Tuesday, August 5, 2014

'ಗಾಜಾ ಉಳಿಸಿ' ಎಂದು ಬೊಬ್ಬಿರಿಯುವ ಮುನ್ನ...


"Save Gaza... Save Palestine"
"ಗಾಜಾ ಉಳಿಸಿ, ಇಸ್ರೇಲ್ ಅಳಿಸಿ"
"Israel will Fail.. Palestine will  raise.."

ಭಾರತದಲ್ಲಿ ಕೆಲ ಮೂಲಭೂತವಾದಿ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ. 

ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ  ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. 

ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !

ಅಷ್ಟಕ್ಕೂ ಈ "Save Gaza.. Save Palestine" ಅನ್ನುವ  ಕೂಗು ಯಾಕೆ ಬೇಕು..? 
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?

ಖಂಡಿತ ಅಲ್ಲ.. 

ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು ೧೯೪೮ ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು. 


ಆದರೆ ಇಸ್ರೇಲ್ ನ ಅಸ್ತಿತ್ವವನ್ನು ಅರಬ್ ಒಕ್ಕೂಟ ಒಪ್ಪದೆ ಬಲವಾಗಿ ವಿರೋಧಿಸಿತು. ಅರಬ್ ಒಕ್ಕೂಟದ ರಾಷ್ಟ್ರಗಳಾದ ಲಿಬೆನಾನ್, ಸಿರಿಯಾ, ಇರಾಕ್, ಜೋರ್ಡಾನ್, ಈಜಿಪ್ಟ್ ಗಳು ಏಕಕಾಲಕ್ಕೆ ಇಸ್ರೇಲ್ ಅನ್ನು ಮುತ್ತಿದವು. ಇಸ್ರೇಲ್ ಗಿಡು ಅನಿರೀಕ್ಷಿತ... ಆದರೆ ಅಷ್ಟೂ ರಾಷ್ಟ್ರಗಳ ಏಕಕಾಲದ ಆಕ್ರಮಣವನ್ನು ಹಿಮ್ಮೆಟ್ಟಿಸಿ ಇಸ್ರೇಲ್ ವಿಜಯದ ನಗೆ ಬೀರಿತು. 

ಸೋಲಿನಿಂದ ಪಾಠ ಕಲಿಯದ ಅರಬ್ ಒಕ್ಕೂಟ ಮತ್ತೆ ಇಸ್ರೇಲ್ ಮೇಲೆ ಮುಗಿ ಬೀಳಲು ಸಮಯ ಕಾಯುತ್ತಿತ್ತು. ಭಯೋತ್ಪಾದನೆಯಿಂದ ಮಾತ್ರ ಇಸ್ರೇಲ್ ನ ನಾಶ ಸಾಧ್ಯ ಎಂಬ ನೀತಿಗೆ ಪಾಲೆಸ್ತೀನ್ ಅರಬ್ಬರು ಅದಾಗಲೇ ಅಂಟಿಕೊಂಡಿದ್ದರು. ಅರಬ್ ಒಕ್ಕೂಟವೂ ಇದೇ ಮನಸ್ಥಿತಿ ಹೊಂದಿತ್ತು. 


೧೯೬೭ ... ಪಾಲೆಸ್ತೀನ್ ಪರವಾಗಿ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ಗಳು ಮತ್ತೊಮ್ಮೆ ಯುದ್ಧ ಸಾರಿ ಇಸ್ರೇಲ್ ಗೆ ಅಖಾಖ ಕೊಲ್ಲಿಯ ಮೂಲಕ ಹಿಂದೂ ಮಹಾ ಸಾಗರಕ್ಕಿದ್ದ ಏಕೈಕ ಸಮುದ್ರ ಮಾರ್ಗವನ್ನು ಮುಚ್ಚಿ ಹಾಕಿ, ಇಸ್ರೇಲ್ ಹಡಗುಗಳ ಸಂಚಾರಕ್ಕೆ ನಿರ್ಭಂಧ ಹೇರಿತು. ಪರಿಣಾಮ ಇಸ್ರೇಲ್ ನ ಪ್ರತಿಧಾಳಿಗೆ ಪಾಲೆಸ್ತೀನ್ ತನ್ನ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಗಳನ್ನು ಕಳೆದುಕೊಳ್ಳುವುದರ ಜತೆಗೆ ಈಜಿಪ್ಟ್ ಸಿನಾಯ್ ದ್ವೀಪವನ್ನೂ, ಸಿರಿಯಾ ತನ್ನ ಗೊಲಾನ್ ಪ್ರದೇಶವನ್ನೂ ಕಳೆದುಕೊಂಡಿತು. 

