Tuesday, August 5, 2014

'ಗಾಜಾ ಉಳಿಸಿ' ಎಂದು ಬೊಬ್ಬಿರಿಯುವ ಮುನ್ನ...


"Save Gaza... Save Palestine"
"ಗಾಜಾ ಉಳಿಸಿ, ಇಸ್ರೇಲ್ ಅಳಿಸಿ"
"Israel will Fail.. Palestine will  raise.."

ಭಾರತದಲ್ಲಿ ಕೆಲ ಮೂಲಭೂತವಾದಿ ಸಂಘಟನೆಗಳು ರಸ್ತೆಬದಿಗಳ ಗೋಡೆಗಳಲ್ಲಿ, ಸಾಮಾಜಿಕ ತಾಣಗಳ ಗೋಡೆಗಳಲ್ಲಿ ಮೇಲ್ಕಂಡ ಘೋಷಣೆಗಳನ್ನೊಳಗೊಂಡ ಪೋಸ್ಟರ್ ಅಭಿಯಾನ ಪ್ರಾರಂಭಿಸಿರುವುದನ್ನು ಗಮನಿಸಿರುತ್ತೀರಿ. 

ಆದರೆ ಅವರ ಈ ನೈತಿಕತೆ ಮುಂಬೈ ಸರಣಿ ಸ್ಪೋಟ, ತಾಜ್ ಹೋಟೆಲ್ ಧಾಳಿ, ಸಂಸತ್ ಮೇಲಿನ ಧಾಳಿ, ದೇಶದ ವಿವಿದೆಡೆ ನಡೆದ ಬಾಂಬ್ ಧಾಳಿಗಳಲ್ಲಿ ಅದೆಷ್ಟೋ ಮುಗ್ಧ ಭಾರತೀಯರು ಬಲಿಯಾಗುವಾಗ ಎಲ್ಲಿ ಅಡಗಿ ಹೋಗಿತ್ತು ಎಂಬುದು ಮಾತ್ರ  ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. 

ಬಹುಶಃ ಸತ್ತು ಹೋಗಿರುವವರು ಭಾರತೀಯರು ಮತ್ತು ಧಾಳಿ ಸಂಘಟಿಸಿದವರು ನಮ್ಮ ಸಮಾಜದವರು ಎಂಬ ಅಭಿಮಾನ ಇದ್ದಿತ್ತೇನೋ.. !

ಅಷ್ಟಕ್ಕೂ ಈ "Save Gaza.. Save Palestine" ಅನ್ನುವ  ಕೂಗು ಯಾಕೆ ಬೇಕು..? 
ನಿಜಕ್ಕೂ ಪ್ಯಾಲೆಸ್ತೀನ್ ಅಮಾಯಕವೇ..? ಇಸ್ರೇಲ್ ಸರ್ವಾಧಿಕಾರಿಯೇ..?

ಖಂಡಿತ ಅಲ್ಲ.. 

ಈ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮಸ್ಯೆ ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದ ಇದೆ. ವಿಶ್ವದ ಏಕೈಕ ಯಹೂದಿ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದ ಇಸ್ರೇಲ್ ಅನ್ನು ಯಹೂದಿಗಳು ಧಾರ್ಮಿಕವಾಗಿ ತಮ್ಮ ಪವಿತ್ರ ಭೂಮಿ ಎಂದು ನಂಬುತ್ತಾರೆ. ಆ ನಂಬುಗೆಯೇ ವಿಶ್ವದಾದ್ಯಂತ ಹರಡಿದ್ದ ಯಹೂದಿಗಳನ್ನು ಇಸ್ರೇಲ್ ನಲ್ಲಿ ಸೇರಿಸಿತು. ಈ ಹಿಂದೆ ಇಸ್ಲಾಂ ಮತಾಂತರ ಹಾಗು ದೌರ್ಜನ್ಯಕ್ಕೆ ಹೆದರಿ ಊರು ತೊರೆದಿದ್ದ ಯಹೂದಿಗಳೆಲ್ಲ ಕ್ರಮೇಣ ಇಸ್ರೇಲ್ ಗೆ ವಾಪಸಾದರು. ಕಾಲಾಂತರದಲ್ಲಿ ಅದೇ ಇಸ್ರೇಲ್ ರಾಷ್ಟ್ರವಾಯಿತು. ಮುಂದೆ ವಿಶ್ವ ಸಂಸ್ಥೆಯು ೧೯೪೮ ರಲ್ಲಿ ಇಸ್ರೇಲ್ ಅನ್ನು ಅಧಿಕೃತ ದೇಶ ಎಂದು ಘೋಷಿಸುವುದರೊಂದಿಗೆ ಇಸ್ರೇಲ್ ನ ಅಸ್ತಿತ್ವಕ್ಕೆ ಅಧಿಕೃತ ಮುದ್ರೆ ಬಿತ್ತು. 


ಆದರೆ ಇಸ್ರೇಲ್ ನ ಅಸ್ತಿತ್ವವನ್ನು ಅರಬ್ ಒಕ್ಕೂಟ ಒಪ್ಪದೆ ಬಲವಾಗಿ ವಿರೋಧಿಸಿತು. ಅರಬ್ ಒಕ್ಕೂಟದ ರಾಷ್ಟ್ರಗಳಾದ ಲಿಬೆನಾನ್, ಸಿರಿಯಾ, ಇರಾಕ್, ಜೋರ್ಡಾನ್, ಈಜಿಪ್ಟ್ ಗಳು ಏಕಕಾಲಕ್ಕೆ ಇಸ್ರೇಲ್ ಅನ್ನು ಮುತ್ತಿದವು. ಇಸ್ರೇಲ್ ಗಿಡು ಅನಿರೀಕ್ಷಿತ... ಆದರೆ ಅಷ್ಟೂ ರಾಷ್ಟ್ರಗಳ ಏಕಕಾಲದ ಆಕ್ರಮಣವನ್ನು ಹಿಮ್ಮೆಟ್ಟಿಸಿ ಇಸ್ರೇಲ್ ವಿಜಯದ ನಗೆ ಬೀರಿತು. 

ಸೋಲಿನಿಂದ ಪಾಠ ಕಲಿಯದ ಅರಬ್ ಒಕ್ಕೂಟ ಮತ್ತೆ ಇಸ್ರೇಲ್ ಮೇಲೆ ಮುಗಿ ಬೀಳಲು ಸಮಯ ಕಾಯುತ್ತಿತ್ತು. ಭಯೋತ್ಪಾದನೆಯಿಂದ ಮಾತ್ರ ಇಸ್ರೇಲ್ ನ ನಾಶ ಸಾಧ್ಯ ಎಂಬ ನೀತಿಗೆ ಪಾಲೆಸ್ತೀನ್ ಅರಬ್ಬರು ಅದಾಗಲೇ ಅಂಟಿಕೊಂಡಿದ್ದರು. ಅರಬ್ ಒಕ್ಕೂಟವೂ ಇದೇ ಮನಸ್ಥಿತಿ ಹೊಂದಿತ್ತು. 


೧೯೬೭ ... ಪಾಲೆಸ್ತೀನ್ ಪರವಾಗಿ ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್ ಗಳು ಮತ್ತೊಮ್ಮೆ ಯುದ್ಧ ಸಾರಿ ಇಸ್ರೇಲ್ ಗೆ ಅಖಾಖ ಕೊಲ್ಲಿಯ ಮೂಲಕ ಹಿಂದೂ ಮಹಾ ಸಾಗರಕ್ಕಿದ್ದ ಏಕೈಕ ಸಮುದ್ರ ಮಾರ್ಗವನ್ನು ಮುಚ್ಚಿ ಹಾಕಿ, ಇಸ್ರೇಲ್ ಹಡಗುಗಳ ಸಂಚಾರಕ್ಕೆ ನಿರ್ಭಂಧ ಹೇರಿತು. ಪರಿಣಾಮ ಇಸ್ರೇಲ್ ನ ಪ್ರತಿಧಾಳಿಗೆ ಪಾಲೆಸ್ತೀನ್ ತನ್ನ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಗಳನ್ನು ಕಳೆದುಕೊಳ್ಳುವುದರ ಜತೆಗೆ ಈಜಿಪ್ಟ್ ಸಿನಾಯ್ ದ್ವೀಪವನ್ನೂ, ಸಿರಿಯಾ ತನ್ನ ಗೊಲಾನ್ ಪ್ರದೇಶವನ್ನೂ ಕಳೆದುಕೊಂಡಿತು. 

