Sunday, September 30, 2012

ಜಾತ್ಯಾತೀತ 'ಜಿನ್ನಾ' ಖಳ ನಾಯಕನಾದರೆ 'ಗಾಂಧೀ' ಯಾರು?..


ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನ ದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು 'ಜಿನ್ನಾ ಒಬ್ಬ ಜಾತ್ಯಾತೀತ ನಾಯಕ' ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು. 

ಆದರೆ ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ - ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ  ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. 'ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ' ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರನೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.

ಮಹಮ್ಮದ್ ಆಲಿ ಜಿನ್ನಾ... ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ... ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ... 
ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ... ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ...?

"ನನ್ನ ಪ್ರಕಾರ ದೇಶ ವಿಭಜನೆಯನ್ನು ಬಿಟ್ಟು ಬೇರಾವುದೇ ಪರಿಹಾರವಿರಲಿಲ್ಲ ಹಾಗೂ ಮುಂದೊಂದು ದಿನ ಇತಿಹಾಸ ಅದನ್ನು ಒಪ್ಪಿಕೊಳ್ಳುತ್ತದೆ... ಪಾಕಿಸ್ತಾನವನ್ನು ಸಮೃದ್ಧ ಉಲ್ಲಾಸಭರಿತ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಸಕಲರ ಶ್ರೇಯೋಭಿವೃದ್ಧಿಗಾಗಿ ಏಕ ದೃಷ್ಟಿಯಿಂದ ನಾವು ಪ್ರಯತ್ನಿಸಬೇಕು. 
ಆತ ಯಾವುದೇ ಸಮುದಾಯಕ್ಕೆ ಸೇರಿರಲಿ, ಆತನ ಜತೆ ನೀವು ಈ ಹಿಂದೆ ಎಂಥದೇ ಸಂಬಂಧ ಹೊಂದಿರಲಿ, ಆತನ ಚರ್ಮದ ಬಣ್ಣ, ಧರ್ಮ ಮತ ಯಾವುದೇ ಆಗಿರಲಿ ಎಲ್ಲರೂ ಸಮಾನರು. ಪಾಕಿಸ್ತಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ.... ದೇವಸ್ತಾನ, ಮಸೀದಿ ಅಥವಾ ಯಾವುದೇ ಪೂಜಾ ಸ್ಥಳಗಳಿಗೆ  ಹೋಗುವ ಸ್ವಾತಂತ್ರ್ಯ ನೂತನ ರಾಷ್ಟ್ರ ಪಾಕಿಸ್ತಾನದಲ್ಲಿದೆ. ನೀವು ಯಾವುದೇ ಧರ್ಮ, ಮತ ಜಾತಿಗೆ ಸೇರಿರಬಹುದು. ಅದಕ್ಕೂ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ.... ಕಾಲಾಂತರದಲ್ಲಿ ಹಿಂದೂಗಳು ಹಿಂದೂಗಳಾಗಿ ಮುಸ್ಲಿಮರು ಮುಸ್ಲಿಮರಾಗಿ ಉಳಿದು ಬಿಡುತ್ತಾರೆ. ಆದರೆ ಧಾರ್ಮಿಕ ಪ್ರಜ್ನೆಯಿಂದಲ್ಲ, ವೈಯಕ್ತಿಕ ನಂಬಿಕೆಯಿಂದ. ರಾಜಕೀಯ ದೃಷ್ಟಿಯಲ್ಲಿ ಅವರೆಲ್ಲರೂ ಪಾಕಿಸ್ತಾನದ ನಾಗರೀಕರು..."

