Tuesday, April 9, 2013

ನಿನ್ನದೇ ಖುಷಿಯಲಿ..


ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...

ನಿನ್ನ ಕಣ್ಣಾಗಿ, ಕಣ್ಣೀರ ಮರೆಮಾಚಿ
ನಿನ್ನ ಹೆಜ್ಜೆ ಗುರುತಲ್ಲಿ ನನ್ನದರವ ಸೋಕಿ
ಏಳು ಜನ್ಮದ ಖುಷಿಯ ನಿನ್ನ ಮುಂದಿಡುವೆ
ನಿನ್ನ ಮೊಗದಿ ನಗುವ ಸಹಿ ಮಾಡುತ....

ನೀ ಪೀಡಿಸು ಸತಾಯಿಸು
ಮುದ್ದಾಗಿ ಒಮ್ಮೆ ಕೋಪಿಸು
ನೀ ನನ್ನ ಕಂದ, ಆನಂದಿಸುವೆ ನಾ
ನಿನ್ನ ಪ್ರತಿ ತುಂಟ ಚೇಷ್ಟೆಗಳಾ...

ಸಿಹಿಗನಸ ಆಯ್ದು ಕಳಿಸುವೆ ನಾ
ನಿನ್ನ ಕನಸಿನ ಲೋಕಕೆ
ಬೆಚ್ಚಿ ಬೀಳದಿರು ನನ್ನ ಒಲವೇ
ಬೆಚ್ಚಗಿಡುವೆ ಅನವರತ ನಿನ್ನೇ ಪ್ರೀತಿಸುತ...

ಮುಸ್ಸಂಜೆಯ ತುಂತುರಿನಲ್ಲಿ ಕೈಯ ಹಿಡಿದು ನಡೆಯುವೆನು
ಬಾಳ ಹಾದಿಯ ತುಂಬಾ ಬರುವೆಯಾ ಗೆಳತಿ.....
ನನ್ನ ಕೂಡೆ ನೀನಿರಲು ನನಗೇಕೆ ಅವರಿವರು
ಜಗ ಮರೆತು ಜತೆಗಿರುವೆ ಒಡತಿ...ಒಲವೆಂದು ಗೀಚಿಡಲೇ...


ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...
ವಿಳಾಸವರಿಯದ ಅಲೆಮಾರಿ ನಿನ್ನ ಹೃದಯಕೆ ಬಂದಿರುವೆ
ಬಚ್ಚಿಡು ನನ್ನ ಅಲ್ಲೇ ಬೆಚ್ಚನೆ ಕೂತಿರುವೆ...

ಎದೆಯ ತುಂಬಾ ನಿನ್ನ ಚಿತ್ತಾರವ ಬಿಡಿಸಿ
ಎದೆಯ ಗೂಡ ಒಳಗೆ ಪ್ರೇಮದ ಕಣಜ ಕಟ್ಟಿರುವೆ...
ಈ ಸಂಭಾಷಣೆ ಆಲಾಪನೆ ಎಲ್ಲಾ ನಿನ್ನದೇನೆ
ಮನದಲ್ಲಿಯೂ ಕನಸಲ್ಲಿಯೂ ಎಲ್ಲಾ ನೀನೇನೆ...

ನೀನು ಬಂದ ಘಳಿಗೆ ಅದೇನೋ ವಿಸ್ಮಯ
ನಿನ್ನ ಸನಿಹದಲ್ಲಿ ನಾನೂ ತನ್ಮಯ...
ನೀ ನನ್ನ ಬೆಳಕು, ನಿನಗಾಗಿ ಈ ಬದುಕು
ಕಾರಣವ ಕೇಳದಿರು ಒಲವೇ ನಾ ನಿನ್ನೇ ಪ್ರೀತಿಸಿರುವೆ ನಿಜವೆ...

ಏನೆಂದು ಬರೆದಿಡಲೇ ಹೃದಯದ ಈ ಸೆಳೆತಕೇ...
ಒಲವೆಂದು ಗೀಚಿಡಲೇ ನಿನ್ನಾ ಈ ಸನಿಹಕೆ...Monday, April 8, 2013

ಅದೇ ಕಣ್ಣು..ಮಾನಸ ಕೊಳದಲಿರೋ ಹಂಸವೇ..


ಮಿಟುಕುವ ಚಂಚಲ ರೆಪ್ಪೆಯ ಸೊಬಗೇ..

ಶ್ವೇತ ಸರೋವರದಿ ಕಪ್ಪು ಚಂದಿರನು

ಹೊಳೆವ ಮಾಟಕೆ ಸೋತುಹೋಗಿಹೆನು

ಸೂಜಿ ನೋಟದ ಹರಿತ ತಾಳೆನು ಒಮ್ಮೆ ಚುಚ್ಚಿ ಬಿಡೇ...

ಸುಳ್ಳೇ ಆದರೂ ನನ್ನೇ ಕಾಣುವೆ ನಿನ್ನ ಕಣ್ಣೊಳಗೆ...