Friday, August 9, 2013

ಈ ಬಂಧನ...


ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮ ಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ 

ನಾ ನೆಲವು ನೀನೆ ತಾರೆ 
ಎಂದೂ ಎಟುಕದ ಬಂಧವೂ  
ನೀ ಹುಣ್ಣಿಮೆ ನಾ ಕತ್ತಲು 
ಬೆರೆವುದೆಂತಿದು ತ್ರಾಸವೂ 

ಕಂಡ ಕನಸುಗಳು ಬಾಲಿಶ 
ಕರಗಿ ಹೋಗಿವೆ ಭಾಗಶಃ 
ಹಣತೆ ಸಾಲು ಮರಣಿಸಿ 
ಶ್ರಾದ್ಧವಾಗಿದೆ ನಗುವಿಗೆ 

ನೀರ ಹನಿಗಳು ಇಂಗಿ ಹೋಗಿವೆ 
ಬರಡು ಭೂಮಿಯು ಈ ಮನ 
ನೀನೆ ಬರದೆ ದೀಪವೆಲ್ಲಿದೆ 
ಬಾಳು ಬರಿಯ ಕಾನನ 

ನನ್ನ ಎದೆಯ ಗುಡಿಸಲಲ್ಲಿ 
ಬರೆದೆ ನಾನು ಪ್ರೇಮಕತೆಯ 
ನಿನ್ನ ಹೃದಯ ಅರಮನೆಗೆ
ಹೇಗೆ ನಾನು ಬರಲಿ... ಹೇಗೆ ನಾನು ಬರಲಿ... 





Thursday, August 8, 2013

ಕರ್ನಾಟಕ ಉಪಚುನಾವಣೆ: ಬಿಜೆಪಿ ಅಸಹಾಯಕತೆಯೂ, ಜೆಡಿಎಸ್ ಅನಿವಾರ್ಯತೆಯೂ...



ಅಷ್ಟೇನೂ ಮಹತ್ವದಲ್ಲ ಎಂದೇ ಪರಿಗಣಿತವಾಗಿದ್ದ ಕರ್ನಾಟಕದಲ್ಲಿನ ಎರಡು ಲೋಕಸಭಾ ಉಪಚುನಾವಣ ಕಣ ಇಂದು ಇಡೀ ರಾಜ್ಯದ ಗಮನ ಸೆಳೆದಿದೆ. 

ಕಾರಣ ಕುಟುಂಬ ರಾಜಕಾರಣ ಮತ್ತು ಸ್ವ ಪ್ರತಿಷ್ಠೆ..
ಲೋಕಸಭೆಯ ಅವಧಿ ಇನ್ನೇನು ಮುಗಿಯುವುದರಲ್ಲಿದೆ. ಈ ವರ್ಷದ ಕೊನೆ ಅಥವಾ 2014 ರ ಆರಂಭದಲ್ಲಿ ಲೋಕಸಭೆ ಮಹಾ ಸಮರ ನಡೆಯುವುದು ಖಚಿತ. ಹಾಗಿದ್ದರೂ ಇಂದು ಈ ಎರಡು ಚುನಾವಣ ಕಣಗಳು ಪಡೆದುಕೊಳ್ಳುತ್ತಿರುವ ಕಾವು ಮಾತ್ರ ಕಡಿಮೆಯಾಗಿಲ್ಲ. 
 
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಳೆದ ಒಂದು ದಶಕದಿಂದ ಕುಟುಂಬ ದ್ವೇಷ ರಾಜಕಾರಣದ ಅಖಾಡವಾಗಿ ಬೆಳೆದು ಬಂದಿದೆ. ಒಂದೆಡೆ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ ದೇವೇಗೌಡ ಕುಟುಂಬ. ಇಲ್ಲಿ ಅಭ್ಯರ್ಥಿಗಳು ಯಾರೇ ಆಗಿದ್ದರೂ ನಿಜವಾದ ಸ್ಪರ್ಧೆ ಇರುವುದು ಮಾತ್ರ ದೇವೇಗೌಡ ಡಿಕೆಶಿ ಮಧ್ಯೆ. ಪ್ರತಿ ಚುನಾವಣೆಯನ್ನೂ ತನ್ನ ಕುಟುಂಬದ ಸ್ವಪ್ರತಿಷ್ಠೆಯಾಗಿ ಪರಿಗಣಿಸಿರುವ ಎರಡೂ ಬಣಗಳು ಮತ್ತೆ ಕಾಳಗಕ್ಕೆ ಅಣಿಯಾಗಿವೆ. ಬಿಜೆಪಿಯದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಾತ್ರ. ಅದೇ ಕಾರಣಕ್ಕೆ ಬಿಜೆಪಿ ಮೈತ್ರಿಯ ನೆಪದಲ್ಲಿ ಶಸ್ತ್ರ ಸನ್ಯಾಸ ಮಾಡಿದೆ. ಬೆಂಗಳೂರು ಗ್ರಾಮಾಂತರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್, ಮೂರು ಜೆ.ಡಿ.ಎಸ್ ಶಾಸಕರನ್ನು ಹೊಂದಿ ಸಮಬಲ ಸಾಧಿಸಿದ್ದರೂ ಬಿಜೆಪಿ ಹಾಗು ಎಸ್ಪಿ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನವನ್ನು ಪಡೆದಿದ್ದನ್ನು ಗಮನಿಸಿದರೆ ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕಂಡುಬರುತ್ತದೆ. ಆದರೆ ಎದುರಾಳಿ ಡಿಕೆಶಿ ಕುಟುಂಬ ಈ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿದ್ದು ಜೆಡಿಎಸ್ ಅನ್ನು ಭಯಗೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. 
 
