Thursday, February 2, 2012

ಏನ್ ಗುರು ರಾಜಕೀಯನಾ?


ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ  ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ. 

ಲೇಖನ ಆರಂಭದಲ್ಲಿ ಆರೆಸ್ಸೆಸ್ಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.!

ಗೋಳವಾಲ್ಕರ್ ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯನ್ನಾಗಿ ತರಲು ಇಚ್ಚಿಸಿದ್ದರು ನಿಜ. ಅದಕ್ಕೆ ಒಂದು ಗಟ್ಟಿಯಾದ ಕಾರಣವೂ ಇತ್ತು. ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಮಣಿಪುರದವರೆಗೆ ಹಿಂದಿಯ ಪರಿಚಯವಿದೆ. ತಮಿಳುನಾಡು ಮತ್ತು ಕೇರಳದ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಭಾರತದಾದ್ಯಂತ ಹಿಂದಿಯನ್ನು ಮಾತನಾಡುತ್ತಾರೆ ಇಲ್ಲವೇ ಅರ್ಥ ಮಾದಿಕೊಳ್ಳುತ್ತಾರೆ. ಈ ಕಾರಣಗಳಿಂದ ಹಿಂದಿಯು ಭಾರತದಂತಹ ದೇಶದಲ್ಲಿ ವ್ಯಾಪಕ ಸಂವಹನ ಮಾಧ್ಯಮವಾಗಬಲ್ಲುದು ಎಂಬ ದೂರದೃಷ್ಟಿ ಗುರೂಜಿಯವರದಾಗಿತ್ತು. ಅವರು ‘ಹಿಂದಿ’ಯನ್ನು ರಾಷ್ಟ್ರ ಭಾಷೆಯಾಗಿ ಬಳಸಲು ಹೇಳಿದರೆ ಹೊರತು ಭಾರತದ ಇತರ ಮೂಲ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಹಾಗು ಇತರ ಭಾಷೆಗಳನ್ನು ತೆಗೆದುಹಾಕಲು ಎಲ್ಲೂ ಹೇಳಿಲ್ಲ. ಕೇವಲ ಗುರೂಜಿಯವರಷ್ಟೇ ಅಲ್ಲದೆ, ಈ ದೇಶದ ‘ರಾಷ್ಟ್ರಪಿತ’ ಎಂದು ಕರೆಸಿಕೊಳ್ಳುವ ಗಾಂಧೀಜಿಯವರು ಕೂಡ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡಿರುತ್ತೀರಿ. ಆ ಕಾರಣಕ್ಕೆ ಗಾಂಧಿಯವರನ್ನು ಕೂಡ ವಿರೋಧಿಸುವಿರೇನು?!.


