಲ?

ಇಂದು ಜಿನ್ನಾ ಒಬ್ಬ 'ಖಳ'ನಾಗಿ ಕಂಡು ಬರುವುದಾದರೆ ಅದಕ್ಕೆ ಗಾಂಧೀ-ನೆಹರೂ ಹಾಗು ಗಾಂಧೀ ಯುಗದ ಕಾಂಗ್ರೆಸ್ಸೇ ಕಾರಣ... ಒಬ್ಬ ರಾಷ್ಟ್ರವಾದಿ ಜಿನ್ನಾರನ್ನು ದೇಶ ವಿಭಜನೆ ಮಾಡುವಷ್ಟರ ಮಟ್ಟಿಗೆ ಬದಲಾಯಿಸಿದರು ಎಂದ ಮೇಲೆ ಇವರುಗಳೇ ತಾನೇ ನಿಜವಾದ ಖಳ ನಾಯಕರು.

ಯೋಚಿಸಿ...

ಜೈ ಹಿಂದ್...


Tuesday, August 14, 2012

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು...ಇಂದು (ಆಗಸ್ಟ್ 14) ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ... ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ... ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.


ಅದೇ ರೀತಿ ಬಾಂಗ್ಲಾದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.. ಅಲ್ಲಿನ ಮುಸ್ಲಿಂ ನುಸುಳುಕೋರರು ಈಗಾಗಲೇ ಭಾರತಕ್ಕೆ ಅಕ್ರಮ ವಲಸೆ ಬಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಮಾಡುತ್ತಿರುವ ಆಕ್ರಮಣಗಳು, ಅವರ ಧಾಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇವೆಲ್ಲ ಎಂತಹ ಕಟು ಹೃದಯಿಯ ಕಣ್ಣಲ್ಲೂ ನೀರು ತರಿಸುತ್ತವೆ. ಪ್ರಸ್ತುತ ಅಸ್ಸಾಂ ನಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮವೇ ಇದಕ್ಕೆ ಜ್ವಲಂತ ಸಾಕ್ಷಿ. ಅಲ್ಲಿನ ಹೆಚ್ಚಿನ ಹಿಂದೂ ಬೋಡೊ ಬುಡಕಟ್ಟು ಜನಾಂಗದವರು ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರಿಗಾಗಿ ತಮ್ಮ ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಲ್ಲಿನ ಹಿಂದೂ ಹೆಣ್ಣುಮಕ್ಕಳ ದಯನೀಯ ಸ್ಥಿತಿಯನ್ನಂತೂ ಯಾವ ಪದಗಳಿಂದ ಹೇಳುವುದು ಎಂದೇ ತೋಚುತ್ತಿಲ್ಲ. ಹೀಗಿರುವಾಗ ಅವೆರಡೂ ದೇಶಗಳು ಮತ್ತೆ ಭಾರತದೊಂದಿಗೆ ವಿಲೀನಗೊಂಡು 'ಅಖಂಡ ಭಾರತ' ನಿರ್ಮಾಣವಾದರೆ ಅವೆರಡೂ ದೇಶಗಳ ಮುಸ್ಲಿಂಮರು ನಮ್ಮ ಹಿಂದೂಗಳ ಮೇಲೆ ಯಾವ ರೀತಿಯಲ್ಲಿ ಆಕ್ರಮಣಗೈಯಬಹುದು ಎಂಬುದನ್ನು ಒಂದು ಕ್ಷಣ ಊಹಿಸಿ. ಭಾರತದಲ್ಲಿ ಈಗಾಗಲೇ ಸರಿ ಸುಮಾರು 18 ಶೇಕಡಾದಷ್ಟಿರುವ ಮುಸ್ಲಿಮರು ಇಲ್ಲಿನ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಎಲ್ಲಾ ಕಡೆಗಳಲ್ಲಿ ತಡೆಯಲಾಗುತ್ತಿಲ್ಲ. ಹಾಗಿರುವಾಗ ಇಲ್ಲಿನ 18  ಶೇಕಡಾ, ಪಾಕ್-ಬಾಂಗ್ಲಾದ ಮುಸ್ಲಿಮರೆಲ್ಲ ಸೇರಿ ಸುಮಾರು 40-45 ಶೇಕಡಾವಾಗುವಾಗ ಇಲ್ಲಿನ ಹಿಂದೂಗಳ ಮೇಲೆ ಆಕ್ರಮಣವಾಗದಿರುತ್ತದೆಯೇ. ಮುಸ್ಲಿಮರ ಜನಸಂಖ್ಯೆ 40 ರಿಂದ 45 ಶೇಕಡಾದಷ್ಟಾಗುವಾಗ ಚುನಾವಣೆಗಳಲೆಲ್ಲ ಮುಸ್ಲಿಂ ಲೀಗ್, ಜಮಾತೆ ಇಸ್ಲಾಂ ನಂತಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಕ್ರಮೇಣ 45 ಶೇಕಡಾದಿಂದ 50 , ನಂತರ 55 , ಮುಂದೆ 60 ಹೀಗೆ ಮುಸ್ಲಿಮರ ಜನಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತ ಹೋಗುವಾಗ ಹಿಂದೂಗಳ ಸ್ವಂತ ನಾಡಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರಲ್ಲ!!! ಆಗಲೂ ನಾವು ಅಖಂಡ ಭಾರತವನ್ನು ಹೊಂದಬೇಕು ಎಂಬ ಆಸೆ ಇರುವುದೇ...?!


ಇಂದು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುವವರಿಗೆ ಅದರ ಉದ್ಧೇಶ ಹಾಗು ಅದರಿಂದಾಗುವ ಪರಿಣಾಮಗಳ ಅರಿವಿರಲಿಕ್ಕಿಲ್ಲ. ಯಾವುದೇ ಆಚರಣೆಗಳನ್ನು ಆಚರಣೆ ಮಾಡಬೇಕೆಂದು ಆಚರಿಸುವುದಕಿಂತ ಅದರ ಪರಿಣಾಮಗಳನ್ನು ಅವಲೋಕಿಸಿ ಆಚರಿಸಿದರೆ ಉತ್ತಮ ಅಲ್ಲವೇ...


ಜೈ ಭವಾನಿ...Saturday, August 4, 2012

ದೇವತೆ I LOVE YOU


ಚಡಪಡಿಕೆಯೇತಕೆ ಚೆಲುವೇ..
ಚಡಪಡಿಸದಿರು ನನ್ನ ಒಲವೇ..
ಮಂದಾರ ಪುಷ್ಪದ ಚೆಲುವು ಪಡೆದ ನೀನು ನನ್ನವಳೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...

ಆ ಶಿಖರದ ಮೇಲಿನಿಂದ ಹಾದು ಹೋದ ಕಾಮನಬಿಲ್ಲೇ

ಈ ನನ್ನ ಹೃದಯದಲಿ ಪುಳಕ ತಂದ ಹುಣ್ಣಿಮೆ ತುಂಡೇ
ನನ್ನ ಬಾಳ ಸಿಹಿ ನೀನು ಹಾದು ಹೋಗದಿರು ಇರುವೆಗಳ ಮುಂದೆ
ನಿನಗಾಗಿಯೇ ನಾನಿರುವೆನು ನಿನ ಬದುಕಲಿ ಇನ್ನು ಮುಂದೇ...

ಆನಂದದ ಉಯ್ಯಾಲೆಯಲಿ ನಿನ್ನ ನಾ ಕೂರಿಸುವೇ

ಎವೆಯಿಕ್ಕದೆ ನಿನ್ನ ನೋಡುತ ನಾ ಅಲ್ಲೇ ಕಾದಿರುವೇ..
ಆಗರ್ಭ ಸಿರಿವಂತ ನಾನು ನಿನ್ನ ಪ್ರೀತಿ ಪಡೆದ ಮೇಲೆ
ನಿನ್ನಿಂದಲೇ ನಾನಾಗಿಯೇ ನಾನಿಂದು...

ಚಡಪಡಿಕೆಯೇತಕೆ ಚೆಲುವೇ..

ಚಡಪಡಿಸದಿರು ನನ್ನ ಒಲವೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...


Friday, July 13, 2012

ಕಪಟ ನಾಟಕ ಸೂತ್ರಧಾರಿ ನೀನೇ...

