Wednesday, January 16, 2013

ಮನದನ್ನೆ...



ತುಸು ನೋಡೋ ಆಸೆ ನಿನ್ನ , ನಾ ಅಸು ನೀಗುವಾ ಮುನ್ನ
ಬಾ ಬಾರೆ ಗೆಳತಿಯೇ ಅನುಗ್ರಹಿಸು ಎನ್ನ.......................

ಬೆಳದಿಂಗಳ ತೋಟದಲಿ ಕಾಯುತ್ತ ಕೂರುವೆನು
ನೀ ನನ್ನ ನೋಡ ಬರುವೆ ಎಂದು
ನಿನ್ನ ಬರುವು ಕಾಣದಿರೆ ಅಸ್ತಮಿಸುವುದು
ಈ ಬಡಪಾಯಿ ಜೀವ ಇಂದು...

ಬೆಳದಿಂಗಳ ಬೆಳಕಾಗಿ ನಿನ್ನ ಬಾಳ ಬೆಳಗುವೆ
ಎವೆಯಿಕ್ಕದ ಕಣ್ಣಿಂದ ನಿನ್ನ ಕಾಯುತಲಿರುವೆ
ಇದು ಹುಚ್ಚು ಮನಸಲ್ಲ, ಬೆಪ್ಪು ಕನಸಲ್ಲ
ನಿನ್ನಾಣೆ ಗೆಳತಿ ನಾ ನಿನ್ನ ಇನಿಯ
ಬಂದು ಸೇರಿಬಿಡು ನೀ ನನ್ನ ಸನಿಹ...

ನೀ ನನ್ನ ಮನದನ್ನೆ, ನೀನಿರದೆ ನಾ ಸೊನ್ನೆ
ಎದೆಗೂಡ ಒಳಗೆ ಬಚ್ಚಿಡುವೆ ನಿನ್ನ 
ಓ ನನ್ನ ನಲ್ಲೆ ಯಾಕಿಷ್ಟು ದೂರ
ಈ ಜೀವ ನಿನದೇ ಸೇರಿಕೋ ಎನ್ನ...







Tuesday, January 1, 2013

ಸರಣಿ ಸಣ್ಣ ಕತೆಗಳು (ಭಾಗ-2)



ಮದುವೆ

ಆಕೆ ಮತ್ತು ಆತ
 ಅಲಂಕೃತರಾಗಿ ಮದುವೆ ಮಂಟಪದಲ್ಲಿ ಕೂತಿದ್ದಾರೆ. ಅದು ಉತ್ತರ ಭಾರತದ ಯಾವುದೋ ಒಂದು ಹಳ್ಳಿಯಲ್ಲಿನ  ಮದುವೆ ..ಅಲ್ಲಿನ ಸಂಸ್ಕೃತಿಯ ಪ್ರಕಾರ ಮದುವೆಯ ಮೊದಲು ಗಂಡು ಹೆಣ್ಣು ಪರಸ್ಪರ ಮುಖ ನೋಡುವ ಹಾಗಿಲ್ಲ. ಮದುವೆ ಕಾರ್ಯದಲ್ಲಿ ಅವರವರ ಮನೆಹಿರಿಯರ ತೀರ್ಮಾನವೇ ಅಂತಿಮ... ಅದರಂತೆ ಅವರಿಬ್ಬರ ಮುಖವನ್ನು ಪರದೆಯಿಂದ ಮುಚ್ಚಲಾಗಿತ್ತು.

ಅರ್ಚಕರು ಶಾಸ್ತ್ರಗಳನ್ನು ನೆರೆವೇರಿಸುತ್ತಿದ್ದರು. ಎಲ್ಲೆಡೆ ಸoಭ್ರಮ-ಸಡಗರ.. ಆದರೆ ಮದುಮಗನ ಮನಸ್ಸು ಮಾತ್ರ ವಿಲ ವಿಲನೆ ಒದ್ದಾಡುತ್ತಿತ್ತು. ಆತನಿಗೆ ಆ ಮದುವೆ ಇಷ್ಟ ಇಲ್ಲ ಎಂಬುದಕ್ಕೆ ಅವನ ಮನಸ್ಸಿನ ತಳಮಳವೇ ಸಾಕ್ಷಿ. ಅಂತೂ ಇಂತೂ ಮದುವೆ ಮುಗಿಯಿತು.. 
ಶೋಭನದ ರಾತ್ರಿ...  ಮನಸಿಲ್ಲದ ಮನಸ್ಸಿನೊಡನೆ ಆತ ತನ್ನ ರೂಮಿನಲ್ಲಿ ಕುಳಿತ್ತಿದ್ದಾನೆ... ಬಾಗಿಲು ಬಡಿದ ಶಬ್ದ.. ಎದ್ದು ಹೋಗಿ ಬಾಗಿಲು ತೆರೆದು ನೋಡುತ್ತಾನೆ ಆತನ ಹಳೆಯ ಪ್ರೇಯಸಿ ನಿಂತಿದ್ದಾಳೆ. ಇವನಿಗೋ ಗಾಬರಿ.....
ನೀನ್ಯಾಕೆ ಇಲ್ಲಿಗೆ ಬರಹೋದೆ, ಮೊದಲು ಇಲ್ಲಿಂದ ಹೋಗು ಎಂದ ಆತ ಗದ್ಗದಿತನಾಗಿ.. ಅವಳೋ ಬೆನ್ನ ಹಿಂದೆ ಹಿಡಿದುಕೊಂಡಿದ್ದ ಹಾಲಿನ ಲೋಟವನ್ನು ಅವನತ್ತ ಚಾಚಿ ಮೋಹಕ ನಗುವಿನೊಡನೆ ಒಳಗಡಿಯಿಟ್ಟಳು.
 ಆತನ ಮನಸ್ಸಿನ ತಳಮಳ ನಿಂತು ಹೋಗಿತ್ತು..!


Monday, December 10, 2012

ಸರಣಿ ಸಣ್ಣ ಕತೆಗಳು (ಭಾಗ-1)






ಕಳುವು 
ಅದಾಗ ತಾನೇ ಕತ್ತಲು ಕವಿಯಲಾರಂಭಿಸಿತ್ತು. 'ಕಳ್ಳ' ತನ್ನ ಎಂದಿನ ಕೆಲಸಕ್ಕೆ ಹೊರಟು ನಿಂತ. ಆತ ಹೊರಟು 3-4 ಗಂಟೆಗಳೇ ಕಳೆದಿತ್ತು. ಎಂದಿನಂತೆ ಮಧ್ಯ ರಾತ್ರಿ ಸಮೀಪಿಸುವ ಹೊತ್ತಿಗೆ ಒಂದು ಮನೆಯನ್ನು ಆಯ್ದುಕೊಂಡು ಕಳ್ಳಹಾದಿಯಿಂದ ಒಳಗಡಿಯಿಟ್ಟ. ತಿಜೋರಿ ಹುಡುಕುತ್ತ ಆ ಮನೆಯ ಮಲಗುವ ಕೋಣೆಗೆ ಬಂದ ಅವನಿಗೆ ಅಲ್ಲಿ ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದ್ದು ಕಂಡುಬಂತು. ಅವರನ್ನು ಪ್ರಜ್ಞೆ ತಪ್ಪಿಸಲು ತಾನು ತಂದಿದ್ದ ಕ್ಲೋರೋಫಾರ್ಮ್ ಅನ್ನು ಕರವಸ್ತ್ರಕ್ಕೆ ಸಿಂಪಡಿಸಿ ಮೆಲ್ಲನೆ ಮಂಚದ ಬಳಿಗೆ ಬಂದ.
ಅಷ್ಟೆ...! ಕಿಟಕಿಯಿಂದ ಒಳ ಬರುತ್ತಿದ್ದ ಚಂದ್ರನ ಮಂದ ಬೆಳಕಿನಲ್ಲಿ ಗಂಡಸನ್ನು ತಬ್ಬಿ ಮಲಗಿದ್ದ ಆ ಹೆಂಗಸಿನ ಮುಖ ನೋಡಿದವನೆ ಅದುರಿ ಹೋದ.
ಆಕೆ ಕಳ್ಳನ ಹೆಂಡತಿಯಾಗಿದ್ದಳು.
.



ವಿಪರ್ಯಾಸ..
ಒಂದು ದೊಡ್ಡ ಕಂಪನಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆತ ನಿನ್ನೆ ತಾನೇ ವ್ಯವಹಾರದಲ್ಲಿ ಗೋಲ್ ಮಾಲ್ ಮಾಡಿ 25 ಲಕ್ಷ ಹಣ ಹೊಡೆದುಕೊಂಡಿದ್ದ. ಅದು ಕೂಡ ಯಾರಿಗೂ ಸುಳಿವು ಸಿಗದಂತೆ.. ಆದರೂ ಇಂದು ಸಹಜವಾಗಿಯೇ ಒಂಥರಾ ಭಯ-ದುಗುಡದಲ್ಲೇ ಆಫೀಸಿಗೆ ಹೊರಟು ನಿಂತಿದ್ದ ಆತ. ಯಾರಿಗಾದರೂ ಅನುಮಾನ ಬರಬಹುದೇನೋ ಎಂಬ ಆತಂಕದಲ್ಲಿ ಆಫೀಸಿಗೆ ಬಂದವನಿಗೆ ಆಶ್ಚರ್ಯ ಕಾದಿತ್ತು. ಎಲ್ಲರೂ ಇವನನ್ನು ಮುತ್ತಿಕೊಂಡು 'ಕಂಗ್ರಾಟ್ಸ್ ಕಂಗ್ರಾಟ್ಸ್..' ಎಂದು ಶುಭಾಶಯಗಳನ್ನು ತಿಳಿಸಲಾರಂಭಿಸಿದರು. ಇವನಿಗೆ ಗೊಂದಲದ ಜತೆಗೆ ಭಯ ಕೂಡ ದುಪ್ಪಟ್ಟಾಯಿತು. ತಾನು ಮಾಡಿದ 'ಮಹಾ ಕಾರ್ಯ'ಕ್ಕೆ ಅಭಿನಂದನೆ ಯಾಕೆ ಹೇಳುತ್ತಿದ್ದಾರೆ ಅಂತ ಅನ್ನಿಸದಿರಲಿಲ್ಲ ಆತನಿಗೆ.
ಅನುಮಾನದಿಂದಲೇ ನೋಟೀಸ್ ಬೋರ್ಡ್ ನಲ್ಲಿ ಅದಾಗ ತಾನೇ ಬಿತ್ತರಗೊಂಡಿದ್ದ ಹಾಳೆಯತ್ತ ಕಣ್ಣು ಹಾಯಿಸಿದ. 
ಅಲ್ಲಿ ಆತನ ಹೆಸರಿನ ಜೊತೆಗೆ ಹೀಗೆ ಬರೆದಿತ್ತು, 
"... ಈ ವರ್ಷದ ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ ಪಡೆದ ನಿಮಗೆ ಹಾರ್ದಿಕ ಅಭಿನಂದನೆಗಳು..."

.




Sunday, September 30, 2012

ಜಾತ್ಯಾತೀತ 'ಜಿನ್ನಾ' ಖಳ ನಾಯಕನಾದರೆ 'ಗಾಂಧೀ' ಯಾರು?..


ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನ ದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು 'ಜಿನ್ನಾ ಒಬ್ಬ ಜಾತ್ಯಾತೀತ ನಾಯಕ' ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು. 

ಆದರೆ ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ - ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ  ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. 'ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ' ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರನೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.

ಮಹಮ್ಮದ್ ಆಲಿ ಜಿನ್ನಾ... ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ... ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ... 
ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ... ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ...?

"ನನ್ನ ಪ್ರಕಾರ ದೇಶ ವಿಭಜನೆಯನ್ನು ಬಿಟ್ಟು ಬೇರಾವುದೇ ಪರಿಹಾರವಿರಲಿಲ್ಲ ಹಾಗೂ ಮುಂದೊಂದು ದಿನ ಇತಿಹಾಸ ಅದನ್ನು ಒಪ್ಪಿಕೊಳ್ಳುತ್ತದೆ... ಪಾಕಿಸ್ತಾನವನ್ನು ಸಮೃದ್ಧ ಉಲ್ಲಾಸಭರಿತ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಸಕಲರ ಶ್ರೇಯೋಭಿವೃದ್ಧಿಗಾಗಿ ಏಕ ದೃಷ್ಟಿಯಿಂದ ನಾವು ಪ್ರಯತ್ನಿಸಬೇಕು. 
ಆತ ಯಾವುದೇ ಸಮುದಾಯಕ್ಕೆ ಸೇರಿರಲಿ, ಆತನ ಜತೆ ನೀವು ಈ ಹಿಂದೆ ಎಂಥದೇ ಸಂಬಂಧ ಹೊಂದಿರಲಿ, ಆತನ ಚರ್ಮದ ಬಣ್ಣ, ಧರ್ಮ ಮತ ಯಾವುದೇ ಆಗಿರಲಿ ಎಲ್ಲರೂ ಸಮಾನರು. ಪಾಕಿಸ್ತಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ.... ದೇವಸ್ತಾನ, ಮಸೀದಿ ಅಥವಾ ಯಾವುದೇ ಪೂಜಾ ಸ್ಥಳಗಳಿಗೆ  ಹೋಗುವ ಸ್ವಾತಂತ್ರ್ಯ ನೂತನ ರಾಷ್ಟ್ರ ಪಾಕಿಸ್ತಾನದಲ್ಲಿದೆ. ನೀವು ಯಾವುದೇ ಧರ್ಮ, ಮತ ಜಾತಿಗೆ ಸೇರಿರಬಹುದು. ಅದಕ್ಕೂ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ.... ಕಾಲಾಂತರದಲ್ಲಿ ಹಿಂದೂಗಳು ಹಿಂದೂಗಳಾಗಿ ಮುಸ್ಲಿಮರು ಮುಸ್ಲಿಮರಾಗಿ ಉಳಿದು ಬಿಡುತ್ತಾರೆ. ಆದರೆ ಧಾರ್ಮಿಕ ಪ್ರಜ್ನೆಯಿಂದಲ್ಲ, ವೈಯಕ್ತಿಕ ನಂಬಿಕೆಯಿಂದ. ರಾಜಕೀಯ ದೃಷ್ಟಿಯಲ್ಲಿ ಅವರೆಲ್ಲರೂ ಪಾಕಿಸ್ತಾನದ ನಾಗರೀಕರು..."

ಮಹಮ್ಮದ್ ಆಲಿ ಜಿನ್ನಾ 1947, ಆಗಷ್ಟ್ 11 ರಂದು ಮಾಡಿದ ಭಾಷಣದ ತುಣುಕುಗಳಿವು. ಜಿನ್ನಾ  ಒಬ್ಬ ಧರ್ಮಾಂಧ ಕಟ್ಟಾ ಮುಸ್ಲಿಮನಾಗಿದ್ದರೆ ಪ್ರಜಾತಂತ್ರ, ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಿದ್ದರೇ? ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದ ನಂತರವೂ ಸಾಮರಸ್ಯ, ಸಮಾನತೆ, ಏಕತೆಯ ಬಗ್ಗೆ ಮಾತನಾಡುವ ಅಗತ್ಯವೇನಿತ್ತು...? ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ 'ಖಳ' ನಾಯಕರಾಗಿ ಕಂಡು ಬರುವ ಜಿನ್ನಾ ವಿಭಜನೆಯ ನಂತರ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಘೋಸಿಸಬಹುದಿತ್ತು. ಅಲ್ಲಿ ಇಸ್ಲಾಂ ನ ಕಾನೂನುಗಳನ್ನು ಹೇರಬಹುದಾಗಿತ್ತು. ಆದರೆ ಜಿನ್ನಾ ಹಾಗೆ ಮಾಡಲಿಲ್ಲ. ಕಾರಣ ಜಿನ್ನಾ ಮೂಲತಃ ರಾಷ್ಟ್ರೀಯವಾದಿ ಹಾಗೂ ಜಾತ್ಯಾತೀತ ವ್ಯಕ್ತಿತ್ವದವರಾಗಿದ್ದರು. ಅಂತಹ ವ್ಯಕ್ತಿ ರಾಷ್ಟ್ರದ ವಿಭಜನೆಗೆ ಪಟ್ಟು ಹಿಡಿಯಲು ಕಾರಣ ಇರಲೇಬೇಕಲ್ಲವೇ...?

ಜಿನ್ನಾ ಹುಟ್ಟಿದ್ದು ಒಂದು ಶ್ರೀಮಂತ ವ್ಯಾಪಾರಸ್ಥ ಕುಟುಂಬದಲ್ಲಿ. ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಗೆ ಹೋದ ಜಿನ್ನಾ ತಮ್ಮ 18 ನೇ ವಯಸ್ಸಿಗೇ ವಕೀಲಿ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಾಸಾದರು. ಬಂದವರೇ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು. ಕೆಲಸದ ವಿಷಯದಲ್ಲಿ ಜಿನ್ನಾ ತುಂಬಾ ಕಟ್ಟು ನಿಟ್ಟು ಹಾಗು ಶಿಸ್ತಿನ ಮನುಷ್ಯ. ಜಿನ್ನಾರ ಈ ವೃತ್ತಿಪರತೆ ಹಲವರನ್ನು ಆಕರ್ಷಿಸಿತು. ಅದರಲ್ಲೂ ಅವರ ಬಲಿಷ್ಠ ರಾಷ್ಟ್ರೀಯತೆ ಹಾಗೂ ದೇಶಭಕ್ತಿ. ಒಬ್ಬ ರಾಷ್ಟ್ರವಾದಿ ನಾಯಕರಾಗಲು ಎಲ್ಲಾ ಅರ್ಹತೆಗಳಿದ್ದ ಜಿನ್ನಾ 1896 ರಲ್ಲಿ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜಿನ್ನಾರ ವ್ಯಕ್ತಿತ್ವದ ಬಗ್ಗೆ ತಿಳಿದಿದ್ದ ಆಗಿನ ಮೇರು ನ್ನಾಯಕ ಬಾಲ ಗಂಗಾಧರ ತಿಲಕರು ರಾಜದ್ರೋಹದ ಪ್ರಕರಣಕ್ಕೆ ಸಂಬಂದಿಸಿ ಜಿನ್ನಾರನ್ನು ತಮ್ಮ ವಕೀಲರಾಗಿ ನೇಮಕ ಮಾಡಿಕೊಂಡರು. ಹೀಗೆ ಜಿನ್ನಾಗೆ ತಿಲಕ್, ಫಿರೋಜ್ ಶಾಃ, ಸುರೆಂದ್ರನಾಥ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ದಿಗ್ಗಜರ ಸಂಪರ್ಕ ದೊರೆಯಿತು. ಅವರುಗಳ ಪ್ರಭಾವ ಜಿನ್ನಾರ ಮೇಲೆ ಭಾರೀ ಮಟ್ಟದಲ್ಲಾಯಿತು.1906 ರಲ್ಲಿ ಆಗಾ ಖಾನ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾದಾಗ 'ನಾನು ಮೊದಲು ಭಾರತೀಯ, ನಂತರ ಮುಸ್ಲಿಂ' ಎಂದು ಅದರ ಸದಸ್ಯರಾಗಲು ಬಂದ ಮನವಿಯನ್ನು ತಿರಸ್ಕರಿಸಿದರು. ಹೀಗೆ ತಿಲಕರ ಕಾಲದಲ್ಲಿ ಜಿನ್ನಾ ಒಬ್ಬ ರಾಷ್ಟ್ರವಾದಿ ಯುವ ನಾಯಕನಾಗಿ ಬೆಳೆಯುತ್ತಾ ಸಾಗಿದರು.

ತಿಲಕರ ಹಠಾತ್ ಸಾವಿನ ನಂತರ ಕಾಂಗ್ರೆಸ್ ನಲ್ಲಿ ಗಾಂಧೀ ಯುಗ ಆರಂಭವಾಯಿತು. ಗಾಂಧಿಯುಗದಲ್ಲಿ ಹೋರಾಟದ ಕಿಚ್ಚಿಗಿಂತ ಅಧಿಕಾರದ ಮಹದಾಸೆ ಹೆಚ್ಚಿನವರಲ್ಲಿತ್ತು. ಗಾಂಧೀ, ನೆಹರೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀ ಆಗಿನ ಯುವ ನಾಯಕ ಅಪ್ರತಿಮ ದೇಶಭಕ್ತ ಸುಭಾಶ್ ಚಂದ್ರ ಬೋಸ್ ರನ್ನು ಕಾಂಗ್ರೆಸ್ಸ್ ತೊರೆಯುವಂತೆ ಮಾಡಿದ್ದೇ ಈ ಕಾರಣಕ್ಕಾಗಿ. ಎಲ್ಲರೂ ತನ್ನ ಅಡಿಯಾಳಾಗಿರಬೇಕೆಂಬುದು ಗಾಂಧೀ ಬಯಕೆಯಾಗಿತ್ತು. ಇದೇ ಮುಂದೆ ತಿಲಕರ ಒಡನಾಡಿ ಕಟ್ಟಾ ರಾಷ್ಟ್ರೀಯವಾದಿ ಜಿನ್ನಾರು ಹೊಸದಿಕ್ಕಿನೆಡೆಗೆ ಹೋಗಲು ನಾಂದಿಯಾಯಿತು.



ಮುಂದೆ ಕೆಲ ಧರ್ಮಾಂಧ ಮುಸ್ಲಿಮರು ತಮ್ಮ ಹಿತಾಸಕ್ತಿಗಳಿಗಾಗಿ ನಡೆಸಿದ 'ಖಿಲಾಫತ್ ಚಳುವಳಿಗೆ' ಗಾಂಧೀಜಿ ಬೆಂಬಲ ನೀಡಿದ್ದು ದೊಡ್ಡ ದುರಂತಕ್ಕೆ ಕಾರಣವಾಯಿತು. ಖಿಲಾಫತ್ ಚಳುವಳಿಯ ಸಮಯದಲ್ಲಿ ಅಲ್ಲಲ್ಲಿ ಹಿಂದೂಗಳ ಕೊಲೆ, ಲೂಟಿ, ಭೀಕರ ಹಲ್ಲೆಗಳು ನಡೆದವು. ಇದ್ಯಾವುದಕ್ಕೂ ಅಹಿಂಸಾವಾದಿ ಗಾಂಧೀ ತಲೆಕೆಡಿಸಿಕೊಳ್ಳಲೇ ಇಲ್ಲ.! ಅಂದು ಮಹಮ್ಮದ್ ಆಲಿ ಜಿನ್ನಾ, ಗಾಂಧಿಯ ಒಟ್ಟಾರೆ ನಡೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಜಿನ್ನಾ ಮುಸ್ಲಿಂ ಧರ್ಮಾಂಧನಾಗಿದ್ದರೆ ಗಾಂಧೀಜಿಯ ನಡೆಯನ್ನು ಟೀಕಿಸುತ್ತಿದ್ದರೇನು? 

ಹೀಗೆ ಹಲವು ವಿಷಯಗಳಲ್ಲಿ ಗಾಂಧೀ-ನೆಹರೂ ಮತ್ತು ಜಿನ್ನಾರ ನಡುವೆ ಅಭಿಪ್ರಾಯ ಬೇಧಗಳು ಬೆಳೆಯತೊಡಗಿದವು. ಗಾಂಧೀಜಿಯ ಏಕಪಾರುಪತ್ಯವನ್ನು ಜಿನ್ನಾ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಹಾಗೆಯೇ ಗಾಂಧೀ ಮತ್ತು ನೆಹರೂರವರು ಜಿನ್ನಾರನ್ನು ತಮ್ಮ ವೈರಿಯಂತೆ ನಡೆಸಿಕೊಂಡರು. ಇಬ್ಬರಿಗೂ ಜಿನ್ನಾ ಬಗ್ಗೆ ತಿರಸ್ಕಾರದ ಭಾವನೆಯಿತ್ತು. ತಿಲಕರ ಗರಡಿಯಲ್ಲಿ ಪಳಗಿದ ಜಿನ್ನಾಗೆ ಗಾಂಧಿಯುಗದಲ್ಲಿ ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸಲಾಯಿತು. ತಿಲಕರ ಮರಣಾ ನಂತರ ದಾರಿ ತಪ್ಪಿದ ಕಾಂಗ್ರೆಸ್ ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಗಾಂಧೀಜಿ ಧೋರಣೆ ಬಗ್ಗೆ ಬೇಸತ್ತ ಜಿನ್ನಾ ಕಡೆಗೆ ಕಾಂಗ್ರೆಸ್ ನಿಂದಲೇ ಹೊರಬರಬೇಕಾಯಿತು.

ಕಾಂಗ್ರೆಸ್ಸ್ ನಿಂದ ಹೊರಬಂದ ಜಿನ್ನಾ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವದವರಾಗಿರಲಿಲ್ಲ. ಭಾರತೀಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಒಂದು ಸಮಯದಲ್ಲಿ ತಾನು ತಿರಸ್ಕರಿಸಿದ್ದ ಮುಸ್ಲಿಂ ಲೀಗನ್ನು ಸೇರಿದರು. 1916 ರಲ್ಲಿ ಮುಸ್ಲಿಂ ಲೀಗ್ ನ ಅಧ್ಯಕ್ಷರೂ ಆದರು. ಆದರೆ ಪ್ರತ್ಯೇಕತೆಯನ್ನು ಪ್ರತಿಪಾದಿಸಲಿಲ್ಲ. ಸ್ವಾತಂತ್ರ್ಯ ಗಳಿಕೆಯೆಂಬ ದೀರ್ಘಕಾಲೀನ ಗುರಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗು ಮುಸ್ಲಿಂ ಲೀಗನ್ನು ಒಟ್ಟಿಗೆ ತರಲು ಮುಂದಾದರು.

ಆದರೆ ಬೆಳೆಯುತ್ತ ಬೆಳೆಯುತ್ತ ಕಾಂಗ್ರೆಸ್ ಜಿನ್ನಾರ ಮುಸ್ಲಿಂ ಲೀಗ್ ಗೆ ಕಿಮ್ಮತ್ತೇ ಕೊಡಲಿಲ್ಲ. ಬ್ರಿಟೀಷರೊಂದಿಗಿನ ಹಲವು ಒಪ್ಪಂದಗಳಲ್ಲೂ ಜಿನ್ನಾರನ್ನು ಹೊರಗಿರಿಸಲಾಯಿತು. ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನಡುವೆ ಸಹಮತ ತರಲು ಮಾಡಿದ ಜಿನ್ನಾ ಪ್ರಯತ್ನಗಳು ನೀರ ಮೇಲಿನ ಹೋಮದಂತಾಯಿತು. ಹೀಗೆ ಸೋಲುಗಳ ಮೇಲೆ ಸೋಲುಗಳನ್ನು ಕಂಡ ಜಿನ್ನಾ ರಾಜಕೀಯದಿಂದ ಬೇಸತ್ತು 1931 ರಲ್ಲಿ ಲಂಡನ್ ಗೆ ಹೋಗಿ ನೆಲೆಸಿದರು.



ಈ ಹಂತದಲ್ಲೇ ದೇಶ ವಿಭಜನೆಯ ವಿಷ ಬೀಜ ಹುಟ್ಟಿಕೊಂಡಿದ್ದು. ಆದರೆ ಅದು ಜಿನ್ನಾ ಮನಸಿನಲ್ಲಿ ಅಲ್ಲ. ಬದಲಾಗಿ 'ಸಾರೆ ಜಹಾಂಸೇ ಅಚ್ಚಾ...' ಎಂಬ ದೇಶ ಭಕ್ತಿ ಗೀತೆ ಬರೆದ ಸರ್ ಮೊಹಮ್ಮದ್ ಇಕ್ಬಾಲ್ ಮನದಲ್ಲಿ. ಭಾರತದ ವಿಭಜನೆಗೆ ಜಿನ್ನಾ, ಗಾಂಧೀ, ನೆಹರೂ ಎಷ್ಟು ಕಾರಣರೋ ಅಷ್ಟೇ ಈ ಇಕ್ಬಾಲ್ ಕೂಡ ಕಾರಣ. ಇದೇ ವಿಷಯಕ್ಕೆ ಸಂಬಂಧಿಸಿ ಇಕ್ಬಾಲ್ ಜಿನ್ನಾರಿಗೆ ಹಲವು ಪತ್ರಗಳನ್ನು ಬರೆದ. ಆದರೆ ಅದ್ಯಾವುದಕ್ಕೂ ಜಿನ್ನಾ ಒಪ್ಪಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.

ಇಲ್ಲಿನ ಮುಸ್ಲಿಂ ಲೀಗ್ ನ ನಾಯಕರುಗಳು ಮತ್ತೆ ಜಿನ್ನಾರ ನಾಯಕತ್ವದ ಅಗತ್ಯತೆಯನ್ನು ಮನಗಂಡು ಲಂಡನ್ ನಲ್ಲಿ ನೆಲೆಸಿದ್ದ ಜಿನ್ನಾರನ್ನು ಒತ್ತಾಯಪೂರ್ವಕವಾಗಿ ಭಾರತಕ್ಕೆ ಕರೆಸಿಕೊಂಡರು. ಮತ್ತೆ ಮುಸ್ಲಿಂ ಲೀಗ್ ನಲ್ಲಿ ಸಕ್ರಿಯರಾದರು ಜಿನ್ನಾ. ಇಕ್ಬಾಲ್ ಮುಂದಿಟ್ಟಿದ್ದ ದೇಶ ವಿಭಜನೆಯ ಪ್ರಸ್ತಾಪವನ್ನು ಜಿನ್ನಾ ಮೊದಲಿಗೆ ಒಪ್ಪಲಿಲ್ಲವಾದರೂ ಮುಂದೆ ಕಾಂಗ್ರೆಸ್ ಹಾಗು ಗಾಂಧೀ ಪರಿವಾರ ಜಿನ್ನಾರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನ ಎದುರುಸಿದ ಜಿನ್ನಾ ವಿಭಜನೆಯ ನಿಲುವಿಗೆ ಅಂಟಿಕೊಳ್ಳಲೇಬೇಕಾಯಿತು. ಅಂದು ಹಿಡಿದ ಪಟ್ಟನ್ನು ಮತ್ತೆಂದೂ ಸಡಿಲಿಸಲಿಲ್ಲ. ಒಂದು ಕಾಲದಲ್ಲಿ ಜಿನಾರನ್ನು ತಿರಸ್ಕರಿಸಿದ್ದ ಗಾಂಧೀ, ನೆಹರೂ ಹಾಗು ಕಾಂಗ್ರೆಸ್ ಜಿನ್ನಾರ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಕಾಲ ಮಿಂಚಿ ಹೋಗಿತ್ತು. ಕ್ರಮೇಣ ಜಿನ್ನಾ ಒಬ್ಬ ಹಠಮಾರಿಯಾಗಿ ಬದಲಾದರು. ಎಲ್ಲಿಯವರೆಗೆ ಎಂದರೆ 1947ರ ಆಗಸ್ಟ್ ನಲ್ಲಿ ದೇಶ ವಿಭಜನೆಯಾಗುವವರೆಗೆ..

ದೇಶ ವಿಭಜನೆಯ ವಿಷಯ ಬಂದಾಗಲೆಲ್ಲ ಮಹಮ್ಮದ್ ಆಲಿ ಜಿನ್ನಾ ಒಬ್ಬ 'ಖಳ' ನಾಯಕರಾಗಿ ಕಂಡುಬರುತ್ತಾರೆ. ನಿಜ ಅವರು ಮಾಡಿದ್ದು ತಪ್ಪು ಕೂಡ... ಆದರೆ ಅವರನ್ನು ಅಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿ ಭಾರತದ ವಿಭಜನೆಗೆ ಪರೋಕ್ಷವಾಗಿ ಕಾರಣಕರ್ತರಾದವರನ್ನು ನಾವು ಮರೆತ್ತಿದ್ದೇವೆ..? ಯಾಕೆ ನಾವು ಗಾಂಧೀ ನೆಹರೂಗಳಂತ ನಾಯಕರನ್ನು ದೂರುತ್ತಿಲ್ಲ.

1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ 1947 ರ ವರೆಗೆ ನಡೆದ ಚಳುವಳಿಗಳೆಲ್ಲ ಅಧಿಕಾರ, ನಾಯಕತ್ವ ಹಾಗು ಸ್ವಾತಂತ್ರ್ಯ ಗಳಿಕೆಯ 'ಕ್ರೆಡಿಟ್' ಗಾಗಿ ನಡೆದವುಗಳೆಂಬುದು ಕಟು ಸತ್ಯ. ಸುಭಾಶ್ ಚಂದ್ರ ಬೋಸರು ಕಾಂಗ್ರೆಸ್ ನಿಂದ ಹೊರ ಹೋಗಿ INA ಕಟ್ಟಿದ ನಂತರ ಗಾಂಧೀ-ನೆಹರೂ-ಜಿನ್ನಾ ನಡುವಿನ ಮೇಲಾಟ ದೇಶವನ್ನು ಎರಡು ಭಾಗ ಮಾಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿತು. 

ದೇಶ ವಿಭಜನೆಯ ಬಗ್ಗೆ ಗಾಂಧೀಜಿಯವರ ನಿಲುವುಗಳು ಕೂಡ ಅನುಮಾನವನ್ನು ಸೃಷ್ಟಿಸುತ್ತವೆ. 'ನನ್ನ ದೇಹವನ್ನು ಬೇಕಾದರೆ ತುಂಡು ಮಾಡಿ ಹಂಚಿಕೊಳ್ಳಿ, ಆದರೆ ದೇಶ ವಿಭಜನೆಯನ್ನು ಒಪ್ಪುವುದಿಲ್ಲ' ಎಂದಿದ್ದ ಗಾಂಧೀ ಕೊನೆಗೆ ಸುಮ್ಮನಾಗಿದ್ದೇಕೆ??  ವಿಭಜನೆಗೆ ಒಪ್ಪಿಗೆ ಸೂಚಿಸಿದ್ದೇಕೆ? ಮಾತು ಮಾತಿಗೂ ಸತ್ಯಾಗ್ರಹ ಉಪವಾಸ ಎನ್ನುತ್ತಿದ್ದ ಗಾಂಧೀ ವಿಭಜನೆ ವಿರುದ್ಧ ಯಾಕೆ Atleast ಒಂದು ದಿನದ ಉಪವಾಸ ಕೂರಲಿಲ್ಲ...? ಸತ್ಯಾಗ್ರಹ ಮಾಡಲಿಲ್ಲ?... ಚಾಚಾ ಎಂದು ಕರೆಸಿಕೊಳ್ಳುವ ನೆಹರೂ ಯಾಕೆ ತಡೆಯಲಿಲ್ಲ?

ಇಂದು ಜಿನ್ನಾ ಒಬ್ಬ 'ಖಳ'ನಾಗಿ ಕಂಡು ಬರುವುದಾದರೆ ಅದಕ್ಕೆ ಗಾಂಧೀ-ನೆಹರೂ ಹಾಗು ಗಾಂಧೀ ಯುಗದ ಕಾಂಗ್ರೆಸ್ಸೇ ಕಾರಣ... ಒಬ್ಬ ರಾಷ್ಟ್ರವಾದಿ ಜಿನ್ನಾರನ್ನು ದೇಶ ವಿಭಜನೆ ಮಾಡುವಷ್ಟರ ಮಟ್ಟಿಗೆ ಬದಲಾಯಿಸಿದರು ಎಂದ ಮೇಲೆ ಇವರುಗಳೇ ತಾನೇ ನಿಜವಾದ ಖಳ ನಾಯಕರು.

ಯೋಚಿಸಿ...

ಜೈ ಹಿಂದ್...


Tuesday, August 14, 2012

ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು...



ಇಂದು (ಆಗಸ್ಟ್ 14) ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ... ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ.  ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ... ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.


ಅದೇ ರೀತಿ ಬಾಂಗ್ಲಾದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.. ಅಲ್ಲಿನ ಮುಸ್ಲಿಂ ನುಸುಳುಕೋರರು ಈಗಾಗಲೇ ಭಾರತಕ್ಕೆ ಅಕ್ರಮ ವಲಸೆ ಬಂದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಮಾಡುತ್ತಿರುವ ಆಕ್ರಮಣಗಳು, ಅವರ ಧಾಳಿಯಿಂದ ತತ್ತರಿಸಿ ನೆಲೆ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇವೆಲ್ಲ ಎಂತಹ ಕಟು ಹೃದಯಿಯ ಕಣ್ಣಲ್ಲೂ ನೀರು ತರಿಸುತ್ತವೆ. ಪ್ರಸ್ತುತ ಅಸ್ಸಾಂ ನಲ್ಲಿ ನಡೆಯುತ್ತಿರುವ ಹಿಂದೂಗಳ ಮಾರಣಹೋಮವೇ ಇದಕ್ಕೆ ಜ್ವಲಂತ ಸಾಕ್ಷಿ. ಅಲ್ಲಿನ ಹೆಚ್ಚಿನ ಹಿಂದೂ ಬೋಡೊ ಬುಡಕಟ್ಟು ಜನಾಂಗದವರು ಬಾಂಗ್ಲಾದ ಅಕ್ರಮ ವಲಸಿಗ ಮುಸ್ಲಿಮರಿಗಾಗಿ ತಮ್ಮ ಮನೆ ಮಠವನ್ನೆಲ್ಲ ಕಳೆದುಕೊಂಡಿದ್ದಾರೆ. ಅಲ್ಲಿನ ಹಿಂದೂ ಹೆಣ್ಣುಮಕ್ಕಳ ದಯನೀಯ ಸ್ಥಿತಿಯನ್ನಂತೂ ಯಾವ ಪದಗಳಿಂದ ಹೇಳುವುದು ಎಂದೇ ತೋಚುತ್ತಿಲ್ಲ. 



ಹೀಗಿರುವಾಗ ಅವೆರಡೂ ದೇಶಗಳು ಮತ್ತೆ ಭಾರತದೊಂದಿಗೆ ವಿಲೀನಗೊಂಡು 'ಅಖಂಡ ಭಾರತ' ನಿರ್ಮಾಣವಾದರೆ ಅವೆರಡೂ ದೇಶಗಳ ಮುಸ್ಲಿಂಮರು ನಮ್ಮ ಹಿಂದೂಗಳ ಮೇಲೆ ಯಾವ ರೀತಿಯಲ್ಲಿ ಆಕ್ರಮಣಗೈಯಬಹುದು ಎಂಬುದನ್ನು ಒಂದು ಕ್ಷಣ ಊಹಿಸಿ. ಭಾರತದಲ್ಲಿ ಈಗಾಗಲೇ ಸರಿ ಸುಮಾರು 18 ಶೇಕಡಾದಷ್ಟಿರುವ ಮುಸ್ಲಿಮರು ಇಲ್ಲಿನ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಗಳನ್ನು ಎಲ್ಲಾ ಕಡೆಗಳಲ್ಲಿ ತಡೆಯಲಾಗುತ್ತಿಲ್ಲ. ಹಾಗಿರುವಾಗ ಇಲ್ಲಿನ 18  ಶೇಕಡಾ, ಪಾಕ್-ಬಾಂಗ್ಲಾದ ಮುಸ್ಲಿಮರೆಲ್ಲ ಸೇರಿ ಸುಮಾರು 40-45 ಶೇಕಡಾವಾಗುವಾಗ ಇಲ್ಲಿನ ಹಿಂದೂಗಳ ಮೇಲೆ ಆಕ್ರಮಣವಾಗದಿರುತ್ತದೆಯೇ. ಮುಸ್ಲಿಮರ ಜನಸಂಖ್ಯೆ 40 ರಿಂದ 45 ಶೇಕಡಾದಷ್ಟಾಗುವಾಗ ಚುನಾವಣೆಗಳಲೆಲ್ಲ ಮುಸ್ಲಿಂ ಲೀಗ್, ಜಮಾತೆ ಇಸ್ಲಾಂ ನಂತಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಕ್ರಮೇಣ 45 ಶೇಕಡಾದಿಂದ 50 , ನಂತರ 55 , ಮುಂದೆ 60 ಹೀಗೆ ಮುಸ್ಲಿಮರ ಜನಸಂಖ್ಯೆ ಭಾರತದಲ್ಲಿ ಹೆಚ್ಚಳವಾಗುತ್ತ ಹೋಗುವಾಗ ಹಿಂದೂಗಳ ಸ್ವಂತ ನಾಡಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರಲ್ಲ!!! ಆಗಲೂ ನಾವು ಅಖಂಡ ಭಾರತವನ್ನು ಹೊಂದಬೇಕು ಎಂಬ ಆಸೆ ಇರುವುದೇ...?!


ಇಂದು 'ಅಖಂಡ ಭಾರತ ಸಂಕಲ್ಪ ದಿನ'ವೆಂದು ಆಚರಿಸುವವರಿಗೆ ಅದರ ಉದ್ಧೇಶ ಹಾಗು ಅದರಿಂದಾಗುವ ಪರಿಣಾಮಗಳ ಅರಿವಿರಲಿಕ್ಕಿಲ್ಲ. ಯಾವುದೇ ಆಚರಣೆಗಳನ್ನು ಆಚರಣೆ ಮಾಡಬೇಕೆಂದು ಆಚರಿಸುವುದಕಿಂತ ಅದರ ಪರಿಣಾಮಗಳನ್ನು ಅವಲೋಕಿಸಿ ಆಚರಿಸಿದರೆ ಉತ್ತಮ ಅಲ್ಲವೇ...


ಜೈ ಭವಾನಿ...



Saturday, August 4, 2012

ದೇವತೆ I LOVE YOU


ಚಡಪಡಿಕೆಯೇತಕೆ ಚೆಲುವೇ..
ಚಡಪಡಿಸದಿರು ನನ್ನ ಒಲವೇ..
ಮಂದಾರ ಪುಷ್ಪದ ಚೆಲುವು ಪಡೆದ ನೀನು ನನ್ನವಳೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...

ಆ ಶಿಖರದ ಮೇಲಿನಿಂದ ಹಾದು ಹೋದ ಕಾಮನಬಿಲ್ಲೇ

ಈ ನನ್ನ ಹೃದಯದಲಿ ಪುಳಕ ತಂದ ಹುಣ್ಣಿಮೆ ತುಂಡೇ
ನನ್ನ ಬಾಳ ಸಿಹಿ ನೀನು ಹಾದು ಹೋಗದಿರು ಇರುವೆಗಳ ಮುಂದೆ
ನಿನಗಾಗಿಯೇ ನಾನಿರುವೆನು ನಿನ ಬದುಕಲಿ ಇನ್ನು ಮುಂದೇ...

ಆನಂದದ ಉಯ್ಯಾಲೆಯಲಿ ನಿನ್ನ ನಾ ಕೂರಿಸುವೇ

ಎವೆಯಿಕ್ಕದೆ ನಿನ್ನ ನೋಡುತ ನಾ ಅಲ್ಲೇ ಕಾದಿರುವೇ..
ಆಗರ್ಭ ಸಿರಿವಂತ ನಾನು ನಿನ್ನ ಪ್ರೀತಿ ಪಡೆದ ಮೇಲೆ
ನಿನ್ನಿಂದಲೇ ನಾನಾಗಿಯೇ ನಾನಿಂದು...

ಚಡಪಡಿಕೆಯೇತಕೆ ಚೆಲುವೇ..

ಚಡಪಡಿಸದಿರು ನನ್ನ ಒಲವೇ..
ಕ್ಷಣ ಬಿಡದೆ ಎದೆಯಾ ತುಂಬಾ ನಿನ್ನೆ ನಾ ತುಂಬಿಡುವೇ...


Saturday, May 26, 2012

ಕನ್ನಡ ಭಾಷೆ ಮತ್ತು ಡಬ್ಬಿಂಗ್

ರಿಯಾಲಿಟಿ ಶೋಗಳೆಂದರೆ ಯಾವುದೋ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಕಾಲಹರಣ, ತುಂಡುಡುಗೆಯ ಮಾನಿನಿಯರ ಮೇಲಾಟ, ಅನೈತಿಕ ವಿಷಯಗಳ ಬಗ್ಗೆ ಚರ್ಚೆ, ಹುಚ್ಚು ಕುಣಿತ, ತುಸು ಮನೋರಂಜನೆ.. ಬರೀ ಇಂತಹ ಅಭಿಪ್ರಾಯಗಳೇ ಎಲ್ಲರ ಮನದಲ್ಲಿ ಮನೆಮಾಡಿಕೊಂಡಿರುವ ಈ ಕಾಲದಲ್ಲಿ ಎಲ್ಲ ರಿಯಾಲಿಟಿ ಶೋ ಗಳಿಗಿಂತ ಭಿನ್ನವಾಗಿ ಕಾಣುವಂತಹುದು ಹಿಂದಿಯ ಸ್ಟಾರ್ ಪ್ಲಾಸ್ ನಲ್ಲಿ ಪ್ರಸಾರವಾಗುವ 'ಸತ್ಯಮೇವ ಜಯತೇ'..

'ಸತ್ಯಮೇವ ಜಯತೇ' ರಾಷ್ಟ್ರದ ಜ್ವಲಂತ ಸಮಸ್ಯೆಗಳನ್ನು, ಅಮಾನವೀಯ ಘಟನಾವಳಿಗಳನ್ನು, ಸಮಾಜದಲ್ಲಿ ಕಂಡೂ ಕಾಣದಂತಿರುವ ಪಿಡುಗುಗಳನ್ನು ನೇರವಾಗಿ ಜನರಿಗೆ ತೋರಿಸುತ್ತಾ ಜನರಲ್ಲಿ ಅರಿವನ್ನು ಮೂಡಿಸುತ್ತಿರುವ ಒಂದು ಪ್ರಶಂಶನೀಯ ಕಾರ್ಯಕ್ರಮ. ಇದನ್ನು ನಡೆಸಿಕೊಡುತ್ತಿರುವವರು ಹಿಂದಿಯ ಹೆಸರಾಂತ ನಟ ಅಮೀರ್ ಖಾನ್.. ಅಮೀರ್, ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದಿರುವ ಮುಸ್ಲಿಂ ಮೂಲಭೂತವಾದಿ ಶಾರುಖ್ ಖಾನ್ ಹಾಗು ಇತರೆ ಖಾನ್ ಗಳನ್ತಲ್ಲ.. ಸದಾ ದೇಶ ಜಾಗೃತಿಯ ಬಗ್ಗೆ ಸಿನಿಮಾಗಳನ್ನು ಮಾಡುತ್ತಾ ದೇಶ ಸೇವೆಗೈಯುತ್ತಿರುವ ಅಮೀರ್ ನ ವ್ಯಕ್ತಿತ್ವ ನಿಜಕ್ಕೂ ಇತರ ಖಾನ್ ಗಳಿಗೆ ಮಾದರಿಯಾಗುವಂತಹುದು...

ಇದೇ ಅಮೀರ್ ನ ಸತ್ಯಮೇವ ಜಯತೇ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ ಆಗಿರುವುದು, ಕನ್ನಡದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ ಕನ್ನಡಿಗರಿಗೆ ಸತ್ಯಮೇವ ಜಯತೆಯ  ಕನ್ನಡ ರೂಪಾಂತರವನ್ನು ನೋಡಲು ಸಾಧ್ಯವಾಗದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.. ಇಂತಹ ಒಂದು ಜನ ಜಾಗೃತಿಯ ಕಾರ್ಯಕ್ರಮ ದೇಶದ ಮೂಲೆ ಮೂಲೆಗೂ ಅವರದೇ ಭಾಷೆಯಲ್ಲಿ ತಲುಪಬೇಕೆಂಬ ಅಮೀರ್ ನ ಆಸೆ ಕರ್ನಾಟಕದ ಮಟ್ಟಿಗೆ ನೆರವೇರಲಿಲ್ಲ..  ಇಲ್ಲಿನ ಕಿರುತೆರೆ, ಚಿತ್ರರಂಗದ ಸಂಘ ಸಂಸ್ಥೆ ಗಳು, ಕಲಾವಿದರು ತಂತ್ರಜ್ಞರ ತೀವ್ರ ಪ್ರತಿರೋಧದಿಂದ ಇದು ಸಾಧ್ಯವಾಗದೆ ಹೋಯಿತು... ಈಗ ನಾವು ನೀವುಗಳು  ಸತ್ಯಮೇವ ಜಯತೆಗಾಗಿ ಬೇರೆ  ಭಾಷೆಯ ಛಾನಲನ್ನು ನೋಡುವಂತಾಗಿದೆ.. ಇದು ಅಸಂಖಾತ ಕನ್ನಡ ಪ್ರೇಕ್ಷಕರಿಗೆ ಹಾಗು ಕನ್ನಡ ಭಾಷೆಗೆ ಕನ್ನಡ ಚಿತ್ರರಂಗ ಮಾಡಿದ ಅತೀ ದೊಡ್ಡ ದ್ರೋಹ...

ಡಬ್ಬಿಂಗ್ ಯಾಕೆ ಬೇಡ...?! ಚಿತ್ರರಂಗ ಕಿರುತೆರೆಯರ ಪ್ರಕಾರ ಡಬ್ಬಿಂಗ್ ನಿಂದಾಗಿ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ, ಕನ್ನಡದ ಸಂಸ್ಕೃತಿಯ ನಾಶವಾಗುತ್ತದೆ.. ಇದು ಅವರ ವಾದ.. ಕನ್ನಡದಲ್ಲಿ ಒಂದು ಹಿಡಿದಿಟ್ಟುಕೊಳ್ಳುವಂತಹ, ಜನ ಜಾಗೃತಿಯ ಕಾರ್ಯಕ್ರಮ ತಯಾರಿಸಲಾಗದ ಇವರುಗಳು ಮತ್ತೇನು ತಾನೇ ಹೇಳಿಯಾರು? ಈಗಾಗಲೇ ಕುಲಗೆಟ್ಟ ಕಾರ್ಯಕ್ರಮಗಳು, ಸ್ವಂತಿಕೆ ಇಲ್ಲದ ಸಿನೆಮಾ. ರಿಮೇಕ್ ಗಳಿಂದ ಹೆಸರು ಕೆಡಿಸಿಕೊಂಡು ಹೆಚ್ಚಿನ ಕನ್ನಡ ಪ್ರೇಕ್ಷಕರನ್ನು ದೂರಕಟ್ಟಿರುವ ಕನ್ನಡ ಚಿತ್ರರಂಗ ಈ ಡಬ್ಬಿಂಗ್ ವಿರೋಧಿ ಆಂದೋಲನದಿಂದ ಸಾಧಿಸುವುದಾದರೂ ಏನು?


ಡಬ್ಬಿಂಗ್ ವಿರುದ್ದ ತೋಳೆತ್ತಿ ಆರ್ಭಟಿಸುತ್ತಿರುವ ಶಿವಣ್ಣ ಹಾಗು ಅವರ ಬಳಗಕ್ಕೆ ತಾವು ಮಾಡುತ್ತಿರುವುದು ಕಾನೂನು ವಿರೋಧಿ ಹೋರಾಟ ಎಂಬುದರ ಕಿಂಚಿತ್ತಾದರೂ ಅರಿವಿದೆಯೇ? ಡಬ್ಬಿಂಗ್ ಗೆ ಭಾರತದ ಕಾನೂನಿನಲ್ಲಿ ಯಾವುದೇ ವಿರೋಧವಿಲ್ಲ. ಡಬ್ಬಿಂಗ್ ಸಂವಿಧಾನಾತ್ಮಕವಾದುದು. ಹೀಗಿರುವಾಗ ಡಬ್ಬಿಂಗ್ ಗೆ ವಿರೋಧ ವ್ಯಕ್ತ ಪಡಿಸುವುದು ಅಪ್ರಜಾಸತ್ಮಕವಲ್ಲವೇ. ಪಾಳೇಗಾರಿಕೆ ಮೂಲಕ ಡಬ್ಬಿಂಗ್ ಅನ್ನು ಕನ್ನಡದಿಂದ ದೂರಕತ್ತುವುದು ಎಷ್ಟರ ಮಟ್ಟಿಗೆ ಸರಿ..


ಬಹುಶಃ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಅವರುಗಳು ಬೇರೆ ಭಾಷೆಯಿಂದ ಕದ್ದು ರಿಮೇಕ್ ಮಾಡಲು, ನಾಲ್ಕೈದು  ಸಿನಿಮಾದ ಕತೆ ಸೇರಿಸಿ ಖಿಚಡಿ ಸಿನಿಮಾ ಮಾಡಲು ಸಾಧ್ಯವಾಗದು ಎಂಬ ಆತಂಕವೋ ಏನೋ..? ಒಂದು ಮಾತ್ರ ಸತ್ಯ ಈ ಸ್ವಂತಿಕೆ ಇಲ್ಲದ  ಕನ್ನಡ ಚಿತ್ರರಂಗದಿಂದ ಜನ ದಿನೇ ದಿನೇ ವಿಮುಖರಾಗುತ್ತಿದ್ದಾರೆ. ತಮ್ಮ ಮನೋರಂಜನೆಗಾಗಿ ಬೇರೆ ಭಾಷೆಗಳ ಮೊರೆ ಹೋಗುತ್ತಿದ್ದಾರೆ.. "10 ಹೊಸ ಚಿತ್ರಗಳ ಪೈಕಿ 1  ಮಾತ್ರ ಆಯ್ಕೆಗೆ ಅರ್ಹವಾಗಿರುತ್ತವೆ.  ಉಳಿದವು ಎಲ್ಲಾ ಸವಕಲು" ಎಂದು ವಿಷಾದದಿಂದ ಹೇಳುವ ಕನ್ನಡದ ಹಿರಿಯ ನಟ ಅನಂತ್ ನಾಗ್ ರವರ ಮಾತುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ. ಇಂತಹ ಚಿತ್ರರಂಗದಿಂದ ಕನ್ನಡ ಭಾಷೆ-ಸಂಸ್ಕೃತಿ ಬೆಳೆಯುತ್ತದೆ ಎಂದು ನಿರೀಕ್ಷಿಸುವುದು ದೊಡ್ಡ ಅಪರಾಧವಾಗುತ್ತದೆ.



ಸತ್ಯಮೇವ ಜಯತೆ ಕನ್ನಡದಲ್ಲಿ ದೊರೆಯದ ಕಾರಣ ನಾವು ಬೇರೆ ಭಾಷೆಯ ಮೊರೆ ಹೋದ ಹಾಗೆ ಅದೆಷ್ಟೋ ಕನ್ನಡಿಗರು ತಮ್ಮಿಷ್ಟದ ಮನೋರಂಜನಾ ಕಾರ್ಯಕ್ರಮಕ್ಕಾಗಿ ಬೇರೆ ಭಾಷೆಯ ಚಾನಲ್ ಗಳಿಗೆ ಟ್ಯೂನಿಸುತ್ತಾರೆ. ಇಲ್ಲಿ ನಮಗೇನೂ ನಷ್ಟವೆನಿಸುವುದಿಲ್ಲ. ನಮಗೆ ಬೇಕಾದ ಮಾಹಿತಿ, ಮನೋರಂಜನೆ ಎಲ್ಲವೂ ದೊರಕುತ್ತದೆ. ಆದರೆ ಇಲ್ಲಿ ನಿಜವಾಗಿ ನಷ್ಟಕ್ಕೊಳಗಾಗುವುದು ಮಾತ್ರ ಕನ್ನಡ ಭಾಷೆ..! ನಮ್ಮಿಷ್ಟದ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಡಬ್ ಮಾಡಿ ತೋರಿಸಿದರೆ ನಾವೆಲ್ಲಾ ಮನೆ ಮಂದಿಯೊಂದಿಗೆ ಕುಳಿತು ಕನ್ನಡದಲ್ಲೇ ವೀಕ್ಷಣೆ ಮಾಡುತ್ತೇವೆ. ಆಗ ಕನ್ನಡ ಭಾಷೆ ಬೆಳೆಯುತ್ತದೆ, ಭಾಷಾ ಜ್ಞಾನ ವಿಸ್ತಾರಗೊಳ್ಳುತ್ತದೆ. ಆದರೆ ಅದನ್ನೇ ಬೇರೆ ಭಾಷೆಗಳಲ್ಲಿ ನೋಡಿದಾಗ ಆ ಬೇರೆ ಭಾಷೆ ಬೆಳೆಯುತ್ತದೆಯೇ ಹೊರತು ಕನ್ನಡವಲ್ಲ. ಕನ್ನಡ ನಿಧಾನವಾಗಿ ಮರೆಗೆ ಸರಿಯಲಾರಂಬಿಸುತ್ತದೆ  . ಈಗ ಅದೆಷ್ಟೋ ಉಪಯುಕ್ತ ಚಾನಲ್ ಗಳಾದ  ಹಿಸ್ಟರಿ, ಡಿಸ್ಕಾವರಿ, ನ್ಯಾಷನಲ್ ಜಿಯೋಗ್ರಾಫಿ  ಮುಂತಾದವುಗಳು ಭಾರತದ ಹೆಚ್ಚಿನ ಭಾಷೆಗಳಲ್ಲಿ ಡಬ್ ಗೊಂಡಿವೆ. ಆದರೆ ಕನ್ನಡದಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡಿಲ್ಲ. ಮೊದಲೆಲ್ಲ ಮಕ್ಕಳಿಗೆ ಮನೆಯಲ್ಲಿ ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು.  ಆದರೆ ಈಗಿನ ಜೀವನ ಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವು ಮಕ್ಕಳಿಗೆ ರಾಮಾಯಣ-ಮಹಾಭಾರತದ ಕಾರ್ಟೂನ್ ಗಳ DVD  ಗಳನ್ನು ತಂದುಕೊಡುತ್ತೇವೆ. ಅದು ಹಿಂದಿ ಆದಿಯಾಗಿ ಇಂಗ್ಲಿಷ್, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ದೊರೆಯುತ್ತದೆ. ಆದರೆ ಕನ್ನಡದಲ್ಲಿ ದೊರೆಯುವುದಿಲ್ಲ. ಅದೇ ಕನ್ನಡದಲ್ಲಿ ಡಬ್ಬಿಂಗ್ ಗೆ ಅವಕಾಶ ಕೊಟ್ಟಿದ್ದರೆ ಅದೇ ಮಗು ಕಾರ್ಟೂನ್ ಗಳನ್ನು ಕನ್ನಡದಲ್ಲೇ ನೋಡುತ್ತಿತ್ತು. ಕನ್ನಡದಲ್ಲೇ ಕಾರ್ಟೂನ್ ನೋಡುವುದರಿಂದ ಆ ಮಗು ಎಷ್ಟು ಚೆನ್ನಾಗಿ ಕನ್ನಡ ಕಲಿಯುತಿತ್ತು ಅಲ್ಲವೇ.. ಮಗುವೂ ಬೆಳೆಯುತ್ತಿತ್ತು ಜೊತೆಗೆ ಕನ್ನಡವೂ..

ಇದೆಲ್ಲ ಒಂದು ನೂರು ಜನರ ಗುಂಪು ಕಟ್ಟಿಕೊಂಡು ಬೆದರಿಸುವ ಶಿವಣ್ಣ ನಿಗೆ ಅರ್ಥವಾಗುತ್ತದೆಯೇ? ಡಬ್ಬಿಂಗ್ ಬೇಕು ಎನ್ನುವವರು ಕನ್ನಡಿಗರಲ್ಲ ಎಂಬಂತೆ ಮಾತನಾಡುವ ಶಿವಣ್ಣ ಕನ್ನಡಿಗನೇ? ಕನ್ನಡಿಗರ ಕನ್ನಡತನವನ್ನು ಪ್ರಶ್ನಿಸಲು ಶಿವಣ್ಣ ಯಾರು? ಕನ್ನಡ ಭಾಷಾ ಬೆಳವಣಿಗೆಗೆ ಅಡ್ಡಗಾಲಿಡುವ ಪ್ರಯತ್ನದಲ್ಲಿರುವ ಇವರುಗಳು ಒಂದರ್ಥದಲ್ಲಿ ಕನ್ನಡಿಗರೇ ಅಲ್ಲ... ತಮ್ಮ ಸ್ವಾರ್ಥ ಸಾಧನೆಗಾಗಿ ಆಂದೋಲನ ಚಳುವಳಿ ಮಾಡುವ ಶಿವಣ್ಣ ಟೀಂ ಗೆ ನಿಜವಾದ ಕನ್ನಡಿಗರು (ಡಬ್ಬಿಂಗ್ ಪರ) ಸೆಟೆದು ನಿಂತರೆ ಇಲ್ಲಿ ನಿಲ್ಲಲೂ ಸಾಧ್ಯವಾಗದು ಎಂಬುದರ ಅರಿವಾಗಬೇಕು..  ಕನ್ನಡ ಚಿತ್ರರಂಗವೊಂದನ್ನು ಬಿಟ್ಟು ಎಲ್ಲ ಕನ್ನಡ ಸಂಘಟನೆಗಳ ಸಹಿತ ಇಡೀ ಕರುನಾಡಿಗೆ ಕರುನಾಡೆ  ಡಬ್ಬಿಂಗ್ ಬೆಂಬಲಿಸುತ್ತಿರುವಾಗ ಶಿವಣ್ಣ ಟೀಮ್ ನ ಅಪ್ರಜಾಸಾತ್ಮಕ ಹೋರಾಟ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವ್ಯರ್ಥವಾಗುವುದು ಖಂಡಿತ..


ಜೈ ಭುವನೇಶ್ವರಿ..