ಮಹಮ್ಮದ್ ಆಲಿ ಜಿನ್ನಾ 1947, ಆಗಷ್ಟ್ 11 ರಂದು ಮಾಡಿದ ಭಾಷಣದ ತುಣುಕುಗಳಿವು. ಜಿನ್ನಾ  ಒಬ್ಬ ಧರ್ಮಾಂಧ ಕಟ್ಟಾ ಮುಸ್ಲಿಮನಾಗಿದ್ದರೆ ಪ್ರಜಾತಂತ್ರ, ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಿದ್ದರೇ? ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದ ನಂತರವೂ ಸಾಮರಸ್ಯ, ಸಮಾನತೆ, ಏಕತೆಯ ಬಗ್ಗೆ ಮಾತನಾಡುವ ಅಗತ್ಯವೇನಿತ್ತು...? ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ 'ಖಳ' ನಾಯಕರಾಗಿ ಕಂಡು ಬರುವ ಜಿನ್ನಾ ವಿಭಜನೆಯ ನಂತರ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಘೋಸಿಸಬಹುದಿತ್ತು. ಅಲ್ಲಿ ಇಸ್ಲಾಂ ನ ಕಾನೂನುಗಳನ್ನು ಹೇರಬಹುದಾಗಿತ್ತು. ಆದರೆ ಜಿನ್ನಾ ಹಾಗೆ ಮಾಡಲಿಲ್ಲ. ಕಾರಣ ಜಿನ್ನಾ ಮೂಲತಃ ರಾಷ್ಟ್ರೀಯವಾದಿ ಹಾಗೂ ಜಾತ್ಯಾತೀತ ವ್ಯಕ್ತಿತ್ವದವರಾಗಿದ್ದರು. ಅಂತಹ ವ್ಯಕ್ತಿ ರಾಷ್ಟ್ರದ ವಿಭಜನೆಗೆ ಪಟ್ಟು ಹಿಡಿಯಲು ಕಾರಣ ಇರಲೇಬೇಕಲ್ಲವೇ...?

ಜಿನ್ನಾ ಹುಟ್ಟಿದ್ದು ಒಂದು ಶ್ರೀಮಂತ ವ್ಯಾಪಾರಸ್ಥ ಕುಟುಂಬದಲ್ಲಿ. ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಗೆ ಹೋದ ಜಿನ್ನಾ ತಮ್ಮ 18 ನೇ ವಯಸ್ಸಿಗೇ ವಕೀಲಿ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಾಸಾದರು. ಬಂದವರೇ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು. ಕೆಲಸದ ವಿಷಯದಲ್ಲಿ ಜಿನ್ನಾ ತುಂಬಾ ಕಟ್ಟು ನಿಟ್ಟು ಹಾಗು ಶಿಸ್ತಿನ ಮನುಷ್ಯ. ಜಿನ್ನಾರ ಈ ವೃತ್ತಿಪರತೆ ಹಲವರನ್ನು ಆಕರ್ಷಿಸಿತು. ಅದರಲ್ಲೂ ಅವರ ಬಲಿಷ್ಠ ರಾಷ್ಟ್ರೀಯತೆ ಹಾಗೂ ದೇಶಭಕ್ತಿ. ಒಬ್ಬ ರಾಷ್ಟ್ರವಾದಿ ನಾಯಕರಾಗಲು ಎಲ್ಲಾ ಅರ್ಹತೆಗಳಿದ್ದ ಜಿನ್ನಾ 1896 ರಲ್ಲಿ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜಿನ್ನಾರ ವ್ಯಕ್ತಿತ್ವದ ಬಗ್ಗೆ ತಿಳಿದಿದ್ದ ಆಗಿನ ಮೇರು ನ್ನಾಯಕ ಬಾಲ ಗಂಗಾಧರ ತಿಲಕರು ರಾಜದ್ರೋಹದ ಪ್ರಕರಣಕ್ಕೆ ಸಂಬಂದಿಸಿ ಜಿನ್ನಾರನ್ನು ತಮ್ಮ ವಕೀಲರಾಗಿ ನೇಮಕ ಮಾಡಿಕೊಂಡರು. ಹೀಗೆ ಜಿನ್ನಾಗೆ ತಿಲಕ್, ಫಿರೋಜ್ ಶಾಃ, ಸುರೆಂದ್ರನಾಥ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ದಿಗ್ಗಜರ ಸಂಪರ್ಕ ದೊರೆಯಿತು. ಅವರುಗಳ ಪ್ರಭಾವ ಜಿನ್ನಾರ ಮೇಲೆ ಭಾರೀ ಮಟ್ಟದಲ್ಲಾಯಿತು.1906 ರಲ್ಲಿ ಆಗಾ ಖಾನ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾದಾಗ 'ನಾನು ಮೊದಲು ಭಾರತೀಯ, ನಂತರ ಮುಸ್ಲಿಂ' ಎಂದು ಅದರ ಸದಸ್ಯರಾಗಲು ಬಂದ ಮನವಿಯನ್ನು ತಿರಸ್ಕರಿಸಿದರು. ಹೀಗೆ ತಿಲಕರ ಕಾಲದಲ್ಲಿ ಜಿನ್ನಾ ಒಬ್ಬ ರಾಷ್ಟ್ರವಾದಿ ಯುವ ನಾಯಕನಾಗಿ ಬೆಳೆಯುತ್ತಾ ಸಾಗಿದರು.