ದೇಶದ ಯಾವುದೇ ಮೂಲೆಯಲ್ಲಿ ಆಡ್ವಾಣಿ, ವಾಜಪೇಯಿ ಯಂತಹ ಹಿರಿಯ ಬಿಜೆಪಿ ಮುತ್ಸದ್ದಿಗಳು 'ಜೈ ಶ್ರೀ ರಾಮ್ ಎಂದರೆ ಸಾಕು ಅದು ಮಂಗಳೂರಿನವರ ಬಾಯಲ್ಲಿ ಮಾರ್ದನಿಸುತ್ತದೆ. ಹಿಂದುತ್ವ ಎಂದರೆ ಉಸಿರು, ಹಿಂದುತ್ವ ಎಂದರೆ ಜೀವನ, ಹಿಂದುತ್ವ ಎಂದರೆ ಸರ್ವಸ್ವ ಎಂದು ಹಿಂದುತ್ವವನ್ನೇ  ಮೈಗೂಡಿಸಿಕೊಂಡ ನಾಡು ಈ ಕರಾವಳಿಯ ಮಂಗಳೂರು ಹಾಗು ಉಡುಪಿ ಜಿಲ್ಲೆಗಳು...  ಬರೀ ಓಟು ಬ್ಯಾಂಕ್ ಗಷ್ಟೇ ಹಿಂದುತ್ವದ ಸೋಗು ಹಾಕಿಕೊಳ್ಳುವ ಈ ಕಾಲದಲ್ಲಿ ಹೃದಯದಿಂದ ಹಿಂದುತ್ವವನ್ನು ಅಪ್ಪಿಕೊಂಡವರಿವರು. ಇಲ್ಲಿ ಬಿಜೆಪಿಯಿಂದ ಹಿಂದುತ್ವ ಬಂದಿಲ್ಲ ಬದಲಾಗಿ ಹಿಂದುತ್ವದಿಂದ ಬಿಜೆಪಿ ಬಂದಿದೆ. ಆದರೆ ಈಗ ನಾವೆಷ್ಟು ಮೂರ್ಖರಾಗಿದ್ದೆವು ಎಂಬುದರ ಅರಿವಾಗುತ್ತಿದೆ. ಓಟು ಬ್ಯಾಂಕ್ ಗಾಗಿ ನಮ್ಮ ಹಿಂದುತ್ವವನ್ನು ಬಳಸಿಕೊಂಡರಲ್ಲ  ಎಂಬ ಬಗ್ಗೆ ಖೇದವಾಗುತ್ತಿದೆ. ಇದಕ್ಕೆ ಕಾರಣರಾದವರ ಮೇಲೆ ಕೋಪ, ಸಿಟ್ಟು, ಅಸಹನ, ಜೊತೆ ಜೊತೆಗೆ ನಮ್ಮ ಮೇಲೆಯೇ ಅಸಹ್ಯತನ ಹುಟ್ಟುತ್ತಿದೆ...!ಈಗಿನ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಿಜವಾಗಲೂ ಅದರ ಸಿದ್ಧಾಂತಗಳನ್ನು ಉಳಿಸಿಕೊಂಡಿದ್ದರೆ  ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಮಾತ್ರವೇನೋ... ಪ್ರತಿ ಸಲದ ಚುನಾವಣೆಯಲ್ಲೂ ಬಿಜೆಪಿಗೆ ಅತ್ಯಧಿಕ ಶಾಸಕರನ್ನು ಕೊಟ್ಟ, ಪಕ್ಷದ ಯಾವ ಕ್ಲಿಷ್ಟ ಸಂದರ್ಭಗಳಲ್ಲೂ ಕೈ ಹಿಡಿಯುವಂತಹ ಜಿಲ್ಲೆಯಿದು. ಆದರೆ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಮಾತ್ರ ಎಲ್ಲರಿಂದಲೂ ಕಡೆಗಣಿಸಲ್ಪಟ್ಟಿತು. ಚುನಾವಣಾ ಗೆಲ್ಲುವವರೆಗೆ ಹಿಂದುತ್ವ ಎಂದು ಮಾತನಾಡುತ್ತಿದ್ದ ರಾಜ್ಯದ ಹಿರಿಯ ನಾಯಕರುಗಳು ಲಿಂಗಾಯಿತ, ಒಕ್ಕಲಿಗ ಎಂದು ಶುರುವಿಟ್ಟುಕೊಂಡರು. 'ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು' ಎಂದು ಭಾಷಣ ಮಾಡುವ ಮಂದಿ ಜಾತಿ ಸಮೀಕರಣದ ಲೆಕ್ಕ ಆರಂಭಿಸಿದರು. ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರ ಎಂಬ ಹೆಗ್ಗಳಿಕೆಯೊಂದಿಗೆ ಬಂದ ಸರಕಾರದಲ್ಲಿ ಹಲವು ಪಕ್ಷಾಂತರಿಗಳಿಗೆ, ಭ್ರಷ್ಟರಿಗೆ ಮಂತ್ರಿ ಸ್ಥಾನ ದೊರೆಯಿತು.  ಆದರೆ 3 -4  ಬಾರಿ ಗೆದ್ದು ಮಂತ್ರಿಯಾಗಲು ಅರ್ಹತೆ ಇದ್ದ ಕರಾವಳಿಯ ಯಾವ ಹಿರಿಯ ಶಾಸಕನಿಗೂ ಸ್ಥಾನ ಸಿಗಲಿಲ್ಲ. ಮಂಗಳೂರಿನ ಹಿರಿಯ ಶಾಸಕ ಯೋಗಿಶ್ ಭಟ್, ಸುಳ್ಯದ 4  ಬಾರಿ ಗೆದ್ದ ಎಸ್. ಅಂಗಾರ, 3  ಬಾರಿ ಭಾರೀ ಅಂತರದಿಂದ ಗೆದ್ದ ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರೆಲ್ಲ ಅಂದೇ ಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿದ್ದವರು. ಸ್ವತಃ ಹಾಲಾಡಿ ಶ್ರೀನಿವಾಸ ಶೆಟ್ಟರು ಆಗಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡರಲ್ಲಿ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ದರು. ಗೌಡರು ಈ ಬಗ್ಗೆ ಎ.ಜಿ. ಕೊಡ್ಗಿಯವರಲ್ಲಿ ಕೇಳಿದಾಗ ಅವರು ಕಲ್ಲಡ್ಕದ ಪ್ರಭಾಕರ್ ಭಟ್ ರತ್ತ ಬೆರಳು ತೋರಿಸಿದರು. ಮೂರು ಬಾರಿ ಗೆದ್ದ ಹಾಲಾಡಿಯವರಿಗೆ ಪ್ರಭಾಕರ್ ಭಟ್ ರಿಂದ ಬಂದ ನೇರ ಉತ್ತರ 'ಇಲ್ಲ' ಎಂದು. ಒಬ್ಬ ಸರಳ ಸಜ್ಜನ ಜನಪ್ರಿಯ ವ್ಯಕಿ ಶ್ರೀನಿವಾಸ ಶೆಟ್ಟರು ಮಂತ್ರಿಯಾಗಿ ಬಿಜೆಪಿಯನ್ನು ಇನ್ನಷ್ಟು ಬಲಗೊಳಿಸಬಹುದಿತ್ತು. ಪ್ರಾಮಾಣಿಕ ವ್ಯಕ್ತಿಯಾದ ಕಾರಣ  ರಾಜ್ಯಮಟ್ಟದಲ್ಲಿ ಉತ್ತಮ ಜನ ಸೇವೆ ಮಾಡಬಹುದಿತ್ತು. ಆದ್ರೆ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಿರುವ ಪ್ರಭಾಕರ್ ಭಟ್ಟರು ಇದ್ಯಾವುದನ್ನು ಪರಿಗಣಿಸದೆ ಕೃಷ್ಣ ಪಾಲೆಮಾರರ ಹೆಸರನ್ನು ಸೂಚಿಸಿದರು. ಇಲ್ಲಿ ಪಾಲೆಮಾರರ ಯಾವ 'ಬಲ' ಕೆಲಸ ಮಾಡಿತ್ತು ಎಂಬುದನ್ನು ನಾವಾಗಿಯೇ ಊಹಿಸಿಕೊಳ್ಳಬಹುದು.
 ಮೊದಲ ಬಾರಿಗೆ ರಾಜ್ಯದ ಜನಸೇವೆ ಮಾಡಲು ಅವಕಾಶ ಕೇಳಿದಾಗ ಕಡೆಗಣಿಸಲ್ಪಟ್ಟ ಮೇಲೆ ಹಾಲಾಡಿಯವರು ಮತ್ತೆ ಒಮ್ಮೆಯೂ ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಕೇಳಿದವರಲ್ಲ. ರಾಜ್ಯದ ನಾಯಕರುಗಳು ಅರ್ಹತೆಯ ನೆಲೆಯಲ್ಲಿ ಮಂತ್ರಿ ಸ್ಥಾನ ನೀಡುವುದಾದರೆ  ಮೊದಲ ಬಾರಿಗೆ ಶೆಟ್ಟರಿಗೆ ಅವಕಾಶ ನೀಡಬೇಕಿತ್ತು.  ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದಾಗಿನ ಮತಗಳ ಅಂತರವನ್ನು ಗಮನಿಸಿದರೆ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಕಾಣುತ್ತದೆ. 1999 ರಲ್ಲಿ ಮೊದಲ ಬಾರಿಗೆ 1025 ಮತಗಳ ಅಂತರದಿಂದ ಜಯಿಸಿದ ಶೆಟ್ಟರು, 2004 ರಲ್ಲಿ 19,500 ಮತಗಳ ಹಾಗು 2009 ರಲ್ಲಿ 25,084 ಮತಗಳ ಭಾರೀ ಅಂತರದಿಂದ ಗೆದ್ದವರು. ಪ್ರತಿ ಭಾರಿಯ ಚುನಾವಣೆಯಲ್ಲಿ ಅವರ ಜನಪ್ರಿಯತೆ ಎಷ್ಟು ಬೆಳೆದಿದೆ ಎಂಬುದಕ್ಕೆ ಇದೇ ಸಾಕ್ಷಿ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ಸ್ ನ ಜಯಪ್ರಕಾಶ್ ಹೆಗ್ಡೆ ಯವರ ಎದುರು ಸರಿಸಾಟಿಯಾಗಿ ನಿಲ್ಲಲು ಹಾಲಾಡಿಯವರನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹಾಲಾಡಿಯವರು ಕೇವಲ ಕುಂದಾಪುರಕಷ್ಟೇ ಸೀಮಿತವಾಗಿರದೆ ಇಡೀ ಉಡುಪಿ ಜಿಲ್ಲೆಯ ಜನ ನಾಯಕರಾಗಿರುವವರು. ಕಟ್ಟಾ ಬ್ರಹ್ಮಚಾರಿ, ಯಾವುದೇ ದುರಾಭ್ಯಾಸಗಳಿಲ್ಲದ, ಸದಾ ಜನರ ನಡುವೆ ಬೆರೆಯುವ, ಸ್ವಪ್ರಶಂಸೆಗಳನ್ನು ಇಷ್ಟ ಪಡದ, ಜನ ಸೇವೆಯನ್ನೇ ಉಸಿರಾಗಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು 'ಕುಂದಾಪುರದ ವಾಜಪೇಯೀ' ಎಂದೇ ಪರಿಚಿತರು.  ಅವರ ಜನಪ್ರಿಯತೆ ಹಾಗು ನಿಸ್ವಾರ್ಥ ಜನಸೇವೆಯೇ ಅವರಿಗೆ ಈ ಹೆಸರನ್ನು ತಂದುಕೊಟ್ಟಿದೆ. ಅವರು ಬಿಜೆಪಿಗಷ್ಟೇ ಸೀಮಿತವಾಗಿರದೆ ಪಕ್ಷಾತೀತ ನಾಯಕರಾಗಿದ್ದರು. ಪಕ್ಷೇತರರಾಗಿ ನಿಂತರೂ ಭಾರೀ ಅಂತರದಿಂದ ಗೆಲ್ಲುವ ಸಾಮರ್ಥ್ಯ ಇರುವ ಅಪರೂಪದ ವ್ಯಕ್ತಿ ಹಾಲಾಡಿಯವರು.