ಇನ್ನು ಸಂಸ್ಕೃತದ ವಿಷಯಕ್ಕೆ ಬರೋಣ. ಸ್ವತಃ ಗುರೂಜಿಯವರೇ ಹೇಳುವಂತೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದ ಮೂಲಪ್ರೇರಣೆಯೇ ಸಂಸ್ಕೃತ. ಇದರಲ್ಲಿ ಎರಡು ಮಾತಿಲ್ಲ. ಪ್ರಾಚೀನ, ಮಧ್ಯಕಾಲ ಭಾಷೆಗಳೊಳಗೆ ಸಂಸ್ಕೃತದ ಬೇರುಗಳು ಹಾಸುಹೊಕ್ಕಾಗಿ ಕಂಡು ಬರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಕಲ್ಪನೆಗಳು, ಪರಿಭಾಷೆಗಳ ಕುರಿತು ಹೇಳುವ ಕಾಲಕ್ಕೆ ಇಂದಿಗೂ ನಾವು ಸಂಸ್ಕೃತದ ಕಡೆಗೆ ನೋಡುತ್ತೇವೆ. ಇದು ಸಂಸ್ಕೃತ ಭಾಷೆಗಿರುವ ಗಟ್ಟಿತನವನ್ನು ಸೂಚಿಸುತ್ತದೆ. ಇದೇ ಕಾರಣಗಳಿಗಾಗಿ ಗುರೂಜಿಯವರು ಸಂಸ್ಕೃತದ ಬಳಕೆಯನ್ನು ಉತ್ತೆಜಿಸಿದರು ಮತ್ತು ಸಂಸ್ಕೃತ ಬಳಕೆಗೆ ಬರುವವರೆಗೆ ಅನುಕೂಲದ ದೃಷ್ಟಿಯಿಂದ ನಮ್ಮದೇ ದೇಶದ ಹಿಂದಿಗೆ ಆದ್ಯತೆ ನೀಡಿದರು. ಕನ್ನಡ ಹಾಗು ಸಂಸ್ಕೃತದ ಸಂಬಂಧದ ಬಗ್ಗೆ ಹೇಳುವುದಾದರೆ, ಕನ್ನಡದ ಎಲ್ಲಾ ಪ್ರಾಚೀನ ಸಾಹಿತ್ಯಗಳು ಸಂಸ್ಕೃತ ಪಠ್ಯಗಳ ಪ್ರಭಾವದಿಂದಲೇ ರಚಿಸಲ್ಪಟ್ಟವುಗಳಾಗಿವೆ. ಇದೇ ಕಾರಣಕ್ಕೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡುತ್ತಿತ್ತು. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ಹೊರತು ಪಡಿಸಿ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳು ಸಂಸ್ಕೃತ ಪ್ರಭಾವದಿಂದ ಹುಟ್ಟಿದವು. ಅದುದರಿಂದ ಸ್ವೋಪಜ್ಞತೆಯ ದೃಷ್ಟಿಯಿಂದ ಕನ್ನಡದ ಸಾಹಿತ್ಯ ಪ್ರಕಾರಗಳು ಕಡಿಮೆ ಎಂದು ಕಾಂಗ್ರೆಸ್ ಸರ್ಕಾರ ವಾದಿಸಿತ್ತು. ಅದೃಷ್ಟವಶಾತ್ ಕನ್ನಡದ ಚಿಂತಕ ಮನಸ್ಸುಗಳ ಒತ್ತಾಯದಿಂದ ಶಾಸ್ತ್ರೀಯ ಸ್ಥಾನಮಾನ ಲಭ್ಯವಾಯಿತು. ವಿಶೇಷವೆಂದರೆ ಕೋರ್ಟಿನಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದ ಹಾಗೆ ಪಿರ್ಯಾದೆ ಮಾಡಿದ್ದು ನಮ್ಮದೇ ದ್ರಾವಿಡ ಗಾಂಧಿ ಎಂಬ ವ್ಯಕ್ತಿ. ಇನ್ನು  ಗುರೂಜಿಯವರ ನಿರ್ಧಾರಗಳು, ಯೋಜನೆಗಳು ಯಾವುದೂ ಬಾಲಿಶವಾಗಿರಲಿಲ್ಲ ಅಥವಾ ಪ್ರಾಂತೀಯ ವಿರೋಧಿಯಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲು ಅವರು ಸಮರ್ಥರಾಗಿದ್ದರು.
ರಾಜ್ಯಗಳ ಸ್ವಯಂಮಾಧಿಕಾರದ ಬಗ್ಗೆ ಪ್ರಸ್ತಾಪಿಸಿರುವ ಬನವಾಸಿ ಬಳಗದ ಲೇಖಕರು ಗುರೂಜಿಯವರ ಅಖಂಡ ಭಾರತದ ನಿಲುವನ್ನು ವಿರೋಧಿಸುತ್ತಿದ್ದಾರೆ. ಬಹುಶಃ ಲೇಖಕರ ಮನಸ್ಸು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸಂಕುಚಿತಗೊಂಡಂತೆ ಕಾಣುತ್ತದೆ. ಅವರಿಗೆ ಭಾರತ ಹಾಗು ಭಾರತದ ಏಕತೆಯ ಬಗ್ಗೆ ಚಿಂತೆಯಿದ್ದಂತಿಲ್ಲ. ಆದರೆ ಗುರೂಜಿ ಗೋಳವಾಲ್ಕರ್ ಅವರು ದೇಶದ ಹಾಗು ದೇಶದ ಜನರ ಏಕತ್ವದ ಬಗ್ಗೆ ಚಿಂತಿತರಾಗಿದ್ದರು. ದೇಶವನ್ನು ಭಾಷೆ, ಗುಂಪು, ಜನಾಂಗ, ಸಂಸ್ಕೃತಿಗಳ ಆಧಾರದ ಮೇಲೆ ವಿಂಗಡಿಸಿ ಹೆಚ್ಚು ಕಡಿಮೆ ಸ್ವಯಾಮಾಧಿಕಾರ ಕೊಡುವುದನ್ನು ಗುರೂಜಿ ವಿರೋಧಿಸಿದರು. ಬಹುಶಃ ಈಗ ನೀರು, ನೆಲ, ಭಾಷೆಗಾಗಿ, ರಾಜ್ಯ-ರಾಜ್ಯಗಳು ಕಚ್ಚಾಡುವುದನ್ನು ಗುರೂಜಿಯವರು ಮುಂಚೆಯೇ ಮನಗಂಡಿರಬೇಕು. ಇಂತಹ ಒಬ್ಬ ದೂರದೃಷ್ಟಿಯ ನೇತಾರನನ್ನು ಹೊಂದಿದ್ದ ಆರೆಸ್ಸೆಸ್ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಕರ್ನಾಟಕದ ಒಳಗೂ ಹೈದ್ರಾಬಾದ್ ಕರ್ನಾಟಕ, ಹಳೆ ಮೈಸೂರು, ಮುಂಬೈ ಕರ್ನಾಟಕ ಎಂಬ ಹಲವು ಕರ್ನಾಟಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗುತ್ತದೆ. ಇದು ನಾಳೆ ಪ್ರಾಂತೀಯತೆಯನ್ನು ಮತ್ತೆ ಕೆಣಕುವುದಿಲ್ಲ ಎಂಬುದಕ್ಕೆ ಏನೂ ಗ್ಯಾರಂಟಿ?