ತಿಲಕರ ಹಠಾತ್ ಸಾವಿನ ನಂತರ ಕಾಂಗ್ರೆಸ್ ನಲ್ಲಿ ಗಾಂಧೀ ಯುಗ ಆರಂಭವಾಯಿತು. ಗಾಂಧಿಯುಗದಲ್ಲಿ ಹೋರಾಟದ ಕಿಚ್ಚಿಗಿಂತ ಅಧಿಕಾರದ ಮಹದಾಸೆ ಹೆಚ್ಚಿನವರಲ್ಲಿತ್ತು. ಗಾಂಧೀ, ನೆಹರೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀ ಆಗಿನ ಯುವ ನಾಯಕ ಅಪ್ರತಿಮ ದೇಶಭಕ್ತ ಸುಭಾಶ್ ಚಂದ್ರ ಬೋಸ್ ರನ್ನು ಕಾಂಗ್ರೆಸ್ಸ್ ತೊರೆಯುವಂತೆ ಮಾಡಿದ್ದೇ ಈ ಕಾರಣಕ್ಕಾಗಿ. ಎಲ್ಲರೂ ತನ್ನ ಅಡಿಯಾಳಾಗಿರಬೇಕೆಂಬುದು ಗಾಂಧೀ ಬಯಕೆಯಾಗಿತ್ತು. ಇದೇ ಮುಂದೆ ತಿಲಕರ ಒಡನಾಡಿ ಕಟ್ಟಾ ರಾಷ್ಟ್ರೀಯವಾದಿ ಜಿನ್ನಾರು ಹೊಸದಿಕ್ಕಿನೆಡೆಗೆ ಹೋಗಲು ನಾಂದಿಯಾಯಿತು.ಮುಂದೆ ಕೆಲ ಧರ್ಮಾಂಧ ಮುಸ್ಲಿಮರು ತಮ್ಮ ಹಿತಾಸಕ್ತಿಗಳಿಗಾಗಿ ನಡೆಸಿದ 'ಖಿಲಾಫತ್ ಚಳುವಳಿಗೆ' ಗಾಂಧೀಜಿ ಬೆಂಬಲ ನೀಡಿದ್ದು ದೊಡ್ಡ ದುರಂತಕ್ಕೆ ಕಾರಣವಾಯಿತು. ಖಿಲಾಫತ್ ಚಳುವಳಿಯ ಸಮಯದಲ್ಲಿ ಅಲ್ಲಲ್ಲಿ ಹಿಂದೂಗಳ ಕೊಲೆ, ಲೂಟಿ, ಭೀಕರ ಹಲ್ಲೆಗಳು ನಡೆದವು. ಇದ್ಯಾವುದಕ್ಕೂ ಅಹಿಂಸಾವಾದಿ ಗಾಂಧೀ ತಲೆಕೆಡಿಸಿಕೊಳ್ಳಲೇ ಇಲ್ಲ.! ಅಂದು ಮಹಮ್ಮದ್ ಆಲಿ ಜಿನ್ನಾ, ಗಾಂಧಿಯ ಒಟ್ಟಾರೆ ನಡೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಜಿನ್ನಾ ಮುಸ್ಲಿಂ ಧರ್ಮಾಂಧನಾಗಿದ್ದರೆ ಗಾಂಧೀಜಿಯ ನಡೆಯನ್ನು ಟೀಕಿಸುತ್ತಿದ್ದರೇನು? 

ಹೀಗೆ ಹಲವು ವಿಷಯಗಳಲ್ಲಿ ಗಾಂಧೀ-ನೆಹರೂ ಮತ್ತು ಜಿನ್ನಾರ ನಡುವೆ ಅಭಿಪ್ರಾಯ ಬೇಧಗಳು ಬೆಳೆಯತೊಡಗಿದವು. ಗಾಂಧೀಜಿಯ ಏಕಪಾರುಪತ್ಯವನ್ನು ಜಿನ್ನಾ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಹಾಗೆಯೇ ಗಾಂಧೀ ಮತ್ತು ನೆಹರೂರವರು ಜಿನ್ನಾರನ್ನು ತಮ್ಮ ವೈರಿಯಂತೆ ನಡೆಸಿಕೊಂಡರು. ಇಬ್ಬರಿಗೂ ಜಿನ್ನಾ ಬಗ್ಗೆ ತಿರಸ್ಕಾರದ ಭಾವನೆಯಿತ್ತು. ತಿಲಕರ ಗರಡಿಯಲ್ಲಿ ಪಳಗಿದ ಜಿನ್ನಾಗೆ ಗಾಂಧಿಯುಗದಲ್ಲಿ ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸಲಾಯಿತು. ತಿಲಕರ ಮರಣಾ ನಂತರ ದಾರಿ ತಪ್ಪಿದ ಕಾಂಗ್ರೆಸ್ ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಗಾಂಧೀಜಿ ಧೋರಣೆ ಬಗ್ಗೆ ಬೇಸತ್ತ ಜಿನ್ನಾ ಕಡೆಗೆ ಕಾಂಗ್ರೆಸ್ ನಿಂದಲೇ ಹೊರಬರಬೇಕಾಯಿತು.

ಕಾಂಗ್ರೆಸ್ಸ್ ನಿಂದ ಹೊರಬಂದ ಜಿನ್ನಾ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವದವರಾಗಿರಲಿಲ್ಲ. ಭಾರತೀಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಒಂದು ಸಮಯದಲ್ಲಿ ತಾನು ತಿರಸ್ಕರಿಸಿದ್ದ ಮುಸ್ಲಿಂ ಲೀಗನ್ನು ಸೇರಿದರು. 1916 ರಲ್ಲಿ ಮುಸ್ಲಿಂ ಲೀಗ್ ನ ಅಧ್ಯಕ್ಷರೂ ಆದರು. ಆದರೆ ಪ್ರತ್ಯೇಕತೆಯನ್ನು ಪ್ರತಿಪಾದಿಸಲಿಲ್ಲ. ಸ್ವಾತಂತ್ರ್ಯ ಗಳಿಕೆಯೆಂಬ ದೀರ್ಘಕಾಲೀನ ಗುರಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗು ಮುಸ್ಲಿಂ ಲೀಗನ್ನು ಒಟ್ಟಿಗೆ ತರಲು ಮುಂದಾದರು.

ಆದರೆ ಬೆಳೆಯುತ್ತ ಬೆಳೆಯುತ್ತ ಕಾಂಗ್ರೆಸ್ ಜಿನ್ನಾರ ಮುಸ್ಲಿಂ ಲೀಗ್ ಗೆ ಕಿಮ್ಮತ್ತೇ ಕೊಡಲಿಲ್ಲ. ಬ್ರಿಟೀಷರೊಂದಿಗಿನ ಹಲವು ಒಪ್ಪಂದಗಳಲ್ಲೂ ಜಿನ್ನಾರನ್ನು ಹೊರಗಿರಿಸಲಾಯಿತು. ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನಡುವೆ ಸಹಮತ ತರಲು ಮಾಡಿದ ಜಿನ್ನಾ ಪ್ರಯತ್ನಗಳು ನೀರ ಮೇಲಿನ ಹೋಮದಂತಾಯಿತು. ಹೀಗೆ ಸೋಲುಗಳ ಮೇಲೆ ಸೋಲುಗಳನ್ನು ಕಂಡ ಜಿನ್ನಾ ರಾಜಕೀಯದಿಂದ ಬೇಸತ್ತು 1931 ರಲ್ಲಿ ಲಂಡನ್ ಗೆ ಹೋಗಿ ನೆಲೆಸಿದರು.ಈ ಹಂತದಲ್ಲೇ ದೇಶ ವಿಭಜನೆಯ ವಿಷ ಬೀಜ ಹುಟ್ಟಿಕೊಂಡಿದ್ದು. ಆದರೆ ಅದು ಜಿನ್ನಾ ಮನಸಿನಲ್ಲಿ ಅಲ್ಲ. ಬದಲಾಗಿ 'ಸಾರೆ ಜಹಾಂಸೇ ಅಚ್ಚಾ...' ಎಂಬ ದೇಶ ಭಕ್ತಿ ಗೀತೆ ಬರೆದ ಸರ್ ಮೊಹಮ್ಮದ್ ಇಕ್ಬಾಲ್ ಮನದಲ್ಲಿ. ಭಾರತದ ವಿಭಜನೆಗೆ ಜಿನ್ನಾ, ಗಾಂಧೀ, ನೆಹರೂ ಎಷ್ಟು ಕಾರಣರೋ ಅಷ್ಟೇ ಈ ಇಕ್ಬಾಲ್ ಕೂಡ ಕಾರಣ. ಇದೇ ವಿಷಯಕ್ಕೆ ಸಂಬಂಧಿಸಿ ಇಕ್ಬಾಲ್ ಜಿನ್ನಾರಿಗೆ ಹಲವು ಪತ್ರಗಳನ್ನು ಬರೆದ. ಆದರೆ ಅದ್ಯಾವುದಕ್ಕೂ ಜಿನ್ನಾ ಒಪ್ಪಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.