ಶ್ರೀನಿವಾಸ ಶೆಟ್ಟರು ಬಿಜೆಪಿಯಲ್ಲಿ ನಡೆದ ಯಾವುದೇ ರೆಸಾರ್ಟ್ ರಾಜಕಾರಣದಲ್ಲಿ ಭಾಗಿಯಾದವರಲ್ಲ. ಗೋವಾ ಹೈದರಾಬಾದ್ ಗಳಲ್ಲಿ ಗುಂಪು ಕಟ್ಟಿಕೊಂಡು ಕೂತಿಲ್ಲ. ಯಾರಿಗೂ ಬಕೆಟ್ ಹಿಡಿದೂ ಇಲ್ಲ. ನನ್ನ ಜನ ನನ್ನ ಪಕ್ಷ ಎಂದು ಕೆಲಸ ಮಾಡಿಕೊಂಡಿದ್ದರು. ಇಂತಹ ಒಬ್ಬ ಪಕ್ಷ ನಿಷ್ಠನಿಗೆ ಮಂತ್ರಿಯಾಗುವ ಅವಕಾಶ ಮತ್ತೊಮ್ಮೆ ಒದಗಿ ಬಂತು. ಸದಾನಂದ ಗೌಡರನ್ನು ಇಳಿಸಿ ಜಗದೀಶ್ ಶೆಟ್ಟರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ತಯಾರಿಸಿದ ಹೊಸ ಮಂತ್ರಿಗಳ ಪಟ್ಟಿಯಲ್ಲಿ ಹಾಲಾಡಿಯವರ ಹೆಸರಿತ್ತು. ಸ್ವತಃ ಹಾಲಡಿಯವರಿಗೆ ಪಕ್ಷದ ನಾಯಕರುಗಳು ಕರೆ ಮಾಡಿ ಈ ವಿಷಯ ತಿಳಿಸಿದ್ದರು. ಪ್ರಮಾಣ ವಚನಕ್ಕೆ ಬರುವಂತೆಯೂ ಕರೆ ಬಂದಿತ್ತು. ಅದರಂತೆ ಹಾಲಾಡಿಯವರು ಕರಾವಳಿಯ ತನ್ನ ಶಾಸಕ ಮಿತ್ರರೊಡನೆ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು. ಆದರೆ ಪ್ರಮಾಣ ವಚನ ಸ್ವೀಕರಿಸಲು ಮಾತ್ರ ಕರೆಯಲೇ ಇಲ್ಲ. ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ ಎಂದು ಕರೆಸಿ ಕೊನೆಯ ಕ್ಷಣದಲ್ಲಿ ನನ್ನನ್ನು ಕೈ ಬಿಡಲಾಗಿದೆ ಎಂದು ಅರಿವಾದಾಗ ಹಾಲಾಡಿಯವರಿಗೆ ಎಂತಹ ಅವಮಾನವಾಗಿರಬೇಡ. ಆ ನೋವನ್ನು ಇಲ್ಲಿ ವಿವರಿಸಲು ಖಂಡಿತ ಸಾಧ್ಯವಿಲ್ಲ. ಆ ಕ್ಷಣದಲ್ಲಿ ಹಾಲಾಡಿಯವರ ಕಣ್ಣಿಂದ ಧುಮುಕಿದ ಆ ನೋವಿನ ಕಣ್ಣೀರೆ ಅದಕ್ಕೆ ಸಾಕ್ಷಿ. ಆ ಕಣ್ಣ ಹನಿಗಳೇ ಅವರ ನೋವನ್ನು ಬಿಡಿಸಿ ಹೇಳುತ್ತವೆ.

ಈ ಸಲಾನೂ ಹಾಲಾಡಿಯವರ ಜೊತೆಗೆ ಕರಾವಳಿಯ ಹಿರಿಯ ಶಾಸಕರಾದ ಯೋಗಿಶ್ ಭಟ್, ಎಸ್.ಅಂಗಾರ ಅವರನ್ನು ಕಡೆಗಣಿಸಲಾಯಿತು. ಅದರಲ್ಲೂ ಹಾಲಾಡಿಯವರನ್ನು ತಾವಾಗಿಯೇ ಕರೆದು ಕೊನೆಯ ಕ್ಷಣದಲ್ಲಿ ಇಲ್ಲ ಎಂದಾಗಿನ ಆ ಅವಮಾನ ಇಡೀ ಕರಾವಳಿ ಜನತೆಗೆ ಮಾಡಿದ ಅವಮಾನ. ಬಿಜೆಪಿ ಬಿಜೆಪಿ ಎಂದು ಹಗಲು ರಾತ್ರಿ ದುಡಿದ ಕರಾವಳಿಯ ಕಾರ್ಯಕರ್ತರಿಗೆ ಮಾಡಿದ ದ್ರೋಹ. ಕರಾವಳಿಯ ಜನತೆಗೆ ಈ ಪರಿ ಅವಮಾನವಾಗುವಂತೆ ಮಾಡಿ ಮತ್ತೆ ಮಂತ್ರಿ ಸ್ಥಾನವನ್ನು ಕಡೆಯ ಕ್ಷಣದಲ್ಲಿ ತಪ್ಪಿಸಿದ್ದು ಕರಾವಳಿಯಲ್ಲಿ ಪ್ರಬಲರಾಗಿರುವ ಒಬ್ಬ ಹಿಂದುತ್ವದ ಗುತ್ತಿಗೆದಾರ ಅನ್ನುವುದು ಕರಾವಳಿಯ ಜನರಿಗೇ ಗೊತ್ತಿರುವ ಸತ್ಯ. ಎಲ್ಲರೂ ಈ ಹಿಂದುತ್ವದ ಗುತ್ತಿಗೆದಾರರನ್ನು ನಮ್ಮ ನಾಯಕ, ಹಿಂದೂ ಉದ್ಧಾರಕ ಎಂದೇ ನಂಬಿಕೊಂಡಿದ್ದರು. ಆದರೆ ಅವರ ಹಿಂದುತ್ವದ ಪ್ರತಿಪಾದನೆ ಕೇವಲ ಅವರ ಸ್ವಾರ್ಥಕ್ಕಾಗಿ ಮಾತ್ರ ಎಂಬುದು ಜನರಿಗೆ ಈಗ ಅರಿವಾಗಿರಬೇಕು. ಇದು ಈಗಷ್ಟೇ ಬಹಿರಂಗವಾಗಿ ಬೆಳಕಿಗೆ ಬಂದಿದೆ. ಆದರೆ ಅವರು ಮೊದಲಿನಿಂದಲೂ ಮಾಡುತ್ತಿರುವುದು ಇದನ್ನೇ. !!

ಇವರಂತಹ 'ಕುಟಿಲ' ನಾಯಕ ಮತ್ತೊಬ್ಬರು ಇರಲಿಕ್ಕಿಲ್ಲವೇನೋ.  ಹಿಂದುತ್ವ ಎಂದು ಜನರನ್ನು ರೊಚ್ಚಿಗೆಬ್ಬಿಸಿ ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ಇಂತವರಿಂದ ಮೋಸ ಹೋದವರು ಮಾತ್ರ ನಾವು ನೀವುಗಳೇ. ಅವರುಗಳು 'ಜೈ ಶ್ರೀ ರಾಮ್' ಎಂದಾಗ ಇನ್ನೂ ಜೋರಾಗಿ 'ಜೈ ಶ್ರೀ ರಾಮ್' ಎಂದು ಕಿರಿಚಿಕೊಳ್ಳುವ ಮುಗ್ಧ ಹಿಂದೂ ಬಾಂಧವರು ಅವರ ಘೋಷ ವಾಕ್ಯದ ಹಿಂದಿನ ಕುಟಿಲತೆಯನ್ನು, ಸ್ವಾರ್ಥವನ್ನು ಯಾಕೆ ಇಲ್ಲಿಯವರೆಗೆ ಅರಿಯದಾದರು? ತಮಗೆ ಅನುಕೂಲ ವಾಗುವವರನ್ನು ಮಾತ್ರ ಉನ್ನತ ಸ್ಥಾನಗಳಿಗೆ ಹೋಗಲು ಅವಕಾಶ ನೀಡುವ ಇವರು ಹಿಂದೂಗಳ ಉದ್ಧಾರಕ ಹೇಗಾದಾರು? ಪ್ರಾಮಾಣಿಕವಾಗಿ ಜನಸೇವೆ ಮಾಡುವವರನ್ನು ತಡೆದು ಯಾವಾಗಲೂ ತೆರೆಮರೆಯ ರಾಜಕೀಯ ಮಾಡುವ ಹಿಂದುತ್ವದ ಗುತ್ತಿಗೆದಾರರು ಬಹಿರಂಗವಾಗಿಯೇ ರಾಜಕೀಯಕ್ಕೆ ಬರಲಿ. ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡಲಿ. ಅದು ಬಿಟ್ಟು ಕಪಟ ಹಿಂದುತ್ವದ ನಾಟಕವಾಡುವ ಅಗತ್ಯವೇನಿದೆ.


ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಅನೇಕರಿಗೆ ಇಂದು ಸ್ಥಾನ ಮಾನ ಸಿಕ್ಕಿಲ್ಲ. ಅದರಲ್ಲೂ ಸಿಕ್ಕಿದರೂ ಅದನ್ನು ತಪ್ಪಿಸಲಿಕ್ಕಾಗಿಯೇ ಪ್ರಭಾಕರ್ ಭಟ್ ರಂತವರು ಇರುತ್ತಾರೆ.  ಎಷ್ಟು ದಿನ ಎಂದು ಸಹಿಸಿಕೊಳ್ಳಬಹುದು. ಹಲವಾರು ಪಕ್ಷ ನಿಷ್ಠರ ಪ್ರತಿನಿಧಿಯಾಗಿ ಇಂದು ಹಾಲಾಡಿ ಶ್ರೀನಿವಾಸ ಶೆಟ್ಟರು ರಾಜಿನಾಮೆ ನೀಡಿದ್ದಾರೆ. ಬಹುಶಃ ಹಾಲಾಡಿಯವರ ರಾಜಕೀಯ ವಿರೋಧಿಗಳೂ ಅವರ ಈ ಸ್ಥಿತಿಗೆ ಸಂಕಟ ಪಟ್ಟಿರಬಹುದು. ಅಂತಹ ಒಬ್ಬ ಸಜ್ಜನ, ಜನಪ್ರಿಯ ರಾಜಕಾರಣಿಯನ್ನು ಉಳಿಸಿಕೊಳ್ಳುವ ಭಾಗ್ಯ ಬಿಜೆಪಿಗಿಲ್ಲವೇನೋ.. ನಿಜಕ್ಕೂ ಖೇದವೆನಿಸುತ್ತದೆ. ಈ ಹಿಂದುತ್ವದ ಗುತ್ತಿಗೆದಾರರು ಇರುವವರೆಗೆ ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಖಂಡಿತ ಭವಿಷ್ಯವಿಲ್ಲ ಎಂದು ಅರಿವಾದ ಮೇಲಂತೂ ಹಲವು ಕಾರ್ಯಕರ್ತರು ಪಕ್ಷದಿಂದ ಮಾನಸಿಕವಾಗಿ ವಿಮುಖರಾಗುತ್ತಿದ್ದಾರೆ.. ಇದಕ್ಕೆ ಇಂದು ಕುಂದಾಪುರದಲ್ಲಿ ಬೆಂಕಿಗೆ ಸಿಲುಕಿ ಉರಿಯುತ್ತಿದ್ದ ಬಿಜೆಪಿಯ ಧ್ವಜವೆ ಜ್ವಲಂತ ಸಾಕ್ಷಿ...! ಮುಂದಿನ ಬಾರಿ ಕರಾವಳಿಯಲ್ಲಿ ಬಿಜೆಪಿಯ ಅಲೆ ಮತ್ತೆ ಸದ್ದು ಮಾಡುವುದೇ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

Saturday, May 26, 2012

ಕನ್ನಡ ಭಾಷೆ ಮತ್ತು ಡಬ್ಬಿಂಗ್

ರಿಯಾಲಿಟಿ ಶೋಗಳೆಂದರೆ ಯಾವುದೋ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಕಾಲಹರಣ, ತುಂಡುಡುಗೆಯ ಮಾನಿನಿಯರ ಮೇಲಾಟ, ಅನೈತಿಕ ವಿಷಯಗಳ ಬಗ್ಗೆ ಚರ್ಚೆ, ಹುಚ್ಚು ಕುಣಿತ, ತುಸು ಮನೋರಂಜನೆ.. ಬರೀ ಇಂತಹ ಅಭಿಪ್ರಾಯಗಳೇ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಈ ಕಾಲದಲ್ಲಿ ಎಲ್ಲ ರಿಯಾಲಿಟಿ ಶೋ ಗಳಿಗಿಂತ ಭಿನ್ನವಾಗಿ ಕಾಣುವಂತಹುದು ಹಿಂದಿಯ ಸ್ಟಾರ್ ಪ್ಲಾಸ್ ನಲ್ಲಿ ಪ್ರಸಾರವಾಗುವ 'ಸತ್ಯಮೇವ ಜಯತೇ'..

'ಸತ್ಯಮೇವ ಜಯತೇ' ರಾಷ್ಟ್ರದ ಜ್ವಲಂತ ಸಮಸ್ಯೆಗಳನ್ನು, ಅಮಾನವೀಯ ಘಟನಾವಳಿಗಳನ್ನು, ಸಮಾಜದಲ್ಲಿ ಕಂಡೂ ಕಾಣದಂತಿರುವ ಪಿಡುಗುಗಳನ್ನು ನೇರವಾಗಿ ಜನರಿಗೆ ತೋರಿಸುತ್ತಾ ಜನರಲ್ಲಿ ಅರಿವನ್ನು ಮೂಡಿಸುತ್ತಿರುವ ಒಂದು ಪ್ರಶಂಶನೀಯ ಕಾರ್ಯಕ್ರಮ. ಇದನ್ನು ನಡೆಸಿಕೊಡುತ್ತಿರುವವರು ಹಿಂದಿಯ ಹೆಸರಾಂತ ನಟ ಅಮೀರ್ ಖಾನ್.. ಅಮೀರ್, ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರುವ ಮುಸ್ಲಿಂ ಮೂಲಭೂತವಾದಿ ಶಾರುಖ್ ಖಾನ್ ಹಾಗು ಇತರೆ ಖಾನ್ ಗಳನ್ತಲ್ಲ.. ಸದಾ ದೇಶ ಜಾಗೃತಿಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾ ದೇಶ ಸೇವೆಗೈಯುತ್ತಿರುವ ಅಮೀರ್ ನ ವ್ಯಕ್ತಿತ್ವ ನಿಜಕ್ಕೂ ಇತರ ಖಾನ್ ಗಳಿಗೆ ಮಾದರಿಯಾಗುವಂತಹುದು...

ಇದೇ ಅಮೀರ್ ನ ಸತ್ಯಮೇವ ಜಯತೇ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ ಆಗಿರುವುದು, ಕನ್ನಡದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಕನ್ನಡಿಗರಿಗೆ ಸತ್ಯಮೇವ ಜಯತೆಯ  ಕನ್ನಡ ರೂಪಾಂತರವನ್ನು ನೋಡಲು ಸಾಧ್ಯವಾಗದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.. ಇಂತಹ ಒಂದು ಜನ ಜಾಗೃತಿಯ ಕಾರ್ಯಕ್ರಮ ದೇಶದ ಮೂಲೆ ಮೂಲೆಗೂ ಅವರದೇ ಭಾಷೆಯಲ್ಲಿ ತಲುಪಬೇಕೆಂಬ ಅಮೀರ್ ನ ಆಸೆ ಕರ್ನಾಟಕದ ಮಟ್ಟಿಗೆ ನೆರವೇರಲಿಲ್ಲ..  ಇಲ್ಲಿನ ಕಿರುತೆರೆ, ಚಿತ್ರರಂಗದ ಸಂಘ ಸಂಸ್ಥೆ ಗಳು, ಕಲಾವಿದರು ತಂತ್ರಜ್ಞರ ತೀವ್ರ ಪ್ರತಿರೋಧದಿಂದ ಇದು ಸಾಧ್ಯವಾಗದೆ ಹೋಯಿತು... ಈಗ ನಾವು ನೀವುಗಳು  ಸತ್ಯಮೇವ ಜಯತೆಗಾಗಿ ಬೇರೆ  ಭಾಷೆಯ ಛಾನಲನ್ನು ನೋಡುವಂತಾಗಿದೆ.. ಇದು ಅಸಂಖಾತ ಕನ್ನಡ ಪ್ರೇಕ್ಷಕರಿಗೆ ಹಾಗು ಕನ್ನಡ ಭಾಷೆಗೆ ಕನ್ನಡ ಚಿತ್ರರಂಗ ಮಾಡಿದ ಅತೀ ದೊಡ್ಡ ದ್ರೋಹ...

ಡಬ್ಬಿಂಗ್ ಯಾಕೆ ಬೇಡ...?! ಚಿತ್ರರಂಗ ಕಿರುತೆರೆಯರ ಪ್ರಕಾರ ಡಬ್ಬಿಂಗ್ ನಿಂದಾಗಿ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ, ಕನ್ನಡದ ಸಂಸ್ಕೃತಿಯ ನಾಶವಾಗುತ್ತದೆ.. ಇದು ಅವರ ವಾದ.. ಕನ್ನಡದಲ್ಲಿ ಒಂದು ಹಿಡಿದಿಟ್ಟುಕೊಳ್ಳುವಂತಹ, ಜನ ಜಾಗೃತಿಯ ಕಾರ್ಯಕ್ರಮ ತಯಾರಿಸಲಾಗದ ಇವರುಗಳು ಮತ್ತೇನು ತಾನೇ ಹೇಳಿಯಾರು? ಈಗಾಗಲೇ ಕುಲಗೆಟ್ಟ ಕಾರ್ಯಕ್ರಮಗಳು, ಸ್ವಂತಿಕೆ ಇಲ್ಲದ ಸಿನೆಮಾ. ರಿಮೇಕ್ ಗಳಿಂದ ಹೆಸರು ಕೆಡಿಸಿಕೊಂಡು ಹೆಚ್ಚಿನ ಕನ್ನಡ ಪ್ರೇಕ್ಷಕರನ್ನು ದೂರಕಟ್ಟಿರುವ ಕನ್ನಡ ಚಿತ್ರರಂಗ ಈ ಡಬ್ಬಿಂಗ್ ವಿರೋಧಿ ಆಂದೋಲನದಿಂದ ಸಾಧಿಸುವುದಾದರೂ ಏನು?


ಡಬ್ಬಿಂಗ್ ವಿರುದ್ದ ತೋಳೆತ್ತಿ ಆರ್ಭಟಿಸುತ್ತಿರುವ ಶಿವಣ್ಣ ಹಾಗು ಅವರ ಬಳಗಕ್ಕೆ ತಾವು ಮಾಡುತ್ತಿರುವುದು ಕಾನೂನು ವಿರೋಧಿ ಹೋರಾಟ ಎಂಬುದರ ಕಿಂಚಿತ್ತಾದರೂ ಅರಿವಿದೆಯೇ? ಡಬ್ಬಿಂಗ್ ಗೆ ಭಾರತದ ಕಾನೂನಿನಲ್ಲಿ ಯಾವುದೇ ವಿರೋಧವಿಲ್ಲ. ಡಬ್ಬಿಂಗ್ ಸಂವಿಧಾನಾತ್ಮಕವಾದುದು. ಹೀಗಿರುವಾಗ ಡಬ್ಬಿಂಗ್ ಗೆ ವಿರೋಧ ವ್ಯಕ್ತ ಪಡಿಸುವುದು ಅಪ್ರಜಾಸತ್ಮಕವಲ್ಲವೇ. ಪಾಳೇಗಾರಿಕೆ ಮೂಲಕ ಡಬ್ಬಿಂಗ್ ಅನ್ನು ಕನ್ನಡದಿಂದ ದೂರಕತ್ತುವುದು ಎಷ್ಟರ ಮಟ್ಟಿಗೆ ಸರಿ..


