Friday, July 13, 2012

ಕಪಟ ನಾಟಕ ಸೂತ್ರಧಾರಿ ನೀನೇ...

ದೇಶದ ಯಾವುದೇ ಮೂಲೆಯಲ್ಲಿ ಆಡ್ವಾಣಿ, ವಾಜಪೇಯಿ ಯಂತಹ ಹಿರಿಯ ಬಿಜೆಪಿ ಮುತ್ಸದ್ದಿಗಳು 'ಜೈ ಶ್ರೀ ರಾಮ್ ಎಂದರೆ ಸಾಕು ಅದು ಮಂಗಳೂರಿನವರ ಬಾಯಲ್ಲಿ ಮಾರ್ದನಿಸುತ್ತದೆ. ಹಿಂದುತ್ವ ಎಂದರೆ ಉಸಿರು, ಹಿಂದುತ್ವ ಎಂದರೆ ಜೀವನ, ಹಿಂದುತ್ವ ಎಂದರೆ ಸರ್ವಸ್ವ ಎಂದು ಹಿಂದುತ್ವವನ್ನೇ  ಮೈಗೂಡಿಸಿಕೊಂಡ ನಾಡು ಈ ಕರಾವಳಿಯ ಮಂಗಳೂರು ಹಾಗು ಉಡುಪಿ ಜಿಲ್ಲೆಗಳು...  ಬರೀ ಓಟು ಬ್ಯಾಂಕ್ ಗಷ್ಟೇ ಹಿಂದುತ್ವದ ಸೋಗು ಹಾಕಿಕೊಳ್ಳುವ ಈ ಕಾಲದಲ್ಲಿ ಹೃದಯದಿಂದ ಹಿಂದುತ್ವವನ್ನು ಅಪ್ಪಿಕೊಂಡವರಿವರು. ಇಲ್ಲಿ ಬಿಜೆಪಿಯಿಂದ ಹಿಂದುತ್ವ ಬಂದಿಲ್ಲ ಬದಲಾಗಿ ಹಿಂದುತ್ವದಿಂದ ಬಿಜೆಪಿ ಬಂದಿದೆ. ಆದರೆ ಈಗ ನಾವೆಷ್ಟು ಮೂರ್ಖರಾಗಿದ್ದೆವು ಎಂಬುದರ ಅರಿವಾಗುತ್ತಿದೆ. ಓಟು ಬ್ಯಾಂಕ್ ಗಾಗಿ ನಮ್ಮ ಹಿಂದುತ್ವವನ್ನು ಬಳಸಿಕೊಂಡರಲ್ಲ  ಎಂಬ ಬಗ್ಗೆ ಖೇದವಾಗುತ್ತಿದೆ. ಇದಕ್ಕೆ ಕಾರಣರಾದವರ ಮೇಲೆ ಕೋಪ, ಸಿಟ್ಟು, ಅಸಹನ, ಜೊತೆ ಜೊತೆಗೆ ನಮ್ಮ ಮೇಲೆಯೇ ಅಸಹ್ಯತನ ಹುಟ್ಟುತ್ತಿದೆ...!ಈಗಿನ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಿಜವಾಗಲೂ ಅದರ ಸಿದ್ಧಾಂತಗಳನ್ನು ಉಳಿಸಿಕೊಂಡಿದ್ದರೆ  ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಮಾತ್ರವೇನೋ... ಪ್ರತಿ ಸಲದ ಚುನಾವಣೆಯಲ್ಲೂ ಬಿಜೆಪಿಗೆ ಅತ್ಯಧಿಕ ಶಾಸಕರನ್ನು ಕೊಟ್ಟ, ಪಕ್ಷದ ಯಾವ ಕ್ಲಿಷ್ಟ ಸಂದರ್ಭಗಳಲ್ಲೂ ಕೈ ಹಿಡಿಯುವಂತಹ ಜಿಲ್ಲೆಯಿದು. ಆದರೆ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಮಾತ್ರ ಎಲ್ಲರಿಂದಲೂ ಕಡೆಗಣಿಸಲ್ಪಟ್ಟಿತು. ಚುನಾವಣಾ ಗೆಲ್ಲುವವರೆಗೆ ಹಿಂದುತ್ವ ಎಂದು ಮಾತನಾಡುತ್ತಿದ್ದ ರಾಜ್ಯದ ಹಿರಿಯ ನಾಯಕರುಗಳು ಲಿಂಗಾಯಿತ, ಒಕ್ಕಲಿಗ ಎಂದು ಶುರುವಿಟ್ಟುಕೊಂಡರು. 'ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು' ಎಂದು ಭಾಷಣ ಮಾಡುವ ಮಂದಿ ಜಾತಿ ಸಮೀಕರಣದ ಲೆಕ್ಕ ಆರಂಭಿಸಿದರು. ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರ ಎಂಬ ಹೆಗ್ಗಳಿಕೆಯೊಂದಿಗೆ ಬಂದ ಸರಕಾರದಲ್ಲಿ ಹಲವು ಪಕ್ಷಾಂತರಿಗಳಿಗೆ, ಭ್ರಷ್ಟರಿಗೆ ಮಂತ್ರಿ ಸ್ಥಾನ ದೊರೆಯಿತು.  ಆದರೆ 3 -4  ಬಾರಿ ಗೆದ್ದು ಮಂತ್ರಿಯಾಗಲು ಅರ್ಹತೆ ಇದ್ದ ಕರಾವಳಿಯ ಯಾವ ಹಿರಿಯ ಶಾಸಕನಿಗೂ ಸ್ಥಾನ ಸಿಗಲಿಲ್ಲ. ಮಂಗಳೂರಿನ ಹಿರಿಯ ಶಾಸಕ ಯೋಗಿಶ್ ಭಟ್, ಸುಳ್ಯದ 4  ಬಾರಿ ಗೆದ್ದ ಎಸ್. ಅಂಗಾರ, 3  ಬಾರಿ ಭಾರೀ ಅಂತರದಿಂದ ಗೆದ್ದ ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರೆಲ್ಲ ಅಂದೇ ಮಂತ್ರಿಯಾಗುವ ಎಲ್ಲ ಅರ್ಹತೆ ಹೊಂದಿದ್ದವರು. ಸ್ವತಃ ಹಾಲಾಡಿ ಶ್ರೀನಿವಾಸ ಶೆಟ್ಟರು ಆಗಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡರಲ್ಲಿ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ದರು. ಗೌಡರು ಈ ಬಗ್ಗೆ ಎ.ಜಿ. ಕೊಡ್ಗಿಯವರಲ್ಲಿ ಕೇಳಿದಾಗ ಅವರು ಕಲ್ಲಡ್ಕದ ಪ್ರಭಾಕರ್ ಭಟ್ ರತ್ತ ಬೆರಳು ತೋರಿಸಿದರು. ಮೂರು ಬಾರಿ ಗೆದ್ದ ಹಾಲಾಡಿಯವರಿಗೆ ಪ್ರಭಾಕರ್ ಭಟ್ ರಿಂದ ಬಂದ ನೇರ ಉತ್ತರ 'ಇಲ್ಲ' ಎಂದು. ಒಬ್ಬ ಸರಳ ಸಜ್ಜನ ಜನಪ್ರಿಯ ವ್ಯಕಿ ಶ್ರೀನಿವಾಸ ಶೆಟ್ಟರು ಮಂತ್ರಿಯಾಗಿ ಬಿಜೆಪಿಯನ್ನು ಇನ್ನಷ್ಟು ಬಲಗೊಳಿಸಬಹುದಿತ್ತು. ಪ್ರಾಮಾಣಿಕ ವ್ಯಕ್ತಿಯಾದ ಕಾರಣ  ರಾಜ್ಯಮಟ್ಟದಲ್ಲಿ ಉತ್ತಮ ಜನ ಸೇವೆ ಮಾಡಬಹುದಿತ್ತು. ಆದ್ರೆ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಿರುವ ಪ್ರಭಾಕರ್ ಭಟ್ಟರು ಇದ್ಯಾವುದನ್ನು ಪರಿಗಣಿಸದೆ ಕೃಷ್ಣ ಪಾಲೆಮಾರರ ಹೆಸರನ್ನು ಸೂಚಿಸಿದರು. ಇಲ್ಲಿ ಪಾಲೆಮಾರರ ಯಾವ 'ಬಲ' ಕೆಲಸ ಮಾಡಿತ್ತು ಎಂಬುದನ್ನು ನಾವಾಗಿಯೇ ಊಹಿಸಿಕೊಳ್ಳಬಹುದು.