ತನ್ನ ತಂಟೆಕೋರ ನೀತಿಯಿಂದ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಎರಡನ್ನೂ ಕಳೆದುಕೊಂಡ ಪಾಲೆಸ್ತೀನ್ ಅರಬರು ನೆಲೆಯಿಲ್ಲದಂತಾದರು. ಸುಮಾರು ಎರಡೂವರೆ ಲಕ್ಷದಷ್ಟು ಪಾಲೆಸ್ತೀನಿಯರು ನಿರಾಶ್ರಿತರಾಗಿ ಜೋರ್ಡಾನ್ ನಲ್ಲಿ ಆಶ್ರಯ ಪಡೆದರು. ಆದರೆ ಆಶ್ರಯ ನೀಡಿದ ದೇಶಕ್ಕೇ  ದ್ರೋಹ ಬಗೆದ ಪಾಲೆಸ್ತೀನಿಯರು ಪಾಲೆಸ್ತೀನ್ ಲಿಬರೇಶನ್ ಆರ್ಗನೈಶೇಷನ್ (ಪಿ.ಎಲ್.ಒ) ಮುಂದಾಳತ್ವದಲ್ಲಿ ಅರಾಜಕತೆ ಸೃಷ್ಟಿಸಿ ಜೋರ್ಡಾನಿನ ಸರಕಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪಿತೂರಿ ನಡೆಸಿ ವಿಫಲರಾದರು. ಅದೇ ಕಾರಣಕ್ಕೆ ಅವರನ್ನು ಜೋರ್ಡಾನಿನಿಂದ ಹೊರಗಟ್ಟಲಾಯಿತು. ಜೋರ್ಡಾನಿನಿಂದ ಗಡಿಪಾರಾಗಿ ಲಿಬೆನಾನಿಗೆ ಬಂದ ಪಾಲೆಸ್ತೀನಿಯರು ತಮ್ಮ ಗೆರಿಲ್ಲಾಗಳ ಮೂಲಕ ಇಸ್ರೇಲ್ ಮೇಲೆ ಧಾಳಿ ಶುರುವಿಟ್ಟುಕೊಂಡರು. ೧೯೮೨ ರಲ್ಲಿ ಭಯೋತ್ಪಾದನಾ ದಮನ ಕಾರ್ಯಾಚರಣೆ ಕೈಗೊಂಡ ಇಸ್ರೇಲ್ ಲಿಬೇನಾನಿನಲ್ಲಿದ್ದ ಪಿ.ಎಲ್.ಓ ಗೆರಿಲ್ಲಾಗಳನ್ನು ಹೊರಗಟ್ಟಿತು. 


ಇತ್ತ ೧೯೬೭ ರಲ್ಲಿ ತಾನು ಕಳೆದುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಶಪಡಿಸಿಕೊಳ್ಳಲು ೧೯೭೪ ರಲ್ಲಿ ಇಸ್ರೇಲ್ ಮೇಲೆ ಧಾಳಿ ಮಾಡಿದ ಈಜಿಪ್ಟ್ ಮತ್ತೊಮ್ಮೆ ಸೋತು ಹೋಯಿತು. ಯುದ್ಧದಿಂದ ತನ್ನ ಪ್ರದೇಶಗಳನ್ನು ಮರಳಿ ಪಡೆಯುವುದು ಅಸಾಧ್ಯ ಎಂದರಿತ ಈಜಿಪ್ಟ್ ಇಸ್ರೇಲ್ ಗೆ ಶಾಂತಿ ಸಂದೇಶ ಕಳುಹಿಸಿತು. ಮೊದಲಿನಿಂದಲೂ ಶಾಂತಿಯ ಪ್ರತಿಪಾದನೆ ಮಾಡುತ್ತಾ ಬಂದಿದ್ದ ಇಸ್ರೇಲ್ ತಕ್ಷಣ ಈ ಕುರಿತು ಕಾರ್ಯಪ್ರರ್ವತ್ತವಾಯಿತು. ೧೯೭೮ ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಈಜಿಪ್ಟ್ ಇಸ್ರೇಲ್ ನ ಅಸ್ತಿತ್ವವನ್ನು ಮಾನ್ಯ ಮಾಡಿತು. ಪ್ರತಿಯಾಗಿ ತಾನು ವಶಪಡಿಸಿದ್ದ ಈಜಿಪ್ಟ್ ನ ಸಿನಾಯ್ ದ್ವೀಪವನ್ನು ಹಿಂತಿರುಗಿಸಿತು. 

ಐತಿಹಾಸಿಕ ಮಹತ್ವ ಪಡೆದ ಈ ಶಾಂತಿ ಒಪ್ಪಂದ ಇಸ್ರೇಲ್ ನ ಶಾಂತಿ ಕುರಿತ ಬದ್ಧತೆಯನ್ನು ವಿಶ್ವಕ್ಕೇ ಪ್ರಚುರಪಡಿಸಿತು. ಪಾಲೆಸ್ತೀನ್ ಗೆರಿಲ್ಲಾ ಸಂಘಟನೆ ಪಿ.ಎಲ್.ಓ ಗೂ ಇದರ ಮನವರಿಕೆಯಾಗಿ ೧೯೮೮ ರಲ್ಲಿ ಪಿ.ಎಲ್.ಓ ಅಧ್ಯಕ್ಷ ಯಾಸಿರ್ ಅರಾಪತ್ ಇಸ್ರೇಲ್ ವಿರುದ್ಧದ ತನ್ನ ಹಿಂಸಾ ಮಾರ್ಗವನ್ನು ಕೈ ಬಿಡುತ್ತಿರುವುದಾಗಿ ಘೋಷಿಸಿದರು. ಮುಂದೆ ೧೯೯೩ ರ ಸೆಪ್ಟೆಂಬರ್ ೧೩ ರ ವಾಷಿಂಗ್ಟನ್ ಒಪ್ಪಂದದ ಮೂಲಕ ಪಿ.ಎಲ್.ಓ ಇಸ್ರೇಲ್ ನ ಅಸ್ತಿತ್ವವನ್ನು ಒಪ್ಪಿಕೊಂಡಿತು. ಪ್ರತಿಯಾಗಿ ಪಾಲೆಸ್ತೀನ್ ರಚನೆ ಕಾರ್ಯಕ್ಕೆ ಇಸ್ರೇಲ್ ಚಾಲನೆ ನೀಡಿ ಒಪ್ಪಂದದಂತೆ ಗಾಜಾ ಮತ್ತು ಜೆಂಕೋ ಪ್ರದೇಶಗಳನ್ನು ಪಾಲೆಸ್ತೀನ್ ಅರಬರಿಗೆ ಹಿಂತಿರುಗಿಸಲಾಯಿತು. ಮುಂದೆ ವೆಸ್ಟ್ ಬ್ಯಾಂಕ್ ಕೂಡ ಪಾಲೆಸ್ತೀನ್ ಅರಬ್ಬರ ಕೈಗೆ ಬಂತು. ಹಲವು ದಶಕಗಳ ಇಸ್ರೇಲ್-ಪಾಲೆಸ್ತೀನ್ ಸಮಸ್ಯೆ ಸುಖಾಂತ್ಯ ಕಂಡಿತ್ತು. 

ಆದರೆ.. 
೨೦೦೬ ರಲ್ಲಿ ಇಸ್ರೇಲ್ ನ ಕಡು ವಿರೋಧಿ ಪಾಲೆಸ್ತೀನ್ ಮೂಲಭೂತವಾದಿ ಉಗ್ರ ಸಂಘಟನೆ 'ಹಮಾಸ್' ಗಾಜಾ ಪ್ರಾಂತೀಯ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವುದರೊಂದಿಗೆ ರಕ್ತಪಾತದ ಮತ್ತೊಂದು ಇತಿಹಾಸ ತೆರೆದುಕೊಂಡಿತು. 

ಇರಾನ್ ಮುಂತಾದ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ಹಮಾಸ್ ಶಾಂತಿ ಒಪ್ಪಂದವನ್ನು ಭಂಗಗೊಳಿಸಿ ಇಸ್ರೇಲ್ ಮೇಲೆ ಧಾಳಿಯೆಸಗಲು  ಶುರುವಿಟ್ಟುಕೊಂಡಿತು. ಹಲವಾರು ಅಮಾಯಕ ಇಸ್ರೇಲ್ ನಾಗರಿಕರು ಬಲಿಯಾದರು. ತನ್ನ ರಾಕೆಟ್ ಧಾಳಿಗಳಿಂದ ಯಹೂದಿ ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಲು ಯಶಸ್ವಿಯಾದ ಹಮಾಸ್ ನ ಹುಮ್ಮಸ್ಸು ಇಮ್ಮಡಿಯಾಯಿತು. ಶಸ್ತ್ರಾಸ್ತ್ರ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿಕೊಂಡ ಹಮಾಸ್ ೨೦೧೨ ರಲ್ಲಿ ಮತ್ತೆ ಇಸ್ರೇಲ್ ಮೇಲೆ ರಾಕೆಟ್ ಧಾಳಿ ಆರಂಭಿಸಿತು. ಪ್ರತಿಯಾಗಿ ಧಾಳಿಗೈದ ಇಸ್ರೇಲ್ ಹಮಾಸ್ ನ ಸದ್ದಡಗಿಸಿದರೂ ಹಮಾಸ್ ನ ಉಗ್ರ ರೂಪಕ್ಕೆ ಕೊಂಚ ಭೀತಿಗೊಳಗಾದಂತೆ ಕಂಡಿದಂತೂ ನಿಜ... 

ಈಗ ಮತ್ತೆ ಇಸ್ರೇಲ್ ಮೇಲೆ ಧಾಳಿ ಆರಂಭಿಸಿರುವ ಹಮಾಸ್ ತಾನು ಇರಾನಿನಿಂದ ಪಡೆದ ರಾಕೆಟ್ ಗಳನ್ನು ಗಾಜಾದ ಗಡಿಯುದ್ದದ ನೂರಾರು ಸುರಂಗಗಳಲ್ಲಿ ಅಡಗಿಸಿಟ್ಟಿದೆ. ಪ್ರತಿಯಾಗಿ ವಾಯುದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಆ ಹುದುಗಿಸಿಟ್ಟಿರುವ ರಾಕೆಟ್ ಸಂಗ್ರಹವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಹಮಾಸ್ ನ ರಾಕೆಟ್ ಸಂಗ್ರಹವನ್ನು ನಾಶ ಮಾಡಬೇಕಾದರೆ ಇಡೀ ಗಾಜಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಇಂಚಿಂಚೂ ನೆಲವನ್ನೂ ಶೋಧಿಸುವ ಅನಿವಾರ್ಯತೆ ಇಸ್ರೆಲಿಗಿದೆ. ಪಾಲೆಸ್ತೀನ್ ನ ಸರ್ವಾಧಿಕಾರಿಯಾಗ ಹೊರಟ ಉಗ್ರ ಸಂಘಟನೆ ಹಮಾಸ್ ಇಸ್ರೇಲ್ ನ ನಾಯಕರಲ್ಲಿ ಭೀತಿ ಹುಟ್ಟಿಸಲು ಆರಂಭಿಸಿದ ರಕ್ತಪಾತ ಈಗ ಅದಕ್ಕೇ ಮುಳುವಾಗುವ ಹಂತಕ್ಕೆ ಬಂದು ನಿಂತಿದೆ. 

ಭಯೋತ್ಪಾದನೆಯನ್ನು ಯಾವ ದೇಶವೂ ಸಹಿಸದು. ಇಸ್ರೆಲಿಗಿದು ತನ್ನ ರಾಷ್ಟ್ರದ ನಾಗರಿಕರ ರಕ್ಷಣೆಯ ಪ್ರಶ್ನೆ. ತನ್ನ ರಾಷ್ಟ್ರದ ರಕ್ಷಣೆಗಾಗಿ ಇಸ್ರೇಲ್ ಏನು ಮಾಡಲೂ ಹಿಂಜರಿಯದು. ಅದನ್ನೇ ಈಗ ಇಸ್ರೇಲ್ ಮಾಡುತ್ತಿರುವುದು. ಇಲ್ಲಿನ ಚಿತ್ರಣವಂತೂ ಸ್ಪಷ್ಟವಾಗಿದೆ. ಇದು ಭಯೋತ್ಪಾದನೆಯ ವಿರುದ್ಧದ ಇಸ್ರೇಲ್ ನ ಹೋರಾಟವೇ ವಿನಃ ಇಸ್ರೇಲ್ ತಾನಾಗಿಯೇ ಕಾಲು ಕೆರೆದುಕೊಂಡು ಮಾಡುತ್ತಿರುವ ಯುದ್ಧವಲ್ಲ. 

ಗಾಜಾ ಉಳಿಸಿ ಎಂದು ಬೊಬ್ಬಿರಿಯುತ್ತಿರುವವರು ಹಮಾಸ್ ಎಂಬ ನಿಷೇಧಿತ ಸಂಘಟನೆ ಮತ್ತು ಅದು ಜನವಸತಿ ಪ್ರದೇಶವನ್ನು ತಮ್ಮ ಅಡಗುದಾಣ ಮಾಡಿದ ಬಗ್ಗೆ ಚಕಾರವೆತ್ತುವುದಿಲ್ಲ ಇಂತವರು ಶಾಂತಿಯ ಪ್ರತಿಪಾದಕರಾಗಲು ಸಾಧ್ಯವೇನು?. ಜಗತ್ತಿನ ಪ್ರತಿಯೊಬ್ಬ ಶಾಂತಿ ಪ್ರತಿಪಾದಕನು ಇಲ್ಲಿ ಇಸ್ರೇಲ್ ನ ಗೆಲುವನ್ನೇ ಬಯಸುತ್ತಾನೆ. ಅಷ್ಟಕ್ಕೂ, ಇಸ್ರೇಲ್ ಯುದ್ಧ ಹಮಾಸ್ ವಿರುದ್ಧವೇ ಹೊರತು ಗಾಜಾ ಮತ್ತು ಪಾಲೆಸ್ತೀನಿಗಳ ಮೇಲಲ್ಲ. 





Saturday, May 24, 2014

ತೊರೆದು ಹೋಗದಿರಿ ಭಾವಗಳೇ...




ತೊರೆದು ಹೋಗದಿರಿ ಭಾವಗಳೇ...
ಮನವಾ...
ನಿರ್ಭಾವುಕ ಮನಕೆ ಉಸಿರೆಲ್ಲಿದೇ...
ಬದುಕೆಲ್ಲಿದೇ...   

ಕಾನನದ  ಜಗದಿ
ಭರವಸೆಯ ಬೆಳಕಾಗಿ...  
ಜೀವ ತುಂಬಿದಿರೀ ನೀವು...
ತೊರೆದು ಹೋಗದಿರೀ ಭಾವಗಳೇ... 
 ಬದುಕಾ... 

ಪರ ಮನಸುಗಳ ನಗಿಸಿದಿರಿ 
ನಿಮ್ಮ ನೋವನು ಅದುಮಿಡುತಾ...
ನಗುವ ಚೆಲ್ಲಿದಿರಿ ನೀವು...
ತೊರೆದು ಹೋಗದಿರೀ ಭಾವಗಳೇ... 
 ಖುಷಿಯಾ...

ಬರಡು ಮನಗಳಿಗೆಲ್ಲಾ
ಒಲವ ಚಿಲುಮೆಯಾಗಿ
ಪ್ರೀತಿ ಸುರಿಸಿದಿರಿ ನೀವು...
ತೊರೆದು ಹೋಗದಿರೀ ಭಾವಗಳೇ 
 ಒಲವಾ...   

ತೊರೆದು ಹೋಗದಿರಿ ಭಾವಗಳೇ...
ಮನವಾ...
ನಿರ್ಭಾವುಕ ಮನಕೆ ಉಸಿರೆಲ್ಲಿದೇ...
ಬದುಕೆಲ್ಲಿದೇ...
ಉಸಿರೆಲ್ಲಿದೇ...ಬದುಕೆಲ್ಲಿದೇ...






Friday, November 15, 2013

ಚಾಚಾ… Oh My God… !!!


ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ 'ಚಾಚಾ...' ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.

ಆದರೆ...

ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.. ಮತ್ತೆ 'ಚಾಚಾ...' ಎಂದು ಕೂಗಲು ಮನಸ್ಸೇ ಬರುತ್ತಿಲ್ಲ... ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ... ! ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.. ಖಂಡಿತಾ ನಾನು ಬದಲಾಗಿಲ್ಲ.. ನಾನು ಈಗಲೂ ಅದೇ ದೇಶ ಪ್ರೇಮಿ... ಆದರೆ ನನ್ನ ಜ್ಞಾನ ಬದಲಾಯಿತು. ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು. ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ, ನಾಚಿಕೆಗೇಡಿನ, ಅಸಹ್ಯಕರ, ಹೇಡಿ ಹಾಗು  ಮೂರ್ಖತನದ ಪರಮಾವಧಿ... !

ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೊತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು. ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು. 

ನಮ್ಮ ದೇಶದ ದುರವಸ್ಥೆಗೆ ಮೊದಲು ಕೆಸರು ಕಲ್ಲು ಬಿದ್ದಿದ್ದು ಅಲ್ಲೇ...


ಆ ಕಾಲಕ್ಕೆ ಘಟಾನುಘಟಿ ನಾಯಕರ ಶ್ರಮದಿಂದ ದೇಶವ್ಯಾಪಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದ ಕಾಂಗ್ರೆಸ್ಸ್ ಪಕ್ಷವನ್ನು ಮುನ್ನಡೆಸಲು ಎಳ್ಳಷ್ಟೂ ಅನುಭವ ಇಲ್ಲದ ಎಳಸು ನೆಹರೂ ಬಂದರೆ ಹೇಗಾಗಬೇಡ.. ಕೆಲ ಸಮಯದಲ್ಲೇ ನೆಹರೂ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ಸ್ ನಲ್ಲೇ ಅಸಮಾಧಾನದ ಹೊಗೆಯಾಡಲಾರಂಭಿಸಿತು. ಆದರೆ ಗಾಂಧೀಜಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನೆಹರೂರವರನ್ನು ತನ್ನ ಮಾನಸ ಪುತ್ರರನ್ನಾಗಿಸುವತ್ತ ಮುನ್ನಡೆದರು. ಪಟೇಲರಿಗೆ ಹೆಚ್ಚಿನ ಕಾಂಗ್ರೆಸ್ಸಿಗರ ಒಲವು ಇದ್ದಾಗಲೂ ಕೂಡ ಗಾಂಧೀ ನೆಹರೂರವರಿಗಾಗಿ ಪಟೇಲರನ್ನು ಸುಮ್ಮನಾಗಿಸಿದರು. ಅದು ಕೊನೆಗೆ ಪ್ರಧಾನಿ ಆಯ್ಕೆಯವರೆಗೂ ಮುಂದುವರೆಯಿತು. ಅಲ್ಲಿಗೆ ಭಾರತಕ್ಕೆ ಶನಿ ಅಧಿಕೃತವಾಗಿ ವಕ್ಕರಿಸಿಕೊಂಡಿತ್ತು. . . 


ಮುಂದೆ ಒಬ್ಬ ಪರಮಸ್ವಾರ್ಥಿ, ಸಮಯಸಾಧಕ, ಪ್ರಚಾರಪ್ರಿಯ ಅಧಿಕಾರ ವಹಿಸಿಕೊಂಡರೆ ಏನಾಗುತ್ತದೆ ಅದೇ ಆಯಿತು.. ದಿನಗಳು ಕಳೆಯುತ್ತಾ ಹೋದಂತೆ ದೇಶದ ಸ್ಥಿತಿ ಬ್ರಿಟೀಷರು ಭಾರತ ಬಿಟ್ಟು ಹೋದಾಗ ಇದ್ದದಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ಅಷ್ಟಕ್ಕೂ ಕೆಲ ಕ್ಷೇತ್ರಗಳಲ್ಲಿ ಏನಾದರೂ ಸಾಧಿಸಿದ್ದರೆ ಅದು ಪಟೇಲರ ಕಾರ್ಯವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾತ್ರ.

ತಮ್ಮ ಸ್ವಾರ್ಥಕ್ಕೆ ಮಾತ್ರ ಗಾಂಧಿಯನ್ನು ಬಳಸಿಕೊಂಡು ಗಾಂಧಿಯ ಮಾನಸ ಪುತ್ರನಂತಿದ್ದ ನೆಹರೂ ಗಾಂಧೀ ತತ್ವಗಳ ಬಗ್ಗೆ ಅಪಸ್ವರ ಹೊಂದಿದ್ದರು ಎಂದರೆ ಆಶ್ಚರ್ಯವಾಗಬಹುದು. ಗಾಂಧೀಜಿಯ ಗ್ರಾಮ ಸ್ವರಾಜ್ಯ, ಸ್ವದೇಶೀ ಚಿಂತನೆಗಳ ಬಗ್ಗೆ ನೆಹರೂ ತೀವ್ರ ವಿರೋಧ ಹೊಂದಿದ್ದರು. ಗಾಂಧೀ ಮರಣಾನಂತರ ಇದನ್ನು ಬಹಿರಂಗವಾಗಿ ಹೇಳಿದ್ದರು ಕೂಡ... ಹಳ್ಳಿಗಳ ಅಭಿವೃದ್ದಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಗಾಂಧೀ ಚಿಂತನೆಗಳನ್ನು ನೆಹರು ಅಳವಡಿಸುವುದಿರಲಿ ಒಪ್ಪಿಕೊಳ್ಳಲೂ ತಯಾರಿರಲಿಲ್ಲ. ಅಮೇರಿಕದಂತಹ ರಾಷ್ಟ್ರಗಳೇ ಮೆಚ್ಚಿ ತನ್ನ ದೇಶದಲ್ಲಿ ಜಾರಿಗೆ ತಂದಿದ್ದ ಗಾಂಧೀಜಿಯ ಗ್ರಾಮ ರಾಜ್ಯದ ಕಲ್ಪನೆ ನೆಹರೂಗೆ ಮಾತ್ರ ಅಪಥ್ಯವಾಯಿತು. ನೆಹರೂರವರ ಅಭಿವೃದ್ದಿಯ ಪರಿಕಲ್ಪನೆ ಬೇರೆಯದೇ ಇತ್ತು. ಅದನ್ನು ಬಾಲಿಶವೆನ್ನುವುದೋ, ಮೂರ್ಖತನವೆನ್ನುವುದೋ ತಿಳಿಯದು. ಯಾಕೆಂದರೆ ಅದು ಮಾಡಿದ ಪರಿಣಾಮ ಮಾತ್ರ ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ದೊಡ್ಡ ದೊಡ್ಡ ಯಂತ್ರಗಳು, ಕಾರ್ಖಾನೆಗಳಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೇಲಿಂದ ಮೇಲೆ ಸಾಲ ಮಾಡಿ ವಿದೇಶಗಳಿಂದ ಯಂತ್ರಗಳನ್ನು ತಂದರು.  ನೋಡ ನೋಡುತ್ತಾ ಸಾಲದ ಮೊತ್ತ ಬೆಳೆಯುತ್ತಾ ಹೋಯಿತೇ ವಿನಃ ಯಶಸ್ಸು ಮಾತ್ರ ದಕ್ಕಲಿಲ್ಲ. ಸ್ವಾತಂತ್ರ ಸಿಗುವಾಗ ಸಾಲ ರಹಿತವಾಗಿದ್ದ ದೇಶ ಮುಂದೆ ತನ್ನ ಪ್ರತಿಯೊಬ್ಬ ಪ್ರಜೆಯ ಮೇಲೆ ಸಾಲದ ಹೊರೆ ಹಾಕುವಷ್ಟರ ಮಟ್ಟಿಗೆ ಅಭಿವೃದ್ದಿ ಹೊಂದಿತ್ತು. !! ಇಂದಿಗೂ ನಮ್ಮ ತಲೆಯ ಮೇಲೆ ಸಾಲದ ಕತ್ತಿ ಇದೆ. ಮಾನ್ಯ ನೆಹರೂರವರೇ ಇದರ ಕರ್ತ... 



ವಿಜ್ಞಾನ ಕ್ಷೇತ್ರ ಪ್ರಗತಿಯಾಗಬೇಕೆಂದು ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದ ನೆಹರೂರವರ ಯೋಜನೆಗಳು ಕಾರ್ಯರೂಪಕ್ಕೆ ಬರುವಾಗ ಹಾಸ್ಯಾಸ್ಪದವೆನಿಸಿತು. ವಿಜ್ಞಾನದ ಪ್ರಗತಿಗೆಂದು ಹೇಳುತ್ತಾ ನೆಹರೂ ಕೋಟಿಗಟ್ಟಲೆ ಹಣ ವ್ಯಯಿಸಿದರೇ ವಿನಃ ಯಾವುದೇ ನಿರ್ದಿಷ್ಟ ಯೋಜನೆ ಪರಿಕಲ್ಪನೆಗಳಿರಲಿಲ್ಲ. ಎಲ್ಲದಕ್ಕೂ ವಿದೇಶವನ್ನು ನೆಚ್ಚಿಕೊಳ್ಳುತ್ತಿದ್ದ ನೆಹರೂ ಇಲ್ಲೂ ಅದನ್ನೇ ಮಾಡಿದರು. ಯಂತ್ರೋಪಕರಣಗಳು, ಯುದ್ಧ ಸಾಮಾಗ್ರಿಗಳನ್ನೆಲ್ಲ ವಿದೇಶದಿಂದ ಸಾಲ ಮಾಡಿ ತಂದು ಭಾರತವನ್ನು ಪರಾವಲಂಬಿಯನ್ನಾಗಿಸಿದರು. ಅದೇ ಯಂತ್ರೋಪಕರಣಗಳನ್ನು ಇಲ್ಲೇ ಅಭಿವೃದ್ದಿಪಡಿಸಿ ದೇಶೀಯ ವಿಜ್ಞಾನ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದರೆ ಇಂದು ನಮ್ಮ ಬಹುಪಾಲು ವಿದ್ಯಾವಂತ ಭಾರತೀಯರು ಪರದೇಶಗಳಲ್ಲಿ ತಮ್ಮ ಜ್ಞಾನವನ್ನು ವಿನಿಯೋಗಿಸುವ ಅಗತ್ಯ ಇರಲಿಲ್ಲ. ದೇಶದ ಆರ್ಥಿಕ ದರಿದ್ರತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ...

ನೆಹರೂರವರ ಕನಸು ಬೆಳೆಯುತ್ತಿತ್ತು.. ಆದರೆ ಭಾರತವಲ್ಲ... !!!

ಭಾರತದ ನಂತರ ಸ್ವಾತಂತ್ರ ಪಡೆದ ರಾಷ್ಟ್ರಗಳೆಲ್ಲ ವೇಗವಾಗಿ ಅಭಿವೃದ್ದಿ ಹೊಂದಿದವು... ಭಾರತ ಮಾತ್ರ ನೆಹರೂರವರ ಹಗಲುಗನಸುಗಳಲ್ಲೇ ದಿನದೂಡುತ್ತಿತ್ತು.

ದೇಶೀಯ ಮಟ್ಟದಲ್ಲಿ ಜನಪ್ರಿಯತೆ ಸಾಧಿಸಿದ್ದು ಆಯಿತು ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು ಅನ್ನುವುದಷ್ಟೇ ನೆಹರೂ ಗುರಿಯಾಗಿದ್ದಂತೆ ಕಾಣುತಿತ್ತು. ಆದರೆ ಅವರ ಆ ಪ್ರಯತ್ನಗಳೆಲ್ಲ ಮುಂದೆ ನಗೆಪಾಟಲಿಗೆ ಈಡಾಯಿತು. ಅಂತೆಯೇ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿತ್ತು. ಅವರ ವಿದೇಶಾಂಗ ನೀತಿಯಂತೂ ಅಪ್ಪಟ ಎಳಸು. ಪ್ರಪಂಚದ ಎರಡು ದೊಡ್ಡ ಶಕ್ತಿಗಳಾಗಿದ್ದ ಅಮೇರಿಕ ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾಲ. ಪ್ರಪಂಚ ಎರಡು ಬಣಗಳಾಗಿ ವಿಭಜನೆ ಹೊಂದಿತ್ತು. ಭಾರತವೂ ತನ್ನ ಭವಿಷ್ಯದ ದೃಷ್ಟಿಯಿಂದ ಒಂದು ಬಣಕ್ಕೆ ಸೇರಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ನಮ್ಮದು 'ಅಲಿಪ್ತ ನೀತಿ' ನಾವು ಅಮೆರಿಕದೊಂದಿಗೆ ಸ್ನೇಹ ಹೊಂದಿದ್ದೇವೆ ಹಾಗು ರಷ್ಯಾದೊಂದಿಗೆ ಸಂಪೂರ್ಣ ಸ್ನೇಹ ಹೊಂದಿದ್ದೇವೆ ಎಂದು ದ್ವಂದ್ವ ಪ್ರದರ್ಶಿಸಿ ಅತ್ತ ಅವರಿಗೂ ಇತ್ತ ಇವರಿಗೂ ಬೇಡವಾದರು. ಇದರ ಸಂಪೂರ್ಣ ಲಾಭವನ್ನು ಪಾಕಿಸ್ತಾನ ಪಡೆದುಕೊಂಡಿತು. ಭಾರತವನ್ನು ಅನುಮಾನದ ದೃಷ್ಟಿಯಿಂದ ನೋಡಿದ ಅಮೇರಿಕ- ರಷ್ಯಾಗಳೆರಡೂ ಪ್ರತ್ಯೇಕವಾಗಿ ಪಾಕಿಸ್ತಾನವನ್ನು ಪೋಷಿಸಿದವು.

ಇನ್ನು ವಿದೇಶಗಳಲ್ಲಿ ಭಾರತದ ರಾಯಭಾರಿಗಳಾಗಿದ್ದವರೆಲ್ಲ ನೆಹರೂ ಕುಟುಂಬಿಕರು, ಗೆಳೆಯರು, ಬಾಲ ಬುಡುಕರುಗಳೇ... ಅವರು ವ್ಯರ್ಥ ಸಮಯ ಕಳೆಯುತ್ತಿದ್ದರೇ ಹೊರತು ಕಾರ್ಯ ಮಾತ್ರ್ತ ಶೂನ್ಯವಾಗಿತ್ತು. ಅದರ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗುವವರೆಗೆ ಯಾವ ವಿದೇಶಗಳೂ ಭಾರತದ ಹತ್ತಿರ ಬರುತ್ತಿರಲಿಲ್ಲ. ವಾಜಪೇಯೀ ಅವರ ವಿದೇಶಾಂಗ ನೀತಿಗಳ ಕಾರಣದಿಂದಲೇ ಇಂದು ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಬಂಧಗಳನ್ನು ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು. 


ಇಂದಿನ 'ಸೆಕ್ಯುಲರಿಸಂ' (ಭಾರತೀಯ ಅರ್ಥ : ಮುಸ್ಲಿಂ ತುಷ್ಟೀಕರಣ, ಹಿಂದೂಗಳ ಕಡೆಗಣನೆ) ಅನ್ನುವ ರಾಜಕೀಯ ಚಾಳಿಯ ಪಿತಾಮಹ ಇದೆ ಪಂಡಿತ್ ಜೀ.. ಅತ್ತ ಪಾಕಿಸ್ಥಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತ ಹಿಂದೂಗಳ ಮಾರಣ ಹೋಮ ನಡೆಸುತ್ತಿದ್ದರೆ ಇತ್ತ ನೆಹರೂ ತನ್ನ ಆಡಳಿತಾತ್ಮಕ ಯೋಜನೆಗಳ ಮೂಲಕ ಬಹುಸಂಖ್ಯಾತ ಹಿಂದೂಗಳ ಮಾನಸಿಕ ಮಾರಣ ಹೋಮ ನಡೆಸುತ್ತಿದ್ದರು. ಮುಸ್ಲಿಮರು ಒಪ್ಪುವುದಿಲ್ಲ ಎಂದು ವಂದೇ ಮಾತರಂ ರಾಷ್ಟ್ರಗೀತೆಯಾಗುವುದನ್ನು ತಡೆದಿದ್ದು, ಗಲಭೆಗಳ ಸಂದರ್ಭ ಮುಸ್ಲಿಂ ಮತಾಂಧರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಿದ್ದು, ಸರಕಾರದ ಹೆಚ್ಚಿನ ಸವಲತ್ತುಗಳು ಮುಸ್ಲಿಮರಿಗೆ ಹೋಗುವಂತೆ ಆಡಳಿತಾತ್ಮಕ ಮಾರ್ಪಾಡುಗಳನ್ನು ತಂದಿದ್ದು, ಗಾಂಧೀ ಹತ್ಯೆಯ ನೆಪದಲ್ಲಿ ಆರ್.ಎಸ್.ಎಸ್ ಅನ್ನು ನಿಷೇಧಿಸಿದ್ದು, ಹಿಂದೂ ಧರ್ಮದ ವಿವಿಧ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿ ಹಿಂದೂಗಳನ್ನು ಒಡೆದದ್ದು, ಅಸ್ಸಾಂ ಅನ್ನು 7 ರಾಜ್ಯಗಳಾಗಿ ವಿಭಜಿಸಿ ಅಲ್ಲಿ ಕ್ರಿಶ್ಚಿಯನ್ ಮಿಶನರಿಗಳಿಗೆ ಮುಕ್ತ ಅವಕಾಶ ಕಲ್ಪಿಸಿ ನಾಗಾಲ್ಯಾಂಡ್ ನಂತಹ ಪೂರ್ಣ ಹಿಂದೂ ರಾಜ್ಯಗಳನ್ನು ಕ್ರಿಶ್ಚಿಯನೀಕರಿಸಲು ಒತ್ತಾಸೆಯಾಗಿದ್ದು, ಕ್ರಿಶ್ಚಿಯನ್ ಸಂಸ್ಥೆಗಳಿಗೆ ನೀಡಿದ್ದ ಸರ್ವಾಧಿಕಾರವನ್ನು ಕೇರಳದಲ್ಲಿ ಆಗ ತಾನೇ ಬಂದಿದ್ದ ಕಮ್ಯುನಿಷ್ಟ್ ಸರಕಾರ ಹಿಂಪಡೆದದ್ದಕ್ಕೆ ಮುಂದೆ ಕೇರಳ ಸರಕಾರವನ್ನೇ ವಜಾಗೊಳಿಸಿದ್ದು ಎಲ್ಲವೂ ನೆಹರೂ ಹಿಂದೂ ವಿರೋಧಿ ರಾಜಕಾರಣದ ಫಲವೇ...

ಇಂದು ನಮ್ಮ ರಾಷ್ಟ್ರದ ಭ್ರಷ್ಟಾಚಾರವನ್ನು ನೋಡಿದಾಗ ನಮಗೇ ದಿಗ್ಭ್ರಮೆಯಾಗುತ್ತದೆ. ಆದರೆ ಇದರ ಮೂಲವನ್ನು ಹುಡುಕುತ್ತಾ ಹೋದಾಗ ಕೊನೆಗೆ ಬರುವುದು ನೆಹರೂ ಕಡೆಗೇನೆ. ಅಂತಹ ದೊಡ್ಡ ಭ್ರಷ್ಟಾಚಾರದ ಮೂಟೆಯಾಗಿತ್ತು ನೆಹರೂ ಸರಕಾರ. ದೇಶಕ್ಕಾಗಿ ಕೆಲಸ ಮಾಡುವಾಗ ದೇಶದಿಂದ ಸ್ವಲ್ಪ ಪಡೆದುಕೊಂಡರೆ ತಪ್ಪೇನು ಎನ್ನುತ್ತಿದ್ದರು ನೆಹರೂ... ಎಲ್ಲಿಯ ಗಾಂಧೀ, ಎಲ್ಲಿಯ ನೆಹರೂ... !! ತನ್ನ ಸರಕಾರದ ಭ್ರಷ್ಟಾಚಾರದ ಬಗ್ಗೆ ಯಾರಾದರೂ ಕೇಳಿದರೆ ನೆಹರೂ ಉರಿದು ಬೀಳುತ್ತಿದರು. ಜನಪ್ರತಿನಿಧಿಗಳಾಗಿ ರಾಷ್ಟ್ರದ ಸಂಪತ್ತು ನಮಗೆ ಸೇರಿದ್ದು ಎಂಬತ್ತಿತ್ತು ಅವರ ಕಾರ್ಯದ ವೈಖರಿ...
ನೆಹರೂ ಕಾಲದ ಭ್ರಷ್ಟಾಚಾರಗಳ ಕೆಲ ಸ್ಯಾಂಪಲ್ ಈ ರೀತಿ ಇದೆ.

1) 2000 ಯುದ್ಧ ಜೀಪುಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗಿತ್ತು. ಆದರೆ ಬಂದಿದ್ದು 155 ಜೀಪು ಮಾತ್ರ. ಅದೂ ಕೂಡ ಅಯೋಗ್ಯವೆಂದು ಸೇನೆ ತಿರಸ್ಕರಿಸಿತು. 80 ಲಕ್ಷ ರೂಪಾಯಿ ಗುಳುಂ ಆಗಿತ್ತು.
2) 48 ಕೋಟಿ  ರೂ. ಗಳ ಸೆಣಬು ಹಗರಣ. 
3) ದಾಮೋದರ  ಕಣಿವೆ ಯೋಜನೆಯಲ್ಲಿ ಎರಡು ವರ್ಷಗಳ ಕಾಲ ಒಬ್ಬನೇ ಒಬ್ಬ ಇಂಜಿನಿಯರ್ ಇಲ್ಲದೆಯೂ 739 ಲಕ್ಷ ಖರ್ಚಾಗಿತ್ತು.
4) ಸಿಂದ್ರಿ  ರಾಸಾಯನಿಕ ಗೊಬ್ಬರ ಕಾರ್ಖಾನೆ ನಿರ್ಮಾಣದಲ್ಲಿ 10 ಕೋಟಿ ರೂಪಾಯಿ ಹಗರಣ. 
5) 17 ಕೋಟಿ ರೂ. ಗಳ ಆಮದು ರಸಗೊಬ್ಬರ ಹಗರಣ.
6) 22 ಕೋಟಿ ರೂ. ಗಳ ಟ್ರಾಕ್ಟರ್ ಹಗರಣ. 
7) ಬ್ರಿಟೀಷರು ಭಾರತ ಬಿಟ್ಟಾಗ ನಮ್ಮ ರೈಲ್ವೇ ಇಲಾಖೆ 42 ಲಕ್ಷಕ್ಕೂ ಅಧಿಕ ಲಾಭದಲ್ಲಿತ್ತು. ಸ್ವಾತಂತ್ರಾ ನಂತರದ 2 ವರ್ಷದಲ್ಲಿ ರೈಲ್ವೆ ಇಲಾಖೆ 83 ಲಕ್ಷ ನಷ್ಟ ಮಾಡಿಕೊಂಡಿತ್ತು. ಇಂದು ಅದು ಕೋಟಿಗಳನ್ನೂ ಮೀರಿದೆ. 
8) ಮಧ್ಯ ನಿಷೇಧಕ್ಕೆ 140 ಕೋಟಿ ಬಳಸಲಾಯ್ತು. ಮಧ್ಯ ಅಂತೂ ನಿಷೇಧವಾಗಲಿಲ್ಲ. ಬದಲಾಗಿ ಕಳ್ಳಭಟ್ಟಿ ಧಂಧೆ ದುಪ್ಪಟ್ಟಾಯಿತು.
9) 14 ಕೋಟಿ ರೂ ಗಳ ಬೋಕೊರೋ ಉಷ್ಣ ವಿದ್ಯುತ್ ಸ್ಥಾವರ ಹಗರಣ.

ಅಂದಿನ ಒಂದು ಕೋಟಿ ಅಂದರೆ ಇಂದಿನ ನೂರು ಕೋಟಿಗೆ ಸಮ. ಆ ದೃಷ್ಟಿಯಲ್ಲಿ  ನೋಡಿದಾಗ ಅಂದಿನ ಹಗರಣಗಳ ತೀವ್ರತೆ ಅರಿವಾಗುತ್ತದೆ. ಆದರೆ ಅದ್ಯಾವುದೂ ಸುದ್ದಿಯಾಗದಂತೆ ನೋಡಿಕೊಂಡರು ನೆಹರೂ. ಅದೇ ನೆಹರೂ ಹಾಕಿದ ಭ್ರಷ್ಟಾಚಾರದ ಮರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಇಷ್ಟೊಂದು ಭ್ರಷ್ಟಾಚಾರ ಇರುವಾಗ ನೆಹರೂರವರ ಯೋಜನೆಗಳೆಲ್ಲ ಯಶಸ್ವಿಯಾಗುವುದು ಹೇಗೆ ಸಾಧ್ಯ... ಅವರ ಸರ್ಕಾರದ ಪಂಚ ವಾರ್ಷಿಕ ಯೋಜನೆಗಳ ವೈಫಲ್ಯವೇ  ಇದಕ್ಕೆ ಸಾಕ್ಷಿ... ನಾಗಪುರ ವಿವಿಯ ಡಾ. ಬಿ.ಎನ್. ವೈದ್ಯ ಅವರ ದಾಖಲೆಗಳ ಪ್ರಕಾರ ನೆಹರೂ ಅವಧಿಯಲ್ಲಿ ಕೈಗೆತ್ತಿಕೊಂಡ ಪ್ರತಿ ಪಂಚ ವಾರ್ಷಿಕ ಯೋಜನೆಯು ಬಡತನ  ರೇಖೆಯ ಕೆಳಗಿರುವ ಜನರ ಪ್ರಮಾಣವನ್ನು ಏರಿಸುತ್ತಲೇ ಬಂದಿದೆ. 1951 ರಲ್ಲಿ ಮೊದಲ ಪಂಚ ವಾರ್ಷಿಕ ಯೋಜನೆ ಜಾರಿಗೆ ಬರುವಾಗ ಹಳ್ಳಿಗಳಲ್ಲಿ ಶೇಕಡಾ 47.37 , ಪಟ್ಟಣಗಳಲ್ಲಿ ಶೇಕಡಾ 35.46 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದರು. ಆದರೆ ಯೋಜನೆ ಮುಗಿಯುವ ವೇಳೆಗೆ ಆ ಸಂಖ್ಯೆ ಹಳ್ಳಿಗಳಲ್ಲಿ ಶೇಕಡಾ 64.24, ಪಟ್ಟಣಗಳಲ್ಲಿ 46.19 ಮುಟ್ಟಿತ್ತು. ಎರಡನೆಯ ಪಂಚವಾರ್ಷಿಕ ಯೋಜನೆಯ ಕೊನೆಗೆ ಹಳ್ಳಿಗಳಲ್ಲಿ 62.11 ಶೇಕಡಾ , ಪಟ್ಟಣಗಳಲ್ಲಿ 48.88 ಶೇಕಡಾ ಬಡತನ ರೇಖೆಗಿಂತ ಕೆಳಗಿದ್ದರು. ... !!!
ವಿಜ್ಞಾನದ ಹರಿಕಾರ, ಅಭಿವೃದ್ದಿಯ ಸೂತ್ರಧಾರ ಎಂದೆಲ್ಲ ತನ್ನ ಹೊಗಳುಭಟರಿಂದ ಕರೆಸಿಕೊಳ್ಳುತ್ತಿದ್ದ ನೆಹರೂ ಯೋಜನೆಗಳ ಯಶಸ್ಸು ಇದೇ... !

ಕಾಶ್ಮೀರವನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋದ ನೆಹರೂ...

ಸಣ್ಣ ಸಣ್ಣ ಸಂಸ್ಥಾನಗಳಾಗಿ ತುಂಡಾಗಿದ್ದ ಭಾರತವನ್ನು ಜೋಡಿಸುವ ಕಾರ್ಯ ಪಟೇಲರದಾಗಿತ್ತು. ಅವೆಲ್ಲವನ್ನೂ ಅಲ್ಪ ಸಮಯದಲ್ಲೇ ಅಚ್ಚು ಕಟ್ಟಾಗಿ ಮಾಡಿ ಮುಗಿಸಿದ್ದರು ಪಟೇಲರು. ಆದರೆ ಕಾಶ್ಮೀರವನ್ನು ಮಾತ್ರ ನಾನೇ ಬಗೆಹರಿಸಿಕೊಳ್ಳುತ್ತೇನೆ ಎಂದ ನೆಹರೂ  ಇಂದಿಗೂ ಅದನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋಗಿದ್ದಾರೆ. ಕಾಶ್ಮೀರದ ಹಿಂದೂ ರಾಜನಿಗೆ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಮಹಾದಾಸೆ ಇದ್ದರೂ ನೆಹರೂರವರು ತಮ್ಮೊಂದಿಗೆ ತೋರಿಸುತ್ತಿದ್ದ ದರ್ಪಕ್ಕೆ ಅಸಮಧಾನಗೊಂಡು ಪಾಕಿಸ್ತಾನದೊಂದಿಗೆ ಹೋಗುವ ದ್ವಂದ್ವದಲ್ಲಿದ್ದರು. ಕಡೆಗೆ ಪಟೇಲರು ಮಧ್ಯ ಪ್ರವೇಶಿಸದಿದ್ದರೆ ಕಾಶ್ಮೀರ ಪಾಕಿಸ್ತಾನದ ಮಡಿಲಿಗೆ ಸೇರುತ್ತಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಾರತದ ಮೇಲೆ ಧಾಳಿಯಿಟ್ಟಿತು. ಕಾಶ್ಮೀರದಾದ್ಯಂತ ಪಾಕ್ ಸೈನಿಕರು ಹಿಂದೂ ಮುಸಲ್ಮಾನ ಭೇಧವೆನಿಸದೆ ಮಾತಾ ಭಗಿನಿಯರ ಮಾನ ಸೂರೆಗೈದರು, ಕೊಲೆ ಲೂಟಿಗಳಾದವು. ಆತಂಕಗೊಂಡ ನೆಹರೂ ಆಕಾಶವಾಣಿಯ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಆಡಿದ ಮಾತುಗಳು ಒಂದು ರೋದನದಂತಿತ್ತು. ಆದರೆ ಪಟೇಲರು ಸುಮ್ಮನೆ ಕುಳಿತಿರಲಿಲ್ಲ.!


ಯುದ್ಧ ಕಾರ್ಯಕ್ಕಿಳಿದರು.. ಇತ್ತ ಪಟೇಲರು ಧಾಳಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿತು. ನಮ್ಮ ಭಾರತೀಯ ಸೈನಿಕರು ವಿಜಯದ ಪತಾಕೆ ಹಾರಿಸುತ್ತ ಮುನ್ನಡೆಯುತ್ತಿದ್ದರು... ಆಗಲೇ ನೆಹರೂ ಮಹಾ ಮೂರ್ಖತನದ ಕೆಲಸ ಮಾಡಿದ್ದು. ನಮ್ಮ ಸೈನಿಕರು ಪೂರ್ಣ ವಿಜಯದ ಬಾಗಿಲಲ್ಲಿ ಇರುವಾಗ ವಿಶ್ವ ಸಂಸ್ಥೆಯ ಬಾಗಿಲು ಬಡಿದ ನೆಹರೂ ಮಧ್ಯಸ್ಥಿಕೆಗೆ ಕೋರಿದರು.  ಪಟೇಲರಿಗೆ ಈ ವಿಷಯ ಗೊತ್ತೇ ಇರಲಿಲ್ಲ.. ಅದರ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಸ್ವಲ್ಪ ಭೂಮಿ ಪಾಕ್ ವಶದಲ್ಲೇ ಉಳಿಯಿತು.


ನೆಹರೂ ಸತ್ತಿರಬಹುದು. ಆದರೆ ದಿನಾ ಸಾಯುವ ಕಾಶ್ಮೀರಿಗಳ ಪಾಡು ಕೇಳಲು ಯಾರು ಇಲ್ಲ. ದಿನಾ ನಮ್ಮ ಹೃದಯ ಚುಚ್ಚುವ ಕಾಶ್ಮೀರ ಸಮಸ್ಯೆಗೆ ಪರಿಹಾರ ಒದಗಿಸುವವರಿಲ್ಲ. ಅಂದಿನ ನೆಹರೂ ಮೂರ್ಖತನ ನಮ್ಮನ್ನು ಪ್ರತಿ ಕ್ಷಣ ಸಾಯಿಸುತ್ತಿದೆ. ಹೃದಯದ ಬೇಗುದಿ ಉರಿಯುತ್ತಲೇ ಇದೆ... 

ಮುಂದೆ ಚೀನಾ ಯುದ್ಧದಲ್ಲೂ ನೆಹರೂ ವೈಫಲ್ಯದಿಂದಾಗಿ ನಮ್ಮ ಭಾರತೀಯ ಸೈನಿಕರು ಬೆಂಕಿಗೆ ಬೀಳುವ ಕೀಟಗಳಂತೆ ನೆಲಕ್ಕುರುಳಿದರು. ನೆಹರೂರವರ ಅಲಿಪ್ತ ನೀತಿ ಸೈನ್ಯವನ್ನು ನಿಷ್ಕ್ರಿಯಗೊಳಿಸಿತ್ತು. ಒಂದು ಬೂಟು, ಕೈಗವಚ, ಮುಖದ ಮಾಸ್ಕ್ ಇದ್ಯಾವುದೂ ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಸೈನಿಕ ಹಳೆಯ ಕಾಲದ ಬಂದೂಕು ಹಿಡಿದುಕೊಂಡು ಚೀನಾದೊಂದಿಗೆ ಕಾದಾಡುತ್ತಿದ್ದ... !! ವಿಶ್ವದ ಮುಂದೆ ಭಾರತದ ಸೈನ್ಯ ಶಕ್ತಿಯ ಪ್ರದರ್ಶನವಾಗಿ ಹೋಗಿತ್ತು. ಕೊನೆಯ ಕ್ಷಣದಲ್ಲಿ ಅಮೇರಿಕ ನಮ್ಮ ಸಹಾಯಕ್ಕೆ ಧಾವಿಸದಿದ್ದರೆ ಭಾರತ ಚೀನೀಯರ ವಶವಾಗುತಿತ್ತು.  ಅಂದಿನ ಆ ಮಹಾ ಅವಮಾನಕ್ಕೆ ನೆಹರೂ ಮತ್ತು ಅವರ ಬಾಲಬುಡುಕರೇ ನೇರ ಹೊಣೆ. ಅಂದಿನ ಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಗೇಡಿಯರ್ ಜಾನ್. ಪಿ. ದಳವಿ ಬರೆದ ಹಿಮಾಲಯನ್ ಬ್ಲಂಡರ್ ಭಾರತ ಚೀನಾ ಯುದ್ಧದ, ನಂತರದ ಪರಿಸ್ಥಿತಿಯ, ಇಂತಹ ಹೀನಾಯ ಸ್ಥಿತಿಗೆ ಕಾರಣವಾದ ನೆಹರೂ ಮತ್ತವರ ಬಾಲ ಬುಡುಕರು ನಡೆದುಕೊಂಡ ರೀತಿಯ ಪ್ರತಿ ಎಳೆ ಎಳೆಯನ್ನು ಬಿಚ್ಚಿಡುತ್ತದೆ. ಆ ಪುಸ್ತಕ ಓದಿ ಮುಗಿಸಿದ ಮೇಲೆ ನಿಮ್ಮ ಕಣ್ಣುಗಳಲ್ಲಿ ಒಂದು ಹನಿ ಕಣ್ಣೀರು ಬರದಿದ್ದರೆ ಹೇಳಿ.

ಆದರೆ ಇದ್ಯಾವುದನ್ನೂ ನಾನು ಶಾಲಾ ಪಾಠ ಪುಸ್ತಕದಲ್ಲಿ ಓದಿಲ್ಲ. ಯಾವ ಟೀಚರ್ ಕೂಡ ಈ ಬಗ್ಗೆ ಹೇಳಿರಲಿಲ್ಲ. ನೆಹರೂ ವಂಶಸ್ಥರ ಗುಣಗಾನ ಮಾಡುವ ಶಿಕ್ಷಣವನ್ನೇ ನಾವು ಪಡೆಯುತ್ತಿರುವಾಗ ಈ ತೆರೆಯ ಹಿಂದಿನ ಸತ್ಯಗಳು ಹೇಗೆ ತಾನೇ ಬೆಳಕು ಕಾಣಲು ಸಾಧ್ಯ. !! ? ಅಂದು ನಾನೇ ಶಾಲೆಯಲ್ಲಿ ಭಾಷಣ ಮಾಡುವಾಗ ನೆಹರೂರವರನ್ನು 'ಚಾಚಾ..' ಎನ್ನುತ್ತಿದ್ದೆ.. ಆದರೆ ಈಗಂತೂ ಸಾಧ್ಯವಿಲ್ಲ. ನನ್ನ ದೇಶವನ್ನು , ನನ್ನ ಜನರನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿ ಸಮಸ್ಯೆಗಳ ಆಗರ ಸೃಷ್ಟಿಸಿ ನಮ್ಮನ್ನೆಲ್ಲ ಪ್ರತಿದಿನ ಸಾಯಿಸುತ್ತಿರುವ ಆ ನೆಹರೂ ಹೇಗೆ ತಾನೇ 'ಚಾಚಾ'ನಾಗುತ್ತಾರೆ...
ಮನಸ್ಸು "ಛೀ ಛೀ ..." ಅನ್ನುತ್ತಿದೆ ... ಕಣ್ಣಂಚಲ್ಲಿ ಒಂದು ಹನಿ ಬೀಳಲೋ ಬೇಡವೋ ಎನ್ನುವಷ್ಟರ ಮಟ್ಟಿಗೆ ಕಣ್ಣು ಭಾರವಾಗಿದೆ.. 




Friday, November 8, 2013

ಮೊದಮೊದಲು...


ಮೊಗ್ಗು ಹೂವಾದಾಗ
ಮಗುವು ಅಂಬೆಗಾಲಿಡುವಾಗ
ಕಾಯಿ ಹಣ್ಣಾಗೋ ಆ ಸುಂದರ ಯಾತನೇ
ಮೊದಲ ಸ್ಪರ್ಶದ ಮನದ ಹರ್ಷದ... 
ಆಹಾ ಏನಿದು ಭಾವನೇ
ಕಾರಣ ನೀನೇನೆ...

ಹಸುವು ಹಾಲುಣಿಸೋವಾಗ
ಹಕ್ಕಿ ರೆಕ್ಕೆ ಬಡಿದಾಗ
ವರುಣ ಭುವಿಯ ಸೋಕಿದಾಗ
ಆಹಾ ವರ್ಣಿಸಲಾಗದೇ
ಮಾತು ಕಟ್ಟಿ...ಮೌನ ಬೆಳೆದು
ಹೃದಯ ತೇಲಾಡಿದೇ...

ಅಯೋಮಯವು ಈ ಮನ
ಕಣ್ತುಂಬ ನಿನ್ನದೇ ಸರೀಗಮ
ಕಣ್ಣಾ ಮುಚ್ಚಾಲೆ ಆಡಿದೆ ಹೃದಯ
ನಿನ್ನ ಮೊದಲ ನೋಟಕೆ ಹೆದರಿ.. 
ಈ ಮೊದಲ ತೊದಲ ಪ್ರೀತಿಗೆ
ಕೊಡುವೆಯಾ ಹೃದಯದ ಕಾಣಿಕೆ








Sunday, October 20, 2013

ಅವಳು ಅವಳಲ್ಲ...


ಮನದ ಪುಟದಿ ನಿನದೇ ಹಾಡು
ಜಾಡು ಹಿಡಿದು ಬರಲೇ ನಾನು
ಮಿಟುಕೋ ನಯನ ಅದುರೋ ಅಧರ
ಚೆಲುವು ಮೀರಿದೆ ಅಂಬರ

ಕೊಂಚ ಹೆದರಿಕೆ ಕಣ್ಣ ಬೆದರಿಕೆ
ತುಂಟ ಮೊಗದ ನೆಂಟಳು
ಹಾಲ ನಗುವಿಗೆ ಬಳುಕೋ ನಡುವಿಗೆ
ಸೋತು ಹೋಗಿವೆ ಕಂಗಳು

ಹೆಜ್ಜೆ ಹೆಜ್ಜೆಗೆ ಗೆಜ್ಜೆ ಸರಿಗಮ
ನಿನ್ನ ಲಜ್ಜೆಗೆ ಹೃದಯ ಸಂಭ್ರಮ
ನಿನ್ನ ನಡೆಗೆ ನಿನ್ನ ನುಡಿಗೆ
ಹಚ್ಚಲೇ ದೃಷ್ಟಿ ಕಾಡಿಗೆ

Tuesday, September 24, 2013

ಮಸಣ...

ಹಾರೋ ಹಕ್ಕಿಯು ಹಾರಲಾಗದೆ 
ರೆಕ್ಕೆ ಪಟಪಟ ಬಡಿದಿದೇ...
ಪ್ರೇಮ ಜೀವವು ವಿರಹ ತಾಳದೆ 
ವಿಲವಿಲನೆ ನಲುಗಿದೇ... 

ಮೊದಲ ಹೆಜ್ಜೆಗೂ ಕೊನೆಯ ಹೆಜ್ಜೆಗೂ 
ಇಲ್ಲ ಹೆಚ್ಚಿನ ಅಂತರ...
ಪ್ರಾಣ ಹರಣದ ವೇದನೆಯಲಿ 
ಮನದಿ ಮರಣದ ಕಾತರ... 

ಮನದ ಭಾವಕೆ ಯಾರು ಹೊಣೆಯು 
ವಿರಹದಾಟಕೆ ಎಲ್ಲಿ ಎಣೆಯು...
ಹಣೆಬರಹವ ಗೀಚಿದಾತ 
ತಾನು ನಗುತ ಕೂತಿಹ... 

ಬರದ ಛಾಯೆಯು ಮನದಲಿಹುದು 
ನಗುವ ಛಾಯೆಯು ಮೊಗದಲಿಹುದು...
ಕಂಡ ಕನಸಲಿ ನೀನೇ ಇಲ್ಲ 
ಒಂಟಿ ಪಯಣವು ಬಾಳಲೆಲ್ಲ...

ಹಾರೋ ಹಕ್ಕಿಯು ಹಾರಲಾಗದೆ 
ರೆಕ್ಕೆ ಪಟಪಟ ಬಡಿದಿದೇ...
ಪ್ರೇಮ ಜೀವವು ವಿರಹ ತಾಳದೆ 
ವಿಲವಿಲನೆ ನಲುಗಿದೇ...


Tuesday, August 20, 2013

ಎದೆಯ ಕಿಟಕಿಯಲ್ಲೀ...


ಎದೆಯ ಕಿಟಕಿಯಲ್ಲೀ
ಮೆಲ್ಲಗೆ ಇಣುಕಿ ನೋಡಿದಂತೇ...
ಮನದ ಕೋಣೆಯಲ್ಲೀ 
ಸಣ್ಣಗೆ ಶಿಳ್ಳೆ ಹಾಕಿದಂತೇ...  
ಹೃದಯ ಹಾಳಾಗಿದೇ...ಮನಸ್ಸು ಕಳೆದೋಗಿದೇ... 
ನಾನಿಂದು ನಾನಲ್ಲ.... ನೀ ಹೇಳೆಯಾ.... 

ನನ್ನೇ ನೋಡುತ್ತಿರು ನೀನು 
ನಾ ತಿರುಗಿ ನೋಡುತ್ತಿರಲು...  
ಕಣ್ಣ ಭಾಷೆಯಲ್ಲೇ 
ಮನಸ್ಸು ಮಾತಾಡುತ್ತಿರಲು...  
ಒಲವ ಜನನ, ಹೃದಯ ಹರಣ
ನೀನೇ ತಾನೇ ಕಾರಣ... 

ಹೃದಯ ಬದಲು, ಮಾತು ತೊದಲು 
ಆಹಾ ಹಿತವಾದ ಯಾತನೇ...  
ನೀನು ಬರಲು ಬಾಳೇ ಹಗಲು 
ಮಿಡಿದಿದೆ ಹೃದಯ ಸುಮ್ಮನೇ... 
ನನ್ನುಸಿರ ಉಡುಗೆ.. ನಿನಗೆ ತೊಡಿಸಿ.. 
ಕೊಡಲೇ ಒಲವ ಬಾಡಿಗೇ... 

ನೋಡು ಗೆಳತಿ ಒಂದು ಸರತಿ 
ನನ್ನ ಎದೆಯ ಭಾವನೇ...  
ಕಂಡ ಕನಸು ಎಂಥ ಸೊಗಸು 
ಪ್ರೀತಿ ಸುರಿಸು ಮೆಲ್ಲನೇ...  
ನಾನೇ ಇರಲು ಯಾಕೆ ದಿಗಿಲು 
ಈ ಪ್ರೀತಿ ಒಡಲು ನಿನ್ನದೇ...