ಬಹುಶಃ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಅವರುಗಳು ಬೇರೆ ಭಾಷೆಯಿಂದ ಕದ್ದು ರಿಮೇಕ್ ಮಾಡಲು, ನಾಲ್ಕೈದು  ಸಿನಿಮಾದ ಕತೆ ಸೇರಿಸಿ ಖಿಚಡಿ ಸಿನಿಮಾ ಮಾಡಲು ಸಾಧ್ಯವಾಗದು ಎಂಬ ಆತಂಕವೋ ಏನೋ..? ಒಂದು ಮಾತ್ರ ಸತ್ಯ ಈ ಸ್ವಂತಿಕೆ ಇಲ್ಲದ  ಕನ್ನಡ ಚಿತ್ರರಂಗದಿಂದ ಜನ ದಿನೇ ದಿನೇ ವಿಮುಖರಾಗುತ್ತಿದ್ದಾರೆ. ತಮ್ಮ ಮನೋರಂಜನೆಗಾಗಿ ಬೇರೆ ಭಾಷೆಗಳ ಮೊರೆ ಹೋಗುತ್ತಿದ್ದಾರೆ.. "10 ಹೊಸ ಚಿತ್ರಗಳ ಪೈಕಿ 1  ಮಾತ್ರ ಆಯ್ಕೆಗೆ ಅರ್ಹವಾಗಿರುತ್ತವೆ.  ಉಳಿದವು ಎಲ್ಲಾ ಸವಕಲು" ಎಂದು ವಿಷಾದದಿಂದ ಹೇಳುವ ಕನ್ನಡದ ಹಿರಿಯ ನಟ ಅನಂತ್ ನಾಗ್ ರವರ ಮಾತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂತಹ ಚಿತ್ರರಂಗದಿಂದ ಕನ್ನಡ ಭಾಷೆ-ಸಂಸ್ಕೃತಿ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ದೊಡ್ಡ ಅಪರಾಧವಾಗುತ್ತದೆ.ಸತ್ಯಮೇವ ಜಯತೆ ಕನ್ನಡದಲ್ಲಿ ದೊರೆಯದ ಕಾರಣ ನಾವು ಬೇರೆ ಭಾಷೆಯ ಮೊರೆ ಹೋದ ಹಾಗೆ ಅದೆಷ್ಟೋ ಕನ್ನಡಿಗರು ತಮ್ಮಿಷ್ಟದ ಮನೋರಂಜನಾ ಕಾರ್ಯಕ್ರಮಕ್ಕಾಗಿ ಬೇರೆ ಭಾಷೆಯ ಚಾನಲ್ ಗಳಿಗೆ ಟ್ಯೂನಿಸುತ್ತಾರೆ. ಇಲ್ಲಿ ನಮಗೇನೂ ನಷ್ಟವೆನಿಸುವುದಿಲ್ಲ. ನಮಗೆ ಬೇಕಾದ ಮಾಹಿತಿ, ಮನೋರಂಜನೆ ಎಲ್ಲವೂ ದೊರಕುತ್ತದೆ. ಆದರೆ ಇಲ್ಲಿ ನಿಜವಾಗಿ ನಷ್ಟಕ್ಕೊಳಗಾಗುವುದು ಮಾತ್ರ ಕನ್ನಡ ಭಾಷೆ..! ನಮ್ಮಿಷ್ಟದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ ಮಾಡಿ ತೋರಿಸಿದರೆ ನಾವೆಲ್ಲಾ ಮನೆ ಮಂದಿಯೊಂದಿಗೆ ಕುಳಿತು ಕನ್ನಡದಲ್ಲೇ ವೀಕ್ಷಣೆ ಮಾಡುತ್ತೇವೆ. ಆಗ ಕನ್ನಡ ಭಾಷೆ ಬೆಳೆಯುತ್ತದೆ, ಭಾಷಾ ಜ್ಞಾನ ವಿಸ್ತಾರಗೊಳ್ಳುತ್ತದೆ. ಆದರೆ ಅದನ್ನೇ ಬೇರೆ ಭಾಷೆಗಳಲ್ಲಿ ನೋಡಿದಾಗ ಆ ಬೇರೆ ಭಾಷೆ ಬೆಳೆಯುತ್ತದೆಯೇ ಹೊರತು ಕನ್ನಡವಲ್ಲ. ಕನ್ನಡ ನಿಧಾನವಾಗಿ ಮರೆಗೆ ಸರಿಯಲಾರಂಬಿಸುತ್ತದೆ  . ಈಗ ಅದೆಷ್ಟೋ ಉಪಯುಕ್ತ ಚಾನಲ್ ಗಳಾದ  ಹಿಸ್ಟರಿ, ಡಿಸ್ಕಾವರಿ, ನ್ಯಾಷನಲ್ ಜಿಯೋಗ್ರಾಫಿ  ಮುಂತಾದವುಗಳು ಭಾರತದ ಹೆಚ್ಚಿನ ಭಾಷೆಗಳಲ್ಲಿ ಡಬ್ ಗೊಂಡಿವೆ. ಆದರೆ ಕನ್ನಡದಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡಿಲ್ಲ. ಮೊದಲೆಲ್ಲ ಮಕ್ಕಳಿಗೆ ಮನೆಯಲ್ಲಿ ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು.  ಆದರೆ ಈಗಿನ ಜೀವನ ಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಮಕ್ಕಳಿಗೆ ರಾಮಾಯಣ-ಮಹಾಭಾರತದ ಕಾರ್ಟೂನ್ ಗಳ DVD  ಗಳನ್ನು ತಂದುಕೊಡುತ್ತೇವೆ. ಅದು ಹಿಂದಿ ಆದಿಯಾಗಿ ಇಂಗ್ಲಿಷ್, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಲ್ಲಿ ದೊರೆಯುವುದಿಲ್ಲ. ಅದೇ ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ಕೊಟ್ಟಿದ್ದರೆ ಅದೇ ಮಗು ಕಾರ್ಟೂನ್ ಗಳನ್ನು ಕನ್ನಡದಲ್ಲೇ ನೋಡುತ್ತಿತ್ತು. ಕನ್ನಡದಲ್ಲೇ ಕಾರ್ಟೂನ್ ನೋಡುವುದರಿಂದ ಆ ಮಗು ಎಷ್ಟು ಚೆನ್ನಾಗಿ ಕನ್ನಡ ಕಲಿಯುತಿತ್ತು ಅಲ್ಲವೇ.. ಮಗುವೂ ಬೆಳೆಯುತ್ತಿತ್ತು ಜೊತೆಗೆ ಕನ್ನಡವೂ..

ಇದೆಲ್ಲ ಒಂದು ನೂರು ಜನರ ಗುಂಪು ಕಟ್ಟಿಕೊಂಡು ಬೆದರಿಸುವ ಶಿವಣ್ಣ ನಿಗೆ ಅರ್ಥವಾಗುತ್ತದೆಯೇ? ಡಬ್ಬಿಂಗ್ ಬೇಕು ಎನ್ನುವವರು ಕನ್ನಡಿಗರಲ್ಲ ಎಂಬಂತೆ ಮಾತನಾಡುವ ಶಿವಣ್ಣ ಕನ್ನಡಿಗನೇ? ಕನ್ನಡಿಗರ ಕನ್ನಡತನವನ್ನು ಪ್ರಶ್ನಿಸಲು ಶಿವಣ್ಣ ಯಾರು? ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಗಾಲಿಡುವ ಪ್ರಯತ್ನದಲ್ಲಿರುವ ಇವರುಗಳು ಒಂದರ್ಥದಲ್ಲಿ ಕನ್ನಡಿಗರೇ ಅಲ್ಲ... ತಮ್ಮ ಸ್ವಾರ್ಥ ಸಾಧನೆಗಾಗಿ ಆಂದೋಲನ ಚಳುವಳಿ ಮಾಡುವ ಶಿವಣ್ಣ ಟೀಂ ಗೆ ನಿಜವಾದ ಕನ್ನಡಿಗರು (ಡಬ್ಬಿಂಗ್ ಪರ) ಸೆಟೆದು ನಿಂತರೆ ಇಲ್ಲಿ ನಿಲ್ಲಲೂ ಸಾಧ್ಯವಾಗದು ಎಂಬುದರ ಅರಿವಾಗಬೇಕು..  ಕನ್ನಡ ಚಿತ್ರರಂಗವೊಂದನ್ನು ಬಿಟ್ಟು ಎಲ್ಲ ಕನ್ನಡ ಸಂಘಟನೆಗಳ ಸಹಿತ ಇಡೀ ಕರುನಾಡಿಗೆ ಕರುನಾಡೆ  ಡಬ್ಬಿಂಗ್ ಬೆಂಬಲಿಸುತ್ತಿರುವಾಗ ಶಿವಣ್ಣ ಟೀಮ್ ನ ಅಪ್ರಜಾಸಾತ್ಮಕ ಹೋರಾಟ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವ್ಯರ್ಥವಾಗುವುದು ಖಂಡಿತ..


ಜೈ ಭುವನೇಶ್ವರಿ..


Friday, March 23, 2012

ಒಲವ ಅಮಲಿನಲಿ...


ಏನಾಗಿದೆ ಇಂದು ನನಗೇನಾಗಿದೆ ಇಂದು 
ಏನೋ ನಾನರಿಯೆ ಯಾಕೋ ನಾ ತಿಳಿಯೆ
ಬಾನ ಮುಗಿಲಲ್ಲಿ ತೇಲಂಗಾಯ್ತಲ್ಲೇ...