 ಮೊದಲ ಬಾರಿಗೆ ರಾಜ್ಯದ ಜನಸೇವೆ ಮಾಡಲು ಅವಕಾಶ ಕೇಳಿದಾಗ ಕಡೆಗಣಿಸಲ್ಪಟ್ಟ ಮೇಲೆ ಹಾಲಾಡಿಯವರು ಮತ್ತೆ ಒಮ್ಮೆಯೂ ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಕೇಳಿದವರಲ್ಲ. ರಾಜ್ಯದ ನಾಯಕರುಗಳು ಅರ್ಹತೆಯ ನೆಲೆಯಲ್ಲಿ ಮಂತ್ರಿ ಸ್ಥಾನ ನೀಡುವುದಾದರೆ  ಮೊದಲ ಬಾರಿಗೆ ಶೆಟ್ಟರಿಗೆ ಅವಕಾಶ ನೀಡಬೇಕಿತ್ತು.  ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದಾಗಿನ ಮತಗಳ ಅಂತರವನ್ನು ಗಮನಿಸಿದರೆ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಕಾಣುತ್ತದೆ. 1999 ರಲ್ಲಿ ಮೊದಲ ಬಾರಿಗೆ 1025 ಮತಗಳ ಅಂತರದಿಂದ ಜಯಿಸಿದ ಶೆಟ್ಟರು, 2004 ರಲ್ಲಿ 19,500 ಮತಗಳ ಹಾಗು 2009 ರಲ್ಲಿ 25,084 ಮತಗಳ ಭಾರೀ ಅಂತರದಿಂದ ಗೆದ್ದವರು. ಪ್ರತಿ ಭಾರಿಯ ಚುನಾವಣೆಯಲ್ಲಿ ಅವರ ಜನಪ್ರಿಯತೆ ಎಷ್ಟು ಬೆಳೆದಿದೆ ಎಂಬುದಕ್ಕೆ ಇದೇ ಸಾಕ್ಷಿ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ಸ್ ನ ಜಯಪ್ರಕಾಶ್ ಹೆಗ್ಡೆ ಯವರ ಎದುರು ಸರಿಸಾಟಿಯಾಗಿ ನಿಲ್ಲಲು ಹಾಲಾಡಿಯವರನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹಾಲಾಡಿಯವರು ಕೇವಲ ಕುಂದಾಪುರಕಷ್ಟೇ ಸೀಮಿತವಾಗಿರದೆ ಇಡೀ ಉಡುಪಿ ಜಿಲ್ಲೆಯ ಜನ ನಾಯಕರಾಗಿರುವವರು. ಕಟ್ಟಾ ಬ್ರಹ್ಮಚಾರಿ, ಯಾವುದೇ ದುರಾಭ್ಯಾಸಗಳಿಲ್ಲದ, ಸದಾ ಜನರ ನಡುವೆ ಬೆರೆಯುವ, ಸ್ವಪ್ರಶಂಸೆಗಳನ್ನು ಇಷ್ಟ ಪಡದ, ಜನ ಸೇವೆಯನ್ನೇ ಉಸಿರಾಗಿಸಿರುವ ಹಾಲಾಡಿ ಶ್ರೀನಿವಾಸ ಶೆಟ್ಟರು 'ಕುಂದಾಪುರದ ವಾಜಪೇಯೀ' ಎಂದೇ ಪರಿಚಿತರು.  ಅವರ ಜನಪ್ರಿಯತೆ ಹಾಗು ನಿಸ್ವಾರ್ಥ ಜನಸೇವೆಯೇ ಅವರಿಗೆ ಈ ಹೆಸರನ್ನು ತಂದುಕೊಟ್ಟಿದೆ. ಅವರು ಬಿಜೆಪಿಗಷ್ಟೇ ಸೀಮಿತವಾಗಿರದೆ ಪಕ್ಷಾತೀತ ನಾಯಕರಾಗಿದ್ದರು. ಪಕ್ಷೇತರರಾಗಿ ನಿಂತರೂ ಭಾರೀ ಅಂತರದಿಂದ ಗೆಲ್ಲುವ ಸಾಮರ್ಥ್ಯ ಇರುವ ಅಪರೂಪದ ವ್ಯಕ್ತಿ ಹಾಲಾಡಿಯವರು.