 
ಗ್ಲಾಮರ್ ಪ್ರವೇಶದಿಂದ ಸುದ್ದಿಯಲ್ಲಿರುವ ಮತ್ತೊಂದು ಕ್ಷೇತ್ರ ಮಂಡ್ಯ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ದ್ವೇಷ ರಾಜಕಾರಣದಿಂದ ಹೊರತಾಗಿದ್ದರೂ ಮೋಹಕ ತಾರೆ ರಮ್ಯ ತನ್ನ ಜನಪ್ರಿಯತೆಯಿಂದ ಚುನಾವಣೆಯ ಕಾವು ಉಳಿಸಿಕೊಂಡಿದ್ದಾರೆ. ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ ೫ ಜೆಡಿಎಸ್, ಎರಡು ಕಾಂಗ್ರೆಸ್ಸ್, ಒಂದು ಪಕ್ಷೇತರ ಶಾಸಕರಿದ್ದಾರೆ. ಕಳೆದ ಬಾರಿ ಜೆಡಿಎಸ್ ನ ಚೆಲುವರಾಯಸ್ವಾಮಿ ಪ್ರತಿನಿಧಿಸಿದ ಕ್ಷೇತ್ರವಿದು. ಜೆಡಿಎಸ್ ನ ಪ್ರಭಾವ ಸ್ಪಷ್ಟವಾಗಿದ್ದರೂ ಸಚಿವ ಅಂಬರೀಶರ ವಿಶಿಷ್ಟ (ವಿಚಿತ್ರ) ಮ್ಯಾನರಿಸಂ ಮತ್ತು ನಟಿ ರಮ್ಯಾ ಜನಪ್ರಿಯತೆ ಕಾಂಗ್ರೆಸ್ಸ್ ಗೆ ಆಶಾವಾದ ಮೂಡಿಸಿದೆ ಎನ್ನಬಹುದು. ಜತೆಗೆ ರಮ್ಯಾ ಸಾಕು ತಂದೆಯವರ ಸಾವು ತುಸು ಅನುಕಂಪದ ಮತ ಗಳಿಕೆಗೆ ಕಾರಣವಾಗಬಹುದು. ಆದರೆ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದಕ್ಕೆ ಫಲಿತಾಂಶವೆ ಉತ್ತರ ನೀಡಬೇಕು. ಕಾಂಗ್ರೆಸ್ಸ್ ಜೆಡಿಎಸ್ ನೇರ ಹಣಾಹಣಿಗೆ ಹೆಸರಾಗಿರುವ ಮಂಡ್ಯದಲ್ಲಿ ಬಿಜೆಪಿ ಇನ್ನೂ ಅಂಬೆಗಾಲಿಡುತ್ತಿರುವ ಶಿಶು. ಬಿಜೆಪಿ ಇಲ್ಲಿ ಮೈತ್ರಿಗೆ ಮುಂದಾಗದೆ ಸ್ಪರ್ಧಿಸಿದ್ದರೂ ಬಹುಶಃ ಹಿಡಗಂಟು ಕಳೆದುಕೊಳ್ಳುತ್ತಿತ್ತೇನೋ. 
 
 
ಎರಡೂ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದ ಕ್ಷೇತ್ರಗಳು. ಹಾಗಾಗಿ ಇಲ್ಲಿ ಜೆಡಿಎಸ್ ಗೆ ಗೆಲುವು ಅನಿವಾರ್ಯ. ಕಾಂಗ್ರೆಸ್ಸ್ ಗೆ ಇಲ್ಲಿ ಕಳೆದುಕೊಳ್ಳುವುದೇನಿಲ್ಲದಿದ್ದರೂ ರಾಜ್ಯದಲ್ಲಿ ಅವರದೇ ಪಕ್ಷದ ಸರಕಾರವಿರುವ ಕಾರಣ ಗೆಲ್ಲಲೇಬೇಕಾದ ಒತ್ತಡವಿದೆ. ಅದೇ ಕಾರಣಕ್ಕೆ ಸರ್ಕಾರಕ್ಕೆ ಸರ್ಕಾರವೇ ಚುನಾವಣಾ ಪ್ರಚಾರಕ್ಕೆ ಧುಮುಕಿದೆ. ಈ ತೀವ್ರ ಪೈಪೋಟಿಯಿಂದ ತುಸು ವಿಚಲಿತವಾಗಿರುವ ಜೆಡಿಎಸ್ ಗೆ ಬಿಜೆಪಿಯ ಮೈತ್ರಿ ಹಸ್ತ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನಬಹುದು. ಇನ್ನು ರಾಷ್ಟ್ರೀಯ ಪಕ್ಷ ಬಿಜೆಪಿಯದ್ದು ಇಲ್ಲಿ ಅಸಹಾಯಕ ಪರಿಸ್ಥಿತಿ. ಸ್ಪರ್ಧಿಸಿ ಮಾನ ಕಳೆದುಕೊಳ್ಳುವುದಕ್ಕಿಂತ ಸ್ಪರ್ಧಿಸದೆ ಇರುವುದು ಲೇಸೆಂದು ನಿರ್ಧರಿಸಿದಂತಿದೆ ರಾಜ್ಯ ಬಿಜೆಪಿ ಹೈಕಮಾಂಡ್. ವಿಧಾನಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಬಿಜೆಪಿ ಮೈತ್ರಿಗೆ ಮುಂದಾಗುವ ಮೂಲಕ ಮತ್ತೊಂದು ಅವಮಾನವನ್ನು ತಪ್ಪಿಸುವ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಮಂತ್ರದೊಂದಿಗೆ ಅಖಾಡಕ್ಕಿಳಿಯುವ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಸೋಲುವುದು ಖಂಡಿತ ಬೇಕಿಲ್ಲ. ಅಂತೂ ಇಂತೂ ಮೈತ್ರಿಯಾಗಿದೆ. ಒಬ್ಬರಿಗಿದು ಅನಿವಾರ್ಯವಾದರೆ, ಮತ್ತೊಬ್ಬರದು ಅಸಹಾಯಕ ಸ್ಥಿತಿ.
 