ಸಂಘದ ಧರ್ಮ ದೃಷ್ಟಿಯ ಬಗ್ಗೆ ಹೇಳುತ್ತಾ ಗುರೂಜಿಯವರನ್ನು ತಪ್ಪಾಗಿ ಅರ್ಥೈಸಿರುವುದು ಕಂಡು ಬರುತ್ತದೆ. ಭಾಷೆಯ ರಕ್ಷಣೆಗಾಗಿ ಇರುವ ಬನವಾಸಿ ಬಳಗ ಇಲ್ಲಿ ಧರ್ಮ, ರಾಜಕೀಯದ ವಿಷಯಗಳನ್ನು ಯಾಕೆ ಎತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದು ಕೇವಲ ಆರೆಸ್ಸೆಸ್ ಅನ್ನು ನಿಂದಿಸಲೇಬೇಕೆಂಬ ಮನೋಭಾವದಿಂದ ಬರೆದಿರುವಂತಿದೆ. ಕ್ರಿಶ್ಚಿಯನ್ನರ ಮತಾಂತರ, ಇಸ್ಲಾಮಿಗರ ಭಯೋತ್ಪಾದನೆ, ಕಮ್ಯುನಿಷ್ಟರ ಅಭಿವೃದ್ದಿ ಕಾಣದ ಆಡಳಿತ, ಇವರೆಲ್ಲರುಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೇಲಾಗುತ್ತಿರುವ ಆಕ್ರಮಣಗಳನ್ನು ಕಣ್ಣಾರೆ ನೋಡಿಯೇ ಗುರೂಜಿಯವರು ಇವುಗಳನ್ನು ರಾಷ್ಟ್ರದ ಆಪತ್ತುಗಳೆಂದು ಉಲ್ಲೇಖಿಸಿದ್ದರು. ಇಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಮೇಲಿನ ಗುರೂಜಿಯವರ ಕಾಳಜಿ ಎದ್ದು ಕಾಣುತ್ತದೆಯೇ ಹೊರತು ಧರ್ಮ ನಿಂದನೆಯಲ್ಲ.