ಶ್ರೀನಿವಾಸ ಶೆಟ್ಟರು ಬಿಜೆಪಿಯಲ್ಲಿ ನಡೆದ ಯಾವುದೇ ರೆಸಾರ್ಟ್ ರಾಜಕಾರಣದಲ್ಲಿ ಭಾಗಿಯಾದವರಲ್ಲ. ಗೋವಾ ಹೈದರಾಬಾದ್ ಗಳಲ್ಲಿ ಗುಂಪು ಕಟ್ಟಿಕೊಂಡು ಕೂತಿಲ್ಲ. ಯಾರಿಗೂ ಬಕೆಟ್ ಹಿಡಿದೂ ಇಲ್ಲ. ನನ್ನ ಜನ ನನ್ನ ಪಕ್ಷ ಎಂದು ಕೆಲಸ ಮಾಡಿಕೊಂಡಿದ್ದರು. ಇಂತಹ ಒಬ್ಬ ಪಕ್ಷ ನಿಷ್ಠನಿಗೆ ಮಂತ್ರಿಯಾಗುವ ಅವಕಾಶ ಮತ್ತೊಮ್ಮೆ ಒದಗಿ ಬಂತು. ಸದಾನಂದ ಗೌಡರನ್ನು ಇಳಿಸಿ ಜಗದೀಶ್ ಶೆಟ್ಟರನ್ನು ಮುಖ್ಯಮಂತ್ರಿ ಮಾಡಿದ ಮೇಲೆ ತಯಾರಿಸಿದ ಹೊಸ ಮಂತ್ರಿಗಳ ಪಟ್ಟಿಯಲ್ಲಿ ಹಾಲಾಡಿಯವರ ಹೆಸರಿತ್ತು. ಸ್ವತಃ ಹಾಲಡಿಯವರಿಗೆ ಪಕ್ಷದ ನಾಯಕರುಗಳು ಕರೆ ಮಾಡಿ ಈ ವಿಷಯ ತಿಳಿಸಿದ್ದರು. ಪ್ರಮಾಣ ವಚನಕ್ಕೆ ಬರುವಂತೆಯೂ ಕರೆ ಬಂದಿತ್ತು. ಅದರಂತೆ ಹಾಲಾಡಿಯವರು ಕರಾವಳಿಯ ತನ್ನ ಶಾಸಕ ಮಿತ್ರರೊಡನೆ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು. ಆದರೆ ಪ್ರಮಾಣ ವಚನ ಸ್ವೀಕರಿಸಲು ಮಾತ್ರ ಕರೆಯಲೇ ಇಲ್ಲ. ನಿಮ್ಮನ್ನು ಮಂತ್ರಿ ಮಾಡುತ್ತಿದ್ದೇವೆ ಎಂದು ಕರೆಸಿ ಕೊನೆಯ ಕ್ಷಣದಲ್ಲಿ ನನ್ನನ್ನು ಕೈ ಬಿಡಲಾಗಿದೆ ಎಂದು ಅರಿವಾದಾಗ ಹಾಲಾಡಿಯವರಿಗೆ ಎಂತಹ ಅವಮಾನವಾಗಿರಬೇಡ. ಆ ನೋವನ್ನು ಇಲ್ಲಿ ವಿವರಿಸಲು ಖಂಡಿತ ಸಾಧ್ಯವಿಲ್ಲ. ಆ ಕ್ಷಣದಲ್ಲಿ ಹಾಲಾಡಿಯವರ ಕಣ್ಣಿಂದ ಧುಮುಕಿದ ಆ ನೋವಿನ ಕಣ್ಣೀರೆ ಅದಕ್ಕೆ ಸಾಕ್ಷಿ. ಆ ಕಣ್ಣ ಹನಿಗಳೇ ಅವರ ನೋವನ್ನು ಬಿಡಿಸಿ ಹೇಳುತ್ತವೆ.

ಈ ಸಲಾನೂ ಹಾಲಾಡಿಯವರ ಜೊತೆಗೆ ಕರಾವಳಿಯ ಹಿರಿಯ ಶಾಸಕರಾದ ಯೋಗಿಶ್ ಭಟ್, ಎಸ್.ಅಂಗಾರ ಅವರನ್ನು ಕಡೆಗಣಿಸಲಾಯಿತು. ಅದರಲ್ಲೂ ಹಾಲಾಡಿಯವರನ್ನು ತಾವಾಗಿಯೇ ಕರೆದು ಕೊನೆಯ ಕ್ಷಣದಲ್ಲಿ ಇಲ್ಲ ಎಂದಾಗಿನ ಆ ಅವಮಾನ ಇಡೀ ಕರಾವಳಿ ಜನತೆಗೆ ಮಾಡಿದ ಅವಮಾನ. ಬಿಜೆಪಿ ಬಿಜೆಪಿ ಎಂದು ಹಗಲು ರಾತ್ರಿ ದುಡಿದ ಕರಾವಳಿಯ ಕಾರ್ಯಕರ್ತರಿಗೆ ಮಾಡಿದ ದ್ರೋಹ. ಕರಾವಳಿಯ ಜನತೆಗೆ ಈ ಪರಿ ಅವಮಾನವಾಗುವಂತೆ ಮಾಡಿ ಮತ್ತೆ ಮಂತ್ರಿ ಸ್ಥಾನವನ್ನು ಕಡೆಯ ಕ್ಷಣದಲ್ಲಿ ತಪ್ಪಿಸಿದ್ದು ಕರಾವಳಿಯಲ್ಲಿ ಪ್ರಬಲರಾಗಿರುವ ಒಬ್ಬ ಹಿಂದುತ್ವದ ಗುತ್ತಿಗೆದಾರ ಅನ್ನುವುದು ಕರಾವಳಿಯ ಜನರಿಗೇ ಗೊತ್ತಿರುವ ಸತ್ಯ. ಎಲ್ಲರೂ ಈ ಹಿಂದುತ್ವದ ಗುತ್ತಿಗೆದಾರರನ್ನು ನಮ್ಮ ನಾಯಕ, ಹಿಂದೂ ಉದ್ಧಾರಕ ಎಂದೇ ನಂಬಿಕೊಂಡಿದ್ದರು. ಆದರೆ ಅವರ ಹಿಂದುತ್ವದ ಪ್ರತಿಪಾದನೆ ಕೇವಲ ಅವರ ಸ್ವಾರ್ಥಕ್ಕಾಗಿ ಮಾತ್ರ ಎಂಬುದು ಜನರಿಗೆ ಈಗ ಅರಿವಾಗಿರಬೇಕು. ಇದು ಈಗಷ್ಟೇ ಬಹಿರಂಗವಾಗಿ ಬೆಳಕಿಗೆ ಬಂದಿದೆ. ಆದರೆ ಅವರು ಮೊದಲಿನಿಂದಲೂ ಮಾಡುತ್ತಿರುವುದು ಇದನ್ನೇ. !!