ಇನ್ನಂತೂ ಕಾಯುವ ಸಮಯ. ಜೆಡಿಎಸ್ ನ ಭದ್ರಕೋಟೆಗಳಿಗೆ ಕಾಂಗ್ರೆಸ್ಸ್ ಲಗ್ಗೆ ಹಾಕುವುದೋ ಇಲ್ಲವೋ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕು. ಕಾದು ನೋಡೋಣ.



 

Wednesday, June 26, 2013

ಹಿತವಚನ...(!)


ಮರ ಸುತ್ತುವುದಕ್ಕಿಂತ
ಮರ ಹತ್ತುವುದೇ ಲೇಸು
ಹಣ್ಣೆ ಲೇಸಯ್ಯ ಹೆಣ್ಣಿಗಿಂತ

ಕಾಯೋ ಕೆಲಸವು ಕಷ್ಟ
ಕೇಳದ ಹೃದಯವಿದು ದುಷ್ಟ
ಕಾಲವಿದು ಶ್ರೇಷ್ಠ ವ್ಯರ್ಥ ಪ್ರೀತಿಗಿಂತ

ಸೇವೆ ಮಾಡುವುದು ವ್ಯರ್ಥ
ಕೊನೆಗೆಲ್ಲಿದೆ  ಅರ್ಥ
ದುಡಿಮೆಯೇ ಬೇಕಯ್ಯ ಕಡಿಮೆ ಪ್ಯಾರ್ ಗಿಂತ

ಮರ ಸುತ್ತುವುದಕ್ಕಿಂತ
ಮರ ಹತ್ತುವುದೇ ಲೇಸು
ಹಣ್ಣೆ ಲೇಸಯ್ಯ ಹೆಣ್ಣಿಗಿಂತ 


Monday, June 17, 2013

ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ (ಎನ್.ಡಿ.ಎ ಬಿರುಕಿನ ಅವಲೋಕನ)


ಅತ್ತ ನರೇಂದ್ರ ಮೋದಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಘೋಷಣೆ ಯಾಗುತ್ತಿದ್ದಂತೆ NDA ಯಲ್ಲಿ ಮೊದಲ ಹಾಗು ನಿರೀಕ್ಷಿತ ಬಿರುಕು ಕಾಣಿಸಿಕೊಂಡಿದೆ. NDA ಪಾಳಯದ ಎರಡನೇ ಅತೀ ದೊಡ್ಡ ಪಕ್ಷವಾಗಿದ್ದ JDU ಎನ್ ಡಿ ಎ ಜತೆಗಿನ ತನ್ನ 17 ವರ್ಷಗಳ ಸಂಬಂಧ ಕಳಚಿ ಈಗ ಮೂರನೇ ರಂಗದತ್ತ ಚಿತ್ತ ನೆಟ್ಟಿದೆ. ಇದೊಂಥರಾ ಒಂದನೇ ಕ್ಲಾಸಿನ ಹುಡುಗ SSLC ಬರೆಯುವ ಕನಸು ಕಂಡಂತೆ...

ಇದೊಂದು ನಿರೀಕ್ಷಿತ ಬೆಳವಣಿಗೆ...
ಅದೇ ಕಾರಣಕ್ಕಾಗಿ JDU BJP ವಿಚ್ಚೇದನದ ಬಗ್ಗೆ ಯಾವುದೇ ರೀತಿಯ ಆಶ್ಚರ್ಯವಾಗುವುದಿಲ್ಲ. ಯುಪಿಎ ಭ್ರಷ್ಟಾಚಾರದ ಬಗೆಗಿನ ಜೆಡಿಯು ಮೌನ ಹಾಗು ಇದೇ ವರ್ಷದ ಎಪ್ರಿಲ್ ನಲ್ಲಿ ಕೇಂದ್ರದ UPA ಸರಕಾರ ಬಿಹಾರಕ್ಕಾಗಿ 12,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿದಾಗಲೇ ಇದರ ವಾಸನೆ ಬಡಿದಿತ್ತು. ಇಲ್ಲಿ JDU ನ ಈ ನಡೆಯ ಹಿಂದೆ ಮೂರು  ಪ್ರಮುಖ ತೆರೆ ಮರೆ ಕಾರಣಗಳಿವೆ
೧) ಕೇಂದ್ರದಿಂದ ಇನ್ನಷ್ಟು ಅನುದಾನ ಗಿಟ್ಟಿಸಿಕೊಳ್ಳುವುದು.
೨) ಬಿಹಾರದಲ್ಲಿನ 16.5 % ಮುಸ್ಲಿಂ ವೋಟು ಬ್ಯಾಂಕ್ ಓಲೈಕೆ.
೩) ಮೂರನೇ ರಂಗದ ನಾಯಕತ್ವ ವಹಿಸಿ ಮುಂದಿನ ಸರಕಾರದಲ್ಲಿ ಪ್ರಧಾನ ಪಾತ್ರ ವಹಿಸುವುದು.
ಇವೆಲ್ಲ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನುವುದಕ್ಕೆ ಮಾತ್ರ ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶದವರೆಗೆ ಕಾಯಬೇಕು. ಪ್ರಸುತ ನೋಡಿದಾಗ ಇವೆಲ್ಲ ತಲೆಕೆಳಕಾಗೋ ಸಾಧ್ಯತೆಗಳೇ ಹೆಚ್ಚು...

ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಜತೆಗಿದ್ದು ಬಿಜೆಪಿ ಪ್ರಭಾವವನ್ನು ಬಳಸಿಕೊಂಡ ಜೆಡಿಯು ಈಗ ನಡೆಸುತ್ತಿರುವುದು ಪಕ್ಕಾ ಸ್ವಾರ್ಥ ರಾಜಕಾರಣ. ಇಲ್ಲಿ ಜೆಡಿಯುನ ಇತರ ನಾಯಕರಿಗಿಂತಲೂ ನಿತೀಶ್ ಕುಮಾರ್ ಅವರ ವಯಕ್ತಿಕ ಸ್ವಾರ್ಥ ಮತ್ತು   ಅಹಂ ಎದ್ದು ಕಾಣುತ್ತದೆ. ಬಿಹಾರದಾದ್ಯಂತ ಮೋದಿ ಬ್ಯಾನರ್ ಕಂಡು ಬಿಜೆಪಿ ಕಾರ್ಯಕಾರಿಣಿ ಮಂಡಳಿಗೆ ಏರ್ಪಡಿಸಿದ್ದ ಔತಣಕೂಟವನ್ನು ರದ್ದುಪಡಿಸಿದ  ಹಾಗು ಗುಜರಾತ್ ನಲ್ಲಿ 2008 ರಲ್ಲಿ ಉಂಟಾದ ಕೋಸಿ ಪ್ರವಾಹ ಪೀಡಿತರ ಪರಿಹಾರ ಕಾರ್ಯಕ್ಕಾಗಿ 5 ಕೋಟಿ ನೀಡಿ ನಂತರ ವಾಪಾಸ್ಸು ಪಡೆದ ವ್ಯಕ್ತಿಯಿಂದ ಇನ್ನು ಏನು ತಾನೇ ನಿರೀಕ್ಷಿಸಬಹುದು ?!

ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 116 ಸೀಟು ಹೊಂದಿದೆ. ಜೆಡಿಯು 20... ಬಿಹಾರದ ಜನತೆ ಎನ್ ಡಿ ಎ ಗೆ ನೀಡಿದ ಜನಾದೇಶವನ್ನು ತಿರಸ್ಕರಿಸಿರುವ ನಿತೀಶ್ ನೇತೃತ್ವದ ಜೆಡಿಯು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ 10-15 ಸ್ಥಾನ ಪಡೆದರೆ ಅದೇ ಹೆಚ್ಚು.. ಜೆಡಿಯು ನ ಈ ನಡೆಯಿಂದ ಲಾಭವಾಗುವುದು ಬಿಜೆಪಿ ಹಾಗು RJD ಗೆ... ಬಹುಶಃ RJD ಅಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿಕೊಂಡರೂ ಆಶ್ಚರ್ಯವಿಲ್ಲ. ಆದರೆ ಇದು RJD ಕಾಂಗ್ರೆಸ್ಸ್ ಹಾಗು ಪಾಸ್ವಾನ್ ಅವರ ಮೈತ್ರಿಯ ಮೇಲೆ ನಿರ್ಧಾರವಾಗುತ್ತದೆ. ಇನ್ನೊಂದು ಕೋನದ ಪ್ರಕಾರ ಮುಸ್ಲಿಂ ವೋಟು ಬ್ಯಾಂಕ್ ಅನ್ನೇ ಈ ಬಾರಿ  ಹೆಚ್ಚಾಗಿ ನಂಬಿಕೊಂಡಿರುವ ಜೆಡಿಯುನಿಂದಾಗಿ ಮುಸ್ಲಿಂ ವೋಟು ಬ್ಯಾಂಕ್ ವಿಭಜನೆಯಾಗಿ ಬಿಜೆಪಿ ಗೆ ಲಾಭವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು . ಜತೆಗೆ ಬಿಹಾರದ ಪ್ರಧಾನ ಪ್ರತಿ ಪಕ್ಷ ಸ್ಥಾನ ಬಿಜೆಪಿ ಗೆ ಸಿಗುತ್ತಿರುವುದು ಇದಕ್ಕೊಂದು ಪ್ಲಸ್ ಪಾಯಿಂಟ್. ಈ ಒಟ್ಟಾರೆ ಬೆಳವಣಿಗೆ ಬಿಜೆಪಿ ಗೆ ಲಾಭದಾಯಕವೇ ವಿನಃ ಯಾವುದೇ ರೀತಿಯಲ್ಲಿ ಮಾರಕವಾಗುವುದಿಲ್ಲ.