ತನ್ನ ತಂಟೆಕೋರ ನೀತಿಯಿಂದ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡನ್ನೂ ಕಳೆದುಕೊಂಡ ಪಾಲೆಸ್ತೀನ್ ಅರಬರು ನೆಲೆಯಿಲ್ಲದಂತಾದರು. ಸುಮಾರು ಎರಡೂವರೆ ಲಕ್ಷದಷ್ಟು ಪಾಲೆಸ್ತೀನಿಯರು ನಿರಾಶ್ರಿತರಾಗಿ ಜೋರ್ಡಾನ್ ನಲ್ಲಿ ಆಶ್ರಯ ಪಡೆದರು. ಆದರೆ ಆಶ್ರಯ ನೀಡಿದ ದೇಶಕ್ಕೇ  ದ್ರೋಹ ಬಗೆದ ಪಾಲೆಸ್ತೀನಿಯರು ಪಾಲೆಸ್ತೀನ್ ಲಿಬರೇಶನ್ ಆರ್ಗನೈಶೇಷನ್ (ಪಿ.ಎಲ್.ಒ) ಮುಂದಾಳತ್ವದಲ್ಲಿ ಅರಾಜಕತೆ ಸೃಷ್ಟಿಸಿ ಜೋರ್ಡಾನಿನ ಸರಕಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪಿತೂರಿ ನಡೆಸಿ ವಿಫಲರಾದರು. ಅದೇ ಕಾರಣಕ್ಕೆ ಅವರನ್ನು ಜೋರ್ಡಾನಿನಿಂದ ಹೊರಗಟ್ಟಲಾಯಿತು. ಜೋರ್ಡಾನಿನಿಂದ ಗಡಿಪಾರಾಗಿ ಲಿಬೆನಾನಿಗೆ ಬಂದ ಪಾಲೆಸ್ತೀನಿಯರು ತಮ್ಮ ಗೆರಿಲ್ಲಾಗಳ ಮೂಲಕ ಇಸ್ರೇಲ್ ಮೇಲೆ ಧಾಳಿ ಶುರುವಿಟ್ಟುಕೊಂಡರು. ೧೯೮೨ ರಲ್ಲಿ ಭಯೋತ್ಪಾದನಾ ದಮನ ಕಾರ್ಯಾಚರಣೆ ಕೈಗೊಂಡ ಇಸ್ರೇಲ್ ಲಿಬೇನಾನಿನಲ್ಲಿದ್ದ ಪಿ.ಎಲ್.ಓ ಗೆರಿಲ್ಲಾಗಳನ್ನು ಹೊರಗಟ್ಟಿತು. 


ಇತ್ತ ೧೯೬೭ ರಲ್ಲಿ ತಾನು ಕಳೆದುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಳ್ಳಲು ೧೯೭೪ ರಲ್ಲಿ ಇಸ್ರೇಲ್ ಮೇಲೆ ಧಾಳಿ ಮಾಡಿದ ಈಜಿಪ್ಟ್ ಮತ್ತೊಮ್ಮೆ ಸೋತು ಹೋಯಿತು. ಯುದ್ಧದಿಂದ ತನ್ನ ಪ್ರದೇಶಗಳನ್ನು ಮರಳಿ ಪಡೆಯುವುದು ಅಸಾಧ್ಯ ಎಂದರಿತ ಈಜಿಪ್ಟ್ ಇಸ್ರೇಲ್ ಗೆ ಶಾಂತಿ ಸಂದೇಶ ಕಳುಹಿಸಿತು. ಮೊದಲಿನಿಂದಲೂ ಶಾಂತಿಯ ಪ್ರತಿಪಾದನೆ ಮಾಡುತ್ತಾ ಬಂದಿದ್ದ ಇಸ್ರೇಲ್ ತಕ್ಷಣ ಈ ಕುರಿತು ಕಾರ್ಯಪ್ರರ್ವತ್ತವಾಯಿತು. ೧೯೭೮ ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಈಜಿಪ್ಟ್ ಇಸ್ರೇಲ್ ನ ಅಸ್ತಿತ್ವವನ್ನು ಮಾನ್ಯ ಮಾಡಿತು. ಪ್ರತಿಯಾಗಿ ತಾನು ವಶಪಡಿಸಿದ್ದ ಈಜಿಪ್ಟ್ ನ ಸಿನಾಯ್ ದ್ವೀಪವನ್ನು ಹಿಂತಿರುಗಿಸಿತು. 