ಆರೆಸ್ಸೆಸ್ ಗೆ ‘ಬಿಜೆಪಿ’ ಎನ್ನುವ ಇನ್ನೊಂದು ಮುಖವಿದೆ ಎಂದಿದ್ದೀರಿ. ಬಿಜೆಪಿ ಆರೆಸ್ಸೆಸ್ಸಿನ ಮುಖವಲ್ಲ. ಅದು ಆರೆಸ್ಸೆಸ್ ಮೂಲದಿಂದ ಬಂದ ಒಂದು ರಾಜಕೀಯ ಪಕ್ಷವಷ್ಟೇ. ಆರೆಸ್ಸೆಸ್ಸಿಗೆ ತನ್ನದೇ ಆದ ಶಿಸ್ತು-ಸಿದ್ದಾಂತಗಳಿವೆ, ಜೊತೆಗೆ ಆರೆಸ್ಸೆಸ್ಸಿನ ಉಸ್ತುವಾರಿ ನೋಡಿಕೊಳ್ಳಲು ಬೇರೆಯವರದ್ದೇ ಆದ ಒಂದು ಪಡೆಯಿದೆ. ಅದೇ ರೀತಿ ಬಿಜೆಪಿಗೆ ಬೇರೆಯೇ ಆದ ಪದಾಧಿಕಾರಿಗಳು, ಸಮಿತಿಗಳಿವೆ. ಕೆಲ ಕ್ಲಿಷ್ಟ ಸಂದರ್ಭಗಳಲ್ಲಿ ಬಿಜೆಪಿ, ಆರೆಸ್ಸೆಸ್ಸಿನ ಕೆಲ ಹಿರಿಯರ ಸಲಹೆ ಕೇಳಿರಬಹುದು. ಬಿಜೆಪಿಯ ಹೆಚ್ಚಿನವರು ಆರೆಸ್ಸೆಸ್ಸ್ ಮೂಲದವರಾದ್ದರಿಂದ ಸಲಹೆಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೇನೂ ವಿಶೇಷ ಕಂಡು ಬರುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ ಪಡೆಯಲು ಮುಸ್ಲಿಮರ ಓಲೈಕೆ ಮಾಡುತ್ತದೆ ಎನ್ನುವ ನೀವು ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ಅಸ್ತ್ರಗಳಾದ ‘ಕೋಮು ಸೌಹಾರ್ದ ಕಾಯಿದೆ’, ಹಿಂದುಳಿದ ವರ್ಗಗಳಲ್ಲಿ ಕೋಟಾದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿಗಳಂತಹ ದೊಡ್ಡ ದೊಡ್ಡ ವಿಷಯಗಳನ್ನೇ ಮುಚ್ಚಿಟ್ಟಿರುವುದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತಿದೆ.! ನೀವು ಬರೆದ ಲೇಖನದ ಕೊನೆಯ ಪ್ಯಾರಕ್ಕೂ ಉಳಿದ ಭಾಗಕ್ಕೂ ಯಾವುದೇ ಸಂಬಂಧ ಕಂಡು ಬರುವುದಿಲ್ಲ. ಅದು ಕೇವಲ ಬಿಜೆಪಿ, ಆರೆಸ್ಸೆಸ್ಸ್ ಅನ್ನು ಜರಿಯಲೆಂದೇ ಸೃಷ್ಟಿಸಿದಂತಿದೆ.

ಇಷ್ಟೆಲ್ಲ ಹೇಳಿದ ಮೇಲೆ ತಮ್ಮ ಲೇಖನಕ್ಕೆ ಕಾರಣವಾದ ಹುಬ್ಬಳಿ ಆರೆಸೆಸ್ಸ್ ಸಮಾವೇಶದ ವಿಷಯಕ್ಕೆ ಬರೋಣ. ಇಲ್ಲಿ ಮೋಹನ್ ಭಾಗವತರ ಮಾತುಗಳನ್ನು ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ಕನ್ನಡಕ್ಕೆ ಅಗ್ರಸ್ಥಾನ ನೀಡಲಾಗಿದೆ. ಆಯಾ ಪ್ರಾಂತ್ಯಭಾಷೆಗಳು ಎಷ್ಟು ಮುಖ್ಯ ಎಂಬುದು ತಿಳಿಯದೇ ರಾಷ್ಟ್ರವನ್ನು ಸಂಘಟಿಸಲು ಸಾಧ್ಯವಿಲ್ಲ ಎಂಬ ಸಂಗತಿ ಆರೆಸೆಸ್ಸ್ ನಾಯಕರುಗಳಿಗೆ ತಿಳಿಯದೇ ಇರುತ್ತದೆಯೇ?

ರಾಜಕೀಯ ಮಾಡಬೇಕೆಂದಾದಲ್ಲಿ ನೇರವಾಗಿ ಮಾಡಬಹುದು. ಧರ್ಮದ ಹೆಸರಿನಲ್ಲಿ ಆರೆಸ್ಸೆಸ್ ರಾಜಕೀಯ ಮಾಡುತ್ತಿದೆ ಎಂದು ಹೇಳುವ ಲೇಖನವು ಭಾಷೆಯೆಂಬ ಸಂಗತಿಯನ್ನು ಇಟ್ಟುಕೊಂಡು ತಾನು ಮಾಡುತ್ತಿರುವ ರಾಜಕೀಯವನ್ನು ಮರೆಮಾಚುತ್ತದೆ.
(ಈ ಲೇಖನ ಬರೆಯಲು ಪ್ರೇರೇಪಿಸಿದ ಗೆಳೆಯ ಸಾತ್ವಿಕ್ ಅವರಿಗೆ ಪ್ರೀತಿ ತುಂಬಿದ ಕೃತಜ್ಞತೆಗಳು)

2 comments: