Thursday, June 23, 2011

ಪ್ರೀತಿಯೆಂಬ ಕುಂಚದಲಿ..


ತುಂತುರು ನೀರಧಾರೆಯಲಿ ಮೈನೆನೆಯಲು ಸುರಿದಿದೆ ಬಾಷ್ಪ
ಮಳೆನೀರ ನಡುವೆ ಕಣ್ಣೀರು ಕಾಣಸಿಗುವುದೇ..

ನೀನೆಲ್ಲೋ ನಾನೆಲ್ಲೋ ಅಂತರವಿರುವಾಗ 
ನನ್ನೆದೆ ಮಿಡಿತದ ಕೂಗು ಕೇಳಲಾಗುವುದೇ..

ನಿನ್ನ ನಾಮದ ಧ್ಯಾನದಲಿ ಮುಳುಗಿ ಹೋಗಿಹೆನು 
ಕಸುಬಿಲ್ಲದ ಹುಚ್ಚ ನಾನೆಂದುಕೊಳಬೇಡ..

ರವಿವರ್ಮನ ಮೀರಿಸಿ ನಿನ್ನ ಚಿತ್ರಿಸಬಲ್ಲೆ 
ಪ್ರೀತಿಯೆಂಬ ಕುಂಚದಲಿ ನನ್ನ ಹೃದಯದ ಮೇಲೆ..

ಅಗೆದಗೆದು ನೋಡು ನೀ ಹುದುಗಿರೋ ಪ್ರೇಮವನು
ಸಿಂಚನಕೆ ಕಾಯುತ್ತಿದೆ ನಿನ್ನೊಲವು ಕೂಡಿದಾಕ್ಷಣ..

ನನ್ನಂತರಂಗದ ಅನುರಾಗವ ಒಮ್ಮೆ ಕಂಡು ಹೋಗು ನೀ 
ನನ್ನ ಹೃದಯವು ಕಾದು ಅಸ್ತಮಿಸೋ ಮುನ್ನ..


Sunday, May 22, 2011

ಕನವರಿಸದಿರು ಎನ್ನ..

ಅನುರಾಗದ ಅನುಬಂಧಕೆ ನಾನಲ್ಲ ನಲ್ಲನು 
ಅಳಿಸಿ ಬಿಡು ಎನ್ನ ನಿನ್ನ ಮನದಿಂದ..

ನಿನ್ನೊಲವು ಎನಗಲ್ಲ ಆ ಭಾಗ್ಯ ನನಗಿಲ್ಲ
ಕನವರಿಸದಿರು ಎನ್ನ ನೀ ಪ್ರತಿದಿನ..

ಕೈಗೂಡದ ನಿನ್ನೊಲವ ಹಿಸುಕಿ ಕೊಂದು ಬಿಡು
ವಿರಹದಿ ಒಲವು ಅಸುನೀಗೋ ಮುನ್ನ..

ನಲುಗದ ಮಲ್ಲಿಗೆಗೆ ಮುಳ್ಳಿನ ಸಂಗವೇಕೆ
ನೀ ನಲಿಯುತಿರು ಎಂದೂ ನಲುಗದಂತೆ..

ಮರುಗಿ ಬೆರಗಾಗೋ ಮುನ್ನ ಕರಗಿಸು ನಿನ್ನೊಲವ 
ಮುಂದೊಮ್ಮೆ ಹೃದಯ ಭಾರವೆನಿಸದಂತೆ..

ಹಗಲ ಬಾವಿಗೆ ಇರುಳು ಬೀಳುವ ಹಾಗೆ
ಕುರುಡಾಗದಿರು ಇದು ಕುರುಡು ಪ್ರೀತಿಯು..

Tuesday, May 3, 2011

'ಪ್ರೀತಿ ಗೂಡು..'

ನನ್ನ ಮನದ ಬನದ ಪ್ರೀತಿಯ ಗೂಡಿಗೆ
ಕಲ್ಲೊಡೆದವರಾರು...
ನನ್ನ ಒಲವ ಚೆಲುವ ಲೋಕದಲಿ 
ಕಂಪನಗೈದವರಾರು...
ಇದೇನು ಬ್ರಹ್ಮ ನಿನ್ನಾಟ, ಇದೇಕೋ ನಿನ್ನ ಈ ಮಾಟ 
ನಿನ್ನ ಪ್ರೀತಿಯ ಸೃಷ್ಟಿಯ ಪ್ರೀತಿಗೆ ವಿರಾಮ ಸರಿಯೇ...

ಕಾಲಡಿ ಭೂಮಿ ಕುಸಿದು
ಎದೆಯು ನಡುಗಿ ಏನೇನೋ ಆಗಿದೆ
ನೀನಿರದ ಬಾಳು ಬಾಳೋ ಶಕ್ತಿ
ನನಗೆಂದೂ ಇಲ್ಲದೇ...
ನೀ ನನ್ನ ಪ್ರಾಣ ನಾನೆಂದು ಬದುಕೆನು ಪ್ರಾಣವೇ ಇಲ್ಲದೇ...
ಕನಿಕರಿಸೆ ಹೇ ಒಲವೇ ದೀನ ನಾ ನಿನ್ನ ಅಧೀನ...

ಜ್ವಾಲಾಮುಖಿ ಬಾಯ್ದೆರೆದು ನನ್ನ ನುಂಗಿ ಹೋದರೂ
ಶಿಖರಗಳೇ ಧರೆಗಿಳಿದು ನನ್ನ ಮುಚ್ಚಿ ಬಿಟ್ಟರೂ
ನಿನಗಾಗೇ ಮಿಡಿವುದು ಹೃದಯ ಅನವರತ ಒಲವೇ...
ನನ್ನ ಹೃದಯ ಸೀಳಿ ನೋಡು ಒಮ್ಮೆ ನಿನ್ನೇ ನೀ ಕಾಣುವೇ...
ನನ್ನೆದೆಯ ಮೊದಲ ತೊದಲ ಪ್ರೀತಿಯನು 
ನೀ ಕೈ ಹಿಡಿದು ಉಳಿಸೇ......................!

'ಸುಳ್ಳಾಡುವೆಯೇಕೆ ನೀನಲ್ಲವೇ ಆಶ್ರಯದಾತ..'

ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60  km ದೂರದಲ್ಲಿ ಕುಖ್ಯಾತ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಹತನಾದ ಬೆನ್ನಲ್ಲೇ ಕಳೆದ 10  ವರ್ಷಗಳಿಂದ ಲಾಡೆನ್ ನಮ್ಮ ಬಳಿ ಇಲ್ಲ ಎಂದು ವಾದಿಸುತ್ತಲೇ ಬಂದಿದ್ದ ಪಾಕ್ ತೆಪ್ಪಗಾಗಿದೆ. ಈ ಹತ್ಯೆ ೨೬/೧೧ ರ ಮುಂಬೈ ದಾಳಿಯ ಸಂಚುಕೋರರು ಪಾಕ್ ನಲ್ಲೆ ಇದ್ದಾರೆ ಎನ್ನುವ ಭಾರತದ ವಾದಕ್ಕೂ ಪುಷ್ಠಿ ನೀಡಿದೆ. ವಾರಕ್ಕೆರಡರಂತೆ ತನ್ನದೇ ನೆಲದಲ್ಲಿ ಬಾಂಬ್ ಸ್ಪೋಟವಾಗಿ ತಾನೇ ಬೆಳೆಸಿದ ಭಯೋತ್ಪಾದನೆಗೆ ಈಗ ಸ್ವತಃ ತಾನೇ ಬಲಿಯಾಗುತ್ತಿದ್ದರೂ ಇನ್ನೂ ಪಾಕ್ ತನ್ನಲ್ಲಿರುವ ಭಯೋತ್ಪಾದಕರನ್ನು ರಕ್ಷಿಸಲು ಹವಣಿಸುತ್ತಿರುವುದು ವಿಪರ್ಯಾಸ..!

ಲಾಡೆನ್ ನ ಅಡಗುತಾಣವಿದ್ದುದು ಪಾಕ್ ಸೇನಾ ನೆಲೆಯ ಆವರಣಕ್ಕೆ ತಾಗಿಕೊಂಡೇ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ. ಅದು ಪಾಕ್ ರಾಜಧಾನಿ ಇಸ್ಲಾಮಾಬಾದ್ ನಿಂದ ಕೇವಲ 60 km ದೂರದಲ್ಲಿ..! ಈ ಅಂಶಗಳನ್ನು ಗಮನಿಸುವಾಗ ಪಾಕ್ ತಾನಾಗಿಯೇ ಲಾಡೆನ್ ಗೆ ಆಶ್ರಯ ಕಲ್ಪಿಸಿತ್ತೇ ಎಂದು ಅನುಮಾನ ಮೂಡುವುದು ಸಹಜ. ಲಾಡೆನ್ ತನ್ನ ಬಳಿ ಇಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದ ಪಾಕ್ ಈಗೇನು ಹೇಳುತ್ತದೆ..? ಲಾಡೆನ್ ಸಾವಿನ ನಂತರ ಒಂದೇ ಒಂದು ಹೇಳಿಕೆ ನೀಡದ ಪಾಕ್ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿಯ ಮೌನದ ಅರ್ಥವಾದರೂ ಏನು..?

1993 ರ ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಮ್, 2001 ರ ಸಂಸತ್ ದಾಳಿ ಸೂತ್ರದಾರ ಜೈಶ್ ನ ಸ್ಥಾಪಕ ಮಸೂದ್ ಅಜರ್, 2008 ರ ಮುಂಬೈ ದಾಳಿಯ ಸಂಚುಕೋರರಾದ ಲಷ್ಕರ್ ಈ ತೊಇಬಾದ  ಹಫಿಜ್ ಸಯೀದ್ ಹಾಗು ಸಾಜಿದ್ ಮೀರ್ ಪಾಕ್ ನಲ್ಲೇ ಇದ್ದಾರೆ ಎನ್ನುವುದಕ್ಕೆ ಭಾರತ ಖಚಿತವಾದ ಪುರಾವೆಗಳನ್ನು ನೀಡಿದ್ದರೂ ಪಾಕ್ ಮಾತ್ರ ಬಾಲಿಶವಾಗಿ ಹೆಣ್ಣಿಗನಂತೆ ವರ್ತಿಸುತ್ತಿದೆ.

ಅಮೇರಿಕಾದ Counter Terrorism ನ ಖಚಿತ ಮೂಲಗಳ ಪ್ರಕಾರ ಪಾಕ್ ನಲ್ಲಿ ಅಡಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ನಾಯಕರುಗಳ ಪಟ್ಟಿಯತ್ತ ಒಮ್ಮೆ ಕಣ್ಣು ಹಾಯಿಸಿ.. ಪಾಕ್ ಭಯೋತ್ಪಾದಕರ ಖಣಜ ಎನ್ನುವುದಕ್ಕೆ ಇದೇ ಸಾಕ್ಷಿ..!
* ಲಾಡೆನ್ ನಂತರ ಅಲ್ ಕೈದಾದ ನೇತೃತ್ವ ವಹಿಸಿರುವ ಆಯ್ಮಾನ್ ಅಲ್ ಜವಾಹಿರಿ.
* ಜೈಶ್ ಎ ಮೊಹಮ್ಮದ್ ನ ಸ್ಥಾಪಕ ಮೌಲಾನ ಮಸೂದ್ ಅಜರ್.
* ಭೂಗತ ಪಾತಕಿ, ಡ್ರಗ್ ಸ್ಮಗ್ಲರ್, ಮುಸ್ಲಿಂ ಮಾಫಿಯಾ ದೊರೆ ದಾವೂದ್ ಇಬ್ರಾಹಿಮ್.
* ಭೂಗತ ಪಾತಕಿ ಮುಶ್ತಾಕ್ ಟೈಗೆರ್ ಮೆಮೊನ್.
* ಹರ್ಕತ್ ಉಲ್ ಮುಜಾಹಿದ್ದೀನ್ ನ ನಾಯಕ ಮೌಲಾನ ಫಾಜ್ಲೀರ್ ರೆಹಮಾನ್.
* ಹುಜಿ (ಹರ್ಕತ್ ಉಲ್ ಜಿಹಾದ್ ಇಸ್ಲಾಮಿ) ಯ ಮುಖ್ಯ ಕಮಾಂಡರ್ ಕ್ವಾರಿ ಸೈಫುಲ್ಲ ಅಖ್ತರ್.
* ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್.
* ಜಮಿಎತ್ ಅಹ್ಲೇ ಹದಿಸ್ ನ ಮುಲ್ಲಾ ಸಾಜಿದ್ ಮಿರ್.
* ಮರ್ಕಜ್ ಉದ್ ದವ (MUD) ದ ಅಮೀರ್ ಹಮ್ಜ.
* ಹುರ್ರಿಯತ್ ನ ಗುಲಾಂ ಮೊಹಮ್ಮದ್ ಸಫಿ.
* ಜಮಿಯತ್  ಉಲ್ ಮುಜಾಹಿದ್ದೀನ್ ನ ಅಮೀರ್ ಅಬ್ದುಲ್ಲ.
* ತೆಹರಿಕ್ ಉಲ್ ಮುಜಾಹಿದ್ದೀನ್ ನ ಶೇಖ್ ಜಮಿತುರ್ ರೆಹಮಾನ್.
* ಮುತ್ತಹಿದ ಮಜಿಸ್ ಎ ಅಮಲ್ (MMA) ನ ಮೌಲಾನ ಮೊಹಮ್ಮದ್ ಇಶಾಕ್.
* ಜಮಾತ್ ಎ ಇಸ್ಲಾಮಿ ಯ ಕಾಜಿ ಹುಸ್ಸೈನ್ ಅಹ್ಮೆದ್.
* ISI ನ ಮಾಜಿ ಮುಖ್ಯಸ್ಥ, ಒಸಮಾ ಬಿನ್ ಲಾಡೆನ್ ನ ನಿಕಟವರ್ತಿ ಹಮಿದ್ ಗುಲ್.
* ಜಿಹಾದ್ ಚಟುವಟಿಕೆಗೆ ನೆರವೀಯುತ್ತಿರುವ ಅಲ್ಲಾ ಬುಕ್ಶ್ ಬ್ರೋಹಿ.
* ಎಂಎಂಎ ಇಸ್ಲಾಮಿಸ್ಟ್ ನಾಯಕ ಮೌಲಾನ ಸಾಮಿ ಉಲ್ ಹಕ್.
* ತೆಹ್ರೀಕ್ ನಿಫಾಜ್ ಎ ಶರಿಯತ್  ಮೊಹಮ್ಮದ್ ನ ಮುಖಸ್ಥ ಮೌಲಾನ ಮೊಹಮ್ಮದ್ ಆಲಂ.
* ಜಮ್ಮತ್ ಉಲೇಮ ಎ ಇಸ್ಲಾಂ ಇದರ ಪ್ರಧಾನ ಸೆಕ್ರೆಟರಿ ಜನರಲ್ ಹಫಿಜ್ ಹುಸೇನ್ ಅಹ್ಮದ್.
* ಜಮಾತ್ ಉಲೇಮ ಎ ಇಸ್ಲಾಮ್ಮ್ ನ ದಂಡನಾಯಕ ಸಮಿಯುಲ್ ಹಕ್.
* ಜಮಾತ್ ಎ ಇಸ್ಲಾಮಿಯ ಮುಜ್ಜ್ಯಫಾರಾಬಾದ್ ಕಮಾಂಡರ್ ಶೇಕ್ ಅಕುಲರ್ ರೆಹಮಾನ್.
* ಸುನ್ನಿ ಗ್ರೂಪ್ ಸಿಪಃ ಎ ಸಾಹಬ ಪಾಕಿಸ್ತಾನ್ ನ ಮುಖ್ಯಸ್ಥ ಹಾಗು ಪಾಕ್ ಅಸೆಂಬ್ಲಿಯ ಸದಸ್ಯ ಮೌಲಾನ ಅಜಮ್ ತಾರಿಕ್.
* ಲಷ್ಕರ್ ಎ ತೊಇಬದ ಪಂಜಾಬ್ ಪ್ರಾಂತ್ಯದ ನಾಯಕ ಹಫಿಜ್ ಅಬ್ದುಲ್ ಸಲಾಂ.

ಇವು ಭಯೋತ್ಪಾದಕ ಸಂಘಟನೆಗಳ ನಾಯಕರುಗಳ ಹೆಸರುಗಳಷ್ಟೇ..! ಇನ್ನೂ ಗಮನಕ್ಕೆ ಬರದ ಮರಿ ನಾಯಕರುಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಇತ್ತೀಚಿಗೆ ಪಾಕ್ ನ ಮಂತ್ರಿಗಳ ಜತೆ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಇಷ್ಟೆಲ್ಲಾ ಇರುವಾಗ ಲಾಡೆನ್ ಹತ್ಯೆಯ ನಂತರ ಪಾಕ್ ವಿದೇಶಾಂಗ ವಕ್ತಾರೆ ತಹ್ಮೀನ ಜುನೆಜ್ ರ "...ನಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಆಸ್ಪದವಿಲ್ಲ" ಎಂಬ ಹೇಳಿಕೆ ಹಾಸ್ಯಾಸ್ಪದ ಎನಿಸದೇ..? ಇನ್ನಾದರೂ ಪಾಕ್ ಗೆ ಬುದ್ದಿ ಬಂದು ಭಯೋತ್ಪಾದನೆ ವಿರುದ್ದ ಹೋರಾಟ ನಿರೀಕ್ಷಿಸಬಹುದೇ..? ಅಥವಾ ಅಮೆರಿಕದಿಂದ Counter Terrorism ನಡಿ ದಾಳಿಗೊಳಗಾಗಲು ಇಚ್ಚೆಯೇ..??!


ಕೊನೆ ಕುಹಕ : 
ಭಾರತದ ಗೃಹ ಸಚಿವ ಪಿ. ಚಿದಂಬರಂ ಭಾರತಕ್ಕೆ ಬೇಕಾಗಿರುವ 1993 / 2001 / 2008 ದಾಳಿಯ ಪಾತಕಿಗಳನ್ನು ಹಸ್ತಾಂತರಿಸುವಂತೆ ಪಾಕ್ ಗೆ ಕೇಳಿಕೊಂಡಿದ್ದಾರೆ. ಖಂಡಿತ ಆ ಪಾತಕಿಗಳನ್ನು ಭಾರತದಲ್ಲಿಯೇ ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು. ಆದರೆ ಶಿಕ್ಷೆ ಜಾರಿಯಾಗಲು ಮುಸ್ಲಿಂ ಕೋಮುವಾದಿ ಕಾಂಗ್ರೆಸ್ ಸರ್ಕಾರ ಒಪ್ಪುವುದೇ..? ಭಾರತ ಬೆಚ್ಚಿ ಬೀಳುವಂತೆ ಮಾಡಿದ್ದ  ಡಿಸೆಂಬರ್ ೧೩, ೨೦೦೧ರ ಸಂಸತ್ ದಾಳಿಯ ಆರೋಪಿ ಆಫ್ಜ್ಯಲ್ ಗುರು, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ೨೬/೧೧/೨೦೦೮ ರ ಮುಂಬೈ ದಾಳಿಯ ಪಾತಕಿ ಕಸಬ್ ಗೆ ನ್ಯಾಯಾಲಯದಲ್ಲಿ ಗಲ್ಲು ಜಾರಿಯಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಹಿಂದೇಟು ಹಾಕುತ್ತಲೇ ಬಂದಿದೆ. ಆ ಇಬ್ಬರೂ ಯಾವುದೇ ಶ್ರೀಮಂತನಿಗೆ ಕಡಿಮೆಯಿಲ್ಲದಂತೆ ಜೈಲಿನಲ್ಲಿಯೇ ರಾಜಾತಿಥ್ಯ ಪಡೆಯುತ್ತಿದ್ದಾರೆ. ಇನ್ನೂ ಭವಿಷ್ಯದಲ್ಲಿ ಪಾಕ್ ಭಾರತದ ಮೋಸ್ಟ್ ವಾಂಟೆಡ್ ಗಳನ್ನು ಹಸ್ತಾಂತರಿಸಿದರೂ ಅವರಿಗೂ ಇದೇ ಆತಿಥ್ಯ ಸಿಗಲಿದೆ. ಯಾರಿಗುಂಟು ಯಾರಿಗಿಲ್ಲ...! ಆ ಪಾತಕಿಗಳಿಗೆ ಪಾಕಿಸ್ತಾನದ ಗುಡ್ಡಗಾಡುಗಳಲ್ಲಿ ತಲೆ ತಪ್ಪಿಸಿ ಅಲೆಯೋ ಬದಲು ತಮ್ಮ ಶತ್ರು ರಾಷ್ಟ್ರದ ಜೈಲಿನಲ್ಲಿ ರಾಜಾತಿಥ್ಯ ಪಡೆಯುವುದೇ ಮೇಲು ಎಂದು ಅನಿಸದಿರದು..!!!

Wednesday, April 27, 2011

ಒಲವ ಕಣ್ಣಾಮುಚ್ಚಾಲೆ

ಎಲ್ಲಿರುವೆ ಅಡಗಿರುವೆ ಓ ಒಲವೇ ಬಾ ಒಮ್ಮೆ 
ಕೂಗಿ ಕರೆಯುವಾಸೆ ನಿನ್ನ ಮತ್ತೊಮ್ಮೆ ಮಗದೊಮ್ಮೆ 

ತಡವರಿಸಿ ಕನವರಿಸಿ ಕನಸಕಟ್ಟಿ ಕೂತಿರುವೆ
ಎದೆಯಲೊಂದು ಗುಡಿಯ ಮಾಡಿ ನಿನಗಾಗಿ ಕಾದಿರುವೆ

ನನ್ನ ನೆತ್ತರ ಕಣ ಕಣದಲೂ ನಿನದೇ ಕಾತರ 
ನನ್ನೆದೆಯ ಪ್ರತಿ ಬಡಿತದಲೂ ನಿನದೇ ಸರಿಗಮ

ಓ ಒಲವೇ ಬಾ ಒಲವೇ ತುಂಬುಖುಷಿಯಿಂದ
ಕಡೆವರೆಗೂ ಬೆಸೆಯುವೆ ಹೊಸದೊಂದು ಬಂಧ 

ಕಾಡಿಸಿ ಸತಾಯಿಸದಿರು ನನ್ನ ಮನವನ್ನ 
ಮೊಗವ ತೋರು ಬಾ, ನಾ ಉಸಿರು ಬಿಡುವ ಮುನ್ನ

Tuesday, April 26, 2011

ಬತ್ತಿ ಹೋದ ಖಾಲಿ ಕೊಳದಲಿ 'ರಮ್ಯ' ಸ್ನಾನ..

ರಾಜ್ಯ ಕಾಂಗ್ರೆಸ್ ನಲ್ಲಿ 'ರಮ್ಯಾಯಣ' ಆರಂಭ !! ಕನ್ನಡದ ಬಹುಬೇಡಿಕೆಯ ನಟಿಯಾಗಿರುವ ಜಗಳಗಂಟಿ 'ರಮ್ಯ' ಕಳೆದ ವಾರ ರಾಹುಲ್ ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ನಲ್ಲಿ ಜಗಳವಾಡಲು ಅಣಿಯಾಗಿದ್ದಾರೆ. ಅದಾಗಲೇ ಸತ್ತು ಮಲಗಿರುವ ರಾಜ್ಯ ಕಾಂಗ್ರೆಸ್ ರಮ್ಯ ಸೇರ್ಪಡೆಯಿಂದ ಒಂದು ಕ್ಷಣ ಜೀವ ಪಡೆದು ಮಗ್ಗುಲು ಬದಲಾಯಿಸಿ ಮತ್ತೆ ಸತ್ತು ಮಲಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಕ್ಷರಶಃ ನಾಮಾವಶೇಷದ ಸ್ಥಿತಿಯಲ್ಲಿದೆ. ಅಧ್ಯಕ್ಷರ ಬದಲಾವಣೆ, KPCC ಪುನಾರಚನೆ ಇದ್ಯಾವುದೂ ಕಾಂಗ್ರೆಸ್ ಪುನಶ್ಚೇತನಕ್ಕೆ ನೆರವಾಗಲಿಲ್ಲ. ನಾಯಕರುಗಳು ತಮ್ಮ ತಮ್ಮ ಸ್ವಂತಿಕೆ ಹಾಗು ತಮ್ಮ ಛಾಪನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದರೇ ವಿನಃ ಪಕ್ಷದ ಸಂಘಟನೆ ಬಗ್ಗೆ ಒಬ್ಬರೂ ಚಿಂತಿಸುತ್ತಿಲ್ಲ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿದ್ದರೂ ಒಂದರ ನಂತರ ಒಂದು ಎಂಬಂತೆ ಹೊರಬರುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಯಡಿಯೂರಪ್ಪನವರ ಕುಟುಂಬ ರಾಜಕೀಯ, ಶೂನ್ಯದತ್ತ ಸಾಗುತ್ತಿರುವ ಅಭಿವೃದ್ದಿ, ಜನರಿಗೆ ಸರ್ಕಾರದ ಮೇಲಾಗಿರುವ ಭ್ರಮನಿರಸನ ಇದೆಲ್ಲವನ್ನು ಇಟ್ಟುಕೊಂಡು ಹೋರಾಟ ರೂಪಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಡೇ ಪಕ್ಷ ಆ ಪ್ರಯತ್ನಗಳೂ ಕೂಡ ನಡೆಯುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ದಕ್ಷ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ವತಃ ಬಿಜೆಪಿಯವರೇ..! ಯಡಿಯೂರಪ್ಪನವರ ಆಡಳಿತದ ವಿರುಧ್ದದ ಇತ್ತೀಚೆಗಿನ ಬಂಡಾಯವೇ ಇದಕ್ಕೆ ಸಾಕ್ಷಿ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆ ಪ್ರಚಾರ ಗಿಟ್ಟಿಸಿತೆ ವಿನಃ ಅದರ ಬೆನ್ನಲ್ಲೇ ನಡೆದ ಉಪಚುನಾವಣೆಗಳಲ್ಲಿ ಅದರ ಪಲಿತಾಂಶ ಕಂಡು ಬರಲಿಲ್ಲ. ಬಳ್ಳಾರಿ ಪಾದಯಾತ್ರೆಯಲ್ಲಿ 'ಹೀರೋ' ಆಗಿದ್ದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ ಎಂದು ಹುಡುಕುವಂತಾಗಿದೆ. ಅಷ್ಟರಮಟ್ಟಿಗೆ ಅವರು ಮೂಲೆಗುಂಪಾಗಿ ಹೋಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರು ಹೌದೋ ಅಲ್ಲವೋ ಎಂದು ಸ್ವತಃ ಕಾಂಗ್ರೆಸ್ ನವರೇ ಅನುಮಾನ ಪಡುವಂತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ್ದು ಬಿಟ್ಟರೆ ಮತ್ತೆಲ್ಲೂ ಅವರು ಸುದ್ದಿಯಾಗಲಿಲ್ಲ. ವೀರಪ್ಪ ಮೊಯ್ಲಿ ಸೋನಿಯಾ ಮನೆ ಕಾದರೇ ವಿನಃ ರಾಜ್ಯ ಕಾಂಗ್ರೆಸ್ ಕಾಯೋ ಕೆಲಸ ಮಾಡಲಿಲ್ಲ. ಪ್ರಾರಭದಲ್ಲಿ ತುಸು ಉತ್ಸಾಹಿಯಾಗಿದ್ದ ಡಿ.ಕೆ. ಶಿವಕುಮಾರ್ ಈಗ ಸ್ವಜನ ರಾಜಕೀಯ ಮಾಡುತ್ತಿದ್ದಾರೆ. KPCC  ಅಧ್ಯಕ್ಷ ಪರಮೇಶ್ವರ್ ಏನು ಮಾಡಿದರೂ ನಡೆಯದ ಸ್ಥಿತಿಯಿದೆ. ಉಳಿದಂತೆ ಬಾಕಿ ನಾಯಕರುಗಳು ಪರಸ್ಪರರ ಮೇಲಿನ ಅಸೂಯೆಯಿಂದ ಪಕ್ಷ ಕಟ್ಟುವ ಕೆಲಸದಿಂದ ದೂರವೇ ಉಳಿದಿದ್ದಾರೆ. ಇನ್ನು ಅವರು ಮುಖ ತೋರಿಸುವುದು ಮುಂದಿನ ಚುನಾವಣೆಗೇನೆ...

ಇಷ್ಟೆಲ್ಲಾ ಪರಿಸ್ಥಿತಿಗಳ ನಡುವೆಯೂ ಭಾರಿ ನಿರೀಕ್ಷೆ ಮೂಡಿಸಿದ್ದ ಇತ್ತೇಚೆಗಿನ ರಾಹುಲ್ ಗಾಂಧಿ ರಾಜ್ಯ ಭೇಟಿಯೂ ಸಪ್ಪೆಯಾಗಿಯೇ ಮುಗಿಯಿತು. ರಾಜ್ಯ ಕಾಂಗ್ರೆಸ್ ನ ಪ್ರಸಕ್ತ ಪರಿಸ್ಥಿತಿ ಬಗ್ಗೆ ರಾಹುಲ್ ಗೆ ಅರಿವಿದ್ದರೂ ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸುವ ಗೋಜಿಗೆ ಹೋಗಲಿಲ್ಲ. KPCC  ಪುನಾರಚನೆ ಗೊಂದಲ ಹಾಗು ನಾಯಕರುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನೂ ಮಾಡದೆ ಒಂದಷ್ಟು ಹೊತ್ತು ಸಂವಾದ ಮಾಡಿ ವಾಪಾಸಾದರು. ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಹುಲ್ ಗಾಂಧಿಯ ಕಾರ್ಯವೈಖರಿ ಇದು.! ಕಾಂಗ್ರೆಸ್ಸಿಗರೇ ಜವಾಬ್ದಾರಿಗೆ ಹೆದರಿ ಓಡಿ ಹೋಗುವ ಇಂತಹ ನಾಯಕ ನಿಮಗೆ ಇದ್ದರೆಷ್ಟು ಬಿಟ್ಟರೆಷ್ಟು..

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಾನ್ಯ ಪ್ರಜೆಗಳಿಗೆ ಜೆಡಿಎಸ್ ಪರ್ಯಾಯವಾಗಿ ಕಾಣಿಸುವುದರಲ್ಲಿ ತಪ್ಪಿಲ್ಲ. ಇತ್ತೀಚೆಗಿನ ಉಪಚುನಾವಣೆಗಳಲ್ಲಿ ಅದು ಗಳಿಸಿದ ಮತಗಳ ಶೇಕಡವಾರು ಪ್ರಮಾಣದಲ್ಲಿನ ಹೆಚ್ಚಳವೇ ಇದಕ್ಕೆ ಸಾಕ್ಷಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು ಆಶ್ಚರ್ಯವಿಲ್ಲ. ಯಡಿಯೂರಪ್ಪನವರು ಆಗಾಗ್ಗೆ ಹೇಳುತ್ತಿರುತ್ತಾರೆ, ರಾಜ್ಯದಲ್ಲಿ ಬರೀ ಎರಡೇ ಪಕ್ಷಗಳಿರಬೇಕು ಎಂದು. ಬಹುಶಃ ಅದು ಇಷ್ಟು ಬೇಗ ನಿಜವಾಗುವತ್ತ ಸಾಗುತ್ತದೆ ಎಂದು ಯಾರೂ ಊಹಿಸಿರಲಾರರು..!

Saturday, April 23, 2011

ಇದು ನಿಜವೇ.. ನಾ ಪ್ರೀತಿಸಿರುವೆ..


ಸಾಗರದಾಚೆಯ ಪುಟ್ಟ ದ್ವೀಪದಲಿ
ನನ್ನ ತೋಳಿನಲಿ ನೀ ಬಂಧಿಯಿರೆ
ಭಯವ ಬಿಡು ನಿಶ್ಚಿಂತೆಯಿಂದಲಿ..
ನಿನ್ನಕ್ಷಿಯೊಳು ಅಕ್ಷಿಯಿಟ್ಟು
ಕಾಯುವೆ ನಾ ಅನವರತ..

ಪೀಡಿಸು ನೀ ಸತಾಯಿಸು
ತುಸು ರಂಗಾಗಿ ನೀ ಕೋಪಿಸು
ಮಗುವಾಗು ನೀ ನನ್ನ ಮಡಿಲಲಿ..
ಆನಂದಿಸುವೆ ನಿನ್ನ ಪ್ರತಿ ನಡೆಯ
ನೀ ನನ್ನವಳು ಪ್ರತಿ ಸಮಯ..

ನಾ ಉಸಿರ ಹಿಡಿದಿಡುವೆ
ನೀ ನಿದ್ರಿಸಿರೆ ಸದ್ದು ಬರದಂತೆ..
ಸಿಹಿಗನಸ ಆಯ್ದು ಕಳಿಸುವೆ ನಾ 
ಭಯ ಬೀಳದಂತೆ ನನ್ನ ಮುದ್ದು ಒಲವು..
ಕನಸಲ್ಲ ಇದು ನಿಜವೇ ನಾ ನಿನ್ನೇ ಪ್ರೀತಿಸಿರುವೆ..