ಇನ್ನು ಮೂರನೇ ರಂಗ... ಇದನ್ನು ಎಷ್ಟೋ ವರ್ಷಗಳಿಂದ ಕೇಳ್ತಾ ಇದೀವಿ. ಇದರಲ್ಲಿ ಇದ್ದ ಪಕ್ಷ ಮಾರನೇ ದಿನ ಅದೇ ರಂಗದಲ್ಲಿ ಇರುತ್ತದೆ ಅನ್ನುವ ನಂಬಿಕೆಯಂತೂ ಇಲ್ಲ. ಇದೊಂದು ಜಿಗಿತದ ರಂಗ ಇದ್ದ ಹಾಗೆ.. ಈ ಮೊದಲು ಕಾಂಗ್ರೆಸ್ಸ್ ಗೆ ಪರ್ಯಾಯ ಶಕ್ತಿಯನ್ನು ರೂಪಿಸಬೇಕೆಂದು NDA ಕಟ್ಟಲಾಯಿತು. ಇದರಲ್ಲಿ NDA ಯಶಸ್ವಿಯೂ ಆಯ್ತು. ಆದರೆ NDA ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಗೆ ಪರ್ಯಾಯ ಶಕ್ತಿ ಬೆಳೆಸುವ ಬಗ್ಗೆ ಚಿಂತನೆಗಳು ಆರಂಭವಾದವು. ಆದರೆ ಇಂದಿನವರೆಗೂ ಆ ಪ್ರಯತ್ನ ಮಾತ್ರ ಯಶಸ್ವಿಯಾಗಿಲ್ಲ. ತೃತೀಯ ರಂಗದ ಸತತ ವಿಫಲತೆಗೆ ಪ್ರಮುಖ ಕಾರಣ ಸ್ಥಿರ ನಾಯಕತ್ವದ ಕೊರತೆ. ಯುಪಿಎ ಗೆ ಸೋನಿಯಾ, NDA ಗೆ ಹಿಂದೆ ಅಟಲ್ ಈಗ ಆಡ್ವಾಣಿ ಹೀಗೆ ಒಂದು ಸ್ಥಿರ ನಾಯಕತ್ವವಿದೆ. ಆದರೆ ಮೂರನೇ ರಂಗಕ್ಕೇ ??! ಇವತ್ತು ಒಂದು ಹೆಸರು ಹೇಳಿದರೆ ನಾಳೆ ಅದೇ ಹೆಸರು ಉಳಿದಿರುತ್ತದೆ ಅನ್ನುವ ನಂಬಿಕೆಯಿಲ್ಲದ ಕಾರಣ ನಾನು ಆ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾವುದೇ ಒಂದು ಪ್ರಬಲ ರಾಷ್ಟ್ರೀಯ ಪಕ್ಷದ ಬೆಂಬಲ ಇಲ್ಲದೆ ರಾಜಕೀಯ ರಂಗವನ್ನು ಬೆಳೆಸುವುದು ಖಂಡಿತ ಅಸಾಧ್ಯ. ಹಾಗಾಗಿ ಬರೀ ಪ್ರಾದೇಶಿಕ ಮಟ್ಟದ ಪಕ್ಷಗಳಿಂದ ಕೂಡಿದ ಮೂರನೇ ರಂಗ ಯಶಸ್ವಿಯಾಗುವುದಂತೂ ದೂರದ ಮಾತು.. !! ಮೊನ್ನೆ ಮೊನ್ನೆ ಮೂರನೇ ರಂಗದ ಮಾತುಕತೆ ನಡೆದು ಕೆಲ ದಿನಗಳಾಗುವಷ್ಟರಲ್ಲಿ ಮೂರನೇ ರಂಗದ ಸಂಭಾವ್ಯ ಪಕ್ಷವೆಂದು ಗುರ್ತಿಸಲ್ಪಟ್ಟಿರುವ ತೃಣಮೂಲ ಕಾಂಗ್ರೆಸ್ಸ್ ಮುನಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಇನ್ನು ಮುಂದಿನ ದಿನಗಳಲ್ಲಿ ಹೇಗೆ ಅನ್ನುವ ಬಗ್ಗೆ ಇದೇ ಸುಳಿವು ನೀಡುತ್ತದೆ.

ಇಷ್ಟರವರೆಗೆ ಮೋದಿ NDA ಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಇದ್ದ ಅಡ್ಡಿಯಂತೂ ಈಗ ನಿವಾರಣೆಯಾಗಿದೆ. ಮುಂಬರುವ ದಿನಗಳಲ್ಲಿ ನಮೋ ಮಿತ್ರರು NDA ಸೇರಿಕೊಳ್ಳುವ ಅವಕಾಶಗಳೂ ದಟ್ಟವಾಗಿದೆ. ತಮಿಳುನಾಡಿನ ಜಯಲಲಿತಾ   ಇದರಲ್ಲಿ ಪ್ರಮುಖರು. ಹಾಗೆಯೇ ಮೋದಿ ನಾಯಕತ್ವದಿಂದ ಕರ್ನಾಟಕದಲ್ಲಿ ಯಡಿಯೂರಪ್ಪರ ಬಿಜೆಪಿ ಮರು ಸೇರ್ಪಡೆಗೆ ದಾರಿ ಸುಗಮವಾದಂತಾಗಿದೆ. ಒಟ್ಟಾರೆ ಬೆಳವಣಿಗೆಗಳ ಅವಲೋಕನದಿಂದ ಒಂದಂತೂ ದೃಢವಾಗುತ್ತದೆ. ಅದೇನೆಂದರೆ, ಬಿಜೆಪಿ ಇದರಿಂದ ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚಿದೆ...

ಕೊನೇ ಮಾತು : ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ ನಿತೀಶ್ ಏನು, ಯಾರಿಂದಲೂ ಗುಣಪಡಿಸಲಾಗದು...!





Friday, May 31, 2013

ಮನದ ಮುಂಗಾರು...


ಅಂತರಾತ್ಮವು ಗುನುಗುತ್ತಿದೆ ನಿನ್ನ ಹೆಸರಿನಲ್ಲೇ ಕವಿತೆ
ಅಂತರಾಳವು ಕೂಗುತ್ತಿದೆ ನೀನೆ ನನ್ನ ಹಣತೆ
ನೀನೊಂದು ಬರೀ ಹುಡುಗಿ ಈ ಜಗಕೆ
ನೀನೇ ಜಗವು ಎನ್ನ ಮನಕೆ...

ನಿನ್ನ ಮುಂಗುರುಳ ಆ ಸಾಲು
ಕಣ್ತುಂಬಿ, ಮನದಲಿ ಮುಂಗಾರು
ನಿನ್ನ ಮೋಹಕ ನಗುವಿನ ಸರಿಗಮಕೆ
ನನ್ನ ಹೃದಯದಿ ಖುಷಿಯ ಮೆರವಣಿಗೆ...

ನಡೆಯಲು ನಿನ್ನ ವೈಯಾರ
ನೋಡುತ ಮನ ಬಂಗಾರ
ನಿನ್ನ ಮುತ್ತುಗಳುದುರುವ ಮಾತಿಗೆ
ಕೊಡುವೇ ಪ್ರೀತಿಯ ವಂತಿಗೆ...

ಕಾಲಿನ ಗೆಜ್ಜೆಯ ಸವಿಶ್ರುತಿಗೆ
ನನ್ನೆದೆ ಮಿಡಿತದ ವಂದನೆ
ನಿನ್ನೆಜ್ಜೆ ಗುರುತಲಿ ಐಕ್ಯನಾಗಲೇ
ಸಖ್ಯವ ಬಯಸಿ ನಿನ್ನಲೇ...