ಐತಿಹಾಸಿಕ ಮಹತ್ವ ಪಡೆದ ಈ ಶಾಂತಿ ಒಪ್ಪಂದ ಇಸ್ರೇಲ್ ನ ಶಾಂತಿ ಕುರಿತ ಬದ್ಧತೆಯನ್ನು ವಿಶ್ವಕ್ಕೇ ಪ್ರಚುರಪಡಿಸಿತು. ಪಾಲೆಸ್ತೀನ್ ಗೆರಿಲ್ಲಾ ಸಂಘಟನೆ ಪಿ.ಎಲ್.ಓ ಗೂ ಇದರ ಮನವರಿಕೆಯಾಗಿ ೧೯೮೮ ರಲ್ಲಿ ಪಿ.ಎಲ್.ಓ ಅಧ್ಯಕ್ಷ ಯಾಸಿರ್ ಅರಾಪತ್ ಇಸ್ರೇಲ್ ವಿರುದ್ಧದ ತನ್ನ ಹಿಂಸಾ ಮಾರ್ಗವನ್ನು ಕೈ ಬಿಡುತ್ತಿರುವುದಾಗಿ ಘೋಷಿಸಿದರು. ಮುಂದೆ ೧೯೯೩ ರ ಸೆಪ್ಟೆಂಬರ್ ೧೩ ರ ವಾಷಿಂಗ್ಟನ್ ಒಪ್ಪಂದದ ಮೂಲಕ ಪಿ.ಎಲ್.ಓ ಇಸ್ರೇಲ್ ನ ಅಸ್ತಿತ್ವವನ್ನು ಒಪ್ಪಿಕೊಂಡಿತು. ಪ್ರತಿಯಾಗಿ ಪಾಲೆಸ್ತೀನ್ ರಚನೆ ಕಾರ್ಯಕ್ಕೆ ಇಸ್ರೇಲ್ ಚಾಲನೆ ನೀಡಿ ಒಪ್ಪಂದದಂತೆ ಗಾಜಾ ಮತ್ತು ಜೆಂಕೋ ಪ್ರದೇಶಗಳನ್ನು ಪಾಲೆಸ್ತೀನ್ ಅರಬರಿಗೆ ಹಿಂತಿರುಗಿಸಲಾಯಿತು. ಮುಂದೆ ವೆಸ್ಟ್ ಬ್ಯಾಂಕ್ ಕೂಡ ಪಾಲೆಸ್ತೀನ್ ಅರಬ್ಬರ ಕೈಗೆ ಬಂತು. ಹಲವು ದಶಕಗಳ ಇಸ್ರೇಲ್-ಪಾಲೆಸ್ತೀನ್ ಸಮಸ್ಯೆ ಸುಖಾಂತ್ಯ ಕಂಡಿತ್ತು. 

ಆದರೆ.. 
೨೦೦೬ ರಲ್ಲಿ ಇಸ್ರೇಲ್ ನ ಕಡು ವಿರೋಧಿ ಪಾಲೆಸ್ತೀನ್ ಮೂಲಭೂತವಾದಿ ಉಗ್ರ ಸಂಘಟನೆ 'ಹಮಾಸ್' ಗಾಜಾ ಪ್ರಾಂತೀಯ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವುದರೊಂದಿಗೆ ರಕ್ತಪಾತದ ಮತ್ತೊಂದು ಇತಿಹಾಸ ತೆರೆದುಕೊಂಡಿತು. 

ಇರಾನ್ ಮುಂತಾದ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ಹಮಾಸ್ ಶಾಂತಿ ಒಪ್ಪಂದವನ್ನು ಭಂಗಗೊಳಿಸಿ ಇಸ್ರೇಲ್ ಮೇಲೆ ಧಾಳಿಯೆಸಗಲು  ಶುರುವಿಟ್ಟುಕೊಂಡಿತು. ಹಲವಾರು ಅಮಾಯಕ ಇಸ್ರೇಲ್ ನಾಗರಿಕರು ಬಲಿಯಾದರು. ತನ್ನ ರಾಕೆಟ್ ಧಾಳಿಗಳಿಂದ ಯಹೂದಿ ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲು ಯಶಸ್ವಿಯಾದ ಹಮಾಸ್ ನ ಹುಮ್ಮಸ್ಸು ಇಮ್ಮಡಿಯಾಯಿತು. ಶಸ್ತ್ರಾಸ್ತ್ರ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಂಡ ಹಮಾಸ್ ೨೦೧೨ ರಲ್ಲಿ ಮತ್ತೆ ಇಸ್ರೇಲ್ ಮೇಲೆ ರಾಕೆಟ್ ಧಾಳಿ ಆರಂಭಿಸಿತು. ಪ್ರತಿಯಾಗಿ ಧಾಳಿಗೈದ ಇಸ್ರೇಲ್ ಹಮಾಸ್ ನ ಸದ್ದಡಗಿಸಿದರೂ ಹಮಾಸ್ ನ ಉಗ್ರ ರೂಪಕ್ಕೆ ಕೊಂಚ ಭೀತಿಗೊಳಗಾದಂತೆ ಕಂಡಿದಂತೂ ನಿಜ... 

