Tuesday, February 28, 2012

ಧರೆಗಿಳಿದ ಹುಣ್ಣಿಮೆಯೇ...


ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

ಅಗೋ ಹುಣ್ಣಿಮೆಯು ಕಳೆದು ಹೋಗಿದೆಯೆಂದು
ಚಂದಿರ ದೂರಿತ್ತಿಹ
ಅದು ಎಲ್ಲಿ ಎಂದು ಹುಡುಕಿ ಹೋಗಲು
ಅದು ನೀನೆ ಅಂದಿಹ
ಹುಣ್ಣಿಮೆಯ ರೂಪದವಳೇ, ಚೆಲುವಿನ ಸಿರಿಯಿವಳೇ
ಅಂದ ಅಂದ ಅಂದ ಅಂದಗಾತಿಯೇ...

ನೇಸರನ ಕಾಂತಿಗಿಂತ ನಿನ್ನ ಕಣ್ಣ ಕಾಂತಿಯೇ ಅಂದ
ಆ ಸಪ್ತ ಸ್ವರಗಳಿಗಿಂತ ನಿನ್ನ ಕಂಠ ಸ್ವರವೇ ಚಂದ
ಉಪಮೆಯಿಲ್ಲದ ಚೆಲುವೇ, ತಿದ್ದಿ ತೀಡಿದ ಬೊಂಬೆಯೇ
ಅಂದ ಅಂದ ಅಂದ ಅಂದಗಾತಿಯೇ...

ನಾ ಕಳೆದುಹೋಗಿಹೆನು ನಿನ್ನ ಚೆಲುವಿನಲೆಯಲ್ಲಿ 
ನಿನ್ನ ಕಾಲ್ಗೆಜ್ಜೆ ದನಿಗೆ ನಾ ಮರುಳಾಗಿ ಹೋಗಿ
ಒಲವ ಮೆರವಣಿಗೆಗೆ ಶುರುವಿಟ್ಟುಕೊಂಡಿಹೆನು 
ನನ್ನೊಲವ ಪ್ರಾಣವೇ, ನೀನೆಂದು ನನ್ನವಳೇ  
ಅಂದ ಅಂದ ಅಂದ ಅಂದಗಾತಿಯೇ..

ಅಂದ ಅಂದ ಅಂದ ಅಂದಗಾತಿ ನೀನು
ಈ ಚೆಲುವಿಗಿನ್ನು ಸಾಟಿಯಿಲ್ಲ ಏನೂ
ಆ ಚಂದಮಾಮ ಕೂಡ ನಾಚಿಕೊಂಡನೇನು...

Sunday, February 5, 2012

ದ್ವಾರಕನಾಥ್ ರವರೆ, ನಿಮಗೆ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರಾರು..

(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)

ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ. 

ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?

ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.

ಈ ಹಿಂದೆ 
ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?

ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?

ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.

8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..! 

ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ.  ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು. 

ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!

ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!


Saturday, February 4, 2012

ನಿರ್ಭಾವುಕ ಹೃದಯದಲ್ಲಿ...


ಕರಿಮುಗಿಲ ಬಾನಿನಲ್ಲಿ ಮಿಂಚೊಂದು ಹಾದು ಹೋದಂತೆ
ಈ ಬಾಳ ಹಾದಿಯಲ್ಲಿ ಒಲವೊಂದು ಸುಳಿದು ಹೋಗಿ
ಕಣ್ಣಾಮುಚ್ಚಾಲೆಯಾಟ ಆಡುತ್ತಿದೆಯಲ್ಲ..

ಅಂಧಕಾರದ ಅಡವಿಯಲ್ಲಿ ಅಂಧನಾಗಿ ಸಾಗುತ್ತಿರಲು 
ಕಣ್ಣ ನೀಡಿ ಕಿತ್ತು ಕೊಂಡರೆ ತಿರುಗಿ ಸಾಗಲಿ ಹೇಗೆ..
ನಿರ್ಭಾವುಕ ಹೃದಯದಲ್ಲಿ ಭಾವನೆಗಳ ಬೆಳೆಸಿ ಹೋದರೆ
ಬಂಧವಿಲ್ಲದೆ ಭಾವನೆಗಳು ಅಸುನೀಗದೇ...