Thursday, May 16, 2013

'ವಂದೇ ಮಾತರಂ' ದೇವರ ಭಜನೆಯಲ್ಲ...... ನೂರು ಕೋಟಿ ಭಾರತೀಯರ ನಾಡಿ ಮಿಡಿತ......!!





ವಂದೇ ಮಾತರಂ.... 
ಎದೆಯುಬ್ಬಿಸಿ ಗರ್ವದಿಂದ ಗರ್ಜಿಸಿದಿವೆಂದರೆ ಮೈ ಮನಸ್ಸುಗಳು ರೋಮಾಂಚನಗೊಳ್ಳುತ್ತವೆ.. ಅದೆಂತಾ ಶಕ್ತಿಯಿದೆ ಈ 'ವಂದೇ ಮಾತರಂ' ನಲ್ಲಿ. ಅದೆಷ್ಟೋ ಹೋರಾಟಗಳ ಸ್ಪೂರ್ತಿ ಇದು, ದೇಶ ಪ್ರೇಮವ ಬಡಿದೆಬ್ಬಿಸುವ ಬೀಜಮಂತ್ರ , ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿಗೀತೆ, ಪ್ರತಿಯೊಬ್ಬ  ಭಾರತೀಯನ ನಾಡಿ ಮಿಡಿತ...  ವಂದೇ ಮಾತರಂ ಅನ್ನು ವಿಶ್ಲೇಶಿಸ ಹೊರಟರೆ ಆ ವಿಶ್ಲೇಷಣೆಯೇ ಒಂದು ವೀರ ಗೀತೆ ಯಾದೀತು...!!!!

ಆದರೆ... ವಂದೇ ಮಾತರಂ ಅನ್ನು ಗೌರವಿಸುವ ವೀರ ಮನಸ್ಸುಗಳ ನಡುವೆ ಧರ್ಮದ ನೆಪವೊಡ್ಡಿ ಅದನ್ನು ವಿರೋಧಿಸುವ ಕೆಲ ವಿಷ ಮನಸ್ಸುಗಳೂ ತುಂಬಿರುವುದು ಖೇದಕರ..


ಮೊನ್ನೆ ಮೊನ್ನೆ ತಾನೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ವಂದೇ ಮಾತರಂ ಹಾಡುವುದಿಲ್ಲ ಎಂದು ವಂದೇ ಮಾತರಂ ಹಾಡಿನ ಮಧ್ಯೆಯೇ ಸಂಸತ್ತಿನಿಂದ ಹೊರನಡೆದು ಉದ್ದಟತನ ತೋರಿದ ಬಿಎಸ್ಪಿ ಸಂಸದ ಶಫಿಕುರ್ ರೆಹಮಾನ್ ಬಗ್ಗೆ ಕೇಳಿರುತ್ತೀರಿ. ಇಂತಹ ಮತಾಂಧವಾದದ ನಡೆ ಇದೇ ಮೊದಲಲ್ಲ. ವಂದೇ ಮಾತರಂ ಅನ್ನು ವಿರೋಧಿಸಿ ಭಾರತೀಯರಲ್ಲಿ  ಬೀಜ ಬಿತ್ತಿದವರಲ್ಲಿ ಆಲಿ ಸಹೋದರರು ಮೊದಲಿಗರಾಗಿ ಕಂಡು ಬರುತ್ತಾರೆ.


ಆ ಘಟನೆ ಹೀಗಿದೆ,

1923. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ಸ್ ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು. ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ಸ್ ಅಧ್ಯಕ್ಷ (ಮುಸ್ಲಿಂ ಲೀಗ್ ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಆಲಿ ಆತನ ಸಹೋದರ ಶೌಕತ್ ಆಲಿ ತಡೆದರು. ಇಸ್ಲಾಂ ನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಆವರ ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್ಸ್ ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ,  ಮಸೀದಿಯೂ ಅಲ್ಲ..  ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂ ಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆ ಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ ?! ವಂದೇ ಮಾತರಂ ಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಆಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದರು.
ಮುಂದೆ ಇದೇ ಆಲಿ ಸಹೋದರರು ಜಿನ್ನಾ ಜತೆಗೂಡಿ ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ರಚನೆಗೆ ಕಾರಣರಾಗಿ ಅಲ್ಲಿಗೇ ವಲಸೆ ಹೋದರು. ಆದರೆ ಅವರಂತಹ  ವಿಷ ಮನಸ್ಸುಗಳು ಕೆಲವು ಇಲ್ಲೇ ಉಳಿದುಬಿಟ್ಟವು.  ಇಂದು ಅಂತಹ ಹಲವು ವಿಷ ಮನಸ್ಸುಗಳು ಕಾಣಸಿಗುತ್ತವೆ. . ಬಿಎಸ್ಪಿ ಸಂಸದ ಶಫಿಕುಲ್ ರೆಹಮಾನ್ ಹಾಗು ಆ ಘಟನೆ ನಂತರ ಆತನನ್ನು ಬೆಂಬಲಿಸಿ ವಾದಕ್ಕಿಳಿದ ಆತನ ಕೆಲ ಧರ್ಮೀಯರೂ ಕೂಡ ಈ ಪಟ್ಟಿಗೆ ಬರುತ್ತಾರೆ.

ಅಷ್ಟಕ್ಕೂ ವಂದೇ ಮಾತರಂ ನಲ್ಲಿ ಏನಿದೆ??


ಬಂಕಿಮ ಚಂದ್ರರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಹೊರಗಿನ ಸುಂದರ ಪರಿಸರವನ್ನು ನೋಡಿ ಪುಳಕಿತರಾಗಿ ಬರೆದ ಗೀತೆಯಿದು. ಇಲ್ಲಿ ಇರುವುದು ನಮ್ಮ ದೇಶದ ಭೂಮಿಯ, ಪ್ರಕೃತಿಯ, ಮರಗಿಡಗಳಿಂದ ಕೂಡಿದ ಹಚ್ಚ ಹಸುರಿನ ವರ್ಣನೆ ಬಣ್ಣನೆ ಹಾಗು ದೇಶ ಪ್ರೇಮವನ್ನು ಬಡಿದೆಬ್ಬಿಸಿ ನಾವು ಇಂತಹ ಅಮೋಘ  ಮಣ್ಣಿಗೆ ತಲೆ ಬಾಗಬೇಕು ಅನ್ನುವ ಸಂದೇಶ.. ಆದರೆ ಇದೇ ಭೂಮಿಯಲ್ಲಿ ಜೀವಿಸಿ ಆ ಭೂಮಿಗೆ ತಲೆಬಾಗುವುದಿಲ್ಲ ಅದು ನಮ್ಮ ಧರ್ಮಕ್ಕೆ ವಿರುಧ್ಧ ಎಂದರೆ ಎಂತಹ ಉದ್ಧಟತನವದು. ??! ನಾವು ಅಲ್ಲಾಹ್ ನನ್ನು ಬಿಟ್ಟು ಬೇರೆ ಯಾರಿಗೂ ತಲೆ ಬಾಗುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ನಿಮ್ಮ ತಾಯಿ ?? ಅವಳಿಗೆ ತಲೆ ಬಾಗುವುದಿಲ್ಲವೇ ??  ನಿಮ್ಮ ಜೀವನ ಶೈಲಿ ಕುರಾನ್ ನಲ್ಲಿ ಹೇಳಿದಂತೆ ಇದೆಯೇ? ಒಮ್ಮೆ ನಿಮ್ಮ ಜೀವನ ಹಾಗು ನಿಮ್ಮ ಕುರಾನ್ ನಲ್ಲಿ ಹೇಳಿದ ಕೆಲ ನಿರ್ಭಂಧಗಳನ್ನು ಒಮ್ಮೆ ನೆನಪಿಸಿ ಅವಲೋಕಿಸಿ.  ನಿಮಗೆ ಬೇಕಾದಲ್ಲಿ ಕುರಾನ್ ಅನ್ನು ಮರೆತು ಜೀವನ ನಡೆಸುವ ನೀವು ದೇಶದ ಶಾಂತಿ ಕದಡಲು ಮಾತ್ರ ನಿಮ್ಮ ಕುರಾನ್ ಅನ್ನು ಅಡ್ಡ ತರುತ್ತೀರೆನು ??



ವಂದೇ ಮಾತರಂ ಕೇವಲ ಭರತ ಭೂಮಿಯನ್ನು ಹೊಗಳುವ ಸ್ತುತಿ ಗೀತೆಯಾಗಿ ಉಳಿದಿಲ್ಲ .. ಇದೊಂದು ರಾಷ್ಟ್ರ ಪ್ರೇಮವನ್ನು ಬಡಿದೆಬ್ಬಿಸುವ ವೀರ ಗೀತೆ... ಅಂದಿನ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೆಜಿಸಿದ್ದು ಇದೇ ವಂದೇ ಮಾತರಂ.. ೧೯೦೫ ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗ ಭಂಗ ಚಳುವಳಿ ಗೆ ಇದೇ  ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳುವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ ೧೯೪೭ ರ ಸ್ವಾತಂತ್ರ ಸಿಗುವವರೆಗೆ ನಮ್ಮ ಸ್ವಾತಂತ್ರ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂ ಬಗ್ಗೆ ಚಕಾರವೆತ್ತದ ಮುಸ್ಲಿಮರು ಈಗ ಧರ್ಮದ ಲೇಪ ಹಚ್ಚುತ್ತಿರುವುದು ಅವರ ಉದ್ದಟತನ ಹಾಗು ಸ್ವಾರ್ಥತೆಯನ್ನು ಬಿಂಬಿಸುತ್ತದೆ. ಹಾಗೆಯೇ ಅವರ ದೇಶ ವಿರೋಧಿ ಮನೋಭಾವವನ್ನೂ. ಸ್ವಾತಂತ್ರ ಬೇಕಾದಾಗ ಇವರಿಗೆಲ್ಲ ವಂದೇ ಮಾತರಂ ಬೇಕಿತ್ತು. ಜತೆಗೆ ಹಿಂದೂಗಳೂ ಬೇಕಿದ್ದರು. ಹಿಂದೂ ಮುಸ್ಲಿಮರು ಜತೆಯಾಗಿ ವಂದೇ ಮಾತರಂ ಹಾಡುತ್ತಿದ್ದರು. ಆದರೆ ಯಾವಾಗ ಭಾರತಕ್ಕೆ ಸ್ವಾತಂತ್ರ ಸಿಗುವ ಮುನ್ಸೂಚನೆ ದೊರಕಿತೋ ಆ ಕ್ಷಣದಿಂದ ಈ ಮುಸ್ಲಿಂ ಮತಾಂಧತೆ ಸೃಷ್ಟಿಯಾಯಿತು ಎನ್ನಬಹುದು. ೧೯೨೦ ರ ನಂತರ ನಡೆದದ್ದೆಲ್ಲ ಈ ಮುಸ್ಲಿಂ ಮತಾಂಧತೆಯ ರಾಜಕಾರಣವೇ.... ಪರಿಣಾಮ ದೇಶ ವಿಭಜನೆ.. !!