ಈಗ ಮತ್ತೆ ಇಸ್ರೇಲ್ ಮೇಲೆ ಧಾಳಿ ಆರಂಭಿಸಿರುವ ಹಮಾಸ್ ತಾನು ಇರಾನಿನಿಂದ ಪಡೆದ ರಾಕೆಟ್ ಗಳನ್ನು ಗಾಜಾದ ಗಡಿಯುದ್ದದ ನೂರಾರು ಸುರಂಗಗಳಲ್ಲಿ ಅಡಗಿಸಿಟ್ಟಿದೆ. ಪ್ರತಿಯಾಗಿ ವಾಯುದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಆ ಹುದುಗಿಸಿಟ್ಟಿರುವ ರಾಕೆಟ್ ಸಂಗ್ರಹವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಹಮಾಸ್ ನ ರಾಕೆಟ್ ಸಂಗ್ರಹವನ್ನು ನಾಶ ಮಾಡಬೇಕಾದರೆ ಇಡೀ ಗಾಜಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಇಂಚಿಂಚೂ ನೆಲವನ್ನೂ ಶೋಧಿಸುವ ಅನಿವಾರ್ಯತೆ ಇಸ್ರೆಲಿಗಿದೆ. ಪಾಲೆಸ್ತೀನ್ ನ ಸರ್ವಾಧಿಕಾರಿಯಾಗ ಹೊರಟ ಉಗ್ರ ಸಂಘಟನೆ ಹಮಾಸ್ ಇಸ್ರೇಲ್ ನ ನಾಯಕರಲ್ಲಿ ಭೀತಿ ಹುಟ್ಟಿಸಲು ಆರಂಭಿಸಿದ ರಕ್ತಪಾತ ಈಗ ಅದಕ್ಕೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ. 

ಭಯೋತ್ಪಾದನೆಯನ್ನು ಯಾವ ದೇಶವೂ ಸಹಿಸದು. ಇಸ್ರೆಲಿಗಿದು ತನ್ನ ರಾಷ್ಟ್ರದ ನಾಗರಿಕರ ರಕ್ಷಣೆಯ ಪ್ರಶ್ನೆ. ತನ್ನ ರಾಷ್ಟ್ರದ ರಕ್ಷಣೆಗಾಗಿ ಇಸ್ರೇಲ್ ಏನು ಮಾಡಲೂ ಹಿಂಜರಿಯದು. ಅದನ್ನೇ ಈಗ ಇಸ್ರೇಲ್ ಮಾಡುತ್ತಿರುವುದು. ಇಲ್ಲಿನ ಚಿತ್ರಣವಂತೂ ಸ್ಪಷ್ಟವಾಗಿದೆ. ಇದು ಭಯೋತ್ಪಾದನೆಯ ವಿರುದ್ಧದ ಇಸ್ರೇಲ್ ನ ಹೋರಾಟವೇ ವಿನಃ ಇಸ್ರೇಲ್ ತಾನಾಗಿಯೇ ಕಾಲು ಕೆರೆದುಕೊಂಡು ಮಾಡುತ್ತಿರುವ ಯುದ್ಧವಲ್ಲ. 

ಗಾಜಾ ಉಳಿಸಿ ಎಂದು ಬೊಬ್ಬಿರಿಯುತ್ತಿರುವವರು ಹಮಾಸ್ ಎಂಬ ನಿಷೇಧಿತ ಸಂಘಟನೆ ಮತ್ತು ಅದು ಜನವಸತಿ ಪ್ರದೇಶವನ್ನು ತಮ್ಮ ಅಡಗುದಾಣ ಮಾಡಿದ ಬಗ್ಗೆ ಚಕಾರವೆತ್ತುವುದಿಲ್ಲ ಇಂತವರು ಶಾಂತಿಯ ಪ್ರತಿಪಾದಕರಾಗಲು ಸಾಧ್ಯವೇನು?. ಜಗತ್ತಿನ ಪ್ರತಿಯೊಬ್ಬ ಶಾಂತಿ ಪ್ರತಿಪಾದಕನು ಇಲ್ಲಿ ಇಸ್ರೇಲ್ ನ ಗೆಲುವನ್ನೇ ಬಯಸುತ್ತಾನೆ. ಅಷ್ಟಕ್ಕೂ, ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪಾಲೆಸ್ತೀನಿಗಳ ಮೇಲಲ್ಲ. 





1 comment: