ಕೋಮುವಾದ, ಜಾತಿವಾದ, ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ - ಪಂಗಡಗಳೆಂಬ ವಿಂಗಡಣಾ ರಾಜಕೀಯ.
ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಇನ್ನು ಬಹುಸಂಖ್ಯಾತರ ಪರ ಎಂದು ಗುರುತಿಸಿಕೊಳ್ಳುತ್ತಿರುವ ಬಿಜೆಪಿ ತಾನೇನು ಕಡಿಮೆಯಿಲ್ಲ. ತಾನು ಹಿಂದೂಗಳ ಪರ ಎಂದು ಹೇಳಿಕೊಂಡು, ದೇಶದ ಅತೀ ಸೂಕ್ಷ್ಮ ವಿಷಯಗಳಾದ ಅಯೋಧ್ಯೆ, ಕಾಶ್ಮೀರ ಇವುಗಳ ಮೂಲಕ ರಾಜಕೀಯವಾಗಿ ಮೇಲೇರುತ್ತ ಬಂದ ಈ ಪಕ್ಷ ಹಿಂದೂಗಳಿಗಾಗಿ ಮಾಡಿದ್ದೇನೂ ಇಲ್ಲ. ಅತ್ತ ಅಯೋಧ್ಯೆ ಮಂದಿರವು ಇಲ್ಲ, ಈಗ ಅವರಿಗೆ ಆ ವಿಷಯ ಕೂಡ ನೆನಪಾಗುತ್ತಿಲ್ಲ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಹಿಂದೂ ಪರ ಮಂಚ್ ಗೆ ನೀಡಿದ್ದ ಎಕರೆಗಟ್ಟಲೆ ಭೂಮಿಯನ್ನು ಕೂಡ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಸರಕಾರ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ವಾಪಸು ಪಡೆದುಕೊಂಡಿತು. ಕರ್ನಾಟಕದ ವಿಷಯಕ್ಕೆ ಬಂದರೆ ಸ್ವತಃ ಬಿಜೆಪಿಯವರೇ ಹೇಳಿಕೊಳ್ಳುವಂತೆ ಹಿಂದಿನ 60 ವರ್ಷಗಳಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ಸ್ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದು ಕೇವಲ 30 ರಿಂದ 60 ಕೋಟಿ. ಆದರೆ ಬಿಜೆಪಿ ಸರಕಾರ ಕೇವಲ ಮೂರೇ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ೩೦೦-೪೦೦ ಕೋಟಿ ನೀಡಿದೆ..!! ಬಹುಶಃ ಇದನ್ನು ನೋಡಿದ ಮೇಲೆ ಹಿಂದೂಗಳಿಗೆ ಬಿಜೆಪಿಗಿಂತ ಕಾಂಗ್ರೆಸ್ಸೇ Better ಅನಿಸದಿರದು. ಆದರೆ ಇಲ್ಲಿ ಹೇಳಬೇಕಾಗಿರುವ ವಿಷಯ ಈ ತರಹದ ಸಮುದಾಯ ಓಲೈಕೆ ಅಗತ್ಯವೇ.. ಒಂದು ಸಮುದಾಯಕ್ಕೆ ಮಾತಿನ ಭರವಸೆಯ ಓಲೈಕೆ, ಮತ್ತೊಂದು ಸಮುದಾಯಕ್ಕೆ ನಿಜವಾದ ಫಲದ ಓಲೈಕೆ.. ಇದರಿಂದ ದೇಶಕ್ಕೇನು ಲಾಭವಿದೆ. ಕೊಡುವುದಾದರೆ ತಾರತಮ್ಯವಿಲ್ಲದೆ ಕೊಡಲಿ. ಭಾರತೀಯರಲ್ಲೇ ತಾರತಮ್ಯವೇಕೆ..?
ಇನ್ನು ಜಾತಿವಾದ..! ಧರ್ಮದ ಭದ್ರ ಬುನಾದಿಯನ್ನು ನಿಶ್ಯಬ್ದವಾಗಿ ಅಲುಗಾಡಿಸುವ ಇದು ಇಂದು ಎಲ್ಲಾ ಪಕ್ಷಗಳಿಂದ ಹಿಡಿದು, ಪ್ರತಿ ಸಂಘ ಸಂಸ್ಥೆ, ಸಂಘಟನೆಗಳಲ್ಲೂ ಬೇರೂರಿದೆ. ಈಗಿನ ರಾಜಕೀಯ ಹೆಚ್ಚು ಕಡಿಮೆ ಜಾತಿ ಸಮೀಕರಣವನ್ನೇ ಅವಲಂಬಿಸಿದೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗಿನ ಆಯ್ಕೆ ಜಾತಿ ಪ್ರಾಬಲ್ಯತೆಯನ್ನೇ ನೆಚ್ಚಿಕೊಳ್ಳುವಂತಾಗಿರುವುದು ವಿಪರ್ಯಾಸವೇ ಸರಿ.. ಇತ್ತೀಚೆಗಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನೇ ಗಮನಿಸಿದರೆ ಸಾಕು. ಕೇಸರಿ ಪರ ಎಂದು ಗುರ್ತಿಸಿಕೊಳ್ಳುತ್ತಿರುವ ಪಕ್ಷವೇ ಕೇಸರಿಯನ್ನು ಜಾತಿ ಸಮೀಕರಣದಿಂದ ಒಡೆಯುತ್ತಿರುವುದು ಕಂಡು ಬರುತ್ತದೆ. ಕೋಮು ಸಂಘರ್ಷ ನಿಯಂತ್ರಣ ಕಾಯಿದೆಯಡಿ ಪರಿಶಿಷ್ಟ ವರ್ಗ-ಪಂಗಡಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿರುವುದಕ್ಕೆ ಹಿಂದೂಗಳನ್ನು ಒಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕೇಸರಿ ಪಕ್ಷ ನಿಜವಾಗಿ ಮಾಡುವುದೇನು..? ಪರಿಶಿಷ್ಟರ ಅಭಿವೃದ್ದಿಗೆ ಏನಾದರು ಮಾಡಿದೆಯೇನು..?
ಉಳಿದಂತೆ ಹಿಂದೂ ಪರ ಸಂಘಟನೆಗಳಾದ ವಿಹಿಂಪ, ಬಜರಂಗ ದಳ, ರಾಮ ಸೇನೆ, ಹಿಂದೂ ಯುವ ಸೇನೆ, ಜಾಗರಣ ವೇದಿಕೆ ಇವೆಲ್ಲ ಹಿಂದೂಗಳ ಶ್ರೆಯೋಭಿಲಾಷೆಗಾಗಿ ಸ್ಥಾಪನೆಗೊಂಡಂತವುಗಳು. ಆದರೆ ಇವುಗಳನ್ನೂ ಜಾತೀಯತೆ ಬಿಟ್ಟಿಲ್ಲ. ಪ್ರಮುಖ ಜವಾಬ್ದಾರಿಯ ಸ್ಥಾನಗಳೆಲ್ಲವು ಮೇಲ್ವರ್ಗದವರಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಒಂದು ಹಿಂದೂ ಪರ ಸಂಘಟನೆಯಲ್ಲಿ ದಲಿತನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದಿದೆಯೇನು..? ಹಿಂದೂ ಧರ್ಮೊದ್ಧಾರಕರೆನಿಸಿಕೊಂಡ ಈ ಸಂಘಟನೆಗಳು ದ್ವೇಷವನ್ನು ಬೆಳೆಸುತ್ತವೆಯೇ ಹೊರತು ನಮ್ಮ ಧರ್ಮದಲ್ಲಿರುವ ಒಳ್ಳೆಯತನಗಳನ್ನು, ನಮ್ಮದೇ ಹಿಂದೂಗಳನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲ. ನಮ್ಮ ಧರ್ಮದ ಅದೆಷ್ಟೋ ಗೊತ್ತಿರದ ವಿಷಯಗಳ ಬಗ್ಗೆ ಸ್ವಧರ್ಮೀಯ ಜನರಿಗೆ ತಿಳಿ ಹೇಳುವ ಕಾರ್ಯಗಳನ್ನು ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿ ಹಿಂದುಳಿದವರೆನಿಸಿಕೊಂಡವರ, ಪರಿಶಿಷ್ಟರೆನಿಸಿಕೊಂಡವರ ಅಭಿವೃದ್ದಿಗೆ ಶ್ರಮಿಸಿದ್ದು ಇದುವರೆಗೂ ಇಲ್ಲ. ಕೇವಲ ಸಭೆಗಳಲ್ಲಿ, ಸಮಾಜೋತ್ಸವಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾತೀಯತೆ ವಿರುದ್ಧ ಮಾರುದ್ದದ ಭಾಷಣ ಬಿಗಿಯುವ ಹಿಂದೂ ನಾಯಕರುಗಳು ತಮ್ಮ ಮಾತಿನ ಕಾರ್ಯ ರೂಪಕ್ಕೆ ಇಳಿದಿದ್ದಾರೆಯೇ. ಇಂದು ಭಾರತದಲ್ಲಿ ದಲಿತರ ಮತಾಂತರ, ಭೌದ್ಧ ಧರ್ಮ ಸ್ವೀಕಾರ ಇವುಗಳೆಲ್ಲ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಡೆಯುವ ಸಲುವಾಗಿ ದಲಿತರ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸಿದ್ದಾರೆಯೇ..? ಇವೆಲ್ಲವನ್ನೂ ಮಾಡದೆ ದಲಿತರನ್ನು ಹಿಂದೂಗಳಿಂದ ಬೇರ್ಪಡಿಸಲಾಗುತ್ತಿದೆ ಎಂದು ಪ್ರತಿಭಟಿಸಲು ಇವರಿಗೆ ಯಾವ ಅಧಿಕಾರವಿದೆ..
ರಾಜಕೀಯವಾಗಿ ಜಾತಿ ವಿಂಗಡಣೆ, ಕೋಮು ವಿಂಗಡಣೆಗಳು ಎಂದಿಗೂ ಅಭಿವೃದ್ದಿಗೆ ಪೂರಕವಲ್ಲ. ಸ್ವಾತಂತ್ರ್ಯ ಪೂರ್ವದ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್ಸ್ ಮುಸ್ಲಿಮರ ಓಲೈಕೆ ಮಾಡಿ ಹಿಂದೆ ಗಾಂಧೀಜಿ ಮಾಡಿದ್ದ ತಪ್ಪನ್ನೇ ಮುಂದುವರೆಸುತ್ತಿದೆ. ಇನ್ನು ಬಿಜೆಪಿಯವರದು ಬಹುಸಂಖ್ಯಾತ ಹಿಂದೂಗಳ ಓಲೈಕೆ. ಚುನಾವಣೆಗಳು ಹತ್ತಿರ ಬರುವಾಗ ಮಾತ್ರ ಅಲ್ಲಲ್ಲಿ ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಬಿಜೆಪಿಯವರು ಉಳಿದ ಸಂದರ್ಭಗಳಲ್ಲಿ ಸಮಾಜೋತ್ಸವ ನಡೆಸುವುದಿಲ್ಲ. ಅಲ್ಲಿಗೆ ಇದು ಚುನಾವಣಾ ಗಿಮಿಕ್ ಎಂದು ಸಾಬೀತಾಗುತ್ತದೆ.. ಈ ಎರಡೂ ಕೋಮು ವಿಭಜನಾ ರಾಜಕೀಯದ ಮದ್ಯೆ ನಲುಗಿ ಹೋಗುತ್ತಿರುವುದು ಮಾತ್ರ ನಮ್ಮೀ ಭಾರತ ಮತ್ತು ಭಾರತೀಯರುಗಳಾದ ನಾವುಗಳು.! ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರತದ ಅಭಿವೃದ್ದಿಗೆ ಹಿಡಿದ ಶಾಪಗಳಾದ ಈ ಕೋಮುವಾದ ಜಾತಿವಾದಗಳನ್ನು ಮೊದಲು ತೊಲಗಿಸಲಿ. ಹೊಸದಾಗಿ ರಾಜಕೀಯಕ್ಕೆ ಬರುವವರು ಜಾತಿರಹಿತನಾಗಿ ಬರಲಿ, ಕೇವಲ ಒಬ್ಬ ಭಾರತೀಯನಾಗಿರಲಿ ಎಂಬುದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಅಭಿಲಾಷೆ. ನೀವೂ ಅವರಲ್ಲೊಬ್ಬರು ಎಂದುಕೊಳ್ಳುತ್ತೇನೆ..
"ವಂದೇ ಮಾತರಂ"