ದೇಶ ವಿಭಜನೆಯ ನಂತರ ಮತಾಂಧ ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋದ ಮೇಲಾದರೂ ನೆಮ್ಮದಿಯ ಸೌಹಾರ್ದದಿಂದ ಬಾಳಬಹುದೆಂದುಕೊಂಡಿದ್ದ ಭಾರತೀಯರ ಕನಸು ಮಾತ್ರ  ನನಸಾಗಲೇ ಇಲ್ಲ. ದೇಶದ ಬಗೆಯೇ ಗೌರವ ಇಲ್ಲದವರು ನಮ್ಮ ನಡುವೆ ಇರುವಾಗ ಎಲ್ಲಿಯ ನೆಮ್ಮದಿ, ಎಲ್ಲಿಯ ಸೌಹಾರ್ದ. ನಮಗೆ ದೇಶಕ್ಕಿಂತ ಧರ್ಮವೇ ಮೇಲು ಎನ್ನುವವರು ೧೯೪೭ ರಲ್ಲೇ ತೊಲಗಬಹುದಿತ್ತಲ್ಲ... ಅಂದು ಹಿಂದೂ ರಾಷ್ಟ್ರ ಮುಸ್ಲಿಂ ರಾಷ್ಟ್ರವೆಂದು ವಿಭಜನೆಯಾದ ಮೇಲೂ ಹಿಂದೂ ರಾಷ್ಟ್ರದಲ್ಲೇ ಉಳಿಯುತ್ತೇವೆ ಎಂದು ಯಾವ ಪುರುಷಾರ್ಥಕ್ಕಾಗಿ ಉಳಿದಿರಿ?!


ಒಂದು ರಾಷ್ಟ್ರ ಬೇರೆ , ಧರ್ಮ ಬೇರೆ. ಅವೆರಡನ್ನು ಬೆರೆಸಿ ವಾದಿಸುವ ಹುಂಬತನ ಬೇಡ. ಒಬ್ಬ ಭಾರತೀಯನಾಗಿ ಹುಟ್ಟಿದ ಮೇಲೆ ಆತ ಆ ದೇಶ, ಆ ದೇಶದ ಸಂಸ್ಕೃತಿ, ಸಂಪ್ರದಾಯ, ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ   ಧ್ವಜ, ಲಾಂಛನ ಹಾಗು ದೇಶ ಪ್ರೇಮದ ಕುರಿತಾದ ಯಾವುದಕ್ಕಾದರೂ ಗೌರವ ಕೊಡಲೇಬೇಕು. ನಾನು ಮುಸ್ಲಿಂ ಅದೆಲ್ಲ ಸಾಧ್ಯವಿಲ್ಲವೆಂದಾದರೆ ೧೯೪೭ ರಲ್ಲೇ ನಿಮಗಾಗಿ ಭಾರತದ ಒಂದು ತುಂಡನ್ನು ಕಿತ್ತುಕೊಂಡು ಹೋದರಲ್ಲ. ದಯವಿಟ್ಟು ಅಲ್ಲಿಗೇ ಹೊರಡಬಹುದು. ಈಗಲೂ ಕಾಲ ಮಿಂಚಿಲ್ಲ .


ವಂದೇ ಮಾತರಂ...



Friday, May 3, 2013

ಜಾಜಿ ಮಲ್ಲಿಗೆ


ನಿನ್ನ ಸನಿಹವ ಬಯಸಿ ಬಂದೆನು 

ದೂರವೇತಕೆ ಓಡಿದೆ... 
ಎದೆಯ ತುಂಬಾ ಒಲವು ತುಂಬಿದ 
ನಿನ್ನ ನೆನೆಪೇ ಕಾಡಿದೇ... 
ನಿನ್ನ ಮೋಡಿಗೆ ನನ್ನ ನಾಡಿಯೇ ಮಿಡಿವುದಾ ಮರೆತೋಗಿದೆ... 

ನನ್ನ ಪ್ರೀತಿಯು ಜಾಜಿಮಲ್ಲಿಗೆ 
ಕಾಡಮಲ್ಲಿಗೆ ನಿನಗೇತಕೆ... 

ಒಲವಂಚಿತ ಬಾಳು ಸವೆಸಲು
ನಿನಗೇತಕೆ ಆಸೆಯೇ...

ಮುಳ್ಳು ಬೇಲಿಯ ಸಂಗವೇತಕೆ
ನವಿರು ಬಟ್ಟೆಯು ಹರಿಯದೇ...
ನಲುಗದ ಮಲ್ಲಿಗೆ ನೀನು
ನಲುಗುವಾಸೆಯು ಸಹ್ಯವೇ...

ದೇಹದಲ್ಲಿ ವಿವಿಧ ಜನಪದ
ಉಸಿರಿನಲ್ಲಿ ಏನೋ ಕಲರವ
ಮನಸ್ಸಿನಲ್ಲಿ ಧೀರ ಮೌನ
ನಿನ್ನ ಮೌನದ ಛಾಯೆಗೆ...

ದಿಗಿಲಾಗಿದೆ ಮನ ಬಾಳ ಕರಿಮುಗಿಲಿನಲಿ
ಚುಕ್ಕಿಯೊಂದು ಬಾನ ಜಾರಿದಂತೆ...
ಕೈ ಹಿಡಿಯಲು ನೀನಿಲ್ಲ
ಕತ್ತಲೆಯ ಬದುಕಿನಲ್ಲಿ, ಎಲ್ಲವೂ ಕರಾಳ...

ಕನಸ ಗೋಪುರ ಅಲುಗಿದೆ
ಮನವು ತೊದಲಿ ನಲುಗಿದೆ...
ಬಾಳ ಮೆರವಣಿಗೆ ಖಾಲಿ ಖಾಲಿ
ನಾನಿಲ್ಲಿ, ನೀನೆಲ್ಲಿ ?...

ಸಂಜೆ ಪಯಣವು ಬೇಸರಿಸಿದೆ
ನಿನ್ನ ಇರವು ಕಾಣದೆ...
ಅಂಬೆಗಾಲಿಡುತ ಬಂದಿದೆ ಹೃದಯ
ಕಾಣದಾದೆಯಾ ನನ್ನೊಲವೇ...