ನಿನ್ನ ಆ ಕಣ್ಣೋಳಪು  ಮೊಗದ ಆ ಸಿಹಿಗಂಪು
ಸೇರಿ ಅದು ಯಾಕೋ ಅಮಲೇರಿತಲ್ಲೇ 
ನಿನ್ನ ಹೃದಯದ ಮಿಡಿತ ನನ್ನ ಹೃದಯವ ಮೀಟಿ
ನನಗರಿಯದೇ ಒಲವ ದೀಪ ಹಚ್ಚಿತಲ್ಲೇ...

ಈ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಕೈ ಸ್ಪರ್ಶ
ಎದೆಯಾಳದ ತುಂಬಾ ಬಿಸಿ ಭಾವ ತಂದಿತಲ್ಲೇ
ಅದು ಯಾಕೋ ಅದು ಯಾಕೋ ನಿನ್ನ ತುಟಿಯ ಸಿಹಿಜೇನು
ನನ್ನ ತುಟಿಗೆ ತಾಗಿ ನಾ ಮೈ ಮರೆಯೊಂಗಾಯ್ತಲ್ಲೇ... ನೆನಪಾಗದಿರು ಓ ನೆನಪೇ...


ನೀ ಒಂದು ಮುಗಿಯದ ಅಧ್ಯಾಯ
ನನ್ನ  ನೆನಪಿನ ಪುಟಗಳಲಿ 
ತಿರುವಿ ತಿರುವಿ ಹಾಕಿದರೂ ಮತ್ತದೇ ತಿರುವಿನ ನೆನಪು
ಮರೆವೆನೆಂದರೂ ಮರೆಯಲಾಗದೆ ತಿರು ತಿರುಗೋ ನೆನಪು
ಹೇಗೆ ಮರೆಯಲಿ ನಾ ಮರೆಯದ ನೆನಪ...

ನೆನಪಿದು ಕೊಲ್ಲುತಿಹುದು, ಅಳಿಸುತಿಹುದು
ಇದು ಕೊಲೆಪಾತಕ ಉಗ್ರ ನೆನಪು
ಮರೆವೆನೆಂದರೂ ಮರೆಯಲಾಗದೆ
ಕಾಡಿಸುವ ಕಹಿ ನೆನಪು..

ನೆನಪಾಗದಿರು ಓ ನೆನಪೇ
ಬೇಡ ಎನಗೆ ಸಂಕಟದ ನೆನಪು 
ಸುಂಕ ನೀಡುವೆ ನಿನಗೆ ಮತ್ತೆ ಬರದಿರು ನೆನಪೇ
ನೆನಪಿನ ಪುಟಗಳಲಿ ಮತ್ತೆ ನೆನಪಾಗಿ..

ನೀ ಒಂದು ಮುಗಿಯದ ಅಧ್ಯಾಯ
ನನ್ನ  ನೆನಪಿನ ಪುಟಗಳಲಿ ...


Tuesday, February 28, 2012

ಧರೆಗಿಳಿದ ಹುಣ್ಣಿಮೆಯೇ...


ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

ಅಗೋ ಹುಣ್ಣಿಮೆಯು ಕಳೆದು ಹೋಗಿದೆಯೆಂದು
ಚಂದಿರ ದೂರಿತ್ತಿಹ
ಅದು ಎಲ್ಲಿ ಎಂದು ಹುಡುಕಿ ಹೋಗಲು
ಅದು ನೀನೆ ಅಂದಿಹ
ಹುಣ್ಣಿಮೆಯ ರೂಪದವಳೇ, ಚೆಲುವಿನ ಸಿರಿಯಿವಳೇ
ಅಂದ ಅಂದ ಅಂದ ಅಂದಗಾತಿಯೇ...

ನೇಸರನ ಕಾಂತಿಗಿಂತ ನಿನ್ನ ಕಣ್ಣ ಕಾಂತಿಯೇ ಅಂದ
ಆ ಸಪ್ತ ಸ್ವರಗಳಿಗಿಂತ ನಿನ್ನ ಕಂಠ ಸ್ವರವೇ ಚಂದ
ಉಪಮೆಯಿಲ್ಲದ ಚೆಲುವೇ, ತಿದ್ದಿ ತೀಡಿದ ಬೊಂಬೆಯೇ
ಅಂದ ಅಂದ ಅಂದ ಅಂದಗಾತಿಯೇ...

ನಾ ಕಳೆದುಹೋಗಿಹೆನು ನಿನ್ನ ಚೆಲುವಿನಲೆಯಲ್ಲಿ 
ನಿನ್ನ ಕಾಲ್ಗೆಜ್ಜೆ ದನಿಗೆ ನಾ ಮರುಳಾಗಿ ಹೋಗಿ
ಒಲವ ಮೆರವಣಿಗೆಗೆ ಶುರುವಿಟ್ಟುಕೊಂಡಿಹೆನು 
ನನ್ನೊಲವ ಪ್ರಾಣವೇ, ನೀನೆಂದು ನನ್ನವಳೇ  
ಅಂದ ಅಂದ ಅಂದ ಅಂದಗಾತಿಯೇ..

ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

Sunday, February 5, 2012

ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..

(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ. 

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.

ಈ ಹಿಂದೆ 
ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?

ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..! 

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು. 

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!


Saturday, February 4, 2012

ನಿರ್ಭಾವುಕ ಹೃದಯದಲ್ಲಿ...


ಕರಿಮುಗಿಲ ಬಾನಿನಲ್ಲಿ ಮಿಂಚೊಂದು ಹಾದು ಹೋದಂತೆ
ಈ ಬಾಳ ಹಾದಿಯಲ್ಲಿ ಒಲವೊಂದು ಸುಳಿದು ಹೋಗಿ
ಕಣ್ಣಾಮುಚ್ಚಾಲೆಯಾಟ ಆಡುತ್ತಿದೆಯಲ್ಲ..

ಅಂಧಕಾರದ ಅಡವಿಯಲ್ಲಿ ಅಂಧನಾಗಿ ಸಾಗುತ್ತಿರಲು 
ಕಣ್ಣ ನೀಡಿ ಕಿತ್ತು ಕೊಂಡರೆ ತಿರುಗಿ ಸಾಗಲಿ ಹೇಗೆ..
ನಿರ್ಭಾವುಕ ಹೃದಯದಲ್ಲಿ ಭಾವನೆಗಳ ಬೆಳೆಸಿ ಹೋದರೆ
ಬಂಧವಿಲ್ಲದೆ ಭಾವನೆಗಳು ಅಸುನೀಗದೇ...

ಪ್ರೀತಿ ಕಾಣದ ಬದುಕಿನಲ್ಲಿ ಪ್ರೀತಿ ಬಿತ್ತಿ ದೂರ ಹೋದರೆ
ಒಂಟಿ ಪ್ರೀತಿಯ ಜಂಟಿ ಮಾಡಲು ಮತ್ತೆ ಹೆಣಗಲಿ ಹೇಗೆ..
ಒಲವ ಪಾಠವ
ಹೇಳಿಕೊಟ್ಟು ಮರೆವ ಪಾಠವ ಮರೆತೇ ಹೋದರೆ
ಒಲವ ವ್ಯೂಹದಿ ಸಿಲುಕಿ ಹೃದಯ ಅಸ್ತಮಿಸದೇ...Thursday, February 2, 2012

ಏನ್ ಗುರು ರಾಜಕೀಯನಾ?


ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ. 

ಲೇಖನ ಆರಂಭದಲ್ಲಿ ಆರೆಸ್ಸೆಸ್ಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.!

ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.


ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು. ಕನ್ನಡ ಹಾಗು ಸಂಸ್ಕೃತದ ಸಂಬಂಧದ ಬಗ್ಗೆ ಹೇಳುವುದಾದರೆ, ಕನ್ನಡದ ಎಲ್ಲಾ ಪ್ರಾಚೀನ ಸಾಹಿತ್ಯಗಳು ಸಂಸ್ಕೃತ ಪಠ್ಯಗಳ ಪ್ರಭಾವದಿಂದಲೇ ರಚಿಸಲ್ಪಟ್ಟವುಗಳಾಗಿವೆ. ಇದೇ ಕಾರಣಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡುತ್ತಿತ್ತು. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ಹೊರತು ಪಡಿಸಿ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳು ಸಂಸ್ಕೃತ ಪ್ರಭಾವದಿಂದ ಹುಟ್ಟಿದವು. ಅದುದರಿಂದ ಸ್ವೋಪಜ್ಞತೆಯ ದೃಷ್ಟಿಯಿಂದ ಕನ್ನಡದ ಸಾಹಿತ್ಯ ಪ್ರಕಾರಗಳು ಕಡಿಮೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸಿತ್ತು. ಅದೃಷ್ಟವಶಾತ್ ಕನ್ನಡದ ಚಿಂತಕ ಮನಸ್ಸುಗಳ ಒತ್ತಾಯದಿಂದ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ವಿಶೇಷವೆಂದರೆ ಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದ ಹಾಗೆ ಪಿರ್ಯಾದೆ ಮಾಡಿದ್ದು ನಮ್ಮದೇ ದ್ರಾವಿಡ ಗಾಂಧಿ ಎಂಬ ವ್ಯಕ್ತಿ. ಇನ್ನು  ಗುರೂಜಿಯವರ ನಿರ್ಧಾರಗಳು, ಯೋಜನೆಗಳು ಯಾವುದೂ ಬಾಲಿಶವಾಗಿರಲಿಲ್ಲ ಅಥವಾ ಪ್ರಾಂತೀಯ ವಿರೋಧಿಯಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಅವರು ಸಮರ್ಥರಾಗಿದ್ದರು.
ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚಾಡುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?

