Saturday, May 26, 2012

ಕನ್ನಡ ಭಾಷೆ ಮತ್ತು ಡಬ್ಬಿಂಗ್

ರಿಯಾಲಿಟಿ ಶೋಗಳೆಂದರೆ ಯಾವುದೋ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಕಾಲಹರಣ, ತುಂಡುಡುಗೆಯ ಮಾನಿನಿಯರ ಮೇಲಾಟ, ಅನೈತಿಕ ವಿಷಯಗಳ ಬಗ್ಗೆ ಚರ್ಚೆ, ಹುಚ್ಚು ಕುಣಿತ, ತುಸು ಮನೋರಂಜನೆ.. ಬರೀ ಇಂತಹ ಅಭಿಪ್ರಾಯಗಳೇ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಈ ಕಾಲದಲ್ಲಿ ಎಲ್ಲ ರಿಯಾಲಿಟಿ ಶೋ ಗಳಿಗಿಂತ ಭಿನ್ನವಾಗಿ ಕಾಣುವಂತಹುದು ಹಿಂದಿಯ ಸ್ಟಾರ್ ಪ್ಲಾಸ್ ನಲ್ಲಿ ಪ್ರಸಾರವಾಗುವ 'ಸತ್ಯಮೇವ ಜಯತೇ'..

'ಸತ್ಯಮೇವ ಜಯತೇ' ರಾಷ್ಟ್ರದ ಜ್ವಲಂತ ಸಮಸ್ಯೆಗಳನ್ನು, ಅಮಾನವೀಯ ಘಟನಾವಳಿಗಳನ್ನು, ಸಮಾಜದಲ್ಲಿ ಕಂಡೂ ಕಾಣದಂತಿರುವ ಪಿಡುಗುಗಳನ್ನು ನೇರವಾಗಿ ಜನರಿಗೆ ತೋರಿಸುತ್ತಾ ಜನರಲ್ಲಿ ಅರಿವನ್ನು ಮೂಡಿಸುತ್ತಿರುವ ಒಂದು ಪ್ರಶಂಶನೀಯ ಕಾರ್ಯಕ್ರಮ. ಇದನ್ನು ನಡೆಸಿಕೊಡುತ್ತಿರುವವರು ಹಿಂದಿಯ ಹೆಸರಾಂತ ನಟ ಅಮೀರ್ ಖಾನ್.. ಅಮೀರ್, ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರುವ ಮುಸ್ಲಿಂ ಮೂಲಭೂತವಾದಿ ಶಾರುಖ್ ಖಾನ್ ಹಾಗು ಇತರೆ ಖಾನ್ ಗಳನ್ತಲ್ಲ.. ಸದಾ ದೇಶ ಜಾಗೃತಿಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾ ದೇಶ ಸೇವೆಗೈಯುತ್ತಿರುವ ಅಮೀರ್ ನ ವ್ಯಕ್ತಿತ್ವ ನಿಜಕ್ಕೂ ಇತರ ಖಾನ್ ಗಳಿಗೆ ಮಾದರಿಯಾಗುವಂತಹುದು...

ಇದೇ ಅಮೀರ್ ನ ಸತ್ಯಮೇವ ಜಯತೇ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ ಆಗಿರುವುದು, ಕನ್ನಡದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಕನ್ನಡಿಗರಿಗೆ ಸತ್ಯಮೇವ ಜಯತೆಯ  ಕನ್ನಡ ರೂಪಾಂತರವನ್ನು ನೋಡಲು ಸಾಧ್ಯವಾಗದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.. ಇಂತಹ ಒಂದು ಜನ ಜಾಗೃತಿಯ ಕಾರ್ಯಕ್ರಮ ದೇಶದ ಮೂಲೆ ಮೂಲೆಗೂ ಅವರದೇ ಭಾಷೆಯಲ್ಲಿ ತಲುಪಬೇಕೆಂಬ ಅಮೀರ್ ನ ಆಸೆ ಕರ್ನಾಟಕದ ಮಟ್ಟಿಗೆ ನೆರವೇರಲಿಲ್ಲ..  ಇಲ್ಲಿನ ಕಿರುತೆರೆ, ಚಿತ್ರರಂಗದ ಸಂಘ ಸಂಸ್ಥೆ ಗಳು, ಕಲಾವಿದರು ತಂತ್ರಜ್ಞರ ತೀವ್ರ ಪ್ರತಿರೋಧದಿಂದ ಇದು ಸಾಧ್ಯವಾಗದೆ ಹೋಯಿತು... ಈಗ ನಾವು ನೀವುಗಳು  ಸತ್ಯಮೇವ ಜಯತೆಗಾಗಿ ಬೇರೆ  ಭಾಷೆಯ ಛಾನಲನ್ನು ನೋಡುವಂತಾಗಿದೆ.. ಇದು ಅಸಂಖಾತ ಕನ್ನಡ ಪ್ರೇಕ್ಷಕರಿಗೆ ಹಾಗು ಕನ್ನಡ ಭಾಷೆಗೆ ಕನ್ನಡ ಚಿತ್ರರಂಗ ಮಾಡಿದ ಅತೀ ದೊಡ್ಡ ದ್ರೋಹ...