ಪ್ರೀತಿ ಕಾಣದ ಬದುಕಿನಲ್ಲಿ ಪ್ರೀತಿ ಬಿತ್ತಿ ದೂರ ಹೋದರೆ
ಒಂಟಿ ಪ್ರೀತಿಯ ಜಂಟಿ ಮಾಡಲು ಮತ್ತೆ ಹೆಣಗಲಿ ಹೇಗೆ..
ಒಲವ ಪಾಠವ
ಹೇಳಿಕೊಟ್ಟು ಮರೆವ ಪಾಠವ ಮರೆತೇ ಹೋದರೆ
ಒಲವ ವ್ಯೂಹದಿ ಸಿಲುಕಿ ಹೃದಯ ಅಸ್ತಮಿಸದೇ...Thursday, February 2, 2012

ಏನ್ ಗುರು ರಾಜಕೀಯನಾ?


ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ. 

ಲೇಖನ ಆರಂಭದಲ್ಲಿ ಆರೆಸ್ಸೆಸ್ಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.!

ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.


ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು. ಕನ್ನಡ ಹಾಗು ಸಂಸ್ಕೃತದ ಸಂಬಂಧದ ಬಗ್ಗೆ ಹೇಳುವುದಾದರೆ, ಕನ್ನಡದ ಎಲ್ಲಾ ಪ್ರಾಚೀನ ಸಾಹಿತ್ಯಗಳು ಸಂಸ್ಕೃತ ಪಠ್ಯಗಳ ಪ್ರಭಾವದಿಂದಲೇ ರಚಿಸಲ್ಪಟ್ಟವುಗಳಾಗಿವೆ. ಇದೇ ಕಾರಣಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡುತ್ತಿತ್ತು. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ಹೊರತು ಪಡಿಸಿ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳು ಸಂಸ್ಕೃತ ಪ್ರಭಾವದಿಂದ ಹುಟ್ಟಿದವು. ಅದುದರಿಂದ ಸ್ವೋಪಜ್ಞತೆಯ ದೃಷ್ಟಿಯಿಂದ ಕನ್ನಡದ ಸಾಹಿತ್ಯ ಪ್ರಕಾರಗಳು ಕಡಿಮೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸಿತ್ತು. ಅದೃಷ್ಟವಶಾತ್ ಕನ್ನಡದ ಚಿಂತಕ ಮನಸ್ಸುಗಳ ಒತ್ತಾಯದಿಂದ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ವಿಶೇಷವೆಂದರೆ ಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದ ಹಾಗೆ ಪಿರ್ಯಾದೆ ಮಾಡಿದ್ದು ನಮ್ಮದೇ ದ್ರಾವಿಡ ಗಾಂಧಿ ಎಂಬ ವ್ಯಕ್ತಿ. ಇನ್ನು  ಗುರೂಜಿಯವರ ನಿರ್ಧಾರಗಳು, ಯೋಜನೆಗಳು ಯಾವುದೂ ಬಾಲಿಶವಾಗಿರಲಿಲ್ಲ ಅಥವಾ ಪ್ರಾಂತೀಯ ವಿರೋಧಿಯಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಅವರು ಸಮರ್ಥರಾಗಿದ್ದರು.
ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚಾಡುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?

ಸಂಘದ ಧರ್ಮ ದೃಷ್ಟಿಯ ಬಗ್ಗೆ ಹೇಳುತ್ತಾ ಗುರೂಜಿಯವರನ್ನು ತಪ್ಪಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಭಾಷೆಯ ರಕ್ಷಣೆಗಾಗಿ ಇರುವ ಬನವಾಸಿ ಬಳಗ ಇಲ್ಲಿ ಧರ್ಮ, ರಾಜಕೀಯದ ವಿಷಯಗಳನ್ನು ಯಾಕೆ ಎತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದು ಕೇವಲ ಆರೆಸ್ಸೆಸ್ ಅನ್ನು ನಿಂದಿಸಲೇಬೇಕೆಂಬ ಮನೋಭಾವದಿಂದ ಬರೆದಿರುವಂತಿದೆ. ಕ್ರಿಶ್ಚಿಯನ್ನರ ಮತಾಂತರ, ಇಸ್ಲಾಮಿಗರ ಭಯೋತ್ಪಾದನೆ, ಕಮ್ಯುನಿಷ್ಟರ ಅಭಿವೃದ್ದಿ ಕಾಣದ ಆಡಳಿತ, ಇವರೆಲ್ಲರುಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲಾಗುತ್ತಿರುವ ಆಕ್ರಮಣಗಳನ್ನು ಕಣ್ಣಾರೆ ನೋಡಿಯೇ ಗುರೂಜಿಯವರು ಇವುಗಳನ್ನು ರಾಷ್ಟ್ರದ ಆಪತ್ತುಗಳೆಂದು ಉಲ್ಲೇಖಿಸಿದ್ದರು. ಇಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಮೇಲಿನ ಗುರೂಜಿಯವರ ಕಾಳಜಿ ಎದ್ದು ಕಾಣುತ್ತದೆಯೇ ಹೊರತು ಧರ್ಮ ನಿಂದನೆಯಲ್ಲ.

ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ. ಅದೇ ರೀತಿ ಬಿಜೆಪಿಗೆ ಬೇರೆಯೇ ಆದ ಪದಾಧಿಕಾರಿಗಳು, ಸಮಿತಿಗಳಿವೆ. ಕೆಲ ಕ್ಲಿಷ್ಟ ಸಂದರ್ಭಗಳಲ್ಲಿ ಬಿಜೆಪಿ, ಆರೆಸ್ಸೆಸ್ಸಿನ ಕೆಲ ಹಿರಿಯರ ಸಲಹೆ ಕೇಳಿರಬಹುದು. ಬಿಜೆಪಿಯ ಹೆಚ್ಚಿನವರು ಆರೆಸ್ಸೆಸ್ಸ್ ಮೂಲದವರಾದ್ದರಿಂದ ಸಲಹೆಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೇನೂ ವಿಶೇಷ ಕಂಡು ಬರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ ಪಡೆಯಲು ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ನೀವು ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ಅಸ್ತ್ರಗಳಾದ ‘ಕೋಮು ಸೌಹಾರ್ದ ಕಾಯಿದೆ’, ಹಿಂದುಳಿದ ವರ್ಗಗಳಲ್ಲಿ ಕೋಟಾದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿಗಳಂತಹ ದೊಡ್ಡ ದೊಡ್ಡ ವಿಷಯಗಳನ್ನೇ ಮುಚ್ಚಿಟ್ಟಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತಿದೆ.! ನೀವು ಬರೆದ ಲೇಖನದ ಕೊನೆಯ ಪ್ಯಾರಕ್ಕೂ ಉಳಿದ ಭಾಗಕ್ಕೂ ಯಾವುದೇ ಸಂಬಂಧ ಕಂಡು ಬರುವುದಿಲ್ಲ. ಅದು ಕೇವಲ ಬಿಜೆಪಿ, ಆರೆಸ್ಸೆಸ್ಸ್ ಅನ್ನು ಜರಿಯಲೆಂದೇ ಸೃಷ್ಟಿಸಿದಂತಿದೆ.

ಇಷ್ಟೆಲ್ಲ ಹೇಳಿದ ಮೇಲೆ ತಮ್ಮ ಲೇಖನಕ್ಕೆ ಕಾರಣವಾದ ಹುಬ್ಬಳಿ ಆರೆಸೆಸ್ಸ್ ಸಮಾವೇಶದ ವಿಷಯಕ್ಕೆ ಬರೋಣ. ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ. ಆಯಾ ಪ್ರಾಂತ್ಯಭಾಷೆಗಳು ಎಷ್ಟು ಮುಖ್ಯ ಎಂಬುದು ತಿಳಿಯದೇ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಆರೆಸೆಸ್ಸ್ ನಾಯಕರುಗಳಿಗೆ ತಿಳಿಯದೇ ಇರುತ್ತದೆಯೇ?

ರಾಜಕೀಯ ಮಾಡಬೇಕೆಂದಾದಲ್ಲಿ ನೇರವಾಗಿ ಮಾಡಬಹುದು. ಧರ್ಮದ ಹೆಸರಿನಲ್ಲಿ ಆರೆಸ್ಸೆಸ್ ರಾಜಕೀಯ ಮಾಡುತ್ತಿದೆ ಎಂದು ಹೇಳುವ ಲೇಖನವು ಭಾಷೆಯೆಂಬ ಸಂಗತಿಯನ್ನು ಇಟ್ಟುಕೊಂಡು ತಾನು ಮಾಡುತ್ತಿರುವ ರಾಜಕೀಯವನ್ನು ಮರೆಮಾಚುತ್ತದೆ.
(ಈ ಲೇಖನ ಬರೆಯಲು ಪ್ರೇರೇಪಿಸಿದ ಗೆಳೆಯ ಸಾತ್ವಿಕ್ ಅವರಿಗೆ ಪ್ರೀತಿ ತುಂಬಿದ ಕೃತಜ್ಞತೆಗಳು)