ಸಂಘದ ಧರ್ಮ ದೃಷ್ಟಿಯ ಬಗ್ಗೆ ಹೇಳುತ್ತಾ ಗುರೂಜಿಯವರನ್ನು ತಪ್ಪಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಭಾಷೆಯ ರಕ್ಷಣೆಗಾಗಿ ಇರುವ ಬನವಾಸಿ ಬಳಗ ಇಲ್ಲಿ ಧರ್ಮ, ರಾಜಕೀಯದ ವಿಷಯಗಳನ್ನು ಯಾಕೆ ಎತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದು ಕೇವಲ ಆರೆಸ್ಸೆಸ್ ಅನ್ನು ನಿಂದಿಸಲೇಬೇಕೆಂಬ ಮನೋಭಾವದಿಂದ ಬರೆದಿರುವಂತಿದೆ. ಕ್ರಿಶ್ಚಿಯನ್ನರ ಮತಾಂತರ, ಇಸ್ಲಾಮಿಗರ ಭಯೋತ್ಪಾದನೆ, ಕಮ್ಯುನಿಷ್ಟರ ಅಭಿವೃದ್ದಿ ಕಾಣದ ಆಡಳಿತ, ಇವರೆಲ್ಲರುಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲಾಗುತ್ತಿರುವ ಆಕ್ರಮಣಗಳನ್ನು ಕಣ್ಣಾರೆ ನೋಡಿಯೇ ಗುರೂಜಿಯವರು ಇವುಗಳನ್ನು ರಾಷ್ಟ್ರದ ಆಪತ್ತುಗಳೆಂದು ಉಲ್ಲೇಖಿಸಿದ್ದರು. ಇಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಮೇಲಿನ ಗುರೂಜಿಯವರ ಕಾಳಜಿ ಎದ್ದು ಕಾಣುತ್ತದೆಯೇ ಹೊರತು ಧರ್ಮ ನಿಂದನೆಯಲ್ಲ.

ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ. ಅದೇ ರೀತಿ ಬಿಜೆಪಿಗೆ ಬೇರೆಯೇ ಆದ ಪದಾಧಿಕಾರಿಗಳು, ಸಮಿತಿಗಳಿವೆ. ಕೆಲ ಕ್ಲಿಷ್ಟ ಸಂದರ್ಭಗಳಲ್ಲಿ ಬಿಜೆಪಿ, ಆರೆಸ್ಸೆಸ್ಸಿನ ಕೆಲ ಹಿರಿಯರ ಸಲಹೆ ಕೇಳಿರಬಹುದು. ಬಿಜೆಪಿಯ ಹೆಚ್ಚಿನವರು ಆರೆಸ್ಸೆಸ್ಸ್ ಮೂಲದವರಾದ್ದರಿಂದ ಸಲಹೆಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೇನೂ ವಿಶೇಷ ಕಂಡು ಬರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ ಪಡೆಯಲು ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ನೀವು ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ಅಸ್ತ್ರಗಳಾದ ‘ಕೋಮು ಸೌಹಾರ್ದ ಕಾಯಿದೆ’, ಹಿಂದುಳಿದ ವರ್ಗಗಳಲ್ಲಿ ಕೋಟಾದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿಗಳಂತಹ ದೊಡ್ಡ ದೊಡ್ಡ ವಿಷಯಗಳನ್ನೇ ಮುಚ್ಚಿಟ್ಟಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತಿದೆ.! ನೀವು ಬರೆದ ಲೇಖನದ ಕೊನೆಯ ಪ್ಯಾರಕ್ಕೂ ಉಳಿದ ಭಾಗಕ್ಕೂ ಯಾವುದೇ ಸಂಬಂಧ ಕಂಡು ಬರುವುದಿಲ್ಲ. ಅದು ಕೇವಲ ಬಿಜೆಪಿ, ಆರೆಸ್ಸೆಸ್ಸ್ ಅನ್ನು ಜರಿಯಲೆಂದೇ ಸೃಷ್ಟಿಸಿದಂತಿದೆ.

ಇಷ್ಟೆಲ್ಲ ಹೇಳಿದ ಮೇಲೆ ತಮ್ಮ ಲೇಖನಕ್ಕೆ ಕಾರಣವಾದ ಹುಬ್ಬಳಿ ಆರೆಸೆಸ್ಸ್ ಸಮಾವೇಶದ ವಿಷಯಕ್ಕೆ ಬರೋಣ. ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ. ಆಯಾ ಪ್ರಾಂತ್ಯಭಾಷೆಗಳು ಎಷ್ಟು ಮುಖ್ಯ ಎಂಬುದು ತಿಳಿಯದೇ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಆರೆಸೆಸ್ಸ್ ನಾಯಕರುಗಳಿಗೆ ತಿಳಿಯದೇ ಇರುತ್ತದೆಯೇ?

ರಾಜಕೀಯ ಮಾಡಬೇಕೆಂದಾದಲ್ಲಿ ನೇರವಾಗಿ ಮಾಡಬಹುದು. ಧರ್ಮದ ಹೆಸರಿನಲ್ಲಿ ಆರೆಸ್ಸೆಸ್ ರಾಜಕೀಯ ಮಾಡುತ್ತಿದೆ ಎಂದು ಹೇಳುವ ಲೇಖನವು ಭಾಷೆಯೆಂಬ ಸಂಗತಿಯನ್ನು ಇಟ್ಟುಕೊಂಡು ತಾನು ಮಾಡುತ್ತಿರುವ ರಾಜಕೀಯವನ್ನು ಮರೆಮಾಚುತ್ತದೆ.
(ಈ ಲೇಖನ ಬರೆಯಲು ಪ್ರೇರೇಪಿಸಿದ ಗೆಳೆಯ ಸಾತ್ವಿಕ್ ಅವರಿಗೆ ಪ್ರೀತಿ ತುಂಬಿದ ಕೃತಜ್ಞತೆಗಳು)

Sunday, January 22, 2012

ಅವರು ನಿಷ್ಕ್ರಿಯರ 'ಗಾಂಧಿ' ಆಗಿರಲಿಲ್ಲ.. ಕ್ರೀಯಾಶೀಲರ 'ನೇತಾಜಿ' ಆಗಿದ್ದರು...
ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸವನ್ನು ಹೇಳ ಹೊರಟರೆ ಅದು ಇಂದು ನಾಳೆಗೆ ಮುಗಿಯುವಂತದ್ದಲ್ಲ.. ಆ ಪ್ರವಾಹೋಪಾದಿಯ ಘಟನೆಗಳೇ ಹಲವು ಕೋಟಿ ಪುಟಗಳ ಮಹಾ ಗ್ರಂಥವಾದೀತು.! ಆ ಸಮಯದಲ್ಲಿ ಭಾರತ ಮಾತೆಯ ಬಿಡುಗಡೆಗಾಗಿ ಹೋರಾಡಿದ ಮಹಾನ್  ನಾಯಕರುಗಳೆಷ್ಟೋ, ಹೋರಾಟಗಾರರೆಷ್ಟೋ.. ಅಂತಹ ಹಲವರ ಮದ್ಯೆ ಭಿನ್ನವಾಗಿ ನಿಲ್ಲುವ, ಅಹಿಂಸಾವಾದವನ್ನು ಬಹಿರಂಗವಾಗಿ ವಿರೋಧಿಸಿದ, ಭಗವದ್ಗೀತೆಯ ತಿರುಳಾದ ದುಷ್ಟದಮನ ಶಿಷ್ಟಪಾಲನವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದ ಧೀಮಂತ ನಾಯಕ, ಕ್ರಾಂತಿ ಪುರುಷ ನೇತಾಜಿ ಸುಭಾಶ್ ಚಂದ್ರ ಬೋಸ್ ರ ಜನ್ಮ ದಿನವಿಂದು (ಜನವರಿ 23). 
ನೇತಾಜಿಯವರ ಹೋರಾಟದ ದಿನಗಳು ರಾಷ್ಟ್ರೀಯ ಕಾಂಗ್ರೆಸ್ ನಿಂದ ಆರಂಭವಾಯಿತು. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. ಆದರೆ ಗಾಂಧೀಜಿ ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ತಮ್ಮ ನಾಯಕತ್ವದ ಚಳುವಳಿಗಳಲ್ಲಿ  ಎಲ್ಲಾದರೂ ಹಿಂಸಾ ಘಟನೆಗಳು ನಡೆದರೆ ಅದನ್ನು ವಿರೋಧಿಸುತ್ತಿದ್ದರು. ಯಾಕೆಂದರೆ ಬ್ರಿಟಿಷರಿಗೆ ನೋವಾಗುವುದು ಗಾಂಧೀಜಿಯವರಿಗೆ ಇಷ್ಟವಿರಲಿಲ್ಲ. !!!! ಗಾಂಧೀಜಿಯವರ ಪ್ರತಿಯೊಂದು ಚಳುವಳಿಗಳಲ್ಲೂ ಇದು ಎದ್ದು ಕಾಣುತ್ತದೆ.! ಇದು ಬಿಸಿ ರಕ್ತದ ಯುವಕ ಸುಭಾಷ್ ಚಂದ್ರ ಬೋಸ್ ರಿಗೆ ಸಹ್ಯವಾಗಲಿಲ್ಲ. ಅದನೆಲ್ಲ ಒಪ್ಪಿಕೊಳ್ಳಲು ಅವರು ಗಾಂಧಿಯಾಗಿರಲಿಲ್ಲ..! ಅವರು ಸುಭಾಶ್ ಚಂದ್ರ ಬೋಸ್ ಆಗಿದ್ದರು..! ಕ್ರಾಂತಿ ಕ್ರಾಂತಿ ಎಂದು ಜಪಿಸುತಿದ್ದ ನೇತಾಜಿಯವರ ಮನಸ್ಸು ಈ ಗಾಂಧಿಯ ಶಿಖಂಡಿತನವನ್ನು ಒಪ್ಪಿಕೊಳ್ಳುವುದಾದರೂ ಹೇಗೆ..?! ಮುಂದೆ ಕಾಂಗ್ರೆಸ್ಸಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದರೂ ಗಾಂಧೀಜಿ ಸುಭಾಷರ ಜಯವನ್ನು ಒಪ್ಪದ ಕಾರಣ ಹಾಗು ತನ್ನ ಮನಸ್ಸಿಗೆ ವಿರುದ್ಧವಾದ ಭಾವನೆ ಹೊಂದಿರುವ ಗಾಂಧೀಜಿಯೊಡನೆ ಮುಂದುವರಿಯಲು ಸಾಧ್ಯವಾಗದ ಕಾರಣ ನೇತಾಜಿ ಕಾಂಗ್ರೆಸ್ ನಿಂದ ಅನಿವಾರ್ಯವಾಗಿ ಹೊರಬಂದರು. ಅಲ್ಲಿಂದ ಸುಭಾಷರ ಕ್ರಾಂತಿಯ ಜೀವನ ಆರಂಭವಾಯಿತು. ಜೊತೆಗೆ ಭಾರತದ ಕ್ರಾಂತಿಯ ಪುಟಕ್ಕೆ ಹೊಸ ತಿರುವು ಕೂಡ..!