ಡಬ್ಬಿಂಗ್ ಯಾಕೆ ಬೇಡ...?! ಚಿತ್ರರಂಗ ಕಿರುತೆರೆಯರ ಪ್ರಕಾರ ಡಬ್ಬಿಂಗ್ ನಿಂದಾಗಿ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ, ಕನ್ನಡದ ಸಂಸ್ಕೃತಿಯ ನಾಶವಾಗುತ್ತದೆ.. ಇದು ಅವರ ವಾದ.. ಕನ್ನಡದಲ್ಲಿ ಒಂದು ಹಿಡಿದಿಟ್ಟುಕೊಳ್ಳುವಂತಹ, ಜನ ಜಾಗೃತಿಯ ಕಾರ್ಯಕ್ರಮ ತಯಾರಿಸಲಾಗದ ಇವರುಗಳು ಮತ್ತೇನು ತಾನೇ ಹೇಳಿಯಾರು? ಈಗಾಗಲೇ ಕುಲಗೆಟ್ಟ ಕಾರ್ಯಕ್ರಮಗಳು, ಸ್ವಂತಿಕೆ ಇಲ್ಲದ ಸಿನೆಮಾ. ರಿಮೇಕ್ ಗಳಿಂದ ಹೆಸರು ಕೆಡಿಸಿಕೊಂಡು ಹೆಚ್ಚಿನ ಕನ್ನಡ ಪ್ರೇಕ್ಷಕರನ್ನು ದೂರಕಟ್ಟಿರುವ ಕನ್ನಡ ಚಿತ್ರರಂಗ ಈ ಡಬ್ಬಿಂಗ್ ವಿರೋಧಿ ಆಂದೋಲನದಿಂದ ಸಾಧಿಸುವುದಾದರೂ ಏನು?


ಡಬ್ಬಿಂಗ್ ವಿರುದ್ದ ತೋಳೆತ್ತಿ ಆರ್ಭಟಿಸುತ್ತಿರುವ ಶಿವಣ್ಣ ಹಾಗು ಅವರ ಬಳಗಕ್ಕೆ ತಾವು ಮಾಡುತ್ತಿರುವುದು ಕಾನೂನು ವಿರೋಧಿ ಹೋರಾಟ ಎಂಬುದರ ಕಿಂಚಿತ್ತಾದರೂ ಅರಿವಿದೆಯೇ? ಡಬ್ಬಿಂಗ್ ಗೆ ಭಾರತದ ಕಾನೂನಿನಲ್ಲಿ ಯಾವುದೇ ವಿರೋಧವಿಲ್ಲ. ಡಬ್ಬಿಂಗ್ ಸಂವಿಧಾನಾತ್ಮಕವಾದುದು. ಹೀಗಿರುವಾಗ ಡಬ್ಬಿಂಗ್ ಗೆ ವಿರೋಧ ವ್ಯಕ್ತ ಪಡಿಸುವುದು ಅಪ್ರಜಾಸತ್ಮಕವಲ್ಲವೇ. ಪಾಳೇಗಾರಿಕೆ ಮೂಲಕ ಡಬ್ಬಿಂಗ್ ಅನ್ನು ಕನ್ನಡದಿಂದ ದೂರಕತ್ತುವುದು ಎಷ್ಟರ ಮಟ್ಟಿಗೆ ಸರಿ..


ಬಹುಶಃ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಅವರುಗಳು ಬೇರೆ ಭಾಷೆಯಿಂದ ಕದ್ದು ರಿಮೇಕ್ ಮಾಡಲು, ನಾಲ್ಕೈದು  ಸಿನಿಮಾದ ಕತೆ ಸೇರಿಸಿ ಖಿಚಡಿ ಸಿನಿಮಾ ಮಾಡಲು ಸಾಧ್ಯವಾಗದು ಎಂಬ ಆತಂಕವೋ ಏನೋ..? ಒಂದು ಮಾತ್ರ ಸತ್ಯ ಈ ಸ್ವಂತಿಕೆ ಇಲ್ಲದ  ಕನ್ನಡ ಚಿತ್ರರಂಗದಿಂದ ಜನ ದಿನೇ ದಿನೇ ವಿಮುಖರಾಗುತ್ತಿದ್ದಾರೆ. ತಮ್ಮ ಮನೋರಂಜನೆಗಾಗಿ ಬೇರೆ ಭಾಷೆಗಳ ಮೊರೆ ಹೋಗುತ್ತಿದ್ದಾರೆ.. "10 ಹೊಸ ಚಿತ್ರಗಳ ಪೈಕಿ 1  ಮಾತ್ರ ಆಯ್ಕೆಗೆ ಅರ್ಹವಾಗಿರುತ್ತವೆ.  ಉಳಿದವು ಎಲ್ಲಾ ಸವಕಲು" ಎಂದು ವಿಷಾದದಿಂದ ಹೇಳುವ ಕನ್ನಡದ ಹಿರಿಯ ನಟ ಅನಂತ್ ನಾಗ್ ರವರ ಮಾತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂತಹ ಚಿತ್ರರಂಗದಿಂದ ಕನ್ನಡ ಭಾಷೆ-ಸಂಸ್ಕೃತಿ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ದೊಡ್ಡ ಅಪರಾಧವಾಗುತ್ತದೆ.ಸತ್ಯಮೇವ ಜಯತೆ ಕನ್ನಡದಲ್ಲಿ ದೊರೆಯದ ಕಾರಣ ನಾವು ಬೇರೆ ಭಾಷೆಯ ಮೊರೆ ಹೋದ ಹಾಗೆ ಅದೆಷ್ಟೋ ಕನ್ನಡಿಗರು ತಮ್ಮಿಷ್ಟದ ಮನೋರಂಜನಾ ಕಾರ್ಯಕ್ರಮಕ್ಕಾಗಿ ಬೇರೆ ಭಾಷೆಯ ಚಾನಲ್ ಗಳಿಗೆ ಟ್ಯೂನಿಸುತ್ತಾರೆ. ಇಲ್ಲಿ ನಮಗೇನೂ ನಷ್ಟವೆನಿಸುವುದಿಲ್ಲ. ನಮಗೆ ಬೇಕಾದ ಮಾಹಿತಿ, ಮನೋರಂಜನೆ ಎಲ್ಲವೂ ದೊರಕುತ್ತದೆ. ಆದರೆ ಇಲ್ಲಿ ನಿಜವಾಗಿ ನಷ್ಟಕ್ಕೊಳಗಾಗುವುದು ಮಾತ್ರ ಕನ್ನಡ ಭಾಷೆ..! ನಮ್ಮಿಷ್ಟದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ ಮಾಡಿ ತೋರಿಸಿದರೆ ನಾವೆಲ್ಲಾ ಮನೆ ಮಂದಿಯೊಂದಿಗೆ ಕುಳಿತು ಕನ್ನಡದಲ್ಲೇ ವೀಕ್ಷಣೆ ಮಾಡುತ್ತೇವೆ. ಆಗ ಕನ್ನಡ ಭಾಷೆ ಬೆಳೆಯುತ್ತದೆ, ಭಾಷಾ ಜ್ಞಾನ ವಿಸ್ತಾರಗೊಳ್ಳುತ್ತದೆ. ಆದರೆ ಅದನ್ನೇ ಬೇರೆ ಭಾಷೆಗಳಲ್ಲಿ ನೋಡಿದಾಗ ಆ ಬೇರೆ ಭಾಷೆ ಬೆಳೆಯುತ್ತದೆಯೇ ಹೊರತು ಕನ್ನಡವಲ್ಲ. ಕನ್ನಡ ನಿಧಾನವಾಗಿ ಮರೆಗೆ ಸರಿಯಲಾರಂಬಿಸುತ್ತದೆ  . ಈಗ ಅದೆಷ್ಟೋ ಉಪಯುಕ್ತ ಚಾನಲ್ ಗಳಾದ  ಹಿಸ್ಟರಿ, ಡಿಸ್ಕಾವರಿ, ನ್ಯಾಷನಲ್ ಜಿಯೋಗ್ರಾಫಿ  ಮುಂತಾದವುಗಳು ಭಾರತದ ಹೆಚ್ಚಿನ ಭಾಷೆಗಳಲ್ಲಿ ಡಬ್ ಗೊಂಡಿವೆ. ಆದರೆ ಕನ್ನಡದಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡಿಲ್ಲ. ಮೊದಲೆಲ್ಲ ಮಕ್ಕಳಿಗೆ ಮನೆಯಲ್ಲಿ ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು.  ಆದರೆ ಈಗಿನ ಜೀವನ ಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಮಕ್ಕಳಿಗೆ ರಾಮಾಯಣ-ಮಹಾಭಾರತದ ಕಾರ್ಟೂನ್ ಗಳ DVD  ಗಳನ್ನು ತಂದುಕೊಡುತ್ತೇವೆ. ಅದು ಹಿಂದಿ ಆದಿಯಾಗಿ ಇಂಗ್ಲಿಷ್, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಲ್ಲಿ ದೊರೆಯುವುದಿಲ್ಲ. ಅದೇ ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ಕೊಟ್ಟಿದ್ದರೆ ಅದೇ ಮಗು ಕಾರ್ಟೂನ್ ಗಳನ್ನು ಕನ್ನಡದಲ್ಲೇ ನೋಡುತ್ತಿತ್ತು. ಕನ್ನಡದಲ್ಲೇ ಕಾರ್ಟೂನ್ ನೋಡುವುದರಿಂದ ಆ ಮಗು ಎಷ್ಟು ಚೆನ್ನಾಗಿ ಕನ್ನಡ ಕಲಿಯುತಿತ್ತು ಅಲ್ಲವೇ.. ಮಗುವೂ ಬೆಳೆಯುತ್ತಿತ್ತು ಜೊತೆಗೆ ಕನ್ನಡವೂ..

