Monday, October 31, 2011

ತಾಯಿ ಭುವನೇಶ್ವರಿಯ ನಲ್ಮೆಯ ಮಕ್ಕಳಾದ ಕರುನಾಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತ, ಆ ದೇವಿ ಭುವನೇಶ್ವರಿಯು ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ.

"ಜೈ ಭುವನೇಶ್ವರಿ - ಜೈ ಕರ್ನಾಟಕ"

Monday, October 10, 2011

'ಮೌನಿ..'


ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ
ಸೂಜಿಯೊಂದು ಎದೆಯೊಳ ನುಗ್ಗಿದಂತೆ ಮರುಗೋಯಾತನೆಯು ಈ ಮೌನದಿ
ಅಂತರಂಗವು ಕಾದು ಕುದಿಯುತ್ತಿದೆ ಒಲವಿನ ಪುಟಗಳ ನಿನಗರುಹದೆ..

ಮೌನದ ಮಾತುಗಳ ಗೀಚಿರುವೆ ಹಾಳೆಯಲಿ
ಮಳೆನೀರ ಹನಿಗಳು ಬಿದ್ದು ಕಾಣದಾಗಿದೆಯೇಕೋ
ಪ್ರೇಮ ಕಾವ್ಯವ ಚಿತ್ರಿಸಿರುವೆ ಕಡಲತಡಿಯ ಮರಳ ಮೇಲೆ
ನಶಿಸಿ ಹೋಗಿದೆಯೀಗ ಅಲೆಗಳ ಮತ್ಸರಕೆ ಬಲಿಯಾಗಿ..

ಮೌನದ ಮೌನದಿ ಮಾತು ಮರೆತುಹೋಗಿ 
ಕಟ್ಟಿದ ಕನಸುಗಳು ಅಸುನೀಗುತ್ತಿವೆ
ಪ್ರೇಮದ ವೃಕ್ಷಕೆ ಕಾಯಿಲೆ ಬಂದಂತೆ
ಕನಸುಗಳುದುರುತ್ತಿವೆ ಎಲೆಗಳುದುರಿದಂತೆ..

ಮೌನ ಮಧುರವಲ್ಲ ಕವಿಗದರ ಅರಿವಿಲ್ಲ 
ಮೌನ ಕೊಲೆಗಡುಕ ಇಂಚಿಂಚೆ ಸಾಯಿಸುತ 
ಅತೀ ಮೌನ ಪ್ರೀತಿಗೆ ಸಲ್ಲ ಆದರೂ ನಾ ಮೌನಿಯು 
ಮೌನದಿಂದಲೇ ಕೊನೆಯಾಗಲಿ ಈ ಮೌನದೊಳಗಿನ ಪ್ರೇಮವು..

ಮೌನಿ ನಾನು ಮೌನವೇಣಿ ನೀನು ಮಾತಾಡದೆ
ಸ್ವರವಿಲ್ಲದೆ ಹೃದಯ ಹೇಳಲೆತ್ನಿಸುತ್ತಿದೆ ಮತ್ತೆ ಮೌನವಾಗಿ......


Sunday, October 9, 2011

ಶೋಕವೇ ಬರೀ ಶೋಕವೇ..



ಕ್ಷಮೆ ಕೋರುತಿಹ ನನ್ನೊಳ ಉಸಿರಿನ ದನಿ ಕೇಳದೇನೆ
ಈ ಬಡಪಾಯಿಯ ಬಡ ಹೃದಯವನು ಕ್ಷಮಿಸಲಾಗದೇನೆ
ಕಣ್ಣಂಚಲಿ ಧುಮುಕಲೋಗುತಿಹ ಕಣ್ಣೀರ ತಡೆ ನನ್ನ ಚೆಲುವೆ
ನಿನ್ನ ನೋಯಿಸೆನು ನನ್ನ ಪ್ರಾಣವೇ ನನ್ನಂತ್ಯದವರೆಗೂ..

ಸವಿ ಶೃತಿಯ ನುಡಿಸಿರುವೆ ನೀ ನನ್ನಂತರಂಗದಲಿ
ಅಂತರಂಗದ ತಾಳ ತಪ್ಪಿಸದಿರು ಸವಿ ಶೃತಿ ಕೇಳಿಬರದಂತೆ
ಕತ್ತಲ ಕಾನನದೊಳು ಬೆಳಕ ಕಂಡಿರುವೆ ನಿನ್ನಿಂದಲೇ ನನ್ನಾತ್ಮವೇ 
ನನ್ನಾತ್ಮದ ಬಳಿಯೀಗ ಬರೀ ಕತ್ತಲೇಕೆ ನಗು ನೀ ಮತ್ತೆ ಬೆಳಕಿನೊಡೆ..

ಪಿಸುಮಾತ ಪ್ರೀತಿ ಕೇಳಲಿಲ್ಲವೇಕೋ ಅಂದು ನಿನಗೆ
ಅಂಬರದಾಚೆಗಿನ ಲೋಕಕೂ ಅರಿವಿದೆ, ಬಳಿಯಲ್ಲಿನ ನಿನ್ನ ಬಿಟ್ಟು
ಜೋರಾಗಿ ಕಿರುಚುತ್ತಿರುವೆನಿಂದು ನಾ ನಿನ್ನೇ ಪ್ರೀತಿಸಿರುವೆ
ನಾ ನಿನ್ನೇ ಪ್ರೀತಿಸಿರುವೆ ಓಲವೇ ನನ್ನೆದೆಯ ಗುಡಿಯಲಿಟ್ಟು..

ನಿನಗೆ ತಂಪೆರೆವೆ ನಿನ್ನ ಬದುಕಿನಲಿ ಬಿಸಿಬೇಗೆಯ ನಾ ಸಹಿಸುತ
ನಿನ್ನ ಖುಷಿಯಲೇ ಜೀವಿಸುವೆ ಸದಾ ಕಹಿಯ ನಾ ಹೀರುತ
ನೋವ ಮರೆತು ಜಾಗವಿಡು ಎನ್ನ ಅಲೆಮಾರಿ ಹೃದಯಕೆ
ಮಗದೊಮ್ಮೆ ಕಿರುಚಲೇನೆ ಓಲವೇ, ನಾ ನಿನ್ನೇ ಪ್ರೀತಿಸಿರುವೆ..