ಸುಭಾಷ್ ಚಂದ್ರ ಬೋಸರು ಅಪ್ರತಿಮ ದೇಶಭಕ್ತರಾಗಿದ್ದರು. ಸದಾ ಕ್ರಾಂತಿಗಾಗಿ ಬಯಸುತ್ತಿದ್ದರು. ನಿಷ್ಕ್ರಿಯತೆಯನ್ನು ಸಹಿಸುತ್ತಿರಲಿಲ್ಲ. ಮಹಾ ಜ್ಞಾನಿಗಳಾಗಿದ್ದರು. ಯಾವುದೇ ವಿಷಯವಿರಲಿ ಅಳೆದು ತೂಗಿ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಅವರಲ್ಲಿತ್ತು. ಆದರೆ ಗಾಂಧೀಜಿ ಇದಕ್ಕೆ ತದ್ವಿರುದ್ದರಾಗಿದ್ದರು. ಗಾಂಧೀಜಿಯ ಅಹಿಂಸಾವಾದ ಭಾರತೀಯರನ್ನು ನಿಷ್ಕ್ರಿಯರನ್ನಾಗಿ, ನಿರ್ವೀರ್ಯರನ್ನಾಗಿ, ಸೋಮಾರಿಗಳನ್ನಾಗಿ ಮಾಡಿತ್ತು.! ಗಾಂಧಿ ತಮ್ಮ ತತ್ವವನ್ನು ಜನರ ಮೇಲೆ ಸತ್ಯಾಗ್ರಹಗಳೆಂಬ ಮಾನಸಿಕ ಬಲ ಪ್ರಯೋಗಗಳ ಮೂಲಕ ಹೇರುತ್ತಿದ್ದರು. ತನ್ನ ತತ್ವವನ್ನು ಒಪ್ಪದವರನ್ನು ತನ್ನ ಗುಂಪಿನಿಂದ ಹೊರಗಿಡುತ್ತಿದ್ದರು. ಅಷ್ಟೇ ಅಲ್ಲದೆ ಅಂತಹವರನ್ನು ದೇಶವಿರೋಧಿಗಳಂತೆ ನಡೆಸಿಕೊಳ್ಳುತ್ತಿದ್ದರು. ಒಂದರ್ಥದಲ್ಲಿ ಗಾಂಧೀಜಿ ಸೋಮಾರಿಗಳ ನಾಯಕರಾಗಿದ್ದರೆ, ಸುಭಾಷ್ ಚಂದ್ರ ಬೋಸರು ಕ್ರಾಂತಿಕಾರಿಗಳ, ಉತ್ಸಾಹದ ಚಿಲುಮೆಗಳ, ಬಿಸಿ ರಕ್ತದ ಯುವ ಜನತೆಯ, ಸದಾ ಕ್ರೀಯಾಶೀಲರಾಗಿರುವವರ, ಅಪ್ರತಿಮ ದೇಶ ಭಕ್ತ ಬಂಧುಗಳ ನಾಯಕರಾಗಿದ್ದರು.
ನೇತಾಜಿಯವರು ಉಳಿದೆಲ್ಲ ನಾಯಕರುಗಳಿಗಿಂತ ಶ್ರೇಷ್ಠರಾಗಿ ಕಾಣುವುದು ಅವರ ಕ್ರೀಯಾಶೀಲತೆಗೆ. ನೇತಾಜಿ ಸುಭಾಷ್ ಚಂದ್ರ ಬೋಸರು ಕಟ್ಟಿದ 'ವಿದೇಶದಲ್ಲಿ ಸಂಘಟನೆಗೊಂಡ ಭಾರತದ ಮೊದಲ ಸೈನ್ಯ' ಎಂಬ ಹೆಗ್ಗಳಿಕೆ ಹೊಂದಿದ ( INA ) ಇಂಡಿಯನ್ ನ್ಯಾಷನಲ್ ಆರ್ಮಿಯ ಸ್ಥಾಪನೆಗಾಗಿ ನೇತಾಜಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಇಟಲಿ. ಜಪಾನ್, ಜರ್ಮನ್, ರಷ್ಯ ಗಳಲ್ಲಿ ಸುತ್ತಾಡಿ ಆ ದೇಶಗಳ ಸಹಾಯ ಕೋರಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ವೀರರ ಯುವ ಸೈನ್ಯವನ್ನು ಹುಟ್ಟುಹಾಕಿದರು. ದುರ್ದೈವವಶಾತ್ ನೇತಾಜಿಯವರು 1945 ರ ವಿಮಾನ ಅವಘಡದಲ್ಲಿ ಕೊನೆಯುಸಿರೆಳೆಯದಿದ್ದರೆ(ಇನ್ನೂ ಶಂಕಾಸ್ಪದವಾಗಿಯೇ ಉಳಿದಿದೆ) ಹಾಗು 1945 ರ ವಿಶ್ವ ಮಹಾ ಯುದ್ಧದಲ್ಲಿ ಜಪಾನ್ ಇಟಲಿ ಜರ್ಮನ್ ರಾಷ್ಟ್ರಗಳು ಸೋತುಹೋಗದಿದ್ದರೆ ಬಹುಶಃ INA ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಭಾರತವನ್ನು 1947 ರ ಮುಂಚೆಯೇ ಸ್ವತಂತ್ರ ಗೊಳಿಸುತ್ತಿತ್ತೇನೋ..

ಇಂತಹ ಧೀಮಂತ ರಾಷ್ಟ್ರ ಪುರುಷ ನೇತಾಜಿಗೆ ಪ್ರೇರಣೆಯಾದವರದ್ದೇ ಒಂದು ತೂಕವಿದೆ. ಸುಭಾಷರು ಮಹಾಯೋಗಿ ವಿವೇಕಾನಂದರ ಭೋಧನೆಗಳಿಂದ ಪ್ರೆರಿತರಾಗಿದ್ದರು. ಹಿರಿಯ ಮುತ್ಸದ್ದಿ ಅರವಿಂದ ಘೋಷರ ಬರಹಗಳನ್ನು ತಪ್ಪದೆ ಓದುತ್ತಿದ್ದರು. ದೇಶಬಂಧು ಚಿತ್ತರಂಜನ್ ದಾಸ್ ನೇತಾಜಿಯವರ ರಾಜಕೀಯ ಗುರುಗಳಾಗಿದ್ದರು. ಇಟಲಿಯ ದೇಶಭಕ್ತ ಕ್ರಾಂತಿಕಾರಿ ಜೋಸೆಫ್ ಮೆಟೆನ್ಸಿಯ ಸಂಘಟನಾ ಚತುರತೆಯಿಂದ ಆಕರ್ಷಿತರಾಗಿದ್ದರು. ಕ್ರೂರ ಆಡಳಿತಗಾರ ಎಂದು ಕರೆಸಿಕೊಂಡ ಹಿಟ್ಲರ್ ನೊಂದಿಗೆ ನೇತಾಜಿಗೆ ಆತ್ಮೀಯ ಭಾಂಧವ್ಯವಿತ್ತು. ಶ್ರೀ ಕೃಷ್ಣ ಭೋದಧಿಸಿದ ಭಗವದ್ಗೀತೆಯ ಪ್ರಮುಖ ಸಾಲುಗಳನ್ನು ಯಾವಾಗಲೂ ಮನನ ಮಾಡಿಕೊಳ್ಳುತ್ತಿದ್ದರು. ಇವರೆಲ್ಲರ ಆದರ್ಶಗಳನ್ನು ಸ್ವತಃ ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ಅಳವಡಿಸಿಕೊಂಡಿದ್ದರು ಕೂಡ. ಇದೇ ಕಾರಣಕ್ಕೆ ಸುಭಾಷ್ ಚಂದ್ರ ಬೋಸ್ ಉಳಿದೆಲ್ಲ ಸ್ವಾತಂತ್ರ ಹೋರಾಟಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಎಲ್ಲರಿಂದಲೂ 'ನೇತಾಜಿ' ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಸುಭಾಷ್ ಚಂದ್ರ ಬೋಸರನ್ನು ಗಾಂಧೀ-ನೆಹರು ಹಾಗು ಅವರ ಹಿಂಬಾಲಕ ಕಾಂಗ್ರೆಸ್ ನಾಯಕರುಗಳು ಹೊರಗಿಡಲು ಯತ್ನಿಸಿದರು. ಅವರುಗಳಿಗೆ ನೇತಾಜಿಯವರ ಕ್ರೀಯಾಶೀಲತೆ ಹಿಡಿಸಿಲ್ಲವೇನೋ ಅಥವಾ ರಾಜಕೀಯ ಮತ್ಸರವೋ.! ಆದರೆ ಒಂದಂತೂ ಸತ್ಯ. ನಿಷ್ಕ್ರಿಯ ಹಾಗು ಪರಮ ಸ್ವಾರ್ಥಿಗಳಾದ ಗಾಂಧೀಜಿ-ನೆಹರುಗಳಿಗಿಂತ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವ ಯಾವಾಗಲೂ ಎತ್ತರದ ಸ್ಥಾನದಲ್ಲಿ ಕಂಡುಬರುತ್ತದೆ. ಮಹಾತ್ಮರಲ್ಲದವರನ್ನು ಮಹಾತ್ಮ ಎಂದು ಸ್ಮರಿಸುವ ಬದಲು ಮಹಾತ್ಮ ಎಂದು ಕರೆಸಿಕೊಳ್ಳಲು ಅರ್ಹರಾಗಿರುವ 'ನೇತಾಜಿ'ಯಂತವರನ್ನು ಸ್ಮರಿಸೋಣ..!
ಕ್ರೀಯಾಶೀಲರಾಗಿ.................. ನಿಷ್ಕ್ರಿಯರಾಗದಿರಿ..................!