ಇಲ್ಲಿನ ಮುಸ್ಲಿಂ ಲೀಗ್ ನ ನಾಯಕರುಗಳು ಮತ್ತೆ ಜಿನ್ನಾರ ನಾಯಕತ್ವದ ಅಗತ್ಯತೆಯನ್ನು ಮನಗಂಡು ಲಂಡನ್ ನಲ್ಲಿ ನೆಲೆಸಿದ್ದ ಜಿನ್ನಾರನ್ನು ಒತ್ತಾಯಪೂರ್ವಕವಾಗಿ ಭಾರತಕ್ಕೆ ಕರೆಸಿಕೊಂಡರು. ಮತ್ತೆ ಮುಸ್ಲಿಂ ಲೀಗ್ ನಲ್ಲಿ ಸಕ್ರಿಯರಾದರು ಜಿನ್ನಾ. ಇಕ್ಬಾಲ್ ಮುಂದಿಟ್ಟಿದ್ದ ದೇಶ ವಿಭಜನೆಯ ಪ್ರಸ್ತಾಪವನ್ನು ಜಿನ್ನಾ ಮೊದಲಿಗೆ ಒಪ್ಪಲಿಲ್ಲವಾದರೂ ಮುಂದೆ ಕಾಂಗ್ರೆಸ್ ಹಾಗು ಗಾಂಧೀ ಪರಿವಾರ ಜಿನ್ನಾರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನ ಎದುರುಸಿದ ಜಿನ್ನಾ ವಿಭಜನೆಯ ನಿಲುವಿಗೆ ಅಂಟಿಕೊಳ್ಳಲೇಬೇಕಾಯಿತು. ಅಂದು ಹಿಡಿದ ಪಟ್ಟನ್ನು ಮತ್ತೆಂದೂ ಸಡಿಲಿಸಲಿಲ್ಲ. ಒಂದು ಕಾಲದಲ್ಲಿ ಜಿನಾರನ್ನು ತಿರಸ್ಕರಿಸಿದ್ದ ಗಾಂಧೀ, ನೆಹರೂ ಹಾಗು ಕಾಂಗ್ರೆಸ್ ಜಿನ್ನಾರ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಕಾಲ ಮಿಂಚಿ ಹೋಗಿತ್ತು. ಕ್ರಮೇಣ ಜಿನ್ನಾ ಒಬ್ಬ ಹಠಮಾರಿಯಾಗಿ ಬದಲಾದರು. ಎಲ್ಲಿಯವರೆಗೆ ಎಂದರೆ 1947ರ ಆಗಸ್ಟ್ ನಲ್ಲಿ ದೇಶ ವಿಭಜನೆಯಾಗುವವರೆಗೆ..

ದೇಶ ವಿಭಜನೆಯ ವಿಷಯ ಬಂದಾಗಲೆಲ್ಲ ಮಹಮ್ಮದ್ ಆಲಿ ಜಿನ್ನಾ ಒಬ್ಬ 'ಖಳ' ನಾಯಕರಾಗಿ ಕಂಡುಬರುತ್ತಾರೆ. ನಿಜ ಅವರು ಮಾಡಿದ್ದು ತಪ್ಪು ಕೂಡ... ಆದರೆ ಅವರನ್ನು ಅಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿ ಭಾರತದ ವಿಭಜನೆಗೆ ಪರೋಕ್ಷವಾಗಿ ಕಾರಣಕರ್ತರಾದವರನ್ನು ನಾವು ಮರೆತ್ತಿದ್ದೇವೆ..? ಯಾಕೆ ನಾವು ಗಾಂಧೀ ನೆಹರೂಗಳಂತ ನಾಯಕರನ್ನು ದೂರುತ್ತಿಲ್ಲ.

1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ 1947 ರ ವರೆಗೆ ನಡೆದ ಚಳುವಳಿಗಳೆಲ್ಲ ಅಧಿಕಾರ, ನಾಯಕತ್ವ ಹಾಗು ಸ್ವಾತಂತ್ರ್ಯ ಗಳಿಕೆಯ 'ಕ್ರೆಡಿಟ್' ಗಾಗಿ ನಡೆದವುಗಳೆಂಬುದು ಕಟು ಸತ್ಯ. ಸುಭಾಶ್ ಚಂದ್ರ ಬೋಸರು ಕಾಂಗ್ರೆಸ್ ನಿಂದ ಹೊರ ಹೋಗಿ INA ಕಟ್ಟಿದ ನಂತರ ಗಾಂಧೀ-ನೆಹರೂ-ಜಿನ್ನಾ ನಡುವಿನ ಮೇಲಾಟ ದೇಶವನ್ನು ಎರಡು ಭಾಗ ಮಾಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿತು. 

ದೇಶ ವಿಭಜನೆಯ ಬಗ್ಗೆ ಗಾಂಧೀಜಿಯವರ ನಿಲುವುಗಳು ಕೂಡ ಅನುಮಾನವನ್ನು ಸೃಷ್ಟಿಸುತ್ತವೆ. 'ನನ್ನ ದೇಹವನ್ನು ಬೇಕಾದರೆ ತುಂಡು ಮಾಡಿ ಹಂಚಿಕೊಳ್ಳಿ, ಆದರೆ ದೇಶ ವಿಭಜನೆಯನ್ನು ಒಪ್ಪುವುದಿಲ್ಲ' ಎಂದಿದ್ದ ಗಾಂಧೀ ಕೊನೆಗೆ ಸುಮ್ಮನಾಗಿದ್ದೇಕೆ??  ವಿಭಜನೆಗೆ ಒಪ್ಪಿಗೆ ಸೂಚಿಸಿದ್ದೇಕೆ? ಮಾತು ಮಾತಿಗೂ ಸತ್ಯಾಗ್ರಹ ಉಪವಾಸ ಎನ್ನುತ್ತಿದ್ದ ಗಾಂಧೀ ವಿಭಜನೆ ವಿರುದ್ಧ ಯಾಕೆ Atleast ಒಂದು ದಿನದ ಉಪವಾಸ ಕೂರಲಿಲ್ಲ...? ಸತ್ಯಾಗ್ರಹ ಮಾಡಲಿಲ್ಲ?... ಚಾಚಾ ಎಂದು ಕರೆಸಿಕೊಳ್ಳುವ ನೆಹರೂ ಯಾಕೆ ತಡೆಯಲಿಲ್ಲ?

ಇಂದು ಜಿನ್ನಾ ಒಬ್ಬ 'ಖಳ'ನಾಗಿ ಕಂಡು ಬರುವುದಾದರೆ ಅದಕ್ಕೆ ಗಾಂಧೀ-ನೆಹರೂ ಹಾಗು ಗಾಂಧೀ ಯುಗದ ಕಾಂಗ್ರೆಸ್ಸೇ ಕಾರಣ... ಒಬ್ಬ ರಾಷ್ಟ್ರವಾದಿ ಜಿನ್ನಾರನ್ನು ದೇಶ ವಿಭಜನೆ ಮಾಡುವಷ್ಟರ ಮಟ್ಟಿಗೆ ಬದಲಾಯಿಸಿದರು ಎಂದ ಮೇಲೆ ಇವರುಗಳೇ ತಾನೇ ನಿಜವಾದ ಖಳ ನಾಯಕರು.

ಯೋಚಿಸಿ...

ಜೈ ಹಿಂದ್...