Monday, December 10, 2012

ಸರಣಿ ಸಣ್ಣ ಕತೆಗಳು (ಭಾಗ-1)






ಕಳುವು 
ಅದಾಗ ತಾನೇ ಕತ್ತಲು ಕವಿಯಲಾರಂಭಿಸಿತ್ತು. 'ಕಳ್ಳ' ತನ್ನ ಎಂದಿನ ಕೆಲಸಕ್ಕೆ ಹೊರಟು ನಿಂತ. ಆತ ಹೊರಟು 3-4 ಗಂಟೆಗಳೇ ಕಳೆದಿತ್ತು. ಎಂದಿನಂತೆ ಮಧ್ಯ ರಾತ್ರಿ ಸಮೀಪಿಸುವ ಹೊತ್ತಿಗೆ ಒಂದು ಮನೆಯನ್ನು ಆಯ್ದುಕೊಂಡು ಕಳ್ಳಹಾದಿಯಿಂದ ಒಳಗಡಿಯಿಟ್ಟ. ತಿಜೋರಿ ಹುಡುಕುತ್ತ ಆ ಮನೆಯ ಮಲಗುವ ಕೋಣೆಗೆ ಬಂದ ಅವನಿಗೆ ಅಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದ್ದು ಕಂಡುಬಂತು. ಅವರನ್ನು ಪ್ರಜ್ಞೆ ತಪ್ಪಿಸಲು ತಾನು ತಂದಿದ್ದ ಕ್ಲೋರೋಫಾರ್ಮ್ ಅನ್ನು ಕರವಸ್ತ್ರಕ್ಕೆ ಸಿಂಪಡಿಸಿ ಮೆಲ್ಲನೆ ಮಂಚದ ಬಳಿಗೆ ಬಂದ.
ಅಷ್ಟೆ...! ಕಿಟಕಿಯಿಂದ ಒಳ ಬರುತ್ತಿದ್ದ ಚಂದ್ರನ ಮಂದ ಬೆಳಕಿನಲ್ಲಿ ಗಂಡಸನ್ನು ತಬ್ಬಿ ಮಲಗಿದ್ದ ಆ ಹೆಂಗಸಿನ ಮುಖ ನೋಡಿದವನೆ ಅದುರಿ ಹೋದ.
ಆಕೆ ಕಳ್ಳನ ಹೆಂಡತಿಯಾಗಿದ್ದಳು.
.



ವಿಪರ್ಯಾಸ..
ಒಂದು ದೊಡ್ಡ ಕಂಪನಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆತ ನಿನ್ನೆ ತಾನೇ ವ್ಯವಹಾರದಲ್ಲಿ ಗೋಲ್ ಮಾಲ್ ಮಾಡಿ 25 ಲಕ್ಷ ಹಣ ಹೊಡೆದುಕೊಂಡಿದ್ದ. ಅದು ಕೂಡ ಯಾರಿಗೂ ಸುಳಿವು ಸಿಗದಂತೆ.. ಆದರೂ ಇಂದು ಸಹಜವಾಗಿಯೇ ಒಂಥರಾ ಭಯ-ದುಗುಡದಲ್ಲೇ ಆಫೀಸಿಗೆ ಹೊರಟು ನಿಂತಿದ್ದ ಆತ. ಯಾರಿಗಾದರೂ ಅನುಮಾನ ಬರಬಹುದೇನೋ ಎಂಬ ಆತಂಕದಲ್ಲಿ ಆಫೀಸಿಗೆ ಬಂದವನಿಗೆ ಆಶ್ಚರ್ಯ ಕಾದಿತ್ತು. ಎಲ್ಲರೂ ಇವನನ್ನು ಮುತ್ತಿಕೊಂಡು 'ಕಂಗ್ರಾಟ್ಸ್ ಕಂಗ್ರಾಟ್ಸ್..' ಎಂದು ಶುಭಾಶಯಗಳನ್ನು ತಿಳಿಸಲಾರಂಭಿಸಿದರು. ಇವನಿಗೆ ಗೊಂದಲದ ಜತೆಗೆ ಭಯ ಕೂಡ ದುಪ್ಪಟ್ಟಾಯಿತು. ತಾನು ಮಾಡಿದ 'ಮಹಾ ಕಾರ್ಯ'ಕ್ಕೆ ಅಭಿನಂದನೆ ಯಾಕೆ ಹೇಳುತ್ತಿದ್ದಾರೆ ಅಂತ ಅನ್ನಿಸದಿರಲಿಲ್ಲ ಆತನಿಗೆ.
ಅನುಮಾನದಿಂದಲೇ ನೋಟೀಸ್ ಬೋರ್ಡ್ ನಲ್ಲಿ ಅದಾಗ ತಾನೇ ಬಿತ್ತರಗೊಂಡಿದ್ದ ಹಾಳೆಯತ್ತ ಕಣ್ಣು ಹಾಯಿಸಿದ. 
ಅಲ್ಲಿ ಆತನ ಹೆಸರಿನ ಜೊತೆಗೆ ಹೀಗೆ ಬರೆದಿತ್ತು, 
"... ಈ ವರ್ಷದ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ಪಡೆದ ನಿಮಗೆ ಹಾರ್ದಿಕ ಅಭಿನಂದನೆಗಳು..."

.




No comments:

Post a Comment