ಇವರಂತಹ 'ಕುಟಿಲ' ನಾಯಕ ಮತ್ತೊಬ್ಬರು ಇರಲಿಕ್ಕಿಲ್ಲವೇನೋ.  ಹಿಂದುತ್ವ ಎಂದು ಜನರನ್ನು ರೊಚ್ಚಿಗೆಬ್ಬಿಸಿ ತಮ್ಮ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ಇಂತವರಿಂದ ಮೋಸ ಹೋದವರು ಮಾತ್ರ ನಾವು ನೀವುಗಳೇ. ಅವರುಗಳು 'ಜೈ ಶ್ರೀ ರಾಮ್' ಎಂದಾಗ ಇನ್ನೂ ಜೋರಾಗಿ 'ಜೈ ಶ್ರೀ ರಾಮ್' ಎಂದು ಕಿರಿಚಿಕೊಳ್ಳುವ ಮುಗ್ಧ ಹಿಂದೂ ಬಾಂಧವರು ಅವರ ಘೋಷ ವಾಕ್ಯದ ಹಿಂದಿನ ಕುಟಿಲತೆಯನ್ನು, ಸ್ವಾರ್ಥವನ್ನು ಯಾಕೆ ಇಲ್ಲಿಯವರೆಗೆ ಅರಿಯದಾದರು? ತಮಗೆ ಅನುಕೂಲ ವಾಗುವವರನ್ನು ಮಾತ್ರ ಉನ್ನತ ಸ್ಥಾನಗಳಿಗೆ ಹೋಗಲು ಅವಕಾಶ ನೀಡುವ ಇವರು ಹಿಂದೂಗಳ ಉದ್ಧಾರಕ ಹೇಗಾದಾರು? ಪ್ರಾಮಾಣಿಕವಾಗಿ ಜನಸೇವೆ ಮಾಡುವವರನ್ನು ತಡೆದು ಯಾವಾಗಲೂ ತೆರೆಮರೆಯ ರಾಜಕೀಯ ಮಾಡುವ ಹಿಂದುತ್ವದ ಗುತ್ತಿಗೆದಾರರು ಬಹಿರಂಗವಾಗಿಯೇ ರಾಜಕೀಯಕ್ಕೆ ಬರಲಿ. ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆ ಮಾಡಲಿ. ಅದು ಬಿಟ್ಟು ಕಪಟ ಹಿಂದುತ್ವದ ನಾಟಕವಾಡುವ ಅಗತ್ಯವೇನಿದೆ.


ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಅನೇಕರಿಗೆ ಇಂದು ಸ್ಥಾನ ಮಾನ ಸಿಕ್ಕಿಲ್ಲ. ಅದರಲ್ಲೂ ಸಿಕ್ಕಿದರೂ ಅದನ್ನು ತಪ್ಪಿಸಲಿಕ್ಕಾಗಿಯೇ ಪ್ರಭಾಕರ್ ಭಟ್ ರಂತವರು ಇರುತ್ತಾರೆ.  ಎಷ್ಟು ದಿನ ಎಂದು ಸಹಿಸಿಕೊಳ್ಳಬಹುದು. ಹಲವಾರು ಪಕ್ಷ ನಿಷ್ಠರ ಪ್ರತಿನಿಧಿಯಾಗಿ ಇಂದು ಹಾಲಾಡಿ ಶ್ರೀನಿವಾಸ ಶೆಟ್ಟರು ರಾಜಿನಾಮೆ ನೀಡಿದ್ದಾರೆ. ಬಹುಶಃ ಹಾಲಾಡಿಯವರ ರಾಜಕೀಯ ವಿರೋಧಿಗಳೂ ಅವರ ಈ ಸ್ಥಿತಿಗೆ ಸಂಕಟ ಪಟ್ಟಿರಬಹುದು. ಅಂತಹ ಒಬ್ಬ ಸಜ್ಜನ, ಜನಪ್ರಿಯ ರಾಜಕಾರಣಿಯನ್ನು ಉಳಿಸಿಕೊಳ್ಳುವ ಭಾಗ್ಯ ಬಿಜೆಪಿಗಿಲ್ಲವೇನೋ.. ನಿಜಕ್ಕೂ ಖೇದವೆನಿಸುತ್ತದೆ. ಈ ಹಿಂದುತ್ವದ ಗುತ್ತಿಗೆದಾರರು ಇರುವವರೆಗೆ ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಖಂಡಿತ ಭವಿಷ್ಯವಿಲ್ಲ ಎಂದು ಅರಿವಾದ ಮೇಲಂತೂ ಹಲವು ಕಾರ್ಯಕರ್ತರು ಪಕ್ಷದಿಂದ ಮಾನಸಿಕವಾಗಿ ವಿಮುಖರಾಗುತ್ತಿದ್ದಾರೆ.. ಇದಕ್ಕೆ ಇಂದು ಕುಂದಾಪುರದಲ್ಲಿ ಬೆಂಕಿಗೆ ಸಿಲುಕಿ ಉರಿಯುತ್ತಿದ್ದ ಬಿಜೆಪಿಯ ಧ್ವಜವೆ ಜ್ವಲಂತ ಸಾಕ್ಷಿ...! ಮುಂದಿನ ಬಾರಿ ಕರಾವಳಿಯಲ್ಲಿ ಬಿಜೆಪಿಯ ಅಲೆ ಮತ್ತೆ ಸದ್ದು ಮಾಡುವುದೇ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.