ಇದೆಲ್ಲ ಒಂದು ನೂರು ಜನರ ಗುಂಪು ಕಟ್ಟಿಕೊಂಡು ಬೆದರಿಸುವ ಶಿವಣ್ಣ ನಿಗೆ ಅರ್ಥವಾಗುತ್ತದೆಯೇ? ಡಬ್ಬಿಂಗ್ ಬೇಕು ಎನ್ನುವವರು ಕನ್ನಡಿಗರಲ್ಲ ಎಂಬಂತೆ ಮಾತನಾಡುವ ಶಿವಣ್ಣ ಕನ್ನಡಿಗನೇ? ಕನ್ನಡಿಗರ ಕನ್ನಡತನವನ್ನು ಪ್ರಶ್ನಿಸಲು ಶಿವಣ್ಣ ಯಾರು? ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಗಾಲಿಡುವ ಪ್ರಯತ್ನದಲ್ಲಿರುವ ಇವರುಗಳು ಒಂದರ್ಥದಲ್ಲಿ ಕನ್ನಡಿಗರೇ ಅಲ್ಲ... ತಮ್ಮ ಸ್ವಾರ್ಥ ಸಾಧನೆಗಾಗಿ ಆಂದೋಲನ ಚಳುವಳಿ ಮಾಡುವ ಶಿವಣ್ಣ ಟೀಂ ಗೆ ನಿಜವಾದ ಕನ್ನಡಿಗರು (ಡಬ್ಬಿಂಗ್ ಪರ) ಸೆಟೆದು ನಿಂತರೆ ಇಲ್ಲಿ ನಿಲ್ಲಲೂ ಸಾಧ್ಯವಾಗದು ಎಂಬುದರ ಅರಿವಾಗಬೇಕು..  ಕನ್ನಡ ಚಿತ್ರರಂಗವೊಂದನ್ನು ಬಿಟ್ಟು ಎಲ್ಲ ಕನ್ನಡ ಸಂಘಟನೆಗಳ ಸಹಿತ ಇಡೀ ಕರುನಾಡಿಗೆ ಕರುನಾಡೆ  ಡಬ್ಬಿಂಗ್ ಬೆಂಬಲಿಸುತ್ತಿರುವಾಗ ಶಿವಣ್ಣ ಟೀಮ್ ನ ಅಪ್ರಜಾಸಾತ್ಮಕ ಹೋರಾಟ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವ್ಯರ್ಥವಾಗುವುದು ಖಂಡಿತ..


ಜೈ ಭುವನೇಶ್ವರಿ..


No